ಆಸ್ಟ್ರೇಲಿಯಾ ತಂಡವನ್ನು ಆಸ್ಟ್ರೇಲಿಯಾದಲ್ಲೇ ಸೋಲಿಸುವುದು ಅಂದುಕೊಂಡಷ್ಟು ಸುಲಭವಲ್ಲ. ಹೀಗಾಗಿಯೇ ಆಸೀಸ್ ಪಿಚ್ನಲ್ಲಿನ ಗೆಲುವನ್ನು ಶ್ರೇಷ್ಠ ಜಯ ಎಂದು ಬಣ್ಣಿಸಲಾಗುತ್ತದೆ. ಇದೀಗ ಅಂತಹದೊಂದು ಅಮೋಘ ಗೆಲುವು ದಾಖಲಿಸಿ ಪಾಕಿಸ್ತಾನ್ ತಂಡ ಇಡೀ ವಿಶ್ವದ ಗಮನ ಸೆಳೆದಿದೆ.
ಅಡಿಲೇಡ್ನಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ಪಾಕಿಸ್ತಾನ್ ತಂಡವು 9 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆಸೀಸ್ ಪಡೆ 35 ಓವರ್ಗಳಲ್ಲಿ 163 ರನ್ಗಳಿಸಿ ಆಲೌಟ್ ಆಗಿತ್ತು. ಈ ಟಾರ್ಗೆಟ್ ಅನ್ನು ಬೆನ್ನತ್ತಿದ ಪಾಕಿಸ್ತಾನ್ 26.3 ಓವರ್ಗಳಲ್ಲಿ 1 ವಿಕೆಟ್ ಕಳೆದುಕೊಂಡು 169 ರನ್ಗಳಿಸಿ ಅಮೋಘ ಗೆಲುವು ದಾಖಲಿಸಿದೆ.
ಈ ಗೆಲುವಿನೊಂದಿಗೆ ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಆಸ್ಟ್ರೇಲಿಯಾವನ್ನು ತವರಿನಲ್ಲಿ ಅತ್ಯಧಿಕ ಬಾರಿ ಸೋಲಿಸಿದ ಏಷ್ಯನ್ ತಂಡವೆಂಬ ಹೆಗ್ಗಳಿಕೆ ಪಾಕಿಸ್ತಾನ್ ಪಾಲಾಗಿದೆ. ಇದಕ್ಕೂ ಮುನ್ನ ಈ ದಾಖಲೆ ಟೀಮ್ ಇಂಡಿಯಾದ ಹೆಸರಿನಲ್ಲಿತ್ತು.
ಆಸ್ಟ್ರೇಲಿಯಾದಲ್ಲಿ ಭಾರತ ತಂಡವು 99 ಏಕದಿನ ಪಂದ್ಯಗಳನ್ನಾಡಿದೆ. ಈ ವೇಳೆ ಟೀಮ್ ಇಂಡಿಯಾ 40 ಬಾರಿ ಜಯ ಸಾಧಿಸಿದೆ. ಈ ಮೂಲಕ ಆಸ್ಟ್ರೇಲಿಯಾದಲ್ಲಿ ಅತ್ಯಧಿಕ ಗೆಲುವು ದಾಖಲಿಸಿದ ಏಷ್ಯನ್ ತಂಡ ಎನಿಸಿಕೊಂಡಿತ್ತು.
ಇದೀಗ ಈ ದಾಖಲೆಯನ್ನು ಪಾಕಿಸ್ತಾನ್ ಪಡೆ ಮುರಿದೆ. ಕಾಂಗರೂ ನಾಡಿನಲ್ಲಿ 110 ಏಕದಿನ ಪಂದ್ಯಗಳನ್ನಾಡಿರುವ ಪಾಕಿಸ್ತಾನ್ 41 ಮ್ಯಾಚ್ಗಳಲ್ಲಿ ಜಯ ದಾಖಲಿಸುವ ಮೂಲಕ, ಆಸ್ಟ್ರೇಲಿಯಾದಲ್ಲಿ ಅತೀ ಹೆಚ್ಚು ಏಕದಿನ ಪಂದ್ಯ ಗೆದ್ದ ಏಷ್ಯಾದ ತಂಡ ಎನಿಸಿಕೊಂಡಿದೆ.
ಇನ್ನು ಆಸ್ಟ್ರೇಲಿಯಾ ತಂಡವನ್ನು ಅವರದ್ದೇ ನೆಲದಲ್ಲಿ ಅತ್ಯಧಿಕ ಬಾರಿ ಸೋಲಿಸಿದ ದಾಖಲೆ ವೆಸ್ಟ್ ಇಂಡೀಸ್ ತಂಡದ ಹೆಸರಿನಲ್ಲಿದೆ. ವಿಂಡೀಸ್ ಪಡೆ 149 ಏಕದಿನ ಪಂದ್ಯಗಳಲ್ಲಿ 75 ಮ್ಯಾಚ್ಗಳ ಜಯ ಸಾಧಿಸಿ ಈ ಅಮೋಘ ದಾಖಲೆ ಬರೆದಿದೆ.
Published On - 11:09 am, Sat, 9 November 24