ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಗುರುವಾರ ತನ್ನ ಕ್ರಿಕೆಟ್ ಸಲಹಾ ಸಮಿತಿಗೆ ನೂತನ ಸದಸ್ಯರನ್ನು ನೇಮಕ ಮಾಡಿ ಆದೇಶ ಹೊರಡಿಸಿದೆ. ಟೀಂ ಇಂಡಿಯಾದ ಮೂವರು ಆಟಗಾರರು ಸಲಹಾ ಸಮಿತಿಯ ಸದಸ್ಯರಾಗಿ ಆಯ್ಕೆಯಾಗಿದ್ದು, ಇವರಲ್ಲಿ ಭಾರತದ ಮಾಜಿ ಆಟಗಾರರು ಮತ್ತು ರಾಷ್ಟ್ರೀಯ ಆಯ್ಕೆಗಾರರಾದ ಅಶೋಕ್ ಮಲ್ಹೋತ್ರಾ, ಜತಿನ್ ಪರಾಂಜಪೆ ಮತ್ತು ಸುಲಕ್ಷಣ ನಾಯಕ್ ಸೇರಿದ್ದಾರೆ. ಈ ಮೂವರು ಬಿಸಿಸಿಐ ಸಂವಿಧಾನದ ಪ್ರಕಾರ ಹೊಸ ಆಯ್ಕೆ ಸಮಿತಿಯನ್ನು ಆಯ್ಕೆ ಮಾಡುವ ಕೆಲಸವನ್ನು ನಿರ್ವಹಿಸಲಿದ್ದಾರೆ.
ಭಾರತದ ಮಾಜಿ ಸೀಮರ್ ಮದನ್ ಲಾಲ್ ಬದಲಿಗೆ ಮಲ್ಹೋತ್ರಾ ಮತ್ತು ಮುಂಬೈ ಇಂಡಿಯನ್ಸ್‌ಗೆ ಟ್ಯಾಲೆಂಟ್ ಸ್ಕೌಟ್ ಆಗಿ ಸೇರ್ಪಡೆಗೊಂಡ ರುದ್ರ ಪ್ರತಾಪ್ ಸಿಂಗ್ ಬದಲಿಗೆ ಪರಾಂಜಪೆ ಹಾಗೂ ಮಾಜಿ ಮಹಿಳಾ ಆಟಗಾರ್ತಿ ಸುಲಕ್ಷಣ ನಾಯಕ್ ನೂತನ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.
ಇದನ್ನೂ ಓದಿ: ‘ದುಡ್ಡು ಮಾಡಿಕೊಂಡು ಇಲ್ಲಿಂದ ಕಾಲ್ಕೀಳುತ್ತಾರೆ’; ವಿದೇಶಿ ಕೋಚ್ಗಳ ಬಗ್ಗೆ ಗೌತಮ್ ‘ಗಂಭೀರ’ ಆರೋಪ
ಆಯ್ಕೆಯಾದವರ ಅರ್ಹತೆ
ಟೀಂ ಇಂಡಿಯಾ ಪರ ಏಳು ಟೆಸ್ಟ್ ಮತ್ತು 20 ಏಕದಿನ ಪಂದ್ಯಗಳನ್ನಾಡಿರುವ ಮಲ್ಹೋತ್ರಾ ಅವರು ಇತ್ತೀಚೆಗೆ ಭಾರತೀಯ ಕ್ರಿಕೆಟಿಗರ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಹಾಗೆಯೇ ಜತಿನ್ ಪರಾಂಜಪೆ ಟೀಂ ಇಂಡಿಯಾ ಪರ ನಾಲ್ಕು ಏಕದಿನ ಪಂದ್ಯಗಳನ್ನಾಡಿದ ಅನುಭವ ಹೊಂದಿದ್ದು, ಇದರೊಂದಿಗೆ ಹಿರಿಯ ಪುರುಷರ ಆಯ್ಕೆ ಸಮಿತಿಯಲ್ಲೂ ಕೆಲಸ ಮಾಡಿದ್ದ ಅನುಭವ ಹೊಂದಿದ್ದಾರೆ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಪತ್ರಿಕಾ ಪ್ರಕಟಣೆಯಲ್ಲಿ ತಿಳಿದ್ದಾರೆ.
ಈಗ ಈ ಮೂವರ ಸಲಹಾ ಸಮಿತಿ ಬಿಸಿಸಿಐನ ಆಯ್ಕೆ ಮಂಡಳಿಗೆ ಹೊಸ ಸದಸ್ಯರನ್ನು ನೇಮಕ ಮಾಡುವ ಕೆಲಸ ಮಾಡಲಿದೆ. ಕಳೆದ ನವೆಂಬರ್‌ನಲ್ಲಿ ಬಿಸಿಸಿಐ, ಚೇತನ್ ಶರ್ಮಾ ಸೇರಿದಂತೆ ಹರ್ವಿಂದರ್ ಸಿಂಗ್, ಸುನಿಲ್ ಜೋಶಿ ಮತ್ತು ದೇಬಾಶಿಶ್ ಮೊಹಂತಿ ಒಳಗೊಂಡ ಆಯ್ಕೆ ಸಮಿತಿಯನ್ನು ವಜಾಗೊಳಿಸಿತ್ತು.
?NEWS: BCCI announces appointment of CAC members.
More Details ?https://t.co/SqOWXMqTsj
— BCCI (@BCCI) December 1, 2022
ಆಯ್ಕೆ ಮಂಡಳಿ ಸದಸ್ಯ ಸ್ಥಾನಕ್ಕೆ ಅರ್ಜಿ ಹಾಕಿದ ಆಟಗಾರರಿವರು
ಇದೀಗ ಹೊಸದಾಗಿ ಆಯ್ಕೆ ಮಂಡಳಿಗೆ ಸದಸ್ಯರನ್ನು ನೇಮಕ ಮಾಡುವ ಪ್ರಕ್ರಿಯೆ ಆರಂಭವಾಗಲಿದ್ದು, ಈ ಹುದ್ದೆಗೆ ಈಗಾಗಲೇ ಸಾಕಷ್ಟು ಅರ್ಜಿಗಳು ಬಂದಿರುವುದಾಗಿ ವರದಿಯಾಗಿದೆ. ಇದರಲ್ಲಿ ಇತ್ತೀಚೆಗೆ ಆಯ್ಕೆ ಮಂಡಳಿ ಅಧ್ಯಕ್ಷ ಸ್ಥಾನದಿಂದ ವಜಾಗೊಂಡ ಚೇತನ್ ಶರ್ಮಾ ಕೂಡ ಮತ್ತೊಮ್ಮೆ ಈ ಹುದ್ದೆಗೆ ಅರ್ಜಿ ಹಾಕಿದ್ದಾರೆ ಎಂದು ವರದಿಯಾಗಿದೆ. ಇವರಲ್ಲದೆ ನಯನ್ ಮೊಂಗಿಯಾ, ವೆಂಕಟೇಶ್ ಪ್ರಸಾದ್, ಮಣಿಂದರ್ ಸಿಂಗ್, ಶಿವಸುಂದರ್ ದಾಸ್, ಸುಬ್ರೋತೊ ಬ್ಯಾನರ್ಜಿ, ಸಲೀಲ್ ಅಂಕೋಲಾ, ಅಮಯ್ ಖುರಾಸಿಯಾ, ರೀತೀಂದರ್ ಸಿಂಗ್ ಸೋಧಿ, ನಿಖಿಲ್ ಚೋಪ್ರಾ ಮತ್ತು ಅತುಲ್ ವಾಸನ್ ಈ ಹುದ್ದೆಗೆ ಅರ್ಜಿ ಸಲ್ಲಿಸಿದ ಕೆಲವು ಪ್ರಮುಖ ಹೆಸರುಗಳಾಗಿವೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 5:42 pm, Thu, 1 December 22