‘ಅದರಲ್ಲಿ ಯಾವುದೇ ಸತ್ಯವಿಲ್ಲ’; ಏಷ್ಯಾಕಪ್ ಬಗ್ಗೆ ಬಿಗ್ ಅಪ್​ಡೇಟ್ ನೀಡಿದ ಬಿಸಿಸಿಐ ಕಾರ್ಯದರ್ಶಿ

BCCI Denies India's Asia Cup Withdrawal: ಭಾರತ ಮತ್ತು ಪಾಕಿಸ್ತಾನದ ನಡುವಿನ ರಾಜಕೀಯ ಉದ್ವಿಗ್ನತೆಯ ನಡುವೆ, ಭಾರತೀಯ ಕ್ರಿಕೆಟ್ ತಂಡವು 2025ರ ಏಷ್ಯಾಕಪ್​ನಿಂದ ಹಿಂದೆ ಸರಿಯುತ್ತದೆ ಎಂಬ ವದಂತಿಗಳು ಹಬ್ಬಿದ್ದವು. ಆದರೆ, ಬಿಸಿಸಿಐ ಈ ವದಂತಿಗಳನ್ನು ಸಂಪೂರ್ಣವಾಗಿ ತಳ್ಳಿಹಾಕಿದೆ. ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಅವರು ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಜೊತೆ ಯಾವುದೇ ಚರ್ಚೆ ನಡೆದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

‘ಅದರಲ್ಲಿ ಯಾವುದೇ ಸತ್ಯವಿಲ್ಲ’; ಏಷ್ಯಾಕಪ್ ಬಗ್ಗೆ ಬಿಗ್ ಅಪ್​ಡೇಟ್ ನೀಡಿದ ಬಿಸಿಸಿಐ ಕಾರ್ಯದರ್ಶಿ
Ind Vs Pak

Updated on: May 19, 2025 | 5:16 PM

ಭಾರತ ಮತ್ತು ಪಾಕಿಸ್ತಾನ ನಡುವಿನ ಉದ್ವಿಗ್ನತೆಯಿಂದಾಗಿ ಉಭಯ ದೇಶಗಳ ನಡುವೆ ಎಲ್ಲಾ ರೀತಿಯ ಸಂಬಂಧ ಮುರಿದು ಬಿದ್ದಿದೆ. ಇದರ ಜೊತೆಗೆ ಉಭಯ ದೇಶಗಳ ನಡುವೆ ಕ್ರಿಕೆಟ್ ಸಂಬಂಧವೂ ಇರಬಾರದು ಎಂಬುದು ಭಾರತೀಯರ ಅಭಿಪ್ರಾಯವಾಗಿದೆ. ಇದಕ್ಕೆ ಪೂರಕವಾಗಿ ಮುಂಬರುವ ಏಷ್ಯಾಕಪ್​ನಿಂದ (Asia Cup 2025) ಟೀಂ ಇಂಡಿಯಾ ಹೊರ ನಡೆದಿದೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿತ್ತು. ಅಲ್ಲದೆ ಬಿಸಿಸಿಐ (BCCI), ತನ್ನ ಈ ನಿರ್ಧಾರದ ಬಗ್ಗೆ ಏಷ್ಯನ್ ಕ್ರಿಕೆಟ್ ಕೌನ್ಸಿಲ್​ಗೂ (ACC) ತಿಳಿಸಿದೆ ಎಂದು ವರದಿಯಾಗಿತ್ತು. ಆದರೆ ಈಗ ಈ ಸುದ್ದಿಯ ಕುರಿತು ಬಿಸಿಸಿಐನಿಂದ ದೊಡ್ಡ ನವೀಕರಣ ಹೊರಬಿದ್ದಿದೆ.

ಸ್ಪಷ್ಟನೆ ನೀಡಿದ ಬಿಸಿಸಿಐ ಕಾರ್ಯದರ್ಶಿ

ವಾಸ್ತವವಾಗಿ, ಏಷ್ಯಾಕಪ್​ನಲ್ಲಿ ಟೀಂ ಇಂಡಿಯಾ ಭಾಗವಹಿಸುವುದಿಲ್ಲ ಎಂಬ ಸುದ್ದಿಯನ್ನು ಬಿಸಿಸಿಐ ಸಂಪೂರ್ಣವಾಗಿ ತಿರಸ್ಕರಿಸಿದೆ. ಪ್ರಸ್ತುತ ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಪಂದ್ಯಾವಳಿಗಳ ಕುರಿತು ಯಾವುದೇ ಚರ್ಚೆಗಳು ನಡೆದಿಲ್ಲ ಎಂದು ಬಿಸಿಸಿಐ ಕಾರ್ಯದರ್ಶಿ ದೇವ್ಜಿತ್ ಸೈಕಿಯಾ ಪಿಟಿಐಗೆ ತಿಳಿಸಿದ್ದಾರೆ. ಈ ಬಗ್ಗೆ ಮಾತನಾಡಿರುವ ಅವರು, ‘ಇಂದು ಬೆಳಿಗ್ಗೆಯಿಂದ, ಏಷ್ಯಾಕಪ್ ಮತ್ತು ಮಹಿಳಾ ಉದಯೋನ್ಮುಖ ಏಷ್ಯಾಕಪ್ ಎರಡರಲ್ಲೂ ಭಾಗವಹಿಸದಿರಲು ಬಿಸಿಸಿಐ ನಿರ್ಧಾರ ತೆಗೆದುಕೊಂಡಿರುವ ಬಗ್ಗೆ ಕೆಲವು ಸುದ್ದಿಗಳು ನಮ್ಮ ಗಮನಕ್ಕೆ ಬಂದಿವೆ. ಆದರೆ ಅಂತಹ ಸುದ್ದಿಗಳಲ್ಲಿ ಯಾವುದೇ ಸತ್ಯವಿಲ್ಲ. ಏಕೆಂದರೆ ಇಲ್ಲಿಯವರೆಗೆ ಬಿಸಿಸಿಐ, ಎಸಿಸಿಯ ಮುಂಬರುವ ಈವೆಂಟ್​ಗಳ ಬಗ್ಗೆ ಚರ್ಚಿಸಿಲ್ಲ ಅಥವಾ ಅಂತಹ ಯಾವುದೇ ಕ್ರಮವನ್ನು ತೆಗೆದುಕೊಂಡಿಲ್ಲ.

ಪ್ರಸ್ತುತ ನಮ್ಮ ಮುಖ್ಯ ಗಮನವು ಪ್ರಸ್ತುತ ಐಪಿಎಲ್ ಮತ್ತು ಇಂಗ್ಲೆಂಡ್ ಸರಣಿಯ ಮೇಲಿದೆ. ಏಷ್ಯಾಕಪ್ ವಿಷಯ ಅಥವಾ ಯಾವುದೇ ಇತರ ಎಸಿಸಿ ಈವೆಂಟ್ ವಿಷಯವು ಯಾವುದೇ ಮಟ್ಟದಲ್ಲಿ ಚರ್ಚೆಗೆ ಬಂದಿಲ್ಲ. ಆದ್ದರಿಂದ ಅದರ ಬಗ್ಗೆ ಪ್ರಕಟವಾಗಿರುವ ಸುದ್ದಿ ಅಥವಾ ವರದಿಗಳು ಸಂಪೂರ್ಣವಾಗಿ ಕಾಲ್ಪನಿಕವಾಗಿವೆ. ಎಸಿಸಿಯ ಯಾವುದೇ ಕಾರ್ಯಕ್ರಮದ ಕುರಿತು ಬಿಸಿಸಿಐ ಚರ್ಚೆ ನಡೆಸಿದಾಗ ಮತ್ತು ಯಾವುದೇ ಪ್ರಮುಖ ನಿರ್ಧಾರ ತೆಗೆದುಕೊಂಡಾಗ, ಅದನ್ನು ಮಾಧ್ಯಮಗಳ ಮೂಲಕ ಪ್ರಕಟಿಸಲಾಗುತ್ತದೆ ಎಂದು ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಸ್ಪಷ್ಟಪಡಿಸಿದ್ದಾರೆ.

ENG vs IND: ಇಂಗ್ಲೆಂಡ್‌ ಪ್ರವಾಸಕ್ಕೆ ಟೀಂ ಇಂಡಿಯಾ ಪ್ರಕಟ; ತಂಡದಲ್ಲಿ ಯಾರಿಗೆಲ್ಲ ಅವಕಾಶ?

ಸೆಪ್ಟೆಂಬರ್‌ನಲ್ಲಿ ಏಷ್ಯಾಕಪ್

2025 ರ ಏಷ್ಯಾಕಪ್ ಸೆಪ್ಟೆಂಬರ್‌ನಲ್ಲಿ ನಡೆಯಲಿದೆ. ಈ ಬಾರಿ ಪಂದ್ಯಾವಳಿಯ ಆತಿಥ್ಯ ಭಾರತದ ಬಳಿ ಇದೆ. ಕಳೆದ ಬಾರಿ ಈ ಪಂದ್ಯಾವಳಿಯನ್ನು ಪಾಕಿಸ್ತಾನ ಆತಿಥ್ಯದಲ್ಲಿ ಆಡಲಾಗಿತ್ತು. ಆದರೆ ಟೀಂ ಇಂಡಿಯಾ, ಪಾಕಿಸ್ತಾನ ಪ್ರವಾಸ ಮಾಡಿರಲಿಲ್ಲ. ಅದರ ಬದಲಿಗೆ ತನ್ನ ಎಲ್ಲಾ ಪಂದ್ಯಗಳನ್ನು ಶ್ರೀಲಂಕಾದಲ್ಲಿ ಆಡಿತ್ತು. ಪಂದ್ಯಾವಳಿಯ ಫೈನಲ್ ಪಂದ್ಯ ಕೂಡ ಶ್ರೀಲಂಕಾದಲ್ಲಿ ನಡೆದಿತ್ತು. ಅದರಲ್ಲಿ ಟೀಂ ಇಂಡಿಯಾ ಏಕಪಕ್ಷೀಯವಾಗಿ ಗೆಲುವು ಸಾಧಿಸಿತ್ತು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:12 pm, Mon, 19 May 25