U19 Asia Cup: U-19 ಏಷ್ಯಾಕಪ್​ಗೆ ಭಾರತ ತಂಡ ಪ್ರಕಟ; ಮತ್ತೆ ಅಬ್ಬರಿಸಲು ಸಜ್ಜಾದ ವೈಭವ್

India U19 Asia Cup Squad: ಡಿಸೆಂಬರ್ 12 ರಿಂದ ಆರಂಭವಾಗುವ ಅಂಡರ್-19 ಏಷ್ಯಾಕಪ್‌ಗಾಗಿ ಬಿಸಿಸಿಐ ಭಾರತ ತಂಡವನ್ನು ಪ್ರಕಟಿಸಿದೆ. 14 ವರ್ಷದ ವೈಭವ್ ಸೂರ್ಯವಂಶಿ ತಂಡದಲ್ಲಿ ಗಮನ ಸೆಳೆದಿದ್ದಾರೆ. ಆಯುಷ್ ಮ್ಹಾತ್ರೆ ನಾಯಕರಾಗಿ, ವಿಹಾನ್ ಮಲ್ಹೋತ್ರಾ ಉಪನಾಯಕರಾಗಿ ತಂಡವನ್ನು ಮುನ್ನಡೆಸಲಿದ್ದಾರೆ. 2025ರ ವಿಶ್ವಕಪ್‌ಗೆ ಇದು ಸಿದ್ಧತಾ ಪಂದ್ಯಾವಳಿಯಾಗಿದೆ. ಇಂಗ್ಲೆಂಡ್ ಪ್ರವಾಸ ಮಾಡಿದ ಆಟಗಾರರಿಗೂ ಅವಕಾಶ ಸಿಕ್ಕಿದೆ.

U19 Asia Cup: U-19 ಏಷ್ಯಾಕಪ್​ಗೆ ಭಾರತ ತಂಡ ಪ್ರಕಟ; ಮತ್ತೆ ಅಬ್ಬರಿಸಲು ಸಜ್ಜಾದ ವೈಭವ್
Vaibhav

Updated on: Nov 28, 2025 | 2:33 PM

ಕೆಲವು ದಿನಗಳ ಹಿಂದಷ್ಟೇ ಮುಗಿದ ರೈಸಿಂಗ್ ಸ್ಟಾರ್‌ ಏಷ್ಯಾಕಪ್‌ನಲ್ಲಿ ಫೈನಲ್​ಗೇರುವಲ್ಲಿ ವಿಫಲವಾಗಿದ್ದ ಟೀಂ ಇಂಡಿಯಾ ಇದೀಗ ಮತ್ತೊಮ್ಮೆ ಏಷ್ಯಾಕಪ್‌ನಲ್ಲಿ ಪ್ರಶಸ್ತಿಗಾಗಿ ಸೆಣಸಾಡಲು ಸಜ್ಜಾಗಿದೆ. ವಾಸ್ತವವಾಗಿ ಡಿಸೆಂಬರ್ 12 ರಿಂದ ಆರಂಭವಾಗಲಿರುವ 19 ವರ್ಷದೊಳಗಿನವರ ಏಷ್ಯಾಕಪ್​ಗೆ (U19 Asia Cup) ಬಿಸಿಸಿಐ (BCCI) ಇಂದು ತಂಡವನ್ನು ಪ್ರಕಟಿಸಿದೆ. ಈ ತಂಡದಲ್ಲಿ ವೈಭವ್ ಸೂರ್ಯವಂಶಿಗೆ (Vaibhav Suryavanshi) ಸ್ಥಾನ ಸಿಕ್ಕಿರುವುದು ಅಭಿಮಾನಿಗಳ ಸಂತಸವನ್ನು ಇಮ್ಮಡಿಗೊಳಿಸಿದೆ. ವಾಸ್ತವವಾಗಿ ರೈಸಿಂಗ್ ಸ್ಟಾರ್‌ ಏಷ್ಯಾಕಪ್‌ನಲ್ಲಿ ಭಾರತ ಚಾಂಪಿಯನ್ ಆಗದಿದ್ದರೂ, ವೈಭವ್ ಅವರ ಆಟ ಅಭಿಮಾನಿಗಳು ಸಾಕಷ್ಟು ರಂಜಿಸಿತ್ತು. ಇದೀಗ ಅವರ ಅಂಡರ್-19 ಏಷ್ಯಾಕಪ್​ನಲ್ಲೂ ತಮ್ಮ ಅಬ್ಬರವನ್ನು ಮುಂದುವರೆಸಲಿದ್ದಾರೆ.

ತಂಡದ ನಾಯಕ ಮತ್ತು ಉಪನಾಯಕ ಯಾರು?

ನವೆಂಬರ್ 28 ರ ಶುಕ್ರವಾರದಂದು ಬಿಸಿಸಿಐ 2025 ರ ಅಂಡರ್-19 ಏಷ್ಯಾಕಪ್‌ಗಾಗಿ ಭಾರತೀಯ ತಂಡವನ್ನು ಘೋಷಿಸಿದೆ. ಡಿಸೆಂಬರ್ 12 ರಿಂದ 21 ರವರೆಗೆ ದುಬೈನಲ್ಲಿ ನಡೆಯಲಿರುವ ಈ ಏಕದಿನ ಪಂದ್ಯಾವಳಿಗಾಗಿ ಭಾರತೀಯ ತಂಡದಲ್ಲಿ ಹದಿನೈದು ಆಟಗಾರರನ್ನು ಹೆಸರಿಸಲಾಗಿದೆ. ಹಾಗೆಯೇ ನಾಲ್ಕು ಆಟಗಾರರನ್ನು ಸ್ಟ್ಯಾಂಡ್‌ಬೈ ಆಗಿ ಆಯ್ಕೆ ಮಾಡಲಾಗಿದೆ. ಮುಂದಿನ ವರ್ಷ ಜನವರಿ-ಫೆಬ್ರವರಿಯಲ್ಲಿ ನಡೆಯಲಿರುವ ಅಂಡರ್-19 ವಿಶ್ವಕಪ್‌ಗೆ ತಯಾರಿ ನಡೆಸುವಲ್ಲಿ ಈ ಪಂದ್ಯಾವಳಿ ನಿರ್ಣಾಯಕವಾಗಿದೆ.

ಈ ತಂಡದ ಅತ್ಯಂತ ದೊಡ್ಡ ಆಕರ್ಷಣೆಯೆಂದರೆ 14 ವರ್ಷದ ಸ್ಫೋಟಕ ಆರಂಭಿಕ ಆಟಗಾರ ವೈಭವ್ ಸೂರ್ಯವಂಶಿ, ಅವರು ಈಗಾಗಲೇ ವಿಶ್ವದಾದ್ಯಂತ ತಮ್ಮ ಛಾಪು ಮೂಡಿಸಿದ್ದಾರೆ. ಆದಾಗ್ಯೂ, ನಾಯಕತ್ವ ಮತ್ತು ಉಪನಾಯಕತ್ವದ ಕರ್ತವ್ಯಗಳನ್ನು ಸ್ವಲ್ಪ ಹಿರಿಯ ಆಟಗಾರರಿಗೆ ನೀಡಲಾಗಿದೆ. ಈ ವರ್ಷದ ಜುಲೈನಲ್ಲಿ ಇಂಗ್ಲೆಂಡ್ ಪ್ರವಾಸದಲ್ಲಿ ಅಂಡರ್-19 ತಂಡದ ನಾಯಕರಾಗಿದ್ದ 17 ವರ್ಷದ ಆಯುಷ್ ಮ್ಹಾತ್ರೆ ತಂಡವನ್ನು ಮುನ್ನಡೆಸಲಿದ್ದಾರೆ. ವಿಹಾನ್ ಮಲ್ಹೋತ್ರಾ ಅವರನ್ನು ಉಪನಾಯಕನನ್ನಾಗಿ ನೇಮಿಸಲಾಗಿದೆ. ವೈಭವ್ ಮತ್ತೊಮ್ಮೆ ಇನ್ನಿಂಗ್ಸ್ ತೆರೆಯುವ ಜವಾಬ್ದಾರಿಯನ್ನು ವಹಿಸಿಕೊಳ್ಳಲಿದ್ದಾರೆ ಮತ್ತು ತಂಡಕ್ಕೆ ತ್ವರಿತ ಆರಂಭ ನೀಡಲು ಪ್ರಯತ್ನಿಸಲಿದ್ದಾರೆ.

ಇಂಗ್ಲೆಂಡ್ ಪ್ರವಾಸ ಮಾಡಿದ್ದ ಆಟಗಾರರಿಗೆ ಅವಕಾಶ

ಈ ತಂಡದಲ್ಲಿ ಈ ವರ್ಷ ಇಂಗ್ಲೆಂಡ್ ಪ್ರವಾಸ ಮಾಡಿದ್ದ ಭಾರತ ಅಂಡರ್-19 ತಂಡದ ಭಾಗವಾಗಿದ್ದ ಆಟಗಾರರು ಇದ್ದಾರೆ. ವಿಕೆಟ್ ಕೀಪರ್ ಅಭಿಗ್ಯಾನ್ ಕುಂಡು, ಸ್ಪಿನ್ನರ್ ಕನಿಷ್ಕ್ ಚೌಹಾಣ್ ಮತ್ತು ಹೆನಿಲ್ ಪಟೇಲ್ ಕೂಡ ಇದ್ದಾರೆ. ಈ ಪ್ರವಾಸದಲ್ಲಿ ಅಬ್ಬರಿಸಿದ್ದ ವೈಭವ್, ಪುರುಷರ ಯೂತ್ ಏಕದಿನ ಪಂದ್ಯದಲ್ಲಿ ಶತಕ ಗಳಿಸಿದ ಅತ್ಯಂತ ಕಿರಿಯ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಕೇವಲ 52 ಎಸೆತಗಳಲ್ಲಿ ಶತಕ ಬಾರಿಸಿದ್ದ ವೈಭವ್, ಇದೀಗ ಏಷ್ಯಾಕಪ್‌ನಲ್ಲಿಯೂ ಇದೇ ರೀತಿಯ ಪ್ರದರ್ಶನ ನೀಡಲಿ ಎಂಬುದು ಅಭಿಮಾನಿಗಳ ಆಶಯವಾಗಿದೆ.

ಭಾರತ ಅಂಡರ್-19 ತಂಡ: ಆಯುಷ್ ಮ್ಹಾತ್ರೆ (ನಾಯಕ), ವಿಹಾನ್ ಮಲ್ಹೋತ್ರಾ (ಉಪನಾಯಕ), ವೈಭವ್ ಸೂರ್ಯವಂಶಿ, ವೇದಾಂತ್ ತ್ರಿವೇದಿ, ಅಭಿಜ್ಞಾನ್ ಕುಂದು (ವಿಕೆಟ್ ಕೀಪರ್), ಹರ್ವಂಶ್ ಸಿಂಗ್, ಯುವರಾಜ್ ಗೋಹಿಲ್, ಕಾನಿಷ್ಕ್ ಚೌಹಾಣ್, ಖಿಲಾನ್ ಎ ಪಟೇಲ್, ನಮನ್ ಪುಷ್ಪಕ್, ಡಿ ದೀಪೇಶ್, ಹೆನಿಲ್ ಸಿಂಗ್ ಪಟೇಲ್, ಕಿಶನ್ ಕುಮಾರ್ ಸಿಂಗ್ (ಫಿಟ್‌ನೆಸ್‌), ಉದ್ಧವ್ ಮೋಹನ್ ಮತ್ತು ಐರಾನ್ ಜಾರ್ಜ್

ಸ್ಟ್ಯಾಂಡ್‌ಬೈ- ರಾಹುಲ್ ಕುಮಾರ್, ಹೇಮಚೂಡೇಶನ್ ಜೆ, ಬಿಕೆ ಕಿಶೋರ್, ಆದಿತ್ಯ ರಾವತ್

ಟೂರ್ನಿಯಲ್ಲಿ ಟೀಂ ಇಂಡಿಯಾ ವೇಳಾಪಟ್ಟಿ

ಈ ಪಂದ್ಯಾವಳಿಯಲ್ಲಿ ಒಟ್ಟು ಎಂಟು ತಂಡಗಳು ಭಾಗವಹಿಸಲಿದ್ದು, ಭಾರತ ಮತ್ತು ಪಾಕಿಸ್ತಾನ ಗುಂಪು ಎ ನಲ್ಲಿ ಸ್ಥಾನ ಪಡೆದಿವೆ. ಗುಂಪು ಬಿ ಯಲ್ಲಿ ಎರಡು ಅರ್ಹತಾ ತಂಡಗಳು ಸಹ ಇರುತ್ತವೆ. ಗುಂಪು ಬಿ ಯಲ್ಲಿ ಶ್ರೀಲಂಕಾ, ಬಾಂಗ್ಲಾದೇಶ, ಅಫ್ಘಾನಿಸ್ತಾನ ಮತ್ತು ಒಂದು ಅರ್ಹತಾ ತಂಡ ಇರುತ್ತದೆ.

ತಂಡದ ವೇಳಾಪಟ್ಟಿ ಇಂತಿದೆ:

  • ಡಿಸೆಂಬರ್ 12- ಭಾರತ vs ಕ್ವಾಲಿಫೈಯರ್ 1
  • ಡಿಸೆಂಬರ್ 14- ಭಾರತ vs ಪಾಕಿಸ್ತಾನ
  • ಡಿಸೆಂಬರ್ 16- ಭಾರತ vs ಕ್ವಾಲಿಫೈಯರ್ 3
  • ಡಿಸೆಂಬರ್ 19- ಎ1 vs ಬಿ2, ಸೆಮಿಫೈನಲ್ 1
  • ಡಿಸೆಂಬರ್ 19- ಬಿ1 vs ಎ2, ಸೆಮಿಫೈನಲ್ 2
  • ಡಿಸೆಂಬರ್ 12- ಫೈನಲ್ ಪಂದ್ಯ

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:28 pm, Fri, 28 November 25