BBL 2021: ಟಿ20 ಕ್ರಿಕೆಟ್​ನ ಅತ್ಯಂತ ದುಬಾರಿ ಓವರ್​ಗಳನ್ನು ಎಸೆದ ಆಸೀಸ್ ವೇಗಿ

| Updated By: ಝಾಹಿರ್ ಯೂಸುಫ್

Updated on: Dec 27, 2021 | 8:13 PM

Liam Guthrie: ಲಿಯಾಮ್ ಅವರ 24 ಎಸೆತಗಳಲ್ಲಿ ಮೆಲ್ಬೋರ್ನ್ ತಂಡದ ಬ್ಯಾಟರ್​ಗಳು 7 ಸಿಕ್ಸರ್ ಮತ್ತು 2 ಬೌಂಡರಿಗಳನ್ನು ಬಾರಿಸಿದರು.

BBL 2021: ಟಿ20 ಕ್ರಿಕೆಟ್​ನ ಅತ್ಯಂತ ದುಬಾರಿ ಓವರ್​ಗಳನ್ನು ಎಸೆದ ಆಸೀಸ್ ವೇಗಿ
L Guthrie
Follow us on

ಟಿ20 ಕ್ರಿಕೆಟ್​ ಪ್ರತಿಯೊಂದು ರನ್​ಗಳು ಕೂಡ ಅತ್ಯಮೂಲ್ಯ. ಹೀಗಾಗಿಯೇ ಟಿ20 ಕ್ರಿಕೆಟ್​ನಲ್ಲಿ ಬೌಲರುಗಳು ನೀಡುವ ರನ್​ಗಳು ಸದಾ ಚರ್ಚೆಯಲ್ಲಿರುತ್ತದೆ. ಇದೀಗ ಬಿಗ್ ಬ್ಯಾಷ್ ಲೀಗ್‌ನ (BBL 2021) 24 ವರ್ಷದ ಬೌಲರ್ ಲಿಯಾಮ್ ಗುತ್ರೀ ಕೂಡ ಸುದ್ದಿಯಾಗಿದ್ದಾರೆ. ಆದರೆ ಅದು ಕಳಪೆ ದಾಖಲೆಯಿಂದಾಗಿ ಎಂಬುದು ವಿಶೇಷ. ಹೌದು, ಬ್ರಿಸ್ಬೇನ್ ಹೀಟ್‌ ತಂಡದ ಎಡಗೈ ವೇಗದ ಬೌಲರ್‌ ಲಿಯಾಮ್ 4 ಓವರ್​ನಲ್ಲಿ ನೀಡಿರುವುದು ಬರೋಬ್ಬರಿ 70 ರನ್​ಗಳು.

ಮೆಲ್ಬೋರ್ನ್ ಸ್ಟಾರ್ಸ್ ವಿರುದ್ದದ ಈ ಪಂದ್ಯದಲ್ಲಿ ಲಿಯಾಮ್ ಗುತ್ರೀ 24 ಎಸೆತಗಳಲ್ಲಿ 70 ರನ್ ನೀಡುವ ಮೂಲಕ ಬಿಗ್ ಬ್ಯಾಷ್ ಲೀಗ್ ಇತಿಹಾಸದ ಅತ್ಯಂತ ದುಬಾರಿ ಬೌಲರ್ ಎನಿಸಿಕೊಂಡರು. ಲಿಯಾಮ್ ಅವರ 24 ಎಸೆತಗಳಲ್ಲಿ ಮೆಲ್ಬೋರ್ನ್ ತಂಡದ ಬ್ಯಾಟರ್​ಗಳು 7 ಸಿಕ್ಸರ್ ಮತ್ತು 2 ಬೌಂಡರಿಗಳನ್ನು ಬಾರಿಸಿದರು. ಅಂದರೆ, ಬೌಂಡರಿಯಿಂದ ಮಾತ್ರ 50 ರನ್ ನೀಡಿದ್ದರು. ಇದಾಗ್ಯೂ ಲಿಯಾಮ್ ಎರಡು ವಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದರು. ಈ ದುಬಾರಿ ಸ್ಪೆಲ್​ ಪರಿಣಾಮ ಮೊದಲು ಬ್ಯಾಟ್ ಮಾಡಿದ ಮೆಲ್ಬೋರ್ನ್ ಸ್ಟಾರ್ಸ್ 20 ಓವರ್‌ಗಳಲ್ಲಿ 207 ರನ್ ಗಳಿಸಿತು.

ಇದಕ್ಕೂ ಮುನ್ನ BBL ನ ಅತ್ಯಂತ ದುಬಾರಿ ಬೌಲರ್ ದಾಖಲೆ ಬೆನ್ ದ್ವಾಸುಯಿಸ್ ಹೆಸರಿನಲ್ಲಿತ್ತು. ಕಳೆದ ವರ್ಷ ಮೆಲ್ಬೋರ್ನ್ ಸ್ಟಾರ್ಸ್ ವಿರುದ್ಧದ ಪಂದ್ಯದಲ್ಲಿ ದ್ವಾಸುಯಿಸ್ 4 ಓವರ್‌ಗಳಲ್ಲಿ 61 ರನ್ ನೀಡಿದ್ದರು. ಹಾಗೆಯೇ ಡೇನಿಯಲ್ ವೊರೆಲ್ 2014ರಲ್ಲಿ ಹೋಬರ್ಟ್ ಹರಿಕೇನ್ ವಿರುದ್ಧ 4 ಓವರ್‌ಗಳಲ್ಲಿ 60 ರನ್ ನೀಡಿದ್ದರು. ಇದೀಗ ಈ ದಾಖಲೆಯನ್ನು ಮುರಿದು ಲಿಯಾಮ್ ಗುತ್ರೀ 70 ರನ್ ನೀಡಿ ಕಳಪೆ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ.

ಇದಾಗ್ಯೂ ಟಿ20 ಕ್ರಿಕೆಟ್​ನ ಅತ್ಯಂತ ದುಬಾರಿ ಬೌಲರ್​ಗಳ ಪಟ್ಟಿಯಲ್ಲಿ ಲಿಯಾಮ್ ಗುತ್ರೀ 2ನೇ ಸ್ಥಾನದಲ್ಲಿದ್ದಾರೆ. 2019 ರಲ್ಲಿ ಆಸ್ಟ್ರೇಲಿಯಾ ವಿರುದ್ದದ ಪಂದ್ಯದಲ್ಲಿ ಶ್ರೀಲಂಕಾ ಬೌಲರ್ ಕಸುನ್ ರಜಿತಾ 4 ಓವರ್​ಗಳಲ್ಲಿ 75 ರನ್​ ನೀಡಿರುವುದು ಅತ್ಯಂತ ಹೀನಾಯ ದಾಖಲೆಯಾಗಿ ಉಳಿದಿದೆ.

ಇದನ್ನೂ ಓದಿ: IPL 2022: RCB ಮನೀಷ್ ಪಾಂಡೆಯನ್ನು ಯಾಕೆ ಖರೀದಿಸಬೇಕು ಅಂದರೆ…

ಇದನ್ನೂ ಓದಿ: IPL 2022: ಇವರೇ RCB ತಂಡದ ಮುಂದಿನ ಕ್ಯಾಪ್ಟನ್ ಎಂದ ಮಾಜಿ ಆರ್​ಸಿಬಿ ನಾಯಕ

(BBL 2021: Brisbane Heat L Guthrie gave 70 runs in 24 balls)