ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ (BCCI) ಸಂವಿಧಾನ ತಿದ್ದುಪಡಿ ಸೇರಿದಂತೆ ಇತರ ವಿಷಯಗಳನ್ನು ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ನೇತೃತ್ವದ ಪೀಠ ವಿಚಾರಣೆ ನಡೆಸಲಿದೆ ಎಂದು ಸುಪ್ರೀಂ ಕೋರ್ಟ್ ಬುಧವಾರ ಹೇಳಿದೆ. ಅದೇಶ ಹೊರಡಿಸಿದ ಮುಖ್ಯ ನ್ಯಾಯಮೂರ್ತಿ ಎನ್ ವಿ ರಮಣ (Chief Justice N V Ramana) ನೇತೃತ್ವದ ಪೀಠ, 2018 ರ ಆಗಸ್ಟ್ 9 ರಂದು ಬಿಸಿಸಿಐ ಸಂವಿಧಾನ ತಿದ್ದುಪಡಿ ಬಗ್ಗೆಗಿನ ತೀರ್ಪನ್ನು ಆಗಿನ ಸಿಜೆಐ ದೀಪಕ್ ಮಿಶ್ರಾ ಮತ್ತು ನ್ಯಾಯಮೂರ್ತಿಗಳಾದ ಎ ಎಂ ಖಾನ್ವಿಲ್ಕರ್ ಮತ್ತು ಚಂದ್ರಚೂಡ್ ಅವರನ್ನೊಳಗೊಂಡ ಪೀಠ ನೀಡಿತ್ತು. ಆದರೀಗ ಆ ಪೀಠದಲ್ಲಿದ್ದ ನ್ಯಾಯಮೂರ್ತಿಗಳಾದ ಮಿಶ್ರಾ ಮತ್ತು ಖಾನ್ವಿಲ್ಕರ್ ಅವರು ನಿವೃತ್ತರಾಗಿದ್ದಾರೆ. ಆದ್ದರಿಂದ, ಈ ವಿಷಯವನ್ನು ನ್ಯಾಯಮೂರ್ತಿ ಚಂದ್ರಚೂಡ್ ನೇತೃತ್ವದ ಪೀಠಕ್ಕೆ ಉಲ್ಲೇಖಿಸಲಾಗುವುದು ಎಂದು ಸಿಜೆಐ ಭಾರತದ ಸಾಲಿಸಿಟರ್ ಜನರಲ್‌ಗೆ ತಿಳಿಸಿದರು.
ಈ ಹಿಂದೆ ಜುಲೈ 21 ರಂದು ಸುಪ್ರೀಂ ಕೋರ್ಟ್ ಈ ಪ್ರಕರಣದಲ್ಲಿ ಹಿರಿಯ ವಕೀಲ ಮಣಿಂದರ್ ಸಿಂಗ್ ಅವರನ್ನು ಅಮಿಕಸ್ ಕ್ಯೂರಿಯಾಗಿ ನೇಮಿಸಿತ್ತು. ಏಕೆಂದರೆ ಹಿಂದಿನ ಅಮಿಕಸ್ ನ್ಯಾಯಮೂರ್ತಿ ಪಿ.ಎಸ್.ನರಸಿಂಹ ಅವರು ಸುಪ್ರೀಂ ಕೋರ್ಟ್‌ನ ನ್ಯಾಯಾಧೀಶರಾಗಿ ಆಯ್ಕೆಯಾಗಿದ್ದರು. ಬಳಿಕ ಬಿಸಿಸಿಐ ಅರ್ಜಿಯನ್ನು ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್ ವಿಚಾರಣೆಯನ್ನು ಮುಂದೂಡಿತ್ತು.
ನಿವೃತ್ತ ನ್ಯಾಯಮೂರ್ತಿ ಆರ್‌ಎಂ ಲೋಧಾ ಅವರ ಸಮಿತಿಯ ಶಿಫಾರಸುಗಳ ಆಧಾರದ ಮೇಲೆ, ಬಿಸಿಸಿಐ ತನ್ನ ಸಂವಿಧಾನವನ್ನು ರಚಿಸಿದ್ದು, ಆರು ವರ್ಷಗಳ ನಂತರ ರಾಜ್ಯ ಮಟ್ಟದಲ್ಲಿ ಅಥವಾ ಬಿಸಿಸಿಐನಲ್ಲಿ ಪದಾಧಿಕಾರಿ ಹುದ್ದೆಗೆ ಮೂರು ವರ್ಷಗಳ ಕೂಲಿಂಗ್ ಅನ್ನು ಕಡ್ಡಾಯಗೊಳಿಸಿದೆ. ತಿದ್ದುಪಡಿಯಲ್ಲಿ, ಕಾರ್ಯದರ್ಶಿ ಮತ್ತು ಅಧ್ಯಕ್ಷರಂತಹ ಪದಾಧಿಕಾರಿಗಳ ಕೂಲಿಂಗ್ ಅವಧಿಯನ್ನು ರದ್ದುಪಡಿಸಲು ಬಿಸಿಸಿಐ ಕೋರಿತ್ತು.
ಮನವಿಯಲ್ಲಿರುವುದೇನು?
ಉನ್ನತ ನ್ಯಾಯಾಲಯದಿಂದ ಅನುಮೋದಿಸಲ್ಪಟ್ಟಿರುವ ಪ್ರಸ್ತುತ ಬಿಸಿಸಿಐ ಸಂವಿಧಾನದ ಪ್ರಕಾರ, ಸತತ ಆರು ವರ್ಷಗಳ ಕಾಲ ಸೇವೆ ಸಲ್ಲಿಸಿದ ನಂತರ ಅಧಿಕಾರಿಗಳು ಕಚೇರಿಯಲ್ಲಿ ಮುಂದುವರಿಯುವಂತಿಲ್ಲ. ಇದರ ನಂತರ, ಅವರು ಮೂರು ವರ್ಷಗಳ ಕಾಲ ವಿರಾಮದಲ್ಲಿರಬೇಕಾಗುತ್ತದೆ. ಈ ಮೂರು ವರ್ಷದ ವಿರಾಮದ ನಂತರವೇ ಅವರು ಮತ್ತೆ ಯಾವುದೇ ರಾಜ್ಯ ಅಸೋಸಿಯೇಷನ್ ಅಥವಾ ಬಿಸಿಸಿಐನಲ್ಲಿ ಯಾವುದೇ ಸ್ಥಾನವನ್ನು ಹೊಂದಬಹುದು. ಆರು ವರ್ಷಗಳ ಅವಧಿಯು ರಾಜ್ಯ ಸಂಘ ಮತ್ತು ಬಿಸಿಸಿಐ ಎರಡನ್ನೂ ಒಳಗೊಂಡಿದೆ. ಹಾಗಾಗಿ ಈ ನಿಯಮವನ್ನು ತೆಗೆದುಹಾಕಬೇಕೆಂದು ಬಿಸಿಸಿಐ ಬಯಸಿದ್ದು ಈ ಬಗ್ಗೆ ಸುಪ್ರೀಂ ಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದೆ.
ಬಿಸಿಸಿಐ ತನ್ನ ಪ್ರಸ್ತಾವಿತ ತಿದ್ದುಪಡಿಯಲ್ಲಿ, ಪದಾಧಿಕಾರಿಗಳಿಗೆ ಕಡ್ಡಾಯ ವಿರಾಮ ಸಮಯವನ್ನು ತೆಗೆದುಹಾಕಲು ಅನುಮೋದನೆಯನ್ನು ಕೋರಿದೆ. ಇದು ಆಯಾ ರಾಜ್ಯ ಕ್ರಿಕೆಟ್ ಸಂಸ್ಥೆಗಳಲ್ಲಿ ಆರು ವರ್ಷಗಳನ್ನು ಪೂರೈಸಿದ ನಂತರವೂ ಗಂಗೂಲಿ ಮತ್ತು ಷಾ ಅವರ ಸ್ಥಾನಗಳಲ್ಲಿ ಮುಂದುವರಿಯಲು ಅನುವು ಮಾಡಿಕೊಡುತ್ತದೆ. ಈ ಹಿಂದೆ ಗಂಗೂಲಿ ಬಂಗಾಳದ ಕ್ರಿಕೆಟ್ ಅಸೋಸಿಯೇಷನ್‌ನಲ್ಲಿ ಪದಾಧಿಕಾರಿಯಾಗಿದ್ದರೆ, ಶಾ ಗುಜರಾತ್ ಕ್ರಿಕೆಟ್ ಸಂಸ್ಥೆಯಲ್ಲಿ ಸೇವೆ ಸಲ್ಲಿಸಿದ್ದರು.