Asia Cup 2025: ಏಳಕ್ಕೆ 7 ಪಂದ್ಯಗಳಲ್ಲೂ ಸೋಲು; ಟೀಂ ಇಂಡಿಯಾ ಪರವಾಗಿದೆಯಾ ಅದೃಷ್ಟ?
India vs UAE Asia Cup 2025: ಭಾರತ ತಂಡ 2025ರ ಏಷ್ಯಾಕಪ್‌ನಲ್ಲಿ ಯುಎಇ ವಿರುದ್ಧ ತನ್ನ ಮೊದಲ ಪಂದ್ಯವನ್ನು ಆಡಲಿದೆ. ದುಬೈನಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಟಾಸ್ ಬಹಳ ಮುಖ್ಯ. ಕಳೆದ 7 ಪಂದ್ಯಗಳಲ್ಲಿ ಮೊದಲು ಬೌಲಿಂಗ್ ಮಾಡಿದ ತಂಡ ಸೋತಿದೆ. ಬಿಸಿಲಿನ ಹವಾಮಾನದಿಂದಾಗಿ ಮೊದಲು ಬ್ಯಾಟ್ ಮಾಡುವುದು ಅನುಕೂಲಕರ. ಭಾರತ ತಂಡ ಈ ಅಂಶಗಳನ್ನು ಗಮನಿಸಿ ತನ್ನ ತಂತ್ರ ರೂಪಿಸಬೇಕಾಗಿದೆ.

2025 ರ ಏಷ್ಯಾಕಪ್‌ನಲ್ಲಿ (Asia Cup 2025) ಟೀಂ ಇಂಡಿಯಾ ಇಂದು ತನ್ನ ಮೊದಲ ಪಂದ್ಯವನ್ನು ಆಡುತ್ತಿದೆ. ದುಬೈ ಮೈದಾನದಲ್ಲಿ ನಡೆಯಲಿರುವ ಟೂರ್ನಿಯ ಎರಡನೇ ಪಂದ್ಯದಲ್ಲಿ ಸೂರ್ಯಕುಮಾರ್ ಪಡೆ ಯುಎಇ ತಂಡವನ್ನು ಎದುರಿಸಲಿದೆ. ವಾಸ್ತವವಾಗಿ ಈ ಪಂದ್ಯ ನಡೆಯಲಿರುವ ದುಬೈ ಮೈದಾನ ಟೀಂ ಇಂಡಿಯಾ ಪಾಲಿಗೆ ಭಾರಿ ಅಚ್ಚುಮೆಚ್ಚು ಎಂದರೆ ತಪ್ಪಾಗಲಾರದು. ಏಕೆಂದರೆ ಈ ಹಿಂದೆ 2025 ರ ಚಾಂಪಿಯನ್ಸ್ ಟ್ರೋಫಿಯ ಫೈನಲ್ ಪಂದ್ಯ ಇದೇ ಮೈದಾನದಲ್ಲಿ ನಡೆದಿತ್ತು. ನ್ಯೂಜಿಲೆಂಡ್ ವಿರುದ್ಧ ನಡೆದ ಆ ಫೈನಲ್ ಪಂದ್ಯವನ್ನು ಟೀಂ ಇಂಡಿಯಾ 4 ವಿಕೆಟ್‌ಗಳಿಂದ ಸೋಲಿಸುವ ಮೂಲಕ ಚಾಂಪಿಯನ್ಸ್ ಟ್ರೋಫಿ ಪ್ರಶಸ್ತಿಯನ್ನು ಗೆದ್ದುಕೊಂಡಿತು. ಆದಾಗ್ಯೂ, ಈ ಬಾರಿ ಯುಎಇಯಲ್ಲಿನ ಹವಾಮಾನವು ಸಂಪೂರ್ಣವಾಗಿ ವಿಭಿನ್ನವಾಗಿದೆ. ಈ ಕಾರಣದಿಂದಾಗಿ, ಯುಎಇ ವಿರುದ್ಧದ ಪಂದ್ಯದಲ್ಲಿ ಟಾಸ್ ಬಹಳ ಮುಖ್ಯವಾದ ಪಾತ್ರವನ್ನು ವಹಿಸುತ್ತದೆ. ಏಕೆಂದರೆ ಕಳೆದ 7 ಪಂದ್ಯಗಳಲ್ಲಿ ಮೊದಲು ಬೌಲಿಂಗ್ ಮಾಡಿದ ತಂಡ ಸೋಲುಕಂಡಿದೆ. ಆದ್ದರಿಂದ, ಟೀಮ್ ಇಂಡಿಯಾ ಈ ಪಂದ್ಯದಲ್ಲಿ ಟಾಸ್ ಗೆಲ್ಲುವುದು ಬಹಳ ಮುಖ್ಯವಾಗಿದೆ.
ಟಾಸ್ ಪ್ರಮುಖ ಪಾತ್ರ ವಹಿಸುತ್ತದೆ
2025 ರ ಏಷ್ಯಾಕಪ್‌ನಲ್ಲಿ ಟಾಸ್ ಪ್ರಮುಖ ಪಾತ್ರ ವಹಿಸಲಿದೆ. ಏಕೆಂದರೆ ದುಬೈನಲ್ಲಿ ಮೊದಲು ಬ್ಯಾಟ್ ಮಾಡುವ ತಂಡಕ್ಕೆ ಹೆಚ್ಚಿನ ಲಾಭ ಸಿಗುತ್ತದೆ. ಯುಎಇಯಲ್ಲಿ ನಡೆದ ಕಳೆದ 7 ಪಂದ್ಯಗಳೇ ಇದಕ್ಕೆ ಸಾಕ್ಷಿ. ಈ 7 ಪಂದ್ಯಗಳಲ್ಲಿ ಮೊದಲು ಬ್ಯಾಟ್ ಮಾಡಿದ ತಂಡವು ಎಲ್ಲಾ ಪಂದ್ಯಗಳಲ್ಲಿ ಗೆದ್ದಿದೆ. ಈ ಪೈಕಿ 6 ಪಂದ್ಯಗಳು ಈ ಹಿಂದೆ ನಡೆದ ಪಾಕಿಸ್ತಾನ, ಅಫ್ಘಾನಿಸ್ತಾನ ಹಾಗೂ ಯುಎಇ ನಡುವೆ ನಡೆದ ತ್ರಿಕೋನ ಸರಣಿಯಲ್ಲಿ ನಡೆದಿವೆ.
ಇದಕ್ಕೆ ಪೂರಕವಾಗಿ ಏಷ್ಯಾಕಪ್ 2025 ರ ಮೊದಲ ಪಂದ್ಯದಲ್ಲಿ, ಅಫ್ಘಾನಿಸ್ತಾನ ಮೊದಲು ಬ್ಯಾಟ್ ಮಾಡಿ ಹಾಂಗ್ ಕಾಂಗ್ ವಿರುದ್ಧ ದೊಡ್ಡ ಗೆಲುವು ಸಾಧಿಸಿತು. ಆದ್ದರಿಂದ, ಯುಎಇ ವಿರುದ್ಧದ ತನ್ನ ಮೊದಲ ಪಂದ್ಯದಲ್ಲಿ, ಟೀಂ ಇಂಡಿಯಾ ಅದೃಷ್ಟವನ್ನೂ ಅವಲಂಬಿಸಬೇಕಾಗುತ್ತದೆ.
Asia Cup 2025: ಏಷ್ಯಾಕಪ್ ಆರಂಭಕ್ಕೂ ಮುನ್ನವೇ ಭಾರತ- ಪಾಕ್ ನಾಯಕರ ನಡುವೆ ಶೀತಲ ಸಮರ
ಟೀಂ ಇಂಡಿಯಾಗೆ ಅದೃಷ್ಟ ಬೇಕು
ಭಾರತ ತಂಡವು ಫೆಬ್ರವರಿ-ಮಾರ್ಚ್ 2025 ರಲ್ಲಿ ಯುಎಇಯಲ್ಲಿ ಚಾಂಪಿಯನ್ಸ್ ಟ್ರೋಫಿಯನ್ನು ಆಡಿತ್ತು. ಆ ಸಮಯದಲ್ಲಿ ಹವಾಮಾನ ಸ್ವಲ್ಪ ತಂಪಾಗಿತ್ತು, ಆದರೆ ಈ ಬಾರಿ ಯುಎಇಯಲ್ಲಿ ಹವಾಮಾನವು ತುಂಬಾ ಬಿಸಿಯಾಗಿರುತ್ತದೆ. ಹಗಲಿನಲ್ಲಿ ತಾಪಮಾನ 41°C ಮತ್ತು ರಾತ್ರಿಯಲ್ಲಿ 31°C ನಡುವೆ ಇರುತ್ತದೆ. ಈ ಕಾರಣದಿಂದಾಗಿ, ಪಿಚ್ ಕೂಡ ಅದೇ ರೀತಿ ವರ್ತಿಸುತ್ತದೆ. ಮೊದಲು ಬ್ಯಾಟಿಂಗ್ ಮಾಡುವ ತಂಡವು ಸುಲಭವಾಗಿ ರನ್ ಗಳಿಸುತ್ತದೆ, ಆದರೆ ಎರಡನೇ ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್ ಮಾಡುವ ತಂಡವು ಬಹಳಷ್ಟು ತೊಂದರೆಗಳನ್ನು ಎದುರಿಸಬೇಕಾಗುತ್ತದೆ, ಏಕೆಂದರೆ ಆ ಸಮಯದಲ್ಲಿ ಚೆಂಡು ನಿಂತು ಬರುತ್ತದೆ. ಈ ಕಾರಣದಿಂದಾಗಿ, ಇಲ್ಲಿ ಎರಡನೇ ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್ ಮಾಡುವುದು ಸುಲಭವಲ್ಲ.
ಆಗಸ್ಟ್ 29 ರಿಂದ ಸೆಪ್ಟೆಂಬರ್ 9 ರವರೆಗೆ ಯುಎಇಯಲ್ಲಿ ಒಟ್ಟು 7 ಟಿ20 ಪಂದ್ಯಗಳು ನಡೆದಿವೆ. ಈ ಎಲ್ಲಾ ಪಂದ್ಯಗಳಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ತಂಡ ಗೆದ್ದಿದೆ. ಹೀಗಾಗಿ ಇಂದು ನಡೆಯಲಿರುವ ಭಾರತ ಮತ್ತು ಯುಎಇ ನಡುವಿನ ಪಂದ್ಯದಲ್ಲಿಯೂ ಟಾಸ್ ಕೂಡ ಪ್ರಮುಖ ಪಾತ್ರ ವಹಿಸುತ್ತದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:46 pm, Wed, 10 September 25
