IND vs ENG: ಟೆಸ್ಟ್ ನಾಯಕತ್ವದಿಂದ ರೋಹಿತ್ ಶರ್ಮಾಗೆ ಗೇಟ್ಪಾಸ್; ಇಂಗ್ಲೆಂಡ್ ಪ್ರವಾಸಕ್ಕೆ ನೂತನ ನಾಯಕ
Rohit Sharma Test Captain: ಭಾರತ ಟೆಸ್ಟ್ ತಂಡದ ನಾಯಕ ರೋಹಿತ್ ಶರ್ಮಾ ಅವರನ್ನು ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೂ ಮುನ್ನವೇ ನಾಯಕತ್ವದಿಂದ ಕೆಳಗಿಳಿಸಲು ಆಯ್ಕೆ ಸಮಿತಿ ನಿರ್ಧರಿಸಿದೆ. ಕಳಪೆ ಪ್ರದರ್ಶನ ಮತ್ತು ಸ್ಥಿರತೆಯ ಕೊರತೆಯ ಕಾರಣದಿಂದ ಈ ನಿರ್ಧಾರಕ್ಕೆ ಬರಲಾಗಿದೆ. ಬಿಸಿಸಿಐ ಈ ನಿರ್ಧಾರವನ್ನು ಬೆಂಬಲಿಸಿದ್ದು, ಹೊಸ ನಾಯಕನ ಆಯ್ಕೆ ಶೀಘ್ರದಲ್ಲೇ ಘೋಷಣೆಯಾಗಲಿದೆ.

ಪ್ರಸ್ತುತ ಭಾರತದಲ್ಲಿ ಐಪಿಎಲ್ (IPL 2025) ನಡೆಯುತ್ತಿದ್ದು, ಆ ಬಳಿಕ ದ್ವಿಪಕ್ಷೀಯ ಸರಣಿಗಳು ಆರಂಭವಾಗಲಿವೆ. ಅದರಂತೆ ಟೀಂ ಇಂಡಿಯಾ (Team India) ಐಪಿಎಲ್ ಮುಗಿದ ಕೂಡಲೇ ಐದು ಪಂದ್ಯಗಳ ಟೆಸ್ಟ್ ಸರಣಿಗಾಗಿ ಇಂಗ್ಲೆಂಡ್ ಪ್ರವಾಸ ಮಾಡಲಿದೆ. ಈ ಪ್ರವಾಸಕ್ಕೆ ತಂಡವನ್ನು ಆಯ್ಕೆ ಮಾಡಲು ಬಿಸಿಸಿಐ ಈಗಾಗಲೇ ಮುಂದಾಗಿದ್ದು, ಇಷ್ಟರಲ್ಲೇ ತಂಡ ಪ್ರಕಟವಾಗಲಿದೆ. ಆದರೆ ತಂಡ ಪ್ರಕಟವಾಗುವುದಕ್ಕಿಂತ ಮುನ್ನ ಅಚ್ಚರಿಯ ವರದಿಯೊಂದು ಹೊರಬಿದ್ದಿದ್ದು, ಭಾರತ ಟೆಸ್ಟ್ ತಂಡದ ನಾಯಕತ್ವದಿಂದ ರೋಹಿತ್ ಶರ್ಮಾ (Rohit Sharma) ಅವರನ್ನು ಕೆಳಗಿಳಿಸಲಾಗುವುದು. ಅವರ ಬದಲಿಗೆ ಬೇರೊಬ್ಬ ಆಟಗಾರನಿಗೆ ನಾಯಕತ್ವ ನೀಡಲು ಆಯ್ಕೆ ಸಮಿತಿಯು ಮುಂದಾಗಿದ್ದು, ಸಮಿತಿಯ ಈ ನಿರ್ಧಾರವನ್ನು ಬಿಸಿಸಿಐ ಸಹ ಬೆಂಬಲಿಸಿದೆ ಎಂದು ವರದಿಯಾಗಿದೆ.
ಆಯ್ಕೆ ಮಂಡಳಿಯ ತೀರ್ಮಾನ
ಮುಖ್ಯ ಆಯ್ಕೆದಾರ ಅಜಿತ್ ಅಗರ್ಕರ್ ನೇತೃತ್ವದ ಆಯ್ಕೆ ಸಮಿತಿಯು ರೋಹಿತ್ ಶರ್ಮಾ ಅವರನ್ನು ಟೆಸ್ಟ್ ತಂಡದ ನಾಯಕತ್ವದಿಂದ ಕೆಳಗಿಳಿಸಲು ನಿರ್ಧರಿಸಿದೆ ಎಂದು ಇಂಗ್ಲಿಷ್ ಪತ್ರಿಕೆ ಇಂಡಿಯನ್ ಎಕ್ಸ್ಪ್ರೆಸ್ ವರದಿಯಲ್ಲಿ ಬಹಿರಂಗಪಡಿಸಿದೆ. ರೋಹಿತ್ ತಂಡದ ನಾಯಕರಾಗಿದ್ದ ಚಾಂಪಿಯನ್ಸ್ ಟ್ರೋಫಿಯಲ್ಲಿ ಟೀಂ ಇಂಡಿಯಾ ಪ್ರಶಸ್ತಿ ಗೆದ್ದ ನಂತರ ರೋಹಿತ್ ಅವರನ್ನು ನಾಯಕತ್ವದಿಂದ ತೆಗೆದುಹಾಕುವ ನಿರ್ಧಾರ ಬಂದಿದೆ. ಈ ಯಶಸ್ಸಿನ ಹಿನ್ನೆಲೆಯಲ್ಲಿ ರೋಹಿತ್ ಇಂಗ್ಲೆಂಡ್ ಪ್ರವಾಸದಲ್ಲೂ ಟೆಸ್ಟ್ ತಂಡದ ನಾಯಕತ್ವ ವಹಿಸಲು ಬಯಸಿದ್ದರು ಎಂದು ಕೆಲವು ಸಮಯದ ಹಿಂದೆ ವರದಿಗಳು ಹೇಳಿದ್ದವು. ಆದರೆ ಆಯ್ಕೆ ಸಮಿತಿ ಇದಕ್ಕೆ ಸಿದ್ಧವಿಲ್ಲ.
ಗ್ರೀನ್ ಸಿಗ್ನಲ್ ನೀಡಿರುವ ಮುಂಬೈ
ಕಳೆದ 8-9 ತಿಂಗಳುಗಳಲ್ಲಿ ಟೆಸ್ಟ್ ಕ್ರಿಕೆಟ್ನಲ್ಲಿ ರೋಹಿತ್ ನಾಯಕತ್ವದಲ್ಲಿ, ಭಾರತೀಯ ತಂಡದ ಪ್ರದರ್ಶನ ಮತ್ತು ಬ್ಯಾಟಿಂಗ್ನಲ್ಲಿ ರೋಹಿತ್ ಅವರ ಪ್ರದರ್ಶನ ತುಂಬಾ ಕಳಪೆಯಾಗಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಆಯ್ಕೆ ಸಮಿತಿಯು ಅವರನ್ನು ನಾಯಕತ್ವದಿಂದ ತೆಗೆದುಹಾಕಲು ನಿರ್ಧರಿಸಿದೆ. ಇಂಗ್ಲೆಂಡ್ ಪ್ರವಾಸದೊಂದಿಗೆ, ಭಾರತ ತಂಡವು ಮೂರನೇ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಅಭಿಯಾನವನ್ನು ಪ್ರಾರಂಭಿಸಲಿದೆ. ಅಂತಹ ಪರಿಸ್ಥಿತಿಯಲ್ಲಿ, ಆಯ್ಕೆದಾರರು ಇದಕ್ಕಾಗಿ ಹೊಸ ನಾಯಕನನ್ನು ಆಯ್ಕೆ ಮಾಡಲು ಮುಂದಾಗಿದ್ದಾರೆ. ಈ ನಿರ್ಧಾರದಲ್ಲಿ ಬಿಸಿಸಿಐ ಯಾವುದೇ ಅಡಚಣೆಯನ್ನು ಸೃಷ್ಟಿಸುವುದಿಲ್ಲ ಎಂದು ವರದಿಯಲ್ಲಿ ಸ್ಪಷ್ಟಪಡಿಸಲಾಗಿದೆ.
IPL 2025: ಕೊದಲೆಳೆ ಅಂತರದಲ್ಲಿ ಸಿಕ್ಕ ಜೀವದಾನ; ವಿಶೇಷ ದಾಖಲೆ ಬರೆದ ರೋಹಿತ್ ಶರ್ಮಾ
ಕಳಪೆ ಪ್ರದರ್ಶನವೇ ಕಾರಣ
ಕಳೆದ ತಿಂಗಳು ಆಯ್ಕೆ ಸಮಿತಿಯು ಈ ವಿಷಯದ ಬಗ್ಗೆ ಹಲವು ಬಾರಿ ಚರ್ಚಿಸಿದೆ ಎಂದು ವರದಿ ತಿಳಿಸಿದೆ. ಇದಾದ ನಂತರ ಮೇ 6 ರಂದು ಮತ್ತೊಮ್ಮೆ ರೋಹಿತ್ ಅವರ ನಾಯಕತ್ವದ ಬಗ್ಗೆ ಚರ್ಚೆಗಳು ನಡೆದಿದ್ದು, ಅಂತಿಮವಾಗಿ ರೋಹಿತ್ ಅವರನ್ನು ಟೆಸ್ಟ್ ತಂಡದ ನಾಯಕತ್ವದಿಂದ ಕೆಳಗಿಳಿಸಲು ನಿರ್ಧರಿಸಲಾಗಿದೆ. ಆಯ್ಕೆ ಸಮಿತಿಯು ತನ್ನ ನಿರ್ಧಾರವನ್ನು ಬಿಸಿಸಿಐಗೂ ತಿಳಿಸಿದೆ. ರೋಹಿತ್ ಅವರ ಕಳಪೆ ಫಾರ್ಮ್ ಜೊತೆಗೆ, ಸ್ಥಿರತೆಯ ಅಗತ್ಯವೂ ಈ ನಿರ್ಧಾರದ ಹಿಂದಿನ ಪ್ರಮುಖ ಕಾರಣವಾಗಿದೆ ಎಂದು ತಿಳಿದುಬಂದಿದೆ.
ರೋಹಿತ್ ನಾಯಕತ್ವದಲ್ಲಿ ಭಾರತ ತಂಡ ಆಸ್ಟ್ರೇಲಿಯಾದಲ್ಲಿ 3 ಟೆಸ್ಟ್ ಪಂದ್ಯಗಳನ್ನು ಆಡಿತ್ತು, ಅದರಲ್ಲಿ 2ರಲ್ಲಿ ಸೋತರೆ, ಒಂದು ಡ್ರಾ ಆಗಿತ್ತು. ಈ ಸರಣಿಯನ್ನು ಟೀಂ ಇಂಡಿಯಾ 1-3 ಅಂತರದಲ್ಲಿ ಸೋತು ಟೆಸ್ಟ್ ಚಾಂಪಿಯನ್ಶಿಪ್ನ ಫೈನಲ್ನಿಂದ ಹೊರಬಿತ್ತು. ಅದಕ್ಕೂ ಸ್ವಲ್ಪ ಮೊದಲು, ಟೀಂ ಇಂಡಿಯಾವನ್ನು ನ್ಯೂಜಿಲೆಂಡ್ ಭಾರತದ ನೆಲದಲ್ಲೇ 3-0 ಅಂತರದಿಂದ ಸೋಲಿಸಿತು. ಇದು 12 ವರ್ಷಗಳಲ್ಲಿ ಭಾರತದ ಮೊದಲ ಟೆಸ್ಟ್ ಸರಣಿ ಸೋಲು ಮಾತ್ರವಲ್ಲ, ಇಡೀ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಟೀಂ ಇಂಡಿಯಾ ತವರಿನಲ್ಲಿ ಕ್ಲೀನ್ ಸ್ವೀಪ್ ಆಗಿತ್ತು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ