ಟೀಮ್ ಇಂಡಿಯಾ ಆಯ್ಕೆಗೆ ಇಷ್ಟು ದಿನ ಒಂದು ಲೆಕ್ಕ… ಇನ್ಮುಂದೆ ಮತ್ತೊಂದು ಲೆಕ್ಕ. ಏಕೆಂದರೆ ಬಿಸಿಸಿಐ ತನ್ನ ಹಳೆಯ ನಿಯಮಗಳನ್ನು ಜಾರಿಗೊಳಿಸಲು ಮುಂದಾಗಿದೆ. ಅದರಂತೆ ಮುಂಬರುವ ದಿನಗಳಲ್ಲಿ ಭಾರತ ತಂಡದಲ್ಲಿ ಸ್ಥಾನ ಪಡೆಯಲು ಯೋ-ಯೋ ಟೆಸ್ಟ್ನಲ್ಲಿ ಪಾಸ್ ಆಗಲೇಬೇಕು. ವಿರಾಟ್ ಕೊಹ್ಲಿ ಟೀಮ್ ಇಂಡಿಯಾದ ನಾಯಕರಾಗಿದ್ದ ವೇಳೆ ತಂಡದ ಆಯ್ಕೆಗೆ ಯೋ ಯೋ ಟೆಸ್ಟ್ ಕಡ್ಡಾಯ ಮಾಡಲಾಗಿತ್ತು. ಆದರೆ ಕೊಹ್ಲಿ ನಾಯಕತ್ವದಿಂದ ಕೆಳಗಿಳಿದ ಬಳಿಕ ಈ ನಿಯಮವನ್ನು ತೆಗೆದು ಹಾಕಲಾಯಿತು.
ಈ ನಿಯಮವನ್ನು ಕೈ ಬಿಟ್ಟ ಬಳಿಕ ಟೀಮ್ ಇಂಡಿಯಾದ ಹಲವು ಆಟಗಾರರು ಫಿಟ್‍ನೆಸ್ ಸಮಸ್ಯೆಗೆ ಒಳಗಾಗಿದ್ದಾರೆ. ಅದು ರವೀಂದ್ರ ಜಡೇಜಾ ಆಗಿರಬಹುದು, ಇಲ್ಲ ಶುಭ್ಮನ್ ಗಿಲ್ ಅಥವಾ ಮೊಹಮ್ಮದ್ ಶಮಿ ಇರಬಹುದು. ಇದೀಗ ಜಸ್ಪ್ರೀತ್ ಬುಮ್ರಾ ಕೂಡ ಫಿಟ್‍ನೆಸ್ ಸಮಸ್ಯೆಯಿಂದ ಬಳಲುತ್ತಿದ್ದಾರೆ.
ಹಾಗೆಯೇ ರೋಹಿತ್ ಶರ್ಮಾ ಸೇರಿದಂತೆ ಕೆಲ ಆಟಗಾರರ ಫಿಟ್‍ನೆಸ್ ವಿಷಯದಲ್ಲಿ ಹಿಂದೆ ಉಳಿದಿದ್ದಾರೆ. ಇವೆಲ್ಲವನ್ನೂ ಗಂಭೀರವಾಗಿ ಪರಿಗಣಿಸಿರುವ ಬಿಸಿಸಿಐಮತ್ತೆ ಯೋ ಯೋ ಟೆಸ್ಟ್ ಅನ್ನು ಪರಿಚಯಿಸಲು ಚಿಂತಿಸಿದೆ. ಈ ಮೂಲಕ ಟೀಮ್ ಇಂಡಿಯಾ ಆಟಗಾರರ ಫಿಟ್‍ನೆಸ್ ಮೇಲೂ ಕೂಡ ನಿಗಾಯಿಡಲು ಬಿಸಿಸಿಐ ಚರ್ಚಿಸಿದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಇದಾಗ್ಯೂ ಈ ನಿಯಮ ಚಾಂಪಿಯನ್ಸ್ ಟ್ರೋಫಿ ತಂಡದ ಆಯ್ಕೆಗೆ ಅನ್ವಯವಾಗುವ ಸಾಧ್ಯತೆಯಿಲ್ಲ. ಏಕೆಂದರೆ ಐಸಿಸಿ ಟೂರ್ನಿಗೆ ಇನ್ನು ಕೇವಲ ಒಂದು ತಿಂಗಳು ಮಾತ್ರ ಉಳಿದಿದ್ದು, ಇಂತಹ ಸಂದರ್ಭದಲ್ಲಿ ಆಟಗಾರರ ಮೇಲೆ ಫಿಟ್‍ನೆಸ್ ಟೆಸ್ಟ್ ಒತ್ತಡ ಹೇರುವ ಸಾಧ್ಯತೆ ಇಲ್ಲ. ಹೀಗಾಗಿ ಚಾಂಪಿಯನ್ಸ್ ಟ್ರೋಫಿ ಬಳಿಕ ಟೀಮ್ ಇಂಡಿಯಾ ಆಯ್ಕೆಗೆ ಯೋ ಯೋ ಟೆಸ್ಟ್ ಕಡ್ಡಾಯ ಮಾಡುವ ಸಾಧ್ಯತೆಯಿದೆ.
ಟೀಮ್ ಇಂಡಿಯಾ ಆಟಗಾರರ ಫಿಟ್‍ನೆಸ್ ಟೆಸ್ಟ್ ಹಲವು ದೈಹಿಕ ಪರೀಕ್ಷೆಗಳನ್ನು ಮಾಡಲಾಗುತ್ತದೆ. ಇದರಲ್ಲಿ ಮುಖ್ಯವಾಗಿ ಯೋ ಯೋ ಟೆಸ್ಟ್ ಪಾಸಾಗಲೇಬೇಕು. ಇಲ್ಲಿ ಕ್ರಮಬದ್ಧ ಹಾಗೂ ವೇಗವಾಗಿ ಓಡುವ ಮೂಲಕ ತಮ್ಮ ದೈಹಿಕ ಸಾಮರ್ಥ್ಯವನ್ನು ಪರೀಕ್ಷೆಗೆ ಒಳಪಡಿಸಲಾಗುತ್ತದೆ.
ಈ ಫಿಟ್‍ನೆಸ್ ಟೆಸ್ಟ್ನಲ್ಲಿ 20 ಮೀಟರ್ ಅಳತೆಯಲ್ಲಿ ಎರಡು ಕೋನಗಳನ್ನು ನೇರವಾಗಿ ಇರಿಸಲಾಗಿರುತ್ತದೆ. ಇಲ್ಲಿ ಆಟಗಾರನು ಓಟವನ್ನು ಆರಂಭಿಸಿ, ಎರಡು ಲೈನ್ಗಳಲ್ಲಿಟ್ಟಿರುವ ಕೋನಗಳ ಬೀಪ್ ಧ್ವನಿಯನ್ನು ಅನುಸರಿಸಿ ತನ್ನ ದೂರವನ್ನು ಕ್ರಮಿಸಬೇಕಾಗುತ್ತದೆ.
ಹಾಗೆಯೇ ಈ ಟೆಸ್ಟ್ನಲ್ಲಿ 8.15 ನಿಮಿಷದೊಳಗೆ 2 ಕಿಲೋಮೀಟರ್ ಓಡಬೇಕಾಗುತ್ತದೆ. ಒಂದು ವೇಳೆ ಇದು ಸಾಧ್ಯವಾಗದಿದ್ದರೆ ಫೇಲ್ ಎಂದು ಪರಿಗಣಿಸಲಾಗುತ್ತದೆ.
ಇಲ್ಲಿ ಅಂಕಗಳು ತಂತ್ರಾಂಶ ಆಧಾರಿತವಾಗಿದ್ದು, ಹೀಗಾಗಿ ಯಾವುದೇ ಸುತ್ತಿನಲ್ಲಿ ಎಡವಿದರೂ ಮತ್ತೊಮ್ಮೆ ಪರೀಕ್ಷೆಗೆ ಒಳಗಾಗಬೇಕಾಗುತ್ತದೆ. ಹೀಗಾಗಿಯೇ ಯೋ ಯೋ ಟೆಸ್ಟ್ ಪಾಸಾಗುವುದು ಟೀಮ್ ಇಂಡಿಯಾ ಆಟಗಾರರ ಪಾಲಿಗೆ ಅಗ್ನಿ ಪರೀಕ್ಷೆ.
ಇದನ್ನೂ ಓದಿ: ಟೀಮ್ ಇಂಡಿಯಾ ಮಹಿಳೆಯರ ಅಬ್ಬರಕ್ಕೆ ಪುರುಷರ ದಾಖಲೆಯೇ ಉಡೀಸ್
ಇದೀಗ ಈ ನಿಯಮವನ್ನು ಮತ್ತೆ ಜಾರಿಗೊಳಿಸುವ ಮೂಲಕ ಬಿಸಿಸಿಐ ಆಟಗಾರರ ಫಿಟ್‍ನೆಸ್ ಅನ್ನು ಹೆಚ್ಚಿಸಲು ಮುಂದಾಗಿದ್ದು, ಈ ಮೂಲಕ ಬಲಿಷ್ಠ ಟೀಮ್ ಇಂಡಿಯಾ ಕಟ್ಟುವ ಇರಾದೆಯಲ್ಲಿದೆ.