IPL T10 league: ಐಪಿಎಲ್ ಟಿ10 ಲೀಗ್​ಗೆ ಬಿಸಿಸಿಐ ಪ್ಲ್ಯಾನ್

IPL T10 league 2024: ಬಿಸಿಸಿಐನ ಈ ಯೋಜನೆಯು ಐಪಿಎಲ್ ಫ್ರಾಂಚೈಸಿಗಳ ಒಪ್ಪಿಗೆಯನ್ನು ಅವಲಂಬಿಸಿರುತ್ತದೆ. ಅಂದರೆ, ಐಪಿಎಲ್‌ನಂತಹ ಯಾವುದೇ ಲೀಗ್ ಅನ್ನು ಪ್ರಾರಂಭಿಸುವ ಸಂದರ್ಭದಲ್ಲಿ, ಬಿಸಿಸಿಐ ಐಪಿಎಲ್ ಫ್ರಾಂಚೈಸಿಗಳ ಒಪ್ಪಿಗೆಯನ್ನು ತೆಗೆದುಕೊಳ್ಳಬೇಕಾಗುತ್ತದೆ.

IPL T10 league: ಐಪಿಎಲ್ ಟಿ10 ಲೀಗ್​ಗೆ ಬಿಸಿಸಿಐ ಪ್ಲ್ಯಾನ್
IPL
Edited By:

Updated on: Dec 16, 2023 | 8:38 AM

ಇಂಡಿಯನ್ ಪ್ರೀಮಿಯರ್ ಲೀಗ್ (​IPL 2024) ಮೂಲಕ ಟಿ20 ಕ್ರಿಕೆಟ್​ನಲ್ಲಿ ಪಾರುಪತ್ಯ ಸಾಧಿಸಿರುವ ಬಿಸಿಸಿಐ ಇದೀಗ ಟಿ10 ಲೀಗ್​ ಆರಂಭಿಸಲು ಚಿಂತನೆ ನಡೆಸಿದೆ. ಈಗಾಗಲೇ ಕೆಲ ಕ್ರಿಕೆಟ್ ಮಂಡಳಿಗಳು ಟಿ10 ಲೀಗ್​ಗಳನ್ನು ಆಯೋಜಿಸಲಾಗುತ್ತಿದೆ. ಇದೇ ಮಾದರಿಯಲ್ಲಿ 10 ಓವರ್​ಗಳ ಲೀಗ್ ಶುರು ಮಾಡಲು ಬಿಸಿಸಿಐ ಪ್ಲ್ಯಾನ್ ರೂಪಿಸುತ್ತಿದೆ. ಅಬುಧಾಬಿ ಟಿ10 ಲೀಗ್ ಹಾಗೂ ಝಿಮ್-ಆಫ್ರೊ ಟಿ10 ಲೀಗ್​ಗಳು ಭಾರೀ ಯಶಸ್ಸು ಕಾಣುತ್ತಿದೆ. ಈ ಜನಪ್ರಿಯತೆ ಮೇಲೆ ಕಣ್ಣಿಟ್ಟಿರುವ ಬಿಸಿಸಿಐ ಐಪಿಎಲ್ ಟಿ10 ಲೀಗ್ ಪ್ರಾರಂಭಿಸುವ ಸಾಧ್ಯತೆಯಿದೆ ಎಂದು ವರದಿಗಳಾಗಿವೆ.

ಟಿ10 ಮಾದರಿಯಲ್ಲಿ ಲೀಗ್ ಆರಂಭಿಸುವ ಬಿಸಿಸಿಐನ ಯೋಜನೆಗೆ ಷೇರುದಾರರು ಸಹಮತ ವ್ಯಕ್ತಪಡಿಸಿದ್ದಾರೆ ಎಂದು ಮನಿ ಕಂಟ್ರೋಲ್ ವರದಿ ಮಾಡಿದೆ. ಇತ್ತೀಚೆಗಷ್ಟೇ ಸೌದಿ ಅರೇಬಿಯಾ ಐಪಿಎಲ್​ನಲ್ಲಿ 41 ಸಾವಿರ ಕೋಟಿ ಹೂಡಿಕೆ ಮಾಡಿದೆ ಎಂದು ವರದಿಯಾಗಿತ್ತು. ಇದೀಗ ಬಿಸಿಸಿಐ ಹೊಸ ಲೀಗ್​ ಮೂಲಕ ಕ್ರಿಕೆಟ್​ ರಸದೌತಣ ಒದಗಿಸಲು ಯೋಜನೆ ರೂಪಿಸುತ್ತಿದೆ.

ವಯೋಮಿತಿ ನಿಗದಿ:

ಐಪಿಎಲ್​ ಟಿ20 ಲೀಗ್​ ಬೆನ್ನಲ್ಲೇ ಟಿ10 ಲೀಗ್ ಆಯೋಜಿಸಲು ಕೂಡ ಚಿಂತನೆ ನಡೆಸಲಾಗಿದೆ. ಅಷ್ಟೇ ಅಲ್ಲದೆ ಹೊಸ ಟೂರ್ನಿಯಲ್ಲಿ ಪಾಲ್ಗೊಳ್ಳಲು ಆಟಗಾರರಿಗೆ ವಯೋಮಿತಿ ನಿಗದಿಪಡಿಸುವ ಸಾಧ್ಯತೆಯಿದೆ. ಈ ಮೂಲಕ ಐಪಿಎಲ್ ಮತ್ತು ಅಂತಾರಾಷ್ಟ್ರೀಯ ಕ್ರಿಕೆಟ್ ಮೇಲೆ ಯಾವುದೇ ಪರಿಣಾಮ ಬೀರದಂತೆ ಕ್ರಮ ಕೈಗೊಳ್ಳಲು ಬಿಸಿಸಿಐ ಚಿಂತಿಸಿದೆ.

ಐಪಿಎಲ್​ ಫ್ರಾಂಚೈಸಿಗಳ ಒಪ್ಪಿಗೆ ಮುಖ್ಯ:

ಬಿಸಿಸಿಐನ ಈ ಯೋಜನೆಯು ಐಪಿಎಲ್ ಫ್ರಾಂಚೈಸಿಗಳ ಒಪ್ಪಿಗೆಯನ್ನು ಅವಲಂಬಿಸಿರುತ್ತದೆ. ಅಂದರೆ, ಐಪಿಎಲ್‌ನಂತಹ ಯಾವುದೇ ಲೀಗ್ ಅನ್ನು ಪ್ರಾರಂಭಿಸುವ ಸಂದರ್ಭದಲ್ಲಿ, ಬಿಸಿಸಿಐ ಐಪಿಎಲ್ ಫ್ರಾಂಚೈಸಿಗಳ ಒಪ್ಪಿಗೆಯನ್ನು ತೆಗೆದುಕೊಳ್ಳಬೇಕಾಗುತ್ತದೆ.

ಈ ಮೂಲಕ ಹಳೆಯ ಫ್ರಾಂಚೈಸಿಗಳು ಹೊಸ ಲೀಗ್‌ನಿಂದ ಯಾವುದೇ ಆರ್ಥಿಕ ನಷ್ಟವನ್ನು ಅನುಭವಿಸುವುದಿಲ್ಲ ಎಂಬುದನ್ನು ಖಾತ್ರಿಪಡಿಸಬೇಕಾಗುತ್ತದೆ. ಹೀಗಾಗಿ ಐಪಿಎಲ್ ಫ್ರಾಂಚೈಸಿಗಳಿಗೇ ಟಿ10 ಲೀಗ್​ ತಂಡಗಳ ಮಾಲೀಕತ್ವ ನೀಡುವುದಾದರೆ ಮಾತ್ರ ಈ ಟೂರ್ನಿ ಆಯೋಜನೆಗೊಳ್ಳಬಹುದು.

ಇದನ್ನೂ ಓದಿ: Suryakumar Yadav: ಕಿಂಗ್ ಕೊಹ್ಲಿಯ ಮತ್ತೊಂದು ದಾಖಲೆ ಮುರಿದ ಸಿಕ್ಸರ್ ಸೂರ್ಯ

ಸದ್ಯ ಟಿ10 ಲೀಗ್ ಆಯೋಜನೆಯ ಬಗ್ಗೆ ಚರ್ಚೆಗಳು ನಡೆಯುತ್ತಿದ್ದು, ಈ ಟೂರ್ನಿಯನ್ನು ಭಾರತದಲ್ಲಿ ಆಡಬೇಕೆ? ಅಥವಾ ಪ್ರತಿ ವರ್ಷ ಬೇರೆ ಬೇರೆ ಸ್ಥಳದಲ್ಲಿ ಆಯೋಜಿಸಬೇಕೆ ಎಂಬುದನ್ನೂ ಸಹ ಚರ್ಚಿಸಲಾಗಿದೆ. ಇದಲ್ಲದೆ ವಯೋಮಿತಿ ನಿಗದಿ ಮಾಡುವುದು ಹೇಗೆ? ಹಾಗೂ IPL ಫ್ರಾಂಚೈಸಿಗಳೊಂದಿಗೆ ಹೊಸ ಒಪ್ಪಂದವನ್ನು ಮಾಡಿಕೊಂಡು ತಂಡಗಳನ್ನು ನೀಡಬೇಕೇ? ಎಂಬುದರ ಬಗ್ಗೆ ಕೂಡ ಚರ್ಚೆ ಮುಂದುವರೆಯುತ್ತಿದೆ. ಹೀಗಾಗಿ ಈ ಎಲ್ಲಾ ಪ್ರಶ್ನೆಗಳಿಗೆ ಶೀಘ್ರದಲ್ಲೇ ಉತ್ತರ ದೊರೆಯುವ ಸಾಧ್ಯತೆಯಿದೆ.