
2025 ರ ಏಷ್ಯಾಕಪ್ (Asia Cup 2025) ಮುಗಿದು ತಿಂಗಳು ಕಳೆದರೂ ಚಾಂಪಿಯನ್ ಟೀಂ ಇಂಡಿಯಾಕ್ಕೆ (Team India) ಇದುವರೆಗೂ ಏಷ್ಯಾಕಪ್ ಟ್ರೋಫಿಯನ್ನು ಎತ್ತಿಹಿಡಿಯುವ ಭಾಗ್ಯ ದೊರೆತಿಲ್ಲ. ಮೊಹ್ಸಿನ್ ನಖ್ವಿಯ (Mohsin Naqvi) ಕಪಿಮುಷ್ಠಿಯಲ್ಲಿರುವ ಟ್ರೋಫಿಯನ್ನು ಪಡೆದುಕೊಳ್ಳಲು ಬಿಸಿಸಿಐ (BCCI) ನಾನಾ ಪ್ರಯತ್ನಗಳನ್ನು ಮಾಡುತ್ತಿದೆಯಾದರೂ ಅದಾಗ್ಯೂ ಕ್ರಿಕೆಟ್ನ ಬಿಗ್ ಬಾಸ್ ಬಿಸಿಸಿಐಗೂ ಏಷ್ಯಾಕಪ್ ಟ್ರೋಫಿಯನ್ನು ಪಡೆದುಕೊಳ್ಳಲು ಸಾಧ್ಯವಾಗಿಲ್ಲ. ತನ್ನ ಕೈಲಾದ ಎಲ್ಲಾ ಪ್ರಯತ್ನಗಳನ್ನು ಮಾಡಿದ ಬಳಿಕ ಇದೀಗ ಬಿಸಿಸಿಐ, ಐಸಿಸಿ ಸಭೆಯಲ್ಲಿ ಏಷ್ಯಾಕಪ್ ಟ್ರೋಫಿ ಸಮಸ್ಯೆಯನ್ನು ಬಗೆಹರಿಸಿಕೊಳ್ಳಲು ಮುಂದಾಗಿದೆ. ಇದಕ್ಕೆ ಪೂರಕವಾಗಿ, ತಿಂಗಳುಗಳ ಬಳಿಕ ಟ್ರೋಫಿ ಭಾರತ ತಂಡದ ಕೈಸೇರುವ ವಿಶ್ವಾಸ ಹೆಚ್ಚಾಗಿದೆ.
ವಾಸ್ತವವಾಗಿ ಏಷ್ಯಾಕಪ್ ಗೆದ್ದ ಬಳಿಕ ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಮತ್ತು ಪಿಸಿಬಿ ಅಧ್ಯಕ್ಷ ಮೊಹ್ಸಿನ್ ನಖ್ವಿ ಅವರಿಂದ ಟ್ರೋಫಿ ಸ್ವೀಕರಿಸಲು ಟೀಂ ಇಂಡಿಯಾ ನಿರಾಕರಿಸಿತು. ಇದರಿಂದ ಮುಜುಗರಕ್ಕೊಳಗಾದ ನಖ್ವಿ, ಏಷ್ಯಾಕಪ್ ಟ್ರೋಫಿಯನ್ನು ತನ್ನದೊಂದಿಗೆ ತೆಗೆದುಕೊಂಡು ಹೋಗಿದ್ದರು. ಆ ಬಳಿಕ ಟ್ರೋಫಿಯನ್ನು ಭಾರತಕ್ಕೆ ಹಸ್ತಾಂತರಿಸುವ ಬದಲು ಎಸಿಸಿ ಕೇಂದ್ರ ಕಚೇರಿಯಲ್ಲಿ ಇಟ್ಟಿದ್ದಾರೆ. ಅಲ್ಲದೆ ಅವರ ಅನುಮತಿಯಿಲ್ಲದೆ ಟ್ರೋಫಿಯನ್ನು ಅಲ್ಲಿಂದ ತೆಗೆಯಬಾರದು ಎಂದು ಸೂಚನೆಯನ್ನು ನೀಡಿದ್ದರು. ಇದೀಗ ತನ್ನ ಕೈನಿಂದಲೇ ಟೀಂ ಇಂಡಿಯ ಟ್ರೋಫಿಯನ್ನು ಸ್ವೀಕರಿಸಬೇಕು ಎಂದು ನಖ್ವಿ ಹಟಕ್ಕೆ ಬಿದ್ದಿದ್ದಾರೆ.
ನಖ್ವಿಯ ಈ ನಡೆಯಿಂದ ಕೋಪಗೊಂಡಿದ್ದ ಬಿಸಿಸಿಐ, ನವೆಂಬರ್ 4 ರಿಂದ ಆರಂಭವಾಗಿರುವ ಐಸಿಸಿ ಸಾಮಾನ್ಯ ಸಭೆಯಲ್ಲಿ ಈ ವಿವಾದವನ್ನು ಐಸಿಸಿ ಮುಂದಿಡಲು ನಿರ್ಧರಿಸಿತ್ತು. ಅದರಂತೆ ಈಗ ಮೊಹ್ಸಿನ್ ನಖ್ವಿ ಹಾಗೂ ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ನಡುವೆ ಪ್ರತ್ಯೇಕ ಸಭೆ ನಡೆದಿದ್ದು, ಟ್ರೋಫಿ ವಿವಾದವನ್ನು ಇತ್ಯರ್ಥ ಮಾಡಿಕೊಳ್ಳುವ ನಿರ್ಧಾರಕ್ಕೆ ಬರಲಾಗಿದೆ ಎಂದು ವರದಿಯಾಗಿದೆ.
ಏಷ್ಯಾಕಪ್ ಟ್ರೋಫಿ ವಿವಾದದ ನಡುವೆ ಭಾರತ- ಪಾಕಿಸ್ತಾನ ಮತ್ತೆ ಮುಖಾಮುಖಿ
ಈ ಬಗ್ಗೆ ಪಿಟಿಐಗೆ ಮಾತನಾಡಿರುವ ಸೈಕಿಯಾ, ‘ನಾನು ಐಸಿಸಿಯ ಅನೌಪಚಾರಿಕ ಮತ್ತು ಔಪಚಾರಿಕ ಸಭೆಗಳ ಭಾಗವಾಗಿದ್ದೆ. ಪಿಸಿಬಿ ಅಧ್ಯಕ್ಷ ಮೊಹ್ಸಿನ್ ನಖ್ವಿ ಕೂಡ ಹಾಜರಿದ್ದರು. ಔಪಚಾರಿಕ ಸಭೆಯ ಸಮಯದಲ್ಲಿ ಇದು ಕಾರ್ಯಸೂಚಿಯಲ್ಲಿ ಇರಲಿಲ್ಲ, ಆದಾಗ್ಯೂ ಐಸಿಸಿ, ನನ್ನ ಮತ್ತು ಪಿಸಿಬಿ ಮುಖ್ಯಸ್ಥರ ನಡುವೆ ಹಿರಿಯ ಅಧಿಕಾರಿ ಮತ್ತು ಇನ್ನೊಬ್ಬ ಹಿರಿಯ ಅಧಿಕಾರಿಯ ಸಮ್ಮುಖದಲ್ಲಿ ಪ್ರತ್ಯೇಕ ಸಭೆಯನ್ನು ಏರ್ಪಡಿಸಿತು. ಉಭಯರ ನಡುವೆ ಮಾತುಕತೆ ಆರಂಭವಾಗಿರುವುದು ಒಳ್ಳೇಯ ಸಂಗತಿ. ಐಸಿಸಿ ಮಂಡಳಿ ಸಭೆಯ ಸಮಯದಲ್ಲಿ ನಡೆದ ಸಭೆಯಲ್ಲಿ ಎರಡೂ ಮಂಡಳಿಗಳ ಪ್ರತಿನಿಧಿಗಳು ಸೌಹಾರ್ದಯುತವಾಗಿ ಭಾಗವಹಿಸಿದ್ದೇವು. ಅಲ್ಲದೆ ಶೀಘ್ರದಲ್ಲೇ ಪರಿಹಾರವನ್ನು ಕಂಡುಕೊಳ್ಳಲಾಗುವುದು ಎಂದು ಸೈಕಿಯಾ ಭರವಸೆ ನೀಡಿದ್ದಾರೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:36 pm, Sat, 8 November 25