ಹರ್ಮನ್​ಪ್ರೀತ್ ಕೌರ್ ತಲೆದಂಡಕ್ಕೆ ಮುಂದಾದ ಬಿಸಿಸಿಐ

|

Updated on: Oct 16, 2024 | 2:39 PM

Harmanpreet Kaur: 2016ರ ಟಿ20 ವಿಶ್ವಕಪ್ ಸೋಲಿನ ಬಳಿಕ ಹರ್ಮನ್​ಪ್ರೀತ್ ಕೌರ್​ಗೆ ನಾಯಕತ್ವ ನೀಡಲಾಗಿತ್ತು. ಕೌರ್ ಮುಂದಾಳತ್ವದಲ್ಲಿ ಟೀಮ್ ಇಂಡಿಯಾ ಆರಂಭಿಕ ದಿನಗಳಲ್ಲಿ ಅತ್ಯುತ್ತಮ ಪ್ರದರ್ಶನವನ್ನೇ ನೀಡಿದೆ. ಆದರೆ 2020 ರ ಬಳಿಕ ಭಾರತ ತಂಡದಿಂದ ನಿರೀಕ್ಷಿತ ಮಟ್ಟದ ಪ್ರದರ್ಶನ ಕಂಡು ಬಂದಿಲ್ಲ.

ಹರ್ಮನ್​ಪ್ರೀತ್ ಕೌರ್ ತಲೆದಂಡಕ್ಕೆ ಮುಂದಾದ ಬಿಸಿಸಿಐ
Harmanpreet Kaur
Follow us on

ಭಾರತ ಮಹಿಳಾ ತಂಡದ ನಾಯಕಿ ಹರ್ಮನ್​ಪ್ರೀತ್ ಕೌರ್ ಅವರನ್ನು ಟೀಮ್ ಇಂಡಿಯಾ ಕ್ಯಾಪ್ಟನ್ ಪಟ್ಟದಿಂದ ಕೆಳಗಿಳಿಸುವ ಸಾಧ್ಯತೆಯಿದೆ.  ಮಹಿಳಾ ಟಿ20 ವಿಶ್ವಕಪ್‌ 2024 ರಲ್ಲಿ ಟೀಮ್ ಇಂಡಿಯಾ ಕಳಪೆ ಪ್ರದರ್ಶನ ನೀಡಿದ್ದು, ಇದರ ಬೆನ್ನಲ್ಲೇ ನಾಯಕಿ ಹರ್ಮನ್​ಪ್ರೀತ್ ಅವರ ನಾಯಕತ್ವದ ಬಗ್ಗೆ ಪ್ರಶ್ನೆಗಳೆದ್ದಿವೆ. ಈ ಬಗ್ಗೆ ಚರ್ಚಿಸಲು ಬಿಸಿಸಿಐ ಆಯ್ಕೆ ಸಮಿತಿ ವಿಶೇಷ ಸಭೆ ಕರೆದಿದ್ದು, ಹೀಗಾಗಿ ಮುಂಬರುವ ಸರಣಿಗೂ ಮುನ್ನ ಹರ್ಮನ್​ಪ್ರೀತ್ ಕೌರ್ ಅವರ ತಲೆದಂಡವಾಗಲಿದೆ ಎಂದು ವರದಿಯಾಗಿದೆ.

ಈ ಬಾರಿಯ ಟಿ20 ವಿಶ್ವಕಪ್ ಗೆಲ್ಲುವ ನೆಚ್ಚಿನ ತಂಡಗಳಲ್ಲಿ ಒಂದಾಗಿದ್ದ ಟೀಮ್ ಇಂಡಿಯಾ ಮೊದಲ ಸುತ್ತಿನಲ್ಲೇ ನಿರ್ಗಮಿಸಿದೆ. ಆಡಿದ 4 ಪಂದ್ಯಗಳಲ್ಲಿ ಗೆದ್ದಿರುವುದು ಕೇವಲ 2 ಮ್ಯಾಚ್ ಮಾತ್ರ. ಈ ಕಳಪೆ ಪ್ರದರ್ಶನದ ಬೆನ್ನಲ್ಲೇ ಟೀಮ್ ಇಂಡಿಯಾಗೆ ಮೇಜರ್ಸ್ ಸರ್ಜರಿ ನಡೆಸಲು ಬಿಸಿಸಿಐ ಮುಂದಾಗಿದೆ.

ನ್ಯೂಝಿಲೆಂಡ್ ಸರಣಿಗೂ ಮುನ್ನ ಭವಿಷ್ಯ ನಿರ್ಧಾರ:

ಭಾರತ ಮಹಿಳಾ ತಂಡ ಅಕ್ಟೋಬರ್ 24 ರಿಂದ ನ್ಯೂಝಿಲೆಂಡ್ ವಿರುದ್ಧ ಏಕದಿನ ಸರಣಿಯನ್ನು ಆಡಲಿದೆ. ಇದಕ್ಕೂ ಮುನ್ನ ಬಿಸಿಸಿಐ ಟೀಮ್ ಇಂಡಿಯಾ ಮುಖ್ಯ ಕೋಚ್ ಅಮೋಲ್ ಮಜುಂದಾರ್ ಅವರೊಂದಿಗೆ ಸಭೆ ನಡೆಸಲಿದೆ ಎಂದು ವರದಿಯಾಗಿದೆ.

ಈ ಸಭೆಯಲ್ಲಿ ಟೀಮ್ ಇಂಡಿಯಾ ನಾಯಕಿ ಹರ್ಮನ್‌ಪ್ರೀತ್ ಕೌರ್ ಅವರ ಭವಿಷ್ಯ ಕೂಡ ನಿರ್ಧಾರವಾಗಲಿದೆ. ಏಕೆಂದರೆ 2025ರಲ್ಲಿ ಏಕದಿನ ವಿಶ್ವಕಪ್ ನಡೆಯಲಿದ್ದು, ಅದಕ್ಕೂ ಮುನ್ನ ಹೊಸ ನಾಯಕಿಯನ್ನು ಆಯ್ಕೆ ಮಾಡಲು ಬಿಸಿಸಿಐ ಆಸಕ್ತಿ ಹೊಂದಿದೆ.

2016ರ ಟಿ20 ವಿಶ್ವಕಪ್ ಸೋಲಿನ ಬಳಿಕ ಹರ್ಮನ್​ಪ್ರೀತ್ ಕೌರ್​ಗೆ ನಾಯಕತ್ವ ನೀಡಲಾಗಿತ್ತು. ಕೌರ್ ಮುಂದಾಳತ್ವದಲ್ಲಿ ಟೀಮ್ ಇಂಡಿಯಾ ಆರಂಭಿಕ ದಿನಗಳಲ್ಲಿ ಅತ್ಯುತ್ತಮ ಪ್ರದರ್ಶನವನ್ನೇ ನೀಡಿದೆ. ಆದರೆ 2020 ರ ಬಳಿಕ ಭಾರತ ತಂಡದಿಂದ ನಿರೀಕ್ಷಿತ ಮಟ್ಟದ ಪ್ರದರ್ಶನ ಕಂಡು ಬಂದಿಲ್ಲ.

2020 ರಲ್ಲಿ ಹರ್ಮನ್​ಪ್ರೀತ್ ನಾಯಕತ್ವದಲ್ಲಿ ಟೀಮ್ ಇಂಡಿಯಾ ಟಿ20 ವಿಶ್ವಕಪ್​ ಫೈನಲ್ ಆಡಿದ್ದು ಶ್ರೇಷ್ಠ ಸಾಧನೆ. ಈ ಬಾರಿ ಟಿ20 ವಿಶ್ವಕಪ್​ನಲ್ಲಿ ಬಲಿಷ್ಠ ತಂಡವಾಗಿ ಕಣಕ್ಕಿಳಿದಿದ್ದ ಟೀಮ್ ಇಂಡಿಯಾ ಮೊದಲ ಪಂದ್ಯದಲ್ಲಿ ನ್ಯೂಝಿಲೆಂಡ್ ವಿರುದ್ಧ ಪರಾಜಯಗೊಂಡಿತ್ತು.

ಇನ್ನು ಪಾಕಿಸ್ತಾನ್ ಹಾಗೂ ಶ್ರೀಲಂಕಾ ವಿರುದ್ಧ ಜಯ ಸಾಧಿಸಿದರೂ, ಸೆಮಿಫೈನಲ್​ ಎಂಟ್ರಿಗೆ ನಿರ್ಣಾಯಕವಾಗಿದ್ದ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಭಾರತ ತಂಡ 9 ರನ್​ಗಳಿಂದ ಸೋಲನುಭವಿಸಿತ್ತು. ಇದರ ಬೆನ್ನಲ್ಲೇ ಹರ್ಮನ್​ಪ್ರೀತ್ ಅವರ ನಾಯಕತ್ವದ ಬಗ್ಗೆ ಪ್ರಶ್ನೆಗಳೆದ್ದಿವೆ.

ಅದರಲ್ಲೂ 35 ವರ್ಷದ ಆಟಗಾರ್ತಿಯನ್ನು ಇನ್ನೂ ಸಹ ನಾಯಕಿಯಾಗಿ ಮುಂದುವರೆಸುತ್ತಿರುವ ಬಗ್ಗೆ ಮಾಜಿ ಆಟಗಾರ್ತಿಯರು ಪ್ರಶ್ನಿಸಿದ್ದಾರೆ. ಏಕೆಂದರೆ ಮುಂದಿನ ವರ್ಷ ಏಕದಿನ ವಿಶ್ವಕಪ್ ನಡೆಯಲಿದ್ದು, ಇದಾದ ಬಳಿಕ ಕೆಲ ಪ್ರಮುಖ ಸರಣಿಗಳನ್ನು ಸಹ ಆಡಬೇಕಿದೆ. ಹಾಗಾಗಿ ಭವಿಷ್ಯದ ದೃಷ್ಟಿಯಲ್ಲಿ ಬಿಸಿಸಿಐ ಹೊಸ ನಾಯಕಿಯನ್ನು ಆಯ್ಕೆ ಮಾಡಬೇಕೆಂದು ಟೀಮ್ ಇಂಡಿಯಾದ ಮಾಜಿ ಕ್ಯಾಪ್ಟನ್ ಮಿಥಾಲಿ ರಾಜ್ ತಿಳಿಸಿದ್ದಾರೆ.

ಇದನ್ನೂ ಓದಿ: 4,4,4,4,4,4: ಒಂದೇ ಓವರ್​ನಲ್ಲಿ 6 ಫೋರ್: ಆದರೂ ಕೈ ತಪ್ಪಿದ ವಿಶ್ವ ದಾಖಲೆ

ಹೀಗಾಗಿ ನ್ಯೂಝಿಲೆಂಡ್ ವಿರುದ್ಧದ ಸರಣಿಗೂ ಮುನ್ನ ಭಾರತ ಮಹಿಳಾ ತಂಡದ ನಾಯಕಿ ಬದಲಾದರೂ ಅಚ್ಚರಿಪಡಬೇಕಿಲ್ಲ. ಇಲ್ಲಿ ಹೊಸ ನಾಯಕಿಯರ ಪಟ್ಟಿಯಲ್ಲಿ ಸ್ಮೃತಿ ಮಂಧಾನ ಹಾಗೂ ಜೆಮಿಮಾ ರೊಡಿಗ್ರಸ್ ಹೆಸರು ಮುಂಚೂಣಿಯಲ್ಲಿದ್ದು, ಇವರಲ್ಲಿ ಒಬ್ಬರಿಗೆ ಕ್ಯಾಪ್ಟನ್ ಪಟ್ಟ ಸಿಗುವ ಸಾಧ್ಯತೆಯಿದೆ.