Jay Shah: ಎಸಿಸಿ ಅಧ್ಯಕ್ಷರಾಗಿ ಜಯ್ ಶಾ ಅವರ ಅಧಿಕಾರವಧಿ ಒಂದು ವರ್ಷಕ್ಕೆ ವಿಸ್ತರಣೆ

| Updated By: ಪೃಥ್ವಿಶಂಕರ

Updated on: Mar 19, 2022 | 3:56 PM

Jay Shah: ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಅಧ್ಯಕ್ಷರಾಗಿ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅವರ ಅಧಿಕಾರಾವಧಿಯನ್ನು ಸರ್ವಾನುಮತದಿಂದ ಒಂದು ವರ್ಷಕ್ಕೆ ವಿಸ್ತರಿಸಲಾಗಿದೆ.

Jay Shah: ಎಸಿಸಿ ಅಧ್ಯಕ್ಷರಾಗಿ ಜಯ್ ಶಾ ಅವರ ಅಧಿಕಾರವಧಿ ಒಂದು ವರ್ಷಕ್ಕೆ ವಿಸ್ತರಣೆ
ಜೈ ಶಾ
Follow us on

ಶನಿವಾರ ನಡೆದ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ACC) ಅಧ್ಯಕ್ಷರಾಗಿ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ (Jay Shah) ಅವರ ಅಧಿಕಾರಾವಧಿಯನ್ನು ಸರ್ವಾನುಮತದಿಂದ ಒಂದು ವರ್ಷಕ್ಕೆ ವಿಸ್ತರಿಸಲಾಗಿದೆ. ಷಾ ಕಳೆದ ವರ್ಷ ಜನವರಿಯಲ್ಲಿ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ಅಧ್ಯಕ್ಷ ನಜ್ಮುಲ್ ಹಸನ್ ಅವರಿಂದ ಎಸಿಸಿಯ ಆಡಳಿತವನ್ನು ವಹಿಸಿಕೊಂಡಿದ್ದರು. ಶಾ ಅವರ ಅಧಿಕಾರ ವಿಸ್ತರಣೆಯನ್ನು ಶ್ರೀಲಂಕಾ ಕ್ರಿಕೆಟ್ (SLC) ಅಧ್ಯಕ್ಷ ಶಮ್ಮಿ ಸಿಲ್ವಾ ಸಭೆಯಲ್ಲಿ ಪ್ರಸ್ತಾಪಿಸಿದರು. ನಂತರ ಈ ನಾಮನಿರ್ದೇಶನವನ್ನು ಎಸಿಸಿಯ ಎಲ್ಲಾ ಸದಸ್ಯರು ಸರ್ವಾನುಮತದಿಂದ ಬೆಂಬಲಿಸಿದರು. ಈ ಹಿಂದೆ ಜಯ್ ಶಾ ಅವರನ್ನು ಎಸಿಸಿ ಅಧ್ಯಕ್ಷರನ್ನಾಗಿ ಕಳೆದ ವರ್ಷ ಜನವರಿ 30 ಶನಿವಾರದಂದು ಆಯ್ಕೆ ಮಾಡಲಾಗಿತ್ತು. ಷಾ ಅವರು ಈ ಹುದ್ದೆಗೆ ಅವಿರೋಧವಾಗಿ ಆಯ್ಕೆಯಾಗಿದ್ದರು. ಜೊತೆಗೆ ಈ ಹುದ್ದೆಗೇರಿದ ಅತ್ಯಂತ ಕಿರಿಯ ವ್ಯಕ್ತಿ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದರು.

ಅಧ್ಯಕ್ಷರಾಗಿ ಮರು ಆಯ್ಕೆಯಾದ ಬಳಿಕ ಮಾತನಾಡಿದ ಶಾ, ಎಸಿಸಿಯಲ್ಲಿನ ನನ್ನ ಗೌರವಾನ್ವಿತ ಸಹೋದ್ಯೋಗಿಗಳಿಗೆ ನನ್ನ ಮೇಲೆ ನಂಬಿಕೆ ಇಟ್ಟಿದ್ದಕ್ಕಾಗಿ ಮತ್ತು ನಾವು ಪ್ರಾರಂಭಿಸಿದ ಎಲ್ಲಾ ಕೆಲಸವನ್ನು ಮುಂದುವರಿಸಲು ನಾನು ಅರ್ಹನೆಂದು ಪರಿಗಣಿಸಿದ್ದಕ್ಕಾಗಿ ನಾನು ಧನ್ಯವಾದ ಹೇಳಲು ಬಯಸುತ್ತೇನೆ. ನಾನು ಈ ಗೌರವವನ್ನು ನಮ್ರತೆಯಿಂದ ಸ್ವೀಕರಿಸುತ್ತೇನೆ ಮತ್ತು ಏಷ್ಯಾದಲ್ಲಿ ನಮ್ಮ ಪ್ರೀತಿಯ ಕ್ರೀಡೆಯಾದ ಕ್ರಿಕೆಟ್ ಅನ್ನು ಸಂಘಟಿಸಲು, ಅಭಿವೃದ್ಧಿಪಡಿಸಲು ಮತ್ತು ಉತ್ತೇಜಿಸಲು ನಾನು ಶ್ರಮಿಸಲು ಬದ್ಧನಾಗಿದ್ದೇನೆ ಎಂದಿದ್ದಾರೆ.

ಶ್ರೀಲಂಕಾದಲ್ಲಿ ಏಷ್ಯಾ ಕಪ್
ಏಷ್ಯಾ ಕಪ್ 2022 ಆಗಸ್ಟ್ 27 ರಿಂದ ಸೆಪ್ಟೆಂಬರ್ ವರೆಗೆ ಶ್ರೀಲಂಕಾದಲ್ಲಿ ನಡೆಯಲಿದೆ ಎಂದು ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ಶನಿವಾರ ಪ್ರಕಟಿಸಿದೆ. ಈ ವರ್ಷ ಟಿ20 ಮಾದರಿಯಲ್ಲಿ ಪಂದ್ಯಾವಳಿ ನಡೆಯಲಿದ್ದು, ಈ ವರ್ಷ ಆಗಸ್ಟ್ 20 ರಿಂದ ಅರ್ಹತಾ ಪಂದ್ಯಗಳು ಆರಂಭವಾಗಲಿವೆ. ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನ ಸೇರಿದಂತೆ ಇತರ ಏಷ್ಯನ್ ಕ್ರಿಕೆಟ್ ತಂಡಗಳ ಮಂಡಳಿಯ ಪ್ರತಿನಿಧಿಗಳು ಹಾಗೂ ಅಧ್ಯಕ್ಷ ಜಯ್ ಶಾ ಅವರ ಸಮ್ಮುಖದಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.

ಕಳೆದ ಎರಡು ವರ್ಷಗಳಿಂದ ಏಷ್ಯಾಕಪ್ ಬಗ್ಗೆ ಇದ್ದ ಗೊಂದಲ ಶನಿವಾರ ಕೊನೆಗೊಂಡಿದೆ. 2020 ರಲ್ಲಿ ಪಾಕಿಸ್ತಾನದಲ್ಲಿ ಪಂದ್ಯಾವಳಿ ನಡೆಯಬೇಕಿದ್ದರೂ, ಕೊರೊನಾದಿಂದಾಗಿ ಅದನ್ನು ಒಂದು ವರ್ಷದವರೆಗೆ ಮುಂದೂಡಲಾಯಿತು. ಆ ನಂತರ 2021ರಲ್ಲಿ ಕೂಡ ಆಯೋಜಿಸಲಾಗಲಿಲ್ಲ, 2022ರಲ್ಲಿ ಶ್ರೀಲಂಕಾದಲ್ಲಿ ಟಿ20 ಮಾದರಿಯಲ್ಲಿ ಟೂರ್ನಿ ಆಯೋಜಿಸಲು ಒಪ್ಪಿಗೆ ನೀಡಲಾಗಿತ್ತು. ಮಾರ್ಚ್ 19 ರ ಶನಿವಾರದಂದು ನಡೆದ ಏಷ್ಯನ್ ಕ್ರಿಕೆಟ್ ಕೌನ್ಸಿಲ್‌ನ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಔಪಚಾರಿಕವಾಗಿ ಒಪ್ಪಿಗೆ ನೀಡಿ, ಪಂದ್ಯಾವಳಿಯನ್ನು ಆಗಸ್ಟ್ 27 ರಿಂದ ಸೆಪ್ಟೆಂಬರ್ 21 ರವರೆಗೆ ಆಯೋಜಿಸಲು ನಿರ್ಧರಿಸಲಾಗಿದೆ.

ಇದನ್ನೂ ಓದಿ:IND vs AUS: 3ನೇ ಸೋಲು, ಸೆಮೀಸ್ ಕನಸು ಕ್ಷೀಣ! 277 ರನ್ ಗಳಿಸಿದರೂ ಭಾರತ ಸೋತಿದ್ಯಾಕೆ? ಇಲ್ಲಿದೆ ವಿವರ

Published On - 3:40 pm, Sat, 19 March 22