ಗೌತಮ್ ಗಂಭೀರ್​ಗೆ ಕ್ಲಾಸ್ ತೆಗೆದುಕೊಂಡ ಬಿಸಿಸಿಐ: 6 ಗಂಟೆಗಳ ಮೀಟಿಂಗ್​ನಲ್ಲಿ 3 ಪ್ರಶ್ನೆಗಳು

|

Updated on: Nov 09, 2024 | 11:47 AM

92 ವರ್ಷಗಳ ಟೆಸ್ಟ್ ಇತಿಹಾಸದಲ್ಲಿ ಭಾರತ ತಂಡವು ಇದೇ ಮೊದಲ ಬಾರಿಗೆ ನ್ಯೂಝಿಲೆಂಡ್ ವಿರುದ್ಧ ತವರಿನಲ್ಲಿ ಟೆಸ್ಟ್ ಸರಣಿ ಸೋತಿದೆ. ಅದು ಕೂಡ 3-0 ಅಂತರದಿಂದ ಹೀನಾಯವಾಗಿ ಎಂಬುದು ವಿಶೇಷ. ಹೀಗಾಗಿ ಟೀಮ್ ಇಂಡಿಯಾ ಸೋಲನ್ನು ಬಿಸಿಸಿಐ ಗಂಭೀರವಾಗಿ ಪರಿಗಣಿಸಿದೆ.

ಗೌತಮ್ ಗಂಭೀರ್​ಗೆ ಕ್ಲಾಸ್ ತೆಗೆದುಕೊಂಡ ಬಿಸಿಸಿಐ: 6 ಗಂಟೆಗಳ ಮೀಟಿಂಗ್​ನಲ್ಲಿ 3 ಪ್ರಶ್ನೆಗಳು
Gautam Gambhir
Follow us on

ನ್ಯೂಝಿಲೆಂಡ್ ವಿರುದ್ಧದ ಹೀನಾಯ ಸೋಲಿನ ಬೆನ್ನಲ್ಲೇ ಟೀಮ್ ಇಂಡಿಯಾ ಕೋಚ್ ಗೌತಮ್ ಗಂಭೀರ್ ಅವರ ಕೋಚಿಂಗ್ ಶೈಲಿ ಬಗ್ಗೆ ಪ್ರಶ್ನೆಗಳೆದ್ದಿವೆ. ಅದರಲ್ಲೂ 3-0 ಅಂತರದ ಹೀನಾಯ ಸೋಲಿನಿಂದ ತೀವ್ರ ಅಸಮಾಧಾನಗೊಂಡಿರುವ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI), ಇದೀಗ ಟೀಮ್ ಇಂಡಿಯಾ ಕೋಚ್ ಗೌತಮ್ ಗಂಭೀರ್​ಗೆ ಕ್ಲಾಸ್ ತೆಗೆದುಕೊಂಡಿರುವ ವಿಚಾರ ಬಹಿರಂಗವಾಗಿದೆ.

92 ವರ್ಷಗಳ ಇತಿಹಾಸದಲ್ಲಿ ಮೊದಲ ಬಾರಿಗೆ, ತವರಿನಲ್ಲಿ ಟೆಸ್ಟ್ ಸರಣಿಯ ಪ್ರತಿ ಪಂದ್ಯವನ್ನು ಸೋತಿರುವ ಭಾರತ ತಂಡದ ಪ್ರದರ್ಶನವನ್ನು ಬಿಸಿಸಿಐ ಗಂಭೀರವಾಗಿ ಪರಿಗಣಿಸಿದೆ. ಈ ಸೋಲಿನ ಐದು ದಿನಗಳ ನಂತರ, ನಾಯಕ ರೋಹಿತ್ ಶರ್ಮಾ, ಕೋಚ್ ಗೌತಮ್ ಗಂಭೀರ್ ಮತ್ತು ಮುಖ್ಯ ಆಯ್ಕೆಗಾರ ಅಜಿತ್ ಅಗರ್ಕರ್ ಅವರು ಮಂಡಳಿಯ ಅಧ್ಯಕ್ಷ ರೋಜರ್ ಬಿನ್ನಿ ಮತ್ತು ಕಾರ್ಯದರ್ಶಿ ಜಯ್ ಶಾ ಅವರ ಮುಂದೆ ಹಾಜರಾಗಿದ್ದರು. ಇದೇ ವೇಳೆ ಸೋಲಿನ ಬಗ್ಗೆ ಸ್ಪಷ್ಟೀಕರಣ ಕೇಳಲಾಗಿದೆ.

6 ಗಂಟೆಗಳ ಸಭೆ:

ಮುಂಬೈ ಟೆಸ್ಟ್ ಸೋಲಿನ ಬಳಿಕ ಟೀಮ್ ಇಂಡಿಯಾ ಕೋಚ್ ಹಾಗೂ ನಾಯಕ ರೋಹಿತ್ ಶರ್ಮಾ ಅವರಿಗೆ ವಿಶೇಷ ಸಭೆಗೆ ಹಾಜರಾಗುವಂತೆ ತಿಳಿಸಲಾಗಿತ್ತು. ಅದರಂತೆ ನವೆಂಬರ್ 8 ರಂದು ನಡೆದ ಸಭೆಯಲ್ಲಿ ಗಂಭೀರ್ ಮತ್ತು ರೋಹಿತ್ ಶರ್ಮಾ ಜೊತೆ ಆಯ್ಕೆ ಸಮಿತಿ ಮುಖ್ಯಸ್ಥ ಅಗರ್ಕರ್ ಕೂಡ ಕಾಣಿಸಿಕೊಂಡಿದ್ದರು.

ಮುಂಬೈನಲ್ಲಿರುವ ಬಿಸಿಸಿಐ ಪ್ರಧಾನ ಕಚೇರಿಯಲ್ಲಿ ನಡೆದ ಈ ಪರಿಶೀಲನಾ ಸಭೆಯು 6 ಗಂಟೆಗಳ ಕಾಲ ನಡೆದಿದ್ದು, ಇದರಲ್ಲಿ ಕೋಚ್ ಗಂಭೀರ್ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಭಾಗಿಯಾಗಿದ್ದಾರೆ ಎಂದು ಮಂಡಳಿಯ ಮೂಲಗಳನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.

ಮೂರು ವಿಷಯಗಳ ಬಗ್ಗೆ ಚರ್ಚೆ:

ಈ ಸಭೆಯಲ್ಲಿ, ಇಡೀ ಸರಣಿಯಲ್ಲಿ ತಂಡದ ಆಡಳಿತವು ತೆಗೆದುಕೊಂಡ ಕೆಲವು ನಿರ್ಧಾರಗಳ ಬಗ್ಗೆ ಸ್ಪಷ್ಟೀಕರಣವನ್ನು ಕೇಳಲಾಗಿದೆ. ಅಲ್ಲದೆ ಇದೇ ವಿಷಯಗಳ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದವು ಎಂದು ಎಂದು ಪಿಟಿಐ ವರದಿಯಲ್ಲಿ ತಿಳಿಸಲಾಗಿದೆ. ಇಲ್ಲಿ ಟೀಮ್ ಇಂಡಿಯಾ ಕೋಚ್ ಹಾಗೂ ನಾಯಕನಿಗೆ ಮೂರು ಪ್ರಶ್ನೆಗಳನ್ನು ಮುಂದಿಡಲಾಗಿದೆ. ಅವುಗಳೆಂದರೆ….

ಟೀಮ್ ಇಂಡಿಯಾ ಮೊದಲ ಎರಡು ಟೆಸ್ಟ್‌ಗಳಲ್ಲಿ ಸೋತಿದ್ದರೂ, ಉಪನಾಯಕ ಮತ್ತು ಸ್ಟಾರ್ ವೇಗದ ಬೌಲರ್ ಜಸ್​ಪ್ರೀತ್ ಬುಮ್ರಾ ಅವರಿಗೆ ಮೂರನೇ ಟೆಸ್ಟ್‌ ಪಂದ್ಯದ ವೇಳೆ ವಿಶ್ರಾಂತಿ ಏಕೆ ನೀಡಲಾಗಿದೆ ಎಂದು ಪ್ರಶ್ನಿಸಲಾಗಿದೆ.

ಈ ಪ್ರಶ್ನೆಗೆ ಉತ್ತರಿಸಿದ ಗಂಭೀರ್, ಆಸ್ಟ್ರೇಲಿಯಾ ಸರಣಿಯನ್ನು ಗಮನದಲ್ಲಿಟ್ಟುಕೊಂಡು, ಮುನ್ನೆಚ್ಚರಿಕೆ ಕ್ರಮವಾಗಿ ಮೂರನೇ ಟೆಸ್ಟ್‌ನಿಂದ ಬುಮ್ರಾಗೆ ವಿಶ್ರಾಂತಿ ನೀಡಿದ್ದೇವೆ ಎಂಧು ತಿಳಿಸಿದ್ದಾರೆ. ಆದರೆ ತಂಡದ ಈ ನಿರ್ಧಾರದ ಬಗ್ಗೆ ಮಂಡಳಿಯ ಅಧಿಕಾರಿಗಳು ಹೆಚ್ಚು ಸಂತೋಷವಾಗಿಲ್ಲ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಹಾಗೆಯೇ ಈ ಸಭೆಯಲ್ಲಿ ಪಿಚ್ ಬಗ್ಗೆಗಿನ ಪ್ರಶ್ನೆಯನ್ನು ಸಹ ಕೇಳಲಾಗಿದೆ. ಪುಣೆಯಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯವೂ ಸ್ಪಿನ್ ಸ್ನೇಹಿ ಪಿಚ್​ನಲ್ಲಿ ನಡೆಸಲಾಗಿತ್ತು. ಈ ಪಿಚ್​ನಲ್ಲಿ ಭಾರತೀಯ ಬ್ಯಾಟ್ಸ್‌ಮನ್‌ಗಳು ದಯನೀಯವಾಗಿ ವಿಫಲರಾಗಿದ್ದಾರೆ. ಹೀಗಿರುವಾಗ ಮುಂಬೈ ಟೆಸ್ಟ್‌ನಲ್ಲಿ ‘ರ್ಯಾಂಕ್ ಟರ್ನರ್’ (ಮೊದಲ ದಿನದಿಂದ ಹೆಚ್ಚು ತಿರುವು ಪಡೆಯುವ ಪಿಚ್) ಪಿಚ್​ ರೂಪಿಸಲು ಸೂಚಿಸಿರುವುದೇಕೆ ಎಂದು ಪ್ರಶ್ನಿಸಲಾಗಿದೆ.

ಹಾಗೆಯೇ ಮೂರನೇ ಪ್ರಶ್ನೆ ಮೂಡಿಬಂದಿರುವುದು ಗೌತಮ್ ಗಂಭೀರ್ ಅವರ ಕೋಚಿಂಗ್ ಸ್ಟ್ರಾಟಜಿ ವಿರುದ್ಧ. ವರದಿಯ ಪ್ರಕಾರ, ಮಂಡಳಿಯ ಅಧಿಕಾರಿಗಳು ಗಂಭೀರ್ ಅವರ ಕೋಚಿಂಗ್ ಶೈಲಿಯ ಬಗ್ಗೆ ಪ್ರಶ್ನೆಗಳನ್ನು ಎತ್ತಲಿಲ್ಲ. ಬದಲಾಗಿ ಅವರ ಕಾರ್ಯ ವಿಧಾನಗಳನ್ನು ಪ್ರಶ್ನಿಸಲಾಗಿದೆ.

ಇಷ್ಟೇ ಅಲ್ಲದೆ, ಟೀಮ್ ಮ್ಯಾನೇಜ್​ಮೆಂಟ್​ನ ಕೆಲ ಸದಸ್ಯರು ಹಾಗೂ ಕೋಚ್ ಗೌತಮ್ ಗಂಭೀರ್ ನಡುವೆ ಭಿನ್ನಾಭಿಪ್ರಾಯಗಳಿವೆ ಎಂಬ ಅಂಶವೂ ಈ ಸಭೆಯಿಂದ ಬೆಳಕಿಗೆ ಬಂದಿದೆ. ಇದರೊಂದಿಗೆ, ಆಸ್ಟ್ರೇಲಿಯಾ ಸರಣಿಯಲ್ಲಿ ತಂಡವನ್ನು ಸರಿಯಾದ ಹಾದಿಗೆ ತರಲು ನಿಮ್ಮ ಯೋಜನೆ ಏನು ಎಂಬುದನ್ನು ಪ್ರಶ್ನಿಸಲಾಗಿದ್ದು, ಇದಕ್ಕೆ ರೋಹಿತ್ ಶರ್ಮಾ, ಗಂಭೀರ್ ಸಕರಾತ್ಮಕ ಉತ್ತರ ನೀಡಿದ್ದಾರೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ: ಅಮೋಘ ಗೆಲುವಿನೊಂದಿಗೆ ಭಾರತದ ದಾಖಲೆ ಮುರಿದ ಪಾಕಿಸ್ತಾನ್

ಒಟ್ಟಿನಲ್ಲಿ ಗೌತಮ್ ಗಂಭೀರ್ ನಡೆಯಿಂದ ಬಿಸಿಸಿಐ ಸಂಪೂರ್ಣ ಸಂತುಷ್ಟರಾಗಿಲ್ಲ ಎಂಬುದು ಸ್ಪಷ್ಟವಾಗಿದೆ. ಹೀಗಾಗಿ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯು ಟೀಮ್ ಇಂಡಿಯಾಗಿಂತ ಗೌತಮ್ ಗಂಭೀರ್ ಪಾಲಿಗೆ ಪ್ರತಿಷ್ಠಿತ ಕಣವಾಗಿ ಮಾರ್ಪಟ್ಟಿರುವುದಂತು ಸುಳ್ಳಲ್ಲ.