
12 ಕೋಟಿ ರೂಪಾಯಿ ದುರುಪಯೋಗದ ಪ್ರಕರಣದಲ್ಲಿ ಉತ್ತರಾಖಂಡ ಹೈಕೋರ್ಟ್ (Uttarakhand High Court) ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಗೆ (BCCI) ನೋಟಿಸ್ ಜಾರಿ ಮಾಡಿದೆ. ವರದಿಯ ಪ್ರಕಾರ ಬಿಸಿಸಿಐ, ಉತ್ತರಾಖಂಡ ಕ್ರಿಕೆಟ್ ಅಸೋಸಿಯೇಷನ್‌ಗೆ ನೀಡಿದ ಹಣವನ್ನು ದುರುಪಯೋಗಪಡಿಸಿಕೊಂಡಿದ್ದು, ಈ ವಿಚಾರವಾಗಿ ತನಿಖೆಗೆ ಒತ್ತಾಯಿಸಲಾಗುತ್ತಿದೆ. ವರದಿಯ ಪ್ರಕಾರ, 12 ಕೋಟಿ ರೂಪಾಯಿಗಳಲ್ಲಿ 35 ಲಕ್ಷ ರೂಪಾಯಿಗಳನ್ನು ಉತ್ತರಾಖಂಡದ ಆಟಗಾರರಿಗೆ ಬಾಳೆಹಣ್ಣು ಖರೀದಿಸಲು ಖರ್ಚು ಮಾಡಲಾಗಿದೆ. ಇದರ ಜೊತೆಗೆ ಇತರ ವಿಷಯಗಳಿಗೂ ಹೆಚ್ಚಿನ ಹಣವನ್ನು ಖರ್ಚು ಮಾಡಲಾಗಿದೆ ಎಂದು ಉತ್ತರಾಖಂಡ ಕ್ರಿಕೆಟ್ ಅಸೋಸಿಯೇಷನ್‌ನ ಆಡಿಟ್ ವರದಿಯಲ್ಲಿ ಬಹಿರಂಗವಾಗಿದೆ
ಟೈಮ್ಸ್ ಆಫ್ ಇಂಡಿಯಾ ವರದಿಯ ಪ್ರಕಾರ, ಬಿಸಿಸಿಐ ನೀಡಿರುವ 12 ಕೋಟಿ ರೂಗಳಲ್ಲಿ 35 ಲಕ್ಷ ರೂಗಳನ್ನು ಬರಿ ಬಾಳೆಹಣ್ಣುಗಳನ್ನು ಖರೀದಿಸುವುದಕ್ಕಾಗಿಯೇ ಖರ್ಚು ಮಾಡಲಾಗಿದೆ. ಹೀಗಾಗಿ ಈ ಬಗ್ಗೆ ತನಿಖೆ ನಡೆಸಬೇಕೆಂದು ದೂರುದಾರರು ಉತ್ತರಾಖಂಡ ಹೈಕೋರ್ಟ್ ಮೊರೆ ಹೋಗಿದ್ದಾರೆ. ಅದರಂತೆ ಈಗ ಈ ಪ್ರಕರಣದ ವಿಚಾರಣೆ ಸೆಪ್ಟೆಂಬರ್ 19 ರಂದು ನಡೆಯಲಿದ್ದು, ಈ ಆರೋಪಕ್ಕೆ ಸಂಬಂಧಿಸಿದಂತೆ ಈಗಾಗಲೇ ಬಿಸಿಸಿಐನಿಂದ ಉತ್ತರವನ್ನು ಕೇಳಲಾಗಿದೆ.
ಉತ್ತರಾಖಂಡದ ಲೆಕ್ಕಪರಿಶೋಧನಾ ವರದಿಯ ಪ್ರಕಾರ, ಆಡಿಟ್ ವರದಿಯು ಈವೆಂಟ್ ನಿರ್ವಹಣೆಗೆ 6.4 ಕೋಟಿ ರೂಪಾಯಿಗಳನ್ನು ಮತ್ತು ಟೂರ್ನಮೆಂಟ್-ಟ್ರಯಲ್ ವೆಚ್ಚಗಳಿಗಾಗಿ ಒಟ್ಟು 26.3 ಕೋಟಿ ರೂಪಾಯಿಗಳನ್ನು ಖರ್ಚು ಮಾಡಲಾಗಿದೆ ಎಂದು ಬಹಿರಂಗಪಡಿಸಿದೆ. ಇದು ಹಿಂದಿನ ಹಣಕಾಸು ವರ್ಷದ 22.3 ಕೋಟಿ ರೂಪಾಯಿಗಳಿಗಿಂತ ಹೆಚ್ಚಾಗಿದೆ. ಉತ್ತರಾಖಂಡ್ ಅಸೋಸಿಯೇಷನ್ ಆಹಾರ ಮತ್ತು ಪಾನೀಯ ವೆಚ್ಚಗಳ ಹೆಸರಿನಲ್ಲಿ ಕೋಟ್ಯಂತರ ರೂಪಾಯಿಗಳನ್ನು ದುರುಪಯೋಗಪಡಿಸಿಕೊಂಡಿದೆ ಎಂದು ಹೈಕೋರ್ಟ್‌ನಲ್ಲಿ ಅರ್ಜಿದಾರರು ಆರೋಪಿಸಿದ್ದಾರೆ.
BCCI Revenue: ಕಳೆದ 5 ವರ್ಷಗಳಲ್ಲಿ ಬಿಸಿಸಿಐ ಗಳಿಸಿದ ಆದಾಯ ಎಷ್ಟು ಸಾವಿರ ಕೋಟಿ ಗೊತ್ತಾ?
ಉತ್ತರಾಖಂಡ ಕ್ರಿಕೆಟ್ ಮಂಡಳಿಯ ವಿರುದ್ಧ ಈ ಹಿಂದೆಯೂ ಹಗರಣದ ಗಂಭೀರ ಆರೋಪಗಳು ಕೇಳಿಬಂದಿದ್ದವು. 2022 ರಲ್ಲಿ, ಉತ್ತರಾಖಂಡ ಕ್ರಿಕೆಟ್ ಸಂಘವು ತನ್ನ ಆಟಗಾರರಿಗೆ 12 ತಿಂಗಳಲ್ಲಿ ದಿನಕ್ಕೆ ಕೇವಲ 100 ರೂ.ಗಳನ್ನು ವೇತನವಾಗಿ ಪಾವತಿಸಿದೆ ಎಂಬ ಆರೋಪ ಕೇಳಿಬಂದಿತ್ತು. ಇದಲ್ಲದೇ, ಉತ್ತರಾಖಂಡ ಕ್ರಿಕೆಟ್ ತಂಡದ ಆಟಗಾರರು ಮಾನಸಿಕ ಮತ್ತು ದೈಹಿಕ ಶೋಷಣೆಯ ಆರೋಪಗಳನ್ನು ಸಹ ಮಾಡಿದ್ದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ