ಭಾರತಕ್ಕೆ ಸೋಲುಣಿಸಿದ ಬಾಂಗ್ಲಾ: ಪಾಕ್ ತಂಡವನ್ನು ಮಣಿಸಿದ ಯುಎಇ
U19 Asia Cup, 2023: ಅಂಡರ್ 19 ಏಷ್ಯಾಕಪ್ನ ಫೈನಲ್ ಪಂದ್ಯವು ಡಿಸೆಂಬರ್ 17 ರಂದು ನಡೆಯಲಿದೆ. ಚಾಂಪಿಯನ್ ಪಟ್ಟಕ್ಕಾಗಿ ನಡೆಯಲಿರುವ ಈ ಪಂದ್ಯದಲ್ಲಿ ಯುಎಇ ಹಾಗೂ ಬಾಂಗ್ಲಾದೇಶ್ ತಂಡಗಳು ಮುಖಾಮುಖಿಯಾಗಲಿದೆ.
ದುಬೈನ ಐಸಿಸಿ ಅಕಾಡೆಮಿ ಮೈದಾನದಲ್ಲಿ ನಡೆದ ಅಂಡರ್ 19 ಏಷ್ಯಾಕಪ್ನ ಸೆಮಿಫೈನಲ್ನಲ್ಲಿ ಅಚ್ಚರಿಯ ಫಲಿತಾಂಶಗಳು ಹೊರಹೊಮ್ಮಿದೆ. ಮೊದಲ ಸೆಮಿಫೈನಲ್ನಲ್ಲಿ ಪಾಕಿಸ್ತಾನ್ ತಂಡವನ್ನು ಯುಎಇ ಮಣಿಸಿದರೆ, 2ನೇ ಸೆಮಿಫೈನಲ್ನಲ್ಲಿ ಬಾಂಗ್ಲಾದೇಶ್ ತಂಡದ ಎದುರು ಟೀಮ್ ಇಂಡಿಯಾ ಶರಣಾಗಿದೆ.
ಭಾರತದ ವಿರುದ್ಧದ ಪಂದ್ಯದಲ್ಲಿ ಟಾಸ್ ಗೆದ್ದ ಬಾಂಗ್ಲಾದೇಶ್ ತಂಡವು ಮೊದಲು ಬೌಲಿಂಗ್ ಮಾಡಿತು. ಅದರಂತೆ ಇನಿಂಗ್ಸ್ ಆರಂಭಿಸಿದ ಟೀಮ್ ಇಂಡಿಯಾ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿರಲಿಲ್ಲ. ಕೇವಲ 36 ರನ್ಗಳಿಸುವಷ್ಟರಲ್ಲಿ ಅಗ್ರಕ್ರಮಾಂಕದ ನಾಲ್ವರು ಪೆವಿಲಿಯನ್ ಸೇರಿದ್ದರು.
ಈ ಹಂತದಲ್ಲಿ ಎಚ್ಚರಿಕೆಯ ಬ್ಯಾಟಿಂಗ್ನೊಂದಿಗೆ ಮುಶೀರ್ ಖಾನ್ ಟೀಮ್ ಇಂಡಿಯಾಗೆ ಆಸರೆಯಾಗಿ ನಿಂತರು. 62 ಎಸೆತಗಳನ್ನು ಎದುರಿಸಿದ ಮುಶೀರ್ 3 ಫೋರ್ಗಳೊಂದಿಗೆ 50 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು.
ಇನ್ನು ಕೆಳ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ ಮುರುಗನ್ ಅಭಿಷೇಕ್ 73 ಎಸೆತಗಳಲ್ಲಿ 2 ಭರ್ಜರಿ ಸಿಕ್ಸ್ ಹಾಗೂ 6 ಫೋರ್ಗಳೊಂದಿಗೆ 62 ರನ್ ಬಾರಿಸಿದರು. ಅತ್ತ ಉತ್ತಮ ಬೌಲಿಂಗ್ ಪ್ರದರ್ಶಿಸಿದ ಬಾಂಗ್ಲಾದೇಶ್ ತಂಡವು ಅಂತಿಮವಾಗಿ ಟೀಮ್ ಇಂಡಿಯಾವನ್ನು 42.4 ಓವರ್ಗಳಲ್ಲಿ 188 ರನ್ಗಳಿಗೆ ಆಲೌಟ್ ಮಾಡುವಲ್ಲಿ ಯಶಸ್ವಿಯಾಯಿತು.
189 ರನ್ಗಳ ಸುಲಭ ಗುರಿಯನ್ನು ಬೆನ್ನತ್ತಿದ ಬಾಂಗ್ಲಾದೇಶ್ ತಂಡದ ಆರಿಫುಲ್ ಇಸ್ಲಾಂ (94) ಆಕರ್ಷಕ ಅರ್ಧಶತಕ ಬಾರಿಸಿ ಮಿಂಚಿದರು. ಅಲ್ಲದೆ 42.5 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು ಗುರಿ ಮುಟ್ಟುವ ಮೂಲಕ 4 ವಿಕೆಟ್ಗಳ ಜಯ ಸಾಧಿಸಿತು.
ಯುಎಇಗೆ ರೋಚಕ ಜಯ:
ಯುಎಇ ವಿರುದ್ಧದ ಮೊದಲ ಸೆಮಿಫೈನಲ್ನಲ್ಲಿ ಟಾಸ್ ಗೆದ್ದ ಪಾಕಿಸ್ತಾನ್ ತಂಡ ಬೌಲಿಂಗ್ ಆಯ್ದುಕೊಂಡಿತು. ಅದರಂತೆ ಮೊದಲು ಬ್ಯಾಟ್ ಮಾಡಿದ ಯುಎಇ ತಂಡವನ್ನು 47.5 ಓವರ್ಗಳಲ್ಲಿ ಕೇವಲ 193 ರನ್ಗಳಿಗೆ ಆಲೌಟ್ ಮಾಡುವಲ್ಲಿ ಯಶಸ್ವಿಯಾಗಿದ್ದರು.
ಇದಾದ ಬಳಿಕ ಸುಲಭ ಗುರಿಯನ್ನು ಬೆನ್ನತ್ತಿದ ಪಾಕಿಸ್ತಾನ್ ತಂಡವು 113 ರನ್ಗಳಿಗೆ 5 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಈ ಹಂತದಲ್ಲಿ ನಾಯಕ ಸಾದ್ ಬೇಗ್ ಅರ್ಧಶತಕ ಬಾರಿಸಿದರೂ, ಉಳಿದ ಬ್ಯಾಟರ್ಗಳಿಂದ ಉತ್ತಮ ಸಾಥ್ ದೊರೆತಿರಲಿಲ್ಲ. ಅಂತಿಮವಾಗಿ 49.3 ಓವರ್ಗಳಲ್ಲಿ 182 ರನ್ಗಳಿಗೆ ಆಲೌಟ್ ಆಯಿತು. ಈ ಮೂಲಕ ಯುಎಇ ತಂಡವು 11 ರನ್ಗಳ ರೋಚಕ ಜಯ ಸಾಧಿಸಿದೆ.
ಇದನ್ನೂ ಓದಿ: Suryakumar Yadav: ಕಿಂಗ್ ಕೊಹ್ಲಿಯ ಮತ್ತೊಂದು ದಾಖಲೆ ಮುರಿದ ಸಿಕ್ಸರ್ ಸೂರ್ಯ
ಫೈನಲ್ ಪಂದ್ಯ ಯಾವಾಗ?
ಅಂಡರ್ 19 ಏಷ್ಯಾಕಪ್ನ ಫೈನಲ್ ಪಂದ್ಯವು ಡಿಸೆಂಬರ್ 17 ರಂದು ನಡೆಯಲಿದೆ. ಚಾಂಪಿಯನ್ ಪಟ್ಟಕ್ಕಾಗಿ ನಡೆಯಲಿರುವ ಈ ಪಂದ್ಯದಲ್ಲಿ ಯುಎಇ ಹಾಗೂ ಬಾಂಗ್ಲಾದೇಶ್ ತಂಡಗಳು ಮುಖಾಮುಖಿಯಾಗಲಿದೆ.