ಸದ್ಯ ಕ್ರಿಕೆಟ್ ಜಗತ್ತಲ್ಲಿ 9ನೇ ಆವೃತ್ತಿಯ ಟಿ20 ವಿಶ್ವಕಪ್ (T20 World Cup 2024) ಜರುಗುತ್ತಿದೆ. ಹೀಗಾಗಿ ಇಡೀ ಕ್ರಿಕೆಟ್ ಅಭಿಮಾನಿಗಳ ಗಮನ ಅದರತ್ತ ನೆಟ್ಟಿದೆ. ಈ ಐಸಿಸಿ (ICC) ಪಂದ್ಯಾವಳಿಯನ್ನು ಅಮೆರಿಕ ಮತ್ತು ವೆಸ್ಟ್ ಇಂಡೀಸ್‌ನಲ್ಲಿ ಆಯೋಜಿಸಲಾಗಿದೆ. ಭಾರತ ತಂಡವು ಐರ್ಲೆಂಡ್ ವಿರುದ್ಧ ವಿಶ್ವಕಪ್‌ನ ಮೊದಲ ಪಂದ್ಯವನ್ನು ಆಡಿದ್ದು, ಅದರಲ್ಲಿ ಟೀಂ ಇಂಡಿಯಾ ಗೆದ್ದಿದೆ. ಇದೀಗ ಭಾರತ ತನ್ನ ಎರಡನೇ ಪಂದ್ಯವನ್ನು ಪಾಕಿಸ್ತಾನದ ವಿರುದ್ಧ ಆಡಬೇಕಿದೆ. ಈ ನಡುವೆ ದೇಶಿ ಕ್ರಿಕೆಟ್ನತ್ತ ದೃಷ್ಟಿ ನೆಟ್ಟಿರುವ ಬಿಸಿಸಿಐ (BCCI), ಭಾರತದಲ್ಲಿ ನಡೆಯಲ್ಲಿರುವ 10 ದೇಶೀಯ ಟೂರ್ನಿಗಳ ವೇಳಾಪಟ್ಟಿಯನ್ನು ಪ್ರಕಟಿಸಿದೆ.
ಅದರಂತೆ 2024-2025ರಲ್ಲಿ ಭಾರತದಲ್ಲಿ ನಡೆಯಲಿರುವ ಎಲ್ಲಾ ದೇಶೀಯ ಟೂರ್ನಿಗಳ ವೇಳಾಪಟ್ಟಿಯನ್ನು ಬಿಸಿಸಿಐ ಇಂದು ಬಿಡುಗಡೆ ಮಾಡಿದೆ. . ಒಟ್ಟು 10 ಪ್ರಮುಖ ಟೂರ್ನಿಗಳ ವೇಳಾಪಟ್ಟಿಯನ್ನು ಬಿಸಿಸಿಐ ಪ್ರಕಟಿಸಿದೆ. ಈ ಬಗ್ಗೆ ಬಿಸಿಸಿಐ ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ ಮಾಹಿತಿ ನೀಡಿದೆ. ಇದರ ಪ್ರಕಾರ ಸೆಪ್ಟೆಂಬರ್ 5 ರಿಂದ ಅನಂತಪುರದಲ್ಲಿ ದುಲೀಪ್ ಟ್ರೋಫಿ ಟೂರ್ನಿ ಆರಂಭವಾಗುವ ಮೂಲಕ ದೇಶೀ ಪಂದ್ಯಾವಳಿಗೆ ಚಾಲನೆ ಸಿಗಲಿದೆ.
ಇದಾದ ನಂತರ ಅಕ್ಟೋಬರ್‌ನಲ್ಲಿ ಇರಾನಿ ಟ್ರೋಫಿ ನಡೆಯಲಿದೆ. ಆ ಬಳಿಕ ಅಂದರೆ ನವೆಂಬರ್ 23 ರಿಂದ ಪ್ರಾರಂಭವಾಗುವ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯೊಂದಿಗೆ ಸೀಮಿತ ಓವರ್‌ಗಳ ಕ್ರಿಕೆಟ್ ಪ್ರಾರಂಭವಾಗುತ್ತದೆ. ಇದರ ನಂತರ ವಿಜಯ್ ಹಜಾರೆ ಟ್ರೋಫಿ ಡಿಸೆಂಬರ್ 21 ರಿಂದ ಪ್ರಾರಂಭವಾಗಲಿದೆ. ನಾಲ್ಕು ವರ್ಷಗಳ ಅಂತರದ ನಂತರ ಕಳೆದ ವರ್ಷದಿಂದ ಮರು ಆರಂಭವಾಗಿರುವ ದಿಯೋಧರ್ ಟ್ರೋಫಿಯ ವೇಳಾಪಟ್ಟಿ ಕೂಡ ಪ್ರಕಟಗೊಂಡಿದೆ.
ಉಳಿದಂತೆ ಅಕ್ಟೋಬರ್ 17 ರಂದು ಸೀನಿಯರ್ ಮಹಿಳಾ ಟಿ20 ಟ್ರೋಫಿಯೊಂದಿಗೆ ಮಹಿಳೆಯರ ದೇಶೀಯ ಆವೃತ್ತಿ ಪ್ರಾರಂಭವಾಗುತ್ತದೆ. ನವೆಂಬರ್ 6 ರಿಂದ ನಾಕೌಟ್ ಸುತ್ತುಗಳು ಆರಂಭವಾಗಲಿವೆ. ಇದಾದ ಬಳಿಕ ಹಿರಿಯರ ಮಹಿಳಾ ಟಿ-20 ಚಾಲೆಂಜರ್ ಟ್ರೋಫಿ ನವೆಂಬರ್ 17ರಿಂದ ನವೆಂಬರ್ 27ರವರೆಗೆ ನಡೆಯಲಿದೆ.
ಸೀನಿಯರ್ ಮಹಿಳೆಯರ ಏಕದಿನ ಟ್ರೋಫಿ ಡಿಸೆಂಬರ್ 4 ರಿಂದ 30 ರವರೆಗೆ ನಡೆಯಲಿದ್ದು, ಮಲ್ಟಿ-ಡೇ ಚಾಲೆಂಜರ್ ಟ್ರೋಫಿ ಮಾರ್ಚ್ 18 ರಿಂದ ಏಪ್ರಿಲ್ 1 ರವರೆಗೆ ನಡೆಯಲಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:36 pm, Fri, 7 June 24