
IPL 2025: ಇಂಡಿಯನ್ ಪ್ರೀಮಿಯರ್ ಲೀಗ್ 2025ರ ಫೈನಲ್ ಪಂದ್ಯವನ್ನು ಭಾರತೀಯ ಸೈನಿಕರಿಗೆ ಅರ್ಪಿಸಲು ಬಿಸಿಸಿಐ ನಿರ್ಧರಿಸಿದೆ. ಇದಕ್ಕಾಗಿ ಜೂನ್ 3 ರಂದು ನಡೆಯಲಿರುವ ಅಂತಿಮ ಪಂದ್ಯದ ಸಮಾರೋಪ ಸಮಾರಂಭದಲ್ಲಿ ‘ಆಪರೇಷನ್ ಸಿಂಧೂರ್‘ ವಿಜಯೋತ್ಸವ ಆಚರಿಸಲಾಗುತ್ತದೆ. ಏಪ್ರಿಲ್ 22 ರಂದು ಪಾಕಿಸ್ತಾನ್ ಬೆಂಬಲಿತ ಉಗ್ರರು ಜಮ್ಮು-ಕಾಶ್ಮೀರದ ಪಹಲ್ಗಾಮ್ನಲ್ಲಿ 26 ಮಂದಿ ಭಾರತೀಯರನ್ನು ಹತ್ಯೆಗೈದಿದ್ದರು. ಇದಕ್ಕೆ ಪ್ರತಿಯಾಗಿ ಭಾರತೀಯ ಸೇನೆ ಆಪರೇಷನ್ ಸಿಂಧೂರ್ ಮೂಲಕ ಪಾಕ್ ಮೇಲೆ ದಾಳಿ ನಡೆಸಿ ಪ್ರತೀಕಾರ ತೀರಿಸಿದ್ದರು. ಭಾರತೀಯ ಸೇನೆಯ ಈ ಕಾರ್ಯವನ್ನು ಗೌರವಿಸುವ ಸಲುವಾಗಿ ಇದೀಗ ಇಂಡಿಯನ್ ಪ್ರೀಮಿಯರ್ ಲೀಗ್ನ ಫೈನಲ್ ಪಂದ್ಯದ ವೇಳೆ ಆಪರೇಷನ್ ಸಿಂಧೂರ್ ವಿಜಯೋತ್ಸವ ಆಚರಿಸಲು ನಿರ್ಧರಿಸಲಾಗಿದೆ.
ನಮ್ಮ ಸಶಸ್ತ್ರ ಪಡೆಗಳ ಶೌರ್ಯ, ಧೈರ್ಯ ಮತ್ತು ನಿಸ್ವಾರ್ಥ ಸೇವೆಗೆ ಬಿಸಿಸಿಐ ಗೌರವಿಸುತ್ತದೆ. ಆಪರೇಷನ್ ಸಿಂಧೂರ್ ಅಡಿಯಲ್ಲಿ ಅವರ ವೀರೋಚಿತ ಪ್ರಯತ್ನಗಳು ರಾಷ್ಟ್ರವನ್ನು ರಕ್ಷಿಸುತ್ತಿವೆ ಮತ್ತು ಪ್ರೇರೇಪಿಸುತ್ತಿವೆ. ಇದರ ಗೌರವಾರ್ಥವಾಗಿ, ಐಪಿಎಲ್ ಫೈನಲ್ ಪಂದ್ಯವನ್ನು ಸಶಸ್ತ್ರ ಪಡೆಗಳಿಗೆ ಅರ್ಪಿಸಲು ಮತ್ತು ನಮ್ಮ ವೀರ ಸೈನಿಕರನ್ನು ಗೌರವಿಸಲು ನಾವು ನಿರ್ಧರಿಸಿದ್ದೇವೆ ಎಂದು ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ತಿಳಿಸಿದ್ದಾರೆ.
ಈ ಸಮಾರೋಪ ಸಮಾರಂಭಕ್ಕೆ ಭಾರತೀಯ ಕ್ರಿಕೆಟ್ ಆಡಳಿತ ಮಂಡಳಿಯು ರಕ್ಷಣಾ ಸಿಬ್ಬಂದಿ ಮುಖ್ಯಸ್ಥರನ್ನು ಹಾಗೂ ಭೂಸೇನೆ, ನೌಕಾಪಡೆ ಮತ್ತು ವಾಯುಪಡೆಯ ಮುಖ್ಯಸ್ಥರನ್ನು ಆಹ್ವಾನಿಸಿದೆ ಎಂದು ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಬಹಿರಂಗಪಡಿಸಿದ್ದಾರೆ. ಅಲ್ಲದೆ ಐಪಿಎಲ್ ಫೈನಲ್ ಪಂದ್ಯದ ಆರಂಭಕ್ಕೂ ಮುನ್ನ ಮಿಲಿಟರಿ ಬ್ಯಾಂಡ್‌ನ ಪ್ರದರ್ಶನವೂ ನಡೆಯಲಿದೆ ತಿಳಿದು ಬಂದಿದೆ.
ಇಂಡಿಯನ್ ಪ್ರೀಮಿಯರ್ ಲೀಗ್ನ ಪ್ಲೇಆಫ್ ಪಂದ್ಯಗಳು ಮೇ 29 ರಿಂದ ಶುರುವಾಗಲಿದೆ. ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಹಾಗೂ ಗುಜರಾತ್ ಟೈಟಾನ್ಸ್ ಅಥವಾ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಮುಖಾಮುಖಿಯಾಗಲಿದೆ. ಅಂದರೆ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಆರ್ಸಿಬಿ ಗೆದ್ದರೆ, ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕಣಕ್ಕಿಳಿಯಲಿವೆ.
ಇನ್ನು ಕೊನೆಯ ಲೀಗ್ ಪಂದ್ಯದಲ್ಲಿ ಆರ್ಸಿಬಿ ವಿರುದ್ಧ ಲಕ್ನೋ ಸೂಪರ್ ಜೈಂಟ್ಸ್ ತಂಡ ಜಯ ಸಾಧಿಸಿದರೆ, ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಹಾಗೂ ಗುಜರಾತ್ ಟೈಟಾನ್ಸ್ ತಂಡಗಳು ಕಣಕ್ಕಿಳಿಯಲಿವೆ. ಅಲ್ಲದೆ ಆರ್ಸಿಬಿ ಮತ್ತು ಮುಂಬೈ ಇಂಡಿಯನ್ಸ್ ತಂಡಗಳು ಎಲಿಮಿನೇಟರ್ ಪಂಧ್ಯವಾಡಲಿದೆ.
ಇದನ್ನೂ ಓದಿ: Digvesh rathi: 9.37 ಲಕ್ಷ ರೂ. ದಂಡ ಕಟ್ಟಿ, RCB ವಿರುದ್ಧ ಕಣಕ್ಕೆ..!