Asia Cup 2023: ‘ಪಾಕಿಸ್ತಾನಕ್ಕೆ ಹೋಗುತ್ತಿರುವುದು ನಿಜ’; ಖಚಿತ ಪಡಿಸಿದ ಬಿಸಿಸಿಐ ಅಧ್ಯಕ್ಷ ರೋಜರ್ ಬಿನ್ನಿ

|

Updated on: Aug 27, 2023 | 11:09 AM

Asia Cup 2023: ಪಾಕಿಸ್ತಾನದಲ್ಲಿ ನಡೆಯಲ್ಲ್ಲಿರುವ ಏಷ್ಯಾಕಪ್ ಪಂದ್ಯಗಳನ್ನು ವೀಕ್ಷಿಸಲು ಬಿಸಿಸಿಐ ಅಧ್ಯಕ್ಷ ರೋಜರ್ ಬಿನ್ನಿ ಮತ್ತು ಮಂಡಳಿಯ ಉಪಾಧ್ಯಕ್ಷ ರಾಜೀವ್ ಶುಕ್ಲಾ, ಸೆಪ್ಟೆಂಬರ್ 4 ರಂದು ಪಾಕಿಸ್ತಾನಕ್ಕೆ ಪ್ರಯಾಣಿಸಲಿದ್ದಾರೆ ಎಂದು ಟೈಮ್ಸ್ ನೌ ವರದಿ ಮಾಡಿದೆ.

Asia Cup 2023: ‘ಪಾಕಿಸ್ತಾನಕ್ಕೆ ಹೋಗುತ್ತಿರುವುದು ನಿಜ’; ಖಚಿತ ಪಡಿಸಿದ ಬಿಸಿಸಿಐ ಅಧ್ಯಕ್ಷ ರೋಜರ್ ಬಿನ್ನಿ
ಬಿಸಿಸಿಐ ​ಅಧ್ಯಕ್ಷ ರೋಜರ್ ಬಿನ್ನಿ ಮತ್ತು ಮಂಡಳಿಯ ಉಪಾಧ್ಯಕ್ಷ ರಾಜೀವ್ ಶುಕ್ಲಾ
Follow us on

ಆಗಸ್ಟ್ 30 ರಿಂದ ಆರಂಭವಾಗಲಿರುವ 2023ರ ಏಷ್ಯಾಕಪ್​ಗೆ (Asia Cup 2023) ಪಾಕಿಸ್ತಾನ ಹಾಗೂ ಶ್ರೀಲಂಕಾ (Pakistan and Sri Lanka) ಜಂಟಿಯಾಗಿ ಆತಿಥ್ಯವಹಿಸುತ್ತಿರುವುದು ಎಲ್ಲರಿಗೂ ತಿಳಿದಿರುವ ವಿಚಾರ. ಹೀಗಾಗಿ ಪಾಕಿಸ್ತಾನದಲ್ಲಿ ನಡೆಯಲ್ಲಿರುವ ಪಂದ್ಯಗಳನ್ನು ವೀಕ್ಷಿಸಲು ಪಿಸಿಬಿ (PCB), ಬಿಸಿಸಿಐ (BCCI) ಸೇರಿದಂತೆ ಇತರ ಏಷ್ಯನ್ ಕ್ರಿಕೆಟ್ ಮಂಡಳಿಗೆ ಆಹ್ವಾನ ನೀಡಿತ್ತು. ಈ ಮೊದಲು ಪಾಕ್ ಮಂಡಳಿಯ ಆಹ್ವಾನವನ್ನು ಬಿಸಿಸಿಐ ತಿರಸ್ಕರಿಸಿದೆ ಎಂದು ವರದಿಯಾಗಿತ್ತು. ಆ ಬಳಿಕ ಬಿಸಿಸಿಐ ​ಅಧ್ಯಕ್ಷ ರೋಜರ್ ಬಿನ್ನಿ (Roger Binny) ಮತ್ತು ಮಂಡಳಿಯ ಉಪಾಧ್ಯಕ್ಷ ರಾಜೀವ್ ಶುಕ್ಲಾ (Rajeev Shukla) ಪಂದ್ಯಾವಳಿಯನ್ನು ವೀಕ್ಷಿಸಲು ಪಾಕಿಸ್ತಾನಕ್ಕೆ ಪ್ರಯಾಣಿಸಲಿದ್ದಾರೆ ಎಂದು ಟೈಮ್ಸ್ ನೌ ವರದಿ ಮಾಡಿತ್ತು. ಇದೀಗ ಈ ಬಗ್ಗೆ ಖಚಿತ ಮಾಹಿತಿ ಹೊರಬಿದ್ದಿದ್ದು, ಪಾಕಿಸ್ತಾನದಲ್ಲಿ ನಡೆಯಲ್ಲಿರುವ ಏಷ್ಯಾಕಪ್ ಪಂದ್ಯಗಳನ್ನು ವೀಕ್ಷಿಸಲು ಬಿಸಿಸಿಐ ಅಧ್ಯಕ್ಷ ರೋಜರ್ ಬಿನ್ನಿ ಮತ್ತು ಮಂಡಳಿಯ ಉಪಾಧ್ಯಕ್ಷ ರಾಜೀವ್ ಶುಕ್ಲಾ, ಸೆಪ್ಟೆಂಬರ್ 4 ರಂದು ಪಾಕಿಸ್ತಾನಕ್ಕೆ ಪ್ರಯಾಣಿಸಲಿದ್ದಾರೆ ಎಂದು ಟೈಮ್ಸ್ ನೌ ವರದಿ ಮಾಡಿದೆ.

ಈ ಬಗ್ಗೆ ರೋಜರ್ ಬಿನ್ನಿ ಟೈಮ್ಸ್ ಆಫ್ ಇಂಡಿಯಾಗೆ ಹೇಳಿಕೆ ನೀಡಿದ್ದು, “ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ ಮತ್ತು ನಾನು ಸೆಪ್ಟೆಂಬರ್ 4 ರಂದು ವಾಘಾ ಗಡಿಯ ಮೂಲಕ ಪಾಕಿಸ್ತಾನಕ್ಕೆ ಪ್ರಯಾಣಿಸಲಿದ್ದೇವೆ. ಅಧಿಕೃತ ಔತಣಕೂಟದ ಹೊರತಾಗಿ, ನಾವು ಒಂದೆರಡು ಪಂದ್ಯಗಳನ್ನು ವೀಕ್ಷಿಸಲಿದ್ದೇವೆ ಎಂದಿದ್ದಾರೆ.

ಏಷ್ಯಾಕಪ್ ವೀಕ್ಷಿಸಲು ಪಾಕಿಸ್ತಾನಕ್ಕೆ ತೆರಳಲಿದ್ದಾರೆ ಬಿಸಿಸಿಐನ ಉನ್ನತ ಅಧಿಕಾರಿಗಳು! ವರದಿ

ಸೆ.7 ರಂದು ಭಾರತಕ್ಕೆ ವಾಪಸ್

ಬಿಸಿಸಿಐ ಮೂಲಗಳ ಪ್ರಕಾರ, ಸೆಪ್ಟೆಂಬರ್ 5 ಮತ್ತು 6 ರಂದು ಲಾಹೋರ್‌ನ ಗಡಾಫಿ ಸ್ಟೇಡಿಯಂನಲ್ಲಿ ನಡೆಯಲ್ಲಿರುವ ಅಫ್ಘಾನಿಸ್ತಾನ ಮತ್ತು ಶ್ರೀಲಂಕಾ ಹಾಗೂ ಸೂಪರ್ ಹಂತದ ಒಂದು ಪಂದ್ಯವನ್ನು ಬಿನ್ನಿ ಹಾಗೂ ಶುಕ್ಲಾ ವೀಕ್ಷಿಸಲಿದ್ದಾರೆ. ಆ ಬಳಿಕ ಈ ಇಬ್ಬರು ಸೆಪ್ಟೆಂಬರ್ 7 ರಂದು ಭಾರತಕ್ಕೆ ಮರಳಲಿದ್ದಾರೆ ಎಂದು ವರದಿಯಾಗಿದೆ.

15 ವರ್ಷಗಳ ಬಳಿಕ ಇದೇ ಮೊದಲು

ಈ ವರದಿ ನಿಜವಾದರೆ, ಬರೋಬ್ಬರಿ 15 ವರ್ಷಗಳ ಬಳಿಕ ಅಂದರೆ ಮುಂಬೈ ತಾಜ್ ಹೋಟೆಲ್ ದಾಳಿ ಬಳಿಕ ಬಿಸಿಸಿಐನ ಪ್ರತಿನಿಧಿಯೊಬ್ಬರು ಪಾಕಿಸ್ತಾನಕ್ಕೆ ತೆರಳಿದ್ದಂತ್ತಾಗುತ್ತದೆ. ಪಾಕಿಸ್ತಾನಕ್ಕೆ ತೆರಳುವ ಮೊದಲು, ಸೆಪ್ಟೆಂಬರ್ 2 ರಂದು ಪಲ್ಲೆಕೆಲೆಯಲ್ಲಿ ನಡೆಯಲ್ಲಿರುವ ಪಾಕಿಸ್ತಾನ ಹಾಗೂ ಭಾರತ ನಡುವಿನ ಹೈವೋಲ್ಟೇಜ್ ಕದನವನ್ನು ವೀಕ್ಷಿಸಲು ಬಿನ್ನಿ ಶ್ರೀಲಂಕಾಕ್ಕೆ ತೆರಳಿದ್ದಾರೆ. ಆ ನಂತರ ಈ ಇಬ್ಬರು ಪಾಕಿಸ್ತಾನಕ್ಕೆ ಹಾರಲಿದ್ದಾರೆ ಎಂದು ವರದಿಯಾಗಿದೆ.

ಈ ಹಿಂದೆ ಒಲ್ಲೆ ಎಂದಿದ್ದ ಬಿಸಿಸಿಐ

ಈ ಮೊದಲು ದಕ್ಷಿಣ ಆಫ್ರಿಕಾದಲ್ಲಿ ನಡೆದ ಸಭೆಯಲ್ಲಿ ಪಿಸಿಬಿ ಅಧ್ಯಕ್ಯ ಝಾಕಾ ಆಶ್ರಫ್, ಬಿಸಿಸಿಐ ಕಾರ್ಯದರ್ಶಿ ಹಾಗೂ ಎಸಿಸಿಯ ಹಾಲಿ ಅಧ್ಯಕ್ಷರು ಆಗಿರುವ ಜಯ್ ಶಾ ಅವರಿಗೆ ಮೌಖಿಕವಾಗಿ ಆಹ್ವಾನ ನೀಡಿದ್ದರು. ಇದಕ್ಕೆ ಜಯ್ ಶಾ ಕೂಡ ಸಮ್ಮತಿ ಸೂಚಿಸಿದ್ದರು ಎಂದು ಪಾಕ್ ಮಾಧ್ಯಮಗಳು ವರದಿ ಮಾಡಿದ್ದವು. ಆದರೆ ಈ ಸುದ್ದಿ ಸುಳ್ಳು ಎಂದು ಬಿಸಿಸಿಐ ಹೇಳಿತ್ತು. ಅಲ್ಲದೆ ಆಟಗಾರರಂತೆ ನಾವು ಕೂಡ ಪಾಕಿಸ್ತಾನಕ್ಕೆ ತೆರಳಲು ಭಾರತ ಸರ್ಕಾರದಿಂದ ಅನುಮತಿ ಪಡೆಯಬೇಕು ಎಂದು ಬಿಸಿಸಿಐ ಹಿರಿಯ ಅಧಿಕಾರಿಯನ್ನು ಉಲ್ಲೇಖಿಸಿ ಇನ್​ಸೈಡ್ ಸ್ಫೋರ್ಟ್​ ವರದಿ ಮಾಡಿತ್ತು.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:06 am, Sun, 27 August 23