AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಾಕಿಸ್ತಾನಕ್ಕೆ ಟೀಂ ಇಂಡಿಯಾ ಪ್ರಯಾಣ; ಐಸಿಸಿಗೆ ತನ್ನ ಅಂತಿಮ ನಿರ್ಧಾರ ತಿಳಿಸಿದ ಬಿಸಿಸಿಐ

Champions Trophy 2025: ಭಾರತ ಸರ್ಕಾರದ ಸೂಚನೆಯ ಮೇರೆಗೆ 2025ರ ಚಾಂಪಿಯನ್ಸ್ ಟ್ರೋಫಿಗೆ ಭಾರತ ತಂಡವನ್ನು ಪಾಕಿಸ್ತಾನಕ್ಕೆ ಕಳುಹಿಸದಿರಲು ಬಿಸಿಸಿಐ ನಿರ್ಧರಿಸಿದೆ. ಇದರಿಂದ ಐಸಿಸಿಗೆ ಹೈಬ್ರಿಡ್ ಮಾದರಿಯಲ್ಲಿ ಟೂರ್ನಿಯನ್ನು ನಡೆಸುವುದು ಅನಿವಾರ್ಯವಾಗಿದೆ. ಪಾಕಿಸ್ತಾನ ಈ ನಿರ್ಧಾರಕ್ಕೆ ಒಪ್ಪದಿದ್ದರೆ, ಐಸಿಸಿಗೆ ಹಾಗೂ ಪಾಕಿಸ್ತಾನ ಕ್ರಿಕೆಟ್ ಮಂಡಳಿಗೆ ಆರ್ಥಿಕ ನಷ್ಟ ಉಂಟಾಗುವ ಸಾಧ್ಯತೆಯಿದೆ.

ಪಾಕಿಸ್ತಾನಕ್ಕೆ ಟೀಂ ಇಂಡಿಯಾ ಪ್ರಯಾಣ; ಐಸಿಸಿಗೆ ತನ್ನ ಅಂತಿಮ ನಿರ್ಧಾರ ತಿಳಿಸಿದ ಬಿಸಿಸಿಐ
ಚಾಂಪಿಯನ್ಸ್ ಟ್ರೋಫಿ
ಪೃಥ್ವಿಶಂಕರ
|

Updated on: Nov 09, 2024 | 6:06 PM

Share

2025 ರ ಫೆಬ್ರವರಿ 19 ಮತ್ತು ಮಾರ್ಚ್ 9 ರ ನಡುವೆ ನಡೆಯಲ್ಲಿರುವ ಚಾಂಪಿಯನ್ಸ್ ಟ್ರೋಫಿಗೆ ಪಾಕಿಸ್ತಾನ ಆತಿಥ್ಯ ವಹಿಸಲಿದೆ. ಆದರೆ ಈ ಟೂರ್ನಿಯ ವೇಳಾಪಟ್ಟಿಯನ್ನು ಐಸಿಸಿ ಇನ್ನೂ ಪ್ರಕಟಿಸಿಲ್ಲ. ಇದಕ್ಕೆ ಕಾರಣವೂ ಇದ್ದು, ಬದ್ಧವೈರಿಯ ನಾಡಿಗೆ ಟೀಂ ಇಂಡಿಯಾವನ್ನು ಕಳುಹಿಸುವ ಬಗ್ಗೆ ಬಿಸಿಸಿಐ ಇದುವರೆಗೆ ಯಾವುದೇ ಅಧಿಕೃತ ಮಾಹಿತಿಯನ್ನು ಐಸಿಸಿಗೆ ಸಲ್ಲಿಸಿರಲಿಲ್ಲ. ಆದರೀಗ ಚಾಂಪಿಯನ್ಸ್ ಟ್ರೋಫಿಯ ವೇಳಾಪಟ್ಟಿಯನ್ನು ಪ್ರಕಟಿಸಲು ಸಮಯ ಸನಿಹವಾಗುತ್ತಿರುವ ಕಾರಣ ಬಿಸಿಸಿಐ ತನ್ನ ನಿಲುವನ್ನು ಐಸಿಸಿ ಮುಂದಿಡಬೇಕಾಗಿತ್ತು. ಅದರಂತೆ ಭಾರತ ಸರ್ಕಾರದ ಸೂಚನೆಯನ್ನು ಉಲ್ಲೇಖಿಸಿರುವ ಬಿಸಿಸಿಐ, ಐಸಿಸಿಗೆ ಮಾಹಿತಿ ನೀಡಿದ್ದು, ಟೀಂ ಇಂಡಿಯಾವನ್ನು ಪಾಕಿಸ್ತಾನಕ್ಕೆ ಕಳುಹಿಸದಿರಲು ನಿರ್ಧರಿಸಿದೆ ಎಂದು ವರದಿಯಾಗಿದೆ.

ಐಸಿಸಿಗೆ ತನ್ನ ನಿರ್ಧಾರ ತಿಳಿಸಿದ ಬಿಸಿಸಿಐ

ESPNcricinfo ವರದಿಯ ಪ್ರಕಾರ, 2025 ರ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾಗವಹಿಸಲು ಟೀಂ ಇಂಡಿಯಾವನ್ನು ಪಾಕಿಸ್ತಾನಕ್ಕೆ ಕಳುಹಿಸಲು ಸಾಧ್ಯವಿಲ್ಲ ಎಂದು ಬಿಸಿಸಿಐ, ಐಸಿಸಿಗೆ ತಿಳಿಸಿದೆ. ಇದಕ್ಕೆ ಕಾರಣವನ್ನು ನೀಡಿರುವ ಬಿಸಿಸಿಐ, ಭಾರತ ತಂಡವನ್ನು ಪಾಕಿಸ್ತಾನಕ್ಕೆ ಕಳುಹಿಸದಂತೆ ಭಾರತ ಸರ್ಕಾರದಿಂದ ಸೂಚನೆ ಬಂದಿದೆ ಎಂದು ಐಸಿಸಿಗೆ ತಿಳಿಸಿದೆ. ಇದರರ್ಥ ಇದೀಗ ಟೀಂ ಇಂಡಿಯಾ, ಪಾಕಿಸ್ತಾನಕ್ಕೆ ಹೋಗುವುದಿಲ್ಲ ಎಂಬುದು ಖಚಿತವಾಗಿದೆ. ಹೀಗಾಗಿ ಚಾಂಪಿಯನ್ಸ್ ಟ್ರೋಫಿಯನ್ನು ಹೈಬ್ರಿಡ್ ಮಾದರಿಯಲ್ಲಿ ನಡೆಸುವುದನ್ನು ಬಿಟ್ಟು ಪಾಕಿಸ್ತಾನಕ್ಕೆ ಬೇರೆ ದಾರಿಯಿಲ್ಲ.

ಒಂದು ವೇಳೆ ಪಾಕಿಸ್ತಾನ ಈ ಹೈಬ್ರಿಡ್ ಮಾದರಿಗೆ ಒಪ್ಪಿಗೆ ಸೂಚಿಸದಿದ್ದರೆ, ಪಾಕ್ ಮಂಡಳಿಯ ಜೊತೆಗೆ ಐಸಿಸಿಗೂ ಭಾರಿ ನಷ್ಟವುಂಟಾಗುತ್ತದೆ. ಏಕೆಂದರೆ ಐಸಿಸಿ ಯಾವುದೇ ಈವೆಂಟ್​ ಆಯೋಜಿಸಿದರೂ ಅದಕ್ಕೆ ಪ್ರಮುಖ ಆದಾಯದ ಮೂಲವಾಗಿರುವುದು ಟೀಂ ಇಂಡಿಯಾ. ಹೀಗಾಗಿ ಟೀಂ ಇಂಡಿಯಾವನ್ನು ಹೊರಗಿಟ್ಟು ಚಾಂಪಿಯನ್ಸ್ ಟ್ರೋಫಿಯನ್ನು ಆಯೋಜಿಸುವ ಧೈರ್ಯ ಐಸಿಸಿಗಿಲ್ಲ. ಆದ್ದರಿಂದ ಚಾಂಪಿಯನ್ಸ್ ಟ್ರೋಫಿಯನ್ನು ಹೈಬ್ರಿಡ್ ಮಾದರಿಯಲ್ಲಿ ಆಯೋಜಿಸುವುದು ಅನಿವಾರ್ಯವಾಗಿದೆ.

ವಾಸ್ತವವಾಗಿ ಭಾರತ ಹಾಗೂ ಪಾಕಿಸ್ತಾನ ನಡುವಿನ ಉದ್ವಿಗ್ನ ರಾಜಕೀಯ ಸಂಬಂಧಗಳಿಂದಾಗಿ ಟೀಂ ಇಂಡಿಯಾ 2008 ರ ಏಷ್ಯಾಕಪ್ ನಂತರ ಪಾಕಿಸ್ತಾನಕ್ಕೆ ಪ್ರವಾಸ ಮಾಡಿಲ್ಲ. ಹೀಗಿರುವಾಗ ಟೀಂ ಇಂಡಿಯಾ ಈ ಬಾರಿಯೂ ಪಾಕಿಸ್ತಾನಕ್ಕೆ ಹೋಗುವುದಿಲ್ಲ. ಆದಾಗ್ಯೂ, 2023 ರ ವಿಶ್ವಕಪ್ ಸೇರಿದಂತೆ ಹಲವು ಐಸಿಸಿ ಈವೆಂಟ್​ಗಳಿಗಾಗಿ ಪಾಕಿಸ್ತಾನ ಭಾರತಕ್ಕೆ ಭೇಟಿ ನೀಡಿದೆ.

ಹೈಬ್ರಿಡ್ ಮಾದರಿಯಲ್ಲಿ ಪಂದ್ಯಾವಳಿ

ಒಂದು ವೇಳೆ ಟೀಂ ಇಂಡಿಯಾ ಪಾಕಿಸ್ತಾನ ಪ್ರವಾಸ ಮಾಡದಿದ್ದರೆ, ಈ ಟೂರ್ನಿಯನ್ನು ಹೈಬ್ರಿಡ್ ಮಾದರಿಯಲ್ಲಿ ನಡೆಸುವ ಬಗ್ಗೆ ಮಾತುಕತೆ ನಡೆದಿದೆ ಎಂದು ಹೇಳಲಾಗುತ್ತಿದೆ. ಆ ಪ್ರಕಾರ ಭಾರತದ ಪಂದ್ಯಗಳನ್ನು ಯುಎಇಯಲ್ಲಿ ನಡೆಸಲು ತೀರ್ಮಾನಿಸಲಾಗಿದೆ ಎಂದು ವರದಿಯಾಗಿದೆ. ಈ ಹಿಂದೆ 2023ರಲ್ಲಿ ಏಷ್ಯಾಕಪ್ ಕೂಡ ಹೈಬ್ರಿಡ್ ಮಾದರಿಯಲ್ಲಿ ನಡೆದಿತ್ತು. ಆಗಲೂ ಆತಿಥ್ಯ ಹಕ್ಕು ಪಡೆದುಕೊಂಡಿದ್ದ ಪಾಕಿಸ್ತಾನ ಬೇರೆ ದಾರಿಯಿಲ್ಲದೆ, ಟೀಂ ಇಂಡಿಯಾದ ಪಂದ್ಯಗಳನ್ನು ಶ್ರೀಲಂಕಾದಲ್ಲಿ ಆಡಿಸಿತ್ತು. ಟೂರ್ನಿಯ ಫೈನಲ್ ಕೂಡ ಶ್ರೀಲಂಕಾದಲ್ಲಿ ನಡೆದಿತ್ತು.

ಒತ್ತಾಯಕ್ಕೆ ಮಣಿಯುತ್ತಾ ಪಾಕಿಸ್ತಾನ?

ಇತ್ತೀಚೆಗಷ್ಟೇ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಅಧ್ಯಕ್ಷ ಮೊಹ್ಸಿನ್ ನಖ್ವಿ ಈ ಟೂರ್ನಿಯ ಬಗ್ಗೆ ದೊಡ್ಡ ಹೇಳಿಕೆ ನೀಡಿದ್ದರು. ಅದರಲ್ಲಿ ಅವರು, ‘ಚಾಂಪಿಯನ್ಸ್ ಟ್ರೋಫಿಗಾಗಿ ಭಾರತ ತಂಡವು ಪಾಕಿಸ್ತಾನಕ್ಕೆ ಬರುವುದಿಲ್ಲ ಎಂಬ ವರದಿಗಳು ಕೇಳಿ ಬರುತ್ತಿವೆ. ಆದರೆ ನಮ್ಮ ನಿಲುವು ಸ್ಪಷ್ಟವಾಗಿದೆ. ಬಿಸಿಸಿಐಗೆ ಏನಾದರೂ ಸಮಸ್ಯೆ ಇದ್ದರೆ ಅದನ್ನು ಲಿಖಿತವಾಗಿ ನಮಗೆ ತಿಳಿಸಬೇಕು. ಇಲ್ಲಿಯವರೆಗೆ ನಾವು ಹೈಬ್ರಿಡ್ ಮಾದರಿಯ ಬಗ್ಗೆ ಯೋಚಿಸಿಯೂ ಇಲ್ಲ. ಜೊತೆಗೆ ಅದಕ್ಕೆ ಸಿದ್ಧರಿಲ್ಲ. ನಾವು ಚಾಂಪಿಯನ್ಸ್ ಟ್ರೋಫಿಗೆ ತಯಾರಿ ನಡೆಸುತ್ತಿದ್ದೇವೆ, ಇದು ಯಶಸ್ವಿ ಪಂದ್ಯಾವಳಿಯಾಗಲಿದೆ ಎಂದು ನಾವು ಭಾವಿಸುತ್ತೇವೆ.

ಭಾರತ ತಂಡ ಇಲ್ಲಿಗೆ ಬರದಿದ್ದರೆ ನಮ್ಮ ಸರ್ಕಾರದ ಮೊರೆ ಹೋಗಬೇಕಾಗುತ್ತದೆ. ನಂತರ ಅವರು ಯಾವುದೇ ನಿರ್ಧಾರ ತೆಗೆದುಕೊಂಡರೂ ನಾವು ಅದನ್ನು ಅನುಸರಿಸಬೇಕಾಗುತ್ತದೆ. ಒಂದು ವೇಳೆ ಭಾರತ ತಂಡ ಪಾಕಿಸ್ತಾನಕ್ಕೆ ಬರದಿದ್ದರೆ ನಾವು ಒತ್ತಡಕ್ಕೆ ಮಣಿಯುತ್ತೇವೆ ಎಂಬುದನ್ನು ನಿರೀಕ್ಷಿಸಬೇಡಿ ಎಂದು ಹೇಳಿದ್ದರು. ಹೀಗಾಗಿ ಈ ಇಬ್ಬರ ಪ್ರತಿಷ್ಠೆಯ ಹೋರಾಟ ಮುಂದೆ ಯಾವ ತಿರುವು ಪಡೆದುಕೊಳ್ಳುತ್ತದೆ ಎಂಬುದನ್ನು ಕಾದುನೋಡಬೇಕಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ