BCCI Bouncer Rule: ವೇಗದ ಬೌಲರ್‌ಗಳಿಗೆ ಸಿಹಿ ಸುದ್ದಿ ನೀಡಿದ ಬಿಸಿಸಿಐ..!
BCCI Bouncer Rule: ಅಪೆಕ್ಸ್ ಕೌನ್ಸಿಲ್ ಸಭೆಯಲ್ಲಿ ತೆಗೆದುಕೊಂಡಿರುವ ತೀರ್ಮಾನದ ಪ್ರಕಾರ, ವೇಗದ ಬೌಲರ್ ಒಂದು ಓವರ್‌ನಲ್ಲಿ ಎರಡು ಬೌನ್ಸರ್‌ಗಳನ್ನು ಎಸೆಯಲು ಅವಕಾಶ ನೀಡಲಾಗಿದೆ.
ಪ್ರಸ್ತುತ ಕ್ರಿಕೆಟ್ (Cricket) ಲೋಕದಲ್ಲಿ ಬ್ಯಾಟ್ಸ್‌ಮನ್‌ಗಳೇ ಹೆಚ್ಚು ಮನ್ನಣೆಗಳಿಸುತ್ತಿದ್ದಾರೆ. ಇದಕ್ಕೆ ಕಾರಣವೂ ಇದ್ದು, ಈ ಹಿಂದೆ ಕ್ರಿಕೆಟ್ ಲೋಕದಲ್ಲಿ ಮಾಡಲಾದ ಬಹುತೇಕ ನಿಯಮಗಳು ಬ್ಯಾಟ್ಸ್‌ಮನ್‌ಗಳಿಗೆ ಹೆಚ್ಚಿನ ಲಾಭವನ್ನು ನೀಡುತ್ತಿವೆ. ಅದಕ್ಕಾಗಿಯೇ ಜಂಟಲ್ಮ್ಯಾನ್ ಕ್ರೀಡೆಯಲ್ಲಿ ಬ್ಯಾಟರ್ಗಳ ಪಾರುಪತ್ಯ ಹೆಚ್ಚಾಗಿದೆ. ಆದರೆ ಇದೀಗ ಬೌಲರ್ಗಳ ದೃಷ್ಟಿಯಿಂದ ಮೊದಲ ಹೆಜ್ಜೆ ಇಟ್ಟಿರುವ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಕ್ರಿಕೆಟ್‌ನಲ್ಲಿ ಬ್ಯಾಟರ್ಸ್ ಹಾಗೂ ಬೌಲರ್‌ಗಳಿಗೆ ಸಮನಾದ ನ್ಯಾಯ ಒದಗಿಸಲು ಮುಂದಾಗಿದೆ. ಶುಕ್ರವಾರ ನಡೆದ ಬಿಸಿಸಿಐನ ಅಪೆಕ್ಸ್ ಕೌನ್ಸಿಲ್ (Apex Council) ಸಭೆಯಲ್ಲಿ ಬೌಲರ್‌ಗಳಿಗೆ ಸಹಾಯಕವಾಗುವಂತಹ ಹೊಸ ನಿಯಮವನ್ನು (New Rule) ಜಾರಿಗೆ ತರುವ ಮೂಲಕ ಬಿಸಿಸಿಐ ಕ್ರಿಕೆಟ್ ಲೋಕದಲ್ಲಿ ಸಂಚಲನ ಮೂಡಿಸಿದೆ.
ಇಲ್ಲಿಯವರೆಗೆ ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ, ಬೌಲರ್‌ಗೆ ಒಂದು ಓವರ್‌ನಲ್ಲಿ ಕೇವಲ ಒಂದು ಬೌನ್ಸರ್ ಬೌಲ್ ಮಾಡಲು ಅವಕಾಶವಿತ್ತು. ಒಂದು ವೇಳೆ ಬೌಲರ್ ಒಂದೇ ಓವರ್‌ನಲ್ಲಿ ಎರಡನೇ ಬೌನ್ಸರ್ ಎಸೆದರೆ ಅದನ್ನು ನೋ ಬಾಲ್ ಎಂದು ತೀರ್ಮಾನಿಸಲಾಗುತ್ತಿತ್ತು. ಆದರೆ ಈ ನಿಯಮದಲ್ಲಿ ಬದಲಾವಣೆ ಮಾಡಲು ಬಿಸಿಸಿಐ ನಿರ್ಧರಿಸಿದೆ. ಅಪೆಕ್ಸ್ ಕೌನ್ಸಿಲ್ ಸಭೆಯಲ್ಲಿ ತೆಗೆದುಕೊಂಡಿರುವ ತೀರ್ಮಾನದ ಪ್ರಕಾರ, ಈಗ ವೇಗದ ಬೌಲರ್ ಒಂದು ಓವರ್‌ನಲ್ಲಿ ಎರಡು ಬೌನ್ಸರ್‌ಗಳನ್ನು ಎಸೆಯಲು ಅವಕಾಶ ನೀಡಲಾಗಿದೆ. ಆದರೆ ಈ ಹೊಸ ನಿಯಮ ಸದ್ಯಕ್ಕೆ ಕೇವಲ ಭಾರತದ ದೇಶೀ ಕ್ರಿಕೆಟ್ಗೆ ಮಾತ್ರ ಸೀಮಿತವಾಗಲಿದೆ. ಅಂದರೆ ಈ ಹೊಸ ನಿಯಮವನ್ನು ಮುಂಬರುವ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಅಳವಡಿಸಲು ಬಿಸಿಸಿಐ ಮುಂದಾಗಿದೆ.
ನಿವೃತ್ತ ಆಟಗಾರರ ವಿರುದ್ಧ ಬಿಸಿಸಿಐ ಬ್ರಹ್ಮಾಸ್ತ್ರ; ಮೇಜರ್ ಲೀಗ್ ಕ್ರಿಕೆಟ್‌ನಿಂದ ಹಿಂದೆ ಸರಿದ ಅಂಬಟಿ ರಾಯುಡು!
ಐಪಿಎಲ್‌ನಲ್ಲೂ ಈ ನಿಯಮ ಜಾರಿಯಾಗುತ್ತಾ?
ಮೇಲೆ ಹೇಳಿರುವಂತೆ ಈ ನೂತನ ನಿಯಮ ಸದ್ಯಕ್ಕೆ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಮಾತ್ರ ಕಾಣಿಸಿಕೊಳ್ಳಲಿದೆ. ಆ ಬಳಿಕ ಈ ನಿಯಮದ ಸಾಧಕ ಬಾಧಕಗಳನ್ನು ಪರಿಶೀಲಿಸಿದ ಬಳಿಕ ಇತರ ಲೀಗ್ಗಳಿಗೂ ಈ ನಿಯಮವನ್ನು ಅಳವಡಿಸುವ ಸಾಧ್ಯತೆಗಳಿವೆ. ವಾಸ್ತವವಾಗಿ ಬಿಸಿಸಿಐ, ದೇಶೀ ಟೂರ್ನಿಗಳಲ್ಲಿ ಜಾರಿಗೆ ತರುವ ನೂತನ ನಿಯಮಗಳನ್ನು ಆ ಬಳಿಕ ಮಿಲಿಯನ್ ಡಾಲರ್ ಟೂರ್ನಿಯಲ್ಲಿ ಐಪಿಎಲ್‌ನಲ್ಲೂ ಬಳಕೆ ಮಾಡುವುದನ್ನು ನಾವು ಈ ಹಿಂದೆ ನೋಡಿದ್ದೇವೆ. ಅದಕ್ಕೆ ತಾಜಾ ಉದಾಹರಣೆ ಎಂದರೆ, ಕಳೆದ ಬಾರಿ ಐಪಿಎಲ್‌ನಲ್ಲಿ ಹೊಸದಾಗಿ ಜಾರಿಯಾಗಿದ್ದ ಇಂಪ್ಯಾಕ್ಟ್ ಪ್ಲೇಯರ್ ನಿಯಮ. ಐಪಿಎಲ್‌ನಲ್ಲಿ ಈ ನಿಯಮವನ್ನು ಜಾರಿಗೆ ತರುವ ಮೊದಲು ಇದೇ ನಿಯಮವನ್ನು ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಜಾರಿಗೆ ತಂದಿತ್ತು. ಈ ನಿಯಮದ ಅಡಿಯಲ್ಲಿ, ಪಂದ್ಯದ ಸಮಯದಲ್ಲಿ ಉಭಯ ತಂಡಗಳು ತಮ್ಮ ಆಡುವ ಹನ್ನೊಂದರ ಬಳಗದಲ್ಲಿ ತಲಾ ಒಂದೊಂದು ಬದಲಾವಣೆಳನ್ನು ಮಾಡಬಹುದಾಗಿತ್ತು.
ಆದರೆ, ಐಪಿಎಲ್‌ನಲ್ಲಿ ಈ ನಿಯಮವನ್ನು ಜಾರಿಗೆ ತರುವ ಮೊದಲು ಬಿಸಿಸಿಐ, ಈ ನಿಯಮದಲ್ಲಿ ಕೊಂಚ ಬದಲಾವಣೆ ತಂದಿತ್ತು. ಅದೇನೆಂದರೆ ಐಪಿಎಲ್ಗೂ ಮುನ್ನ ಇಂಪ್ಯಾಕ್ಟ್ ಪ್ಲೇಯರ್ ನಿಯಮ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಜಾರಿಗೊಳಿಸಿದ್ದ ಬಿಸಿಸಿಐ, ಈ ನಿಯಮವನ್ನು ಉಭಯ ತಂಡಗಳು ಇನಿಂಗ್ಸ್‌ನ 14 ನೇ ಓವರ್‌ಗೂ ಮೊದಲು ಬಳಸಿಕೊಳ್ಳಬೇಕೆಂಬ ಷರತ್ತು ವಿಧಿಸಿತ್ತು. ಆದರೆ ಐಪಿಎಲ್ಗೆ ಈ ನಿಯಮವನ್ನು ತರುವ ವೇಳೆ ಆ ಷರತ್ತನ್ನು ಹಿಂಪಡೆದಿದ್ದ ಬಿಸಿಸಿಐ, ತಂಡಗಳು ಯಾವುದೇ ಸಮಯದಲ್ಲಿ ಈ ನಿಯಮವನ್ನು ಬಳಸಬಹುದು ಎಂದಿತ್ತು. ಇಂತಹ ಪರಿಸ್ಥಿತಿಯಲ್ಲಿ ಬಿಸಿಸಿಐ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಈಗ ಹೊಸದಾಗಿ ಪರಿಚಯಿಸಿರುವ ಎರಡು ಬೌನ್ಸರ್ ನಿಯಮವನ್ನು, ಐಪಿಎಲ್‌ನಲ್ಲಿ ಜಾರಿಗೊಳಿಸುವ ಸಾಧ್ಯತೆಯಿದೆ. ಏಕೆಂದರೆ ಐಪಿಎಲ್‌ನಂತೆ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಕೂಡ ಟಿ20 ಮಾದರಿಯಲ್ಲೇ ನಡೆಯಲ್ಲಿದೆ.
ಬೌಲರ್‌ಗಳಿಗೆ ಹೆಚ್ಚಿನ ಪ್ರಯೋಜನ
ಬಿಸಿಸಿಐ ಹೊಸದಾಗಿ ಪರಿಚಯಿಸಿರುವ ಈ ನಿಯಮ ಖಂಡಿತವಾಗಿಯೂ ಬೌಲರ್‌ಗಳಿಗೆ ಲಾಭವಾಗಲಿದೆ. ಬೌನ್ಸರ್ ಅಂತಹ ಚೆಂಡು ಬ್ಯಾಟ್ಸ್‌ಮನ್‌ಗಳಿಗೆ ಮಾರಕವಾಗಿದ್ದು, ಈ ಚೆಂಡನ್ನು ಆಡುವ ವೇಳೆ ಬ್ಯಾಟ್ಸ್‌ಮನ್‌ಗಳು ತೊಂದರೆಗೀಡಾಗಿ ವಿಕೆಟ್ ಒಪ್ಪಿಸುವುದನ್ನು ನಾವು ಸಾಕಷ್ಟು ಬಾರಿ ನೋಡಿದ್ದೇವೆ. ಇದರ ಲಾಭ ಪಡೆಯುವ ಬೌಲರ್‌ಗಳು ವಿಕೆಟ್ ಪಡೆಯಲು ಯತ್ನಿಸಲಿದ್ದಾರೆ. ಇಲ್ಲಿಯವರೆಗೆ ಬೌಲರ್‌ಗಳು ಒಂದು ಓವರ್‌ನಲ್ಲಿ ಒಂದು ಬೌನ್ಸರ್ ಅನ್ನು ಮಾತ್ರ ಎಸೆಯುತ್ತಿದ್ದರು. ಆದರೆ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಬೌಲರ್‌ಗಳು ಎರಡು ಬೌನ್ಸರ್‌ಗಳನ್ನು ಬೌಲ್ ಮಾಡುವುದನ್ನು ನಾವು ಕಾಣಬಹುದಾಗಿದೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ