ICC ODI Ranking: ಏಕದಿನ ರ‍್ಯಾಂಕಿಂಗ್‌ನಲ್ಲಿ 93 ಸ್ಥಾನ ಮೇಲೇರಿದ ಗಿಲ್..! ಜಾರಿದ ಬುಮ್ರಾ
ICC ODI Ranking: ಹರಾರೆಯಲ್ಲಿ ಇತ್ತೀಚೆಗೆ ಮುಕ್ತಾಯಗೊಂಡ ಜಿಂಬಾಬ್ವೆ ವಿರುದ್ಧದ ಮೂರು ಪಂದ್ಯಗಳ ಸರಣಿಯಲ್ಲಿ ಅಮೋಘ ಪ್ರದರ್ಶನ ನೀಡಿದ ಗಿಲ್ 93 ಸ್ಥಾನಗಳ ಏರಿಕೆ ಕಂಡು 38ನೇ ಸ್ಥಾನಕ್ಕೆ ತಲುಪಿದ್ದಾರೆ.
ಐಸಿಸಿ (ICC) ಇತ್ತೀಚಿನ ಏಕದಿನ ರ‍್ಯಾಂಕಿಂಗ್ (ODI rankings) ಪಟ್ಟಿ ಬಿಡುಗಡೆ ಮಾಡಿದ್ದು, ಈ ಪಟ್ಟಿಯಲ್ಲಿ ಪಾಕಿಸ್ತಾನದ ನಾಯಕ ಬಾಬರ್ ಅಜಮ್ ಅಗ್ರಸ್ಥಾನದಲ್ಲಿ ಮುಂದುವರೆದಿದ್ದಾರೆ. ಮತ್ತೊಂದೆಡೆ, ಭಾರತದ ಯುವ ಸ್ಟಾರ್ ಶುಭಮನ್ ಗಿಲ್ (Shubman Gill) ತಮ್ಮ ವೃತ್ತಿಜೀವನದ ಅತ್ಯುತ್ತಮ ಶ್ರೇಯಾಂಕವನ್ನು ಸಾಧಿಸಿದ್ದಾರೆ. ಹರಾರೆಯಲ್ಲಿ ಇತ್ತೀಚೆಗೆ ಮುಕ್ತಾಯಗೊಂಡ ಜಿಂಬಾಬ್ವೆ ವಿರುದ್ಧದ ಮೂರು ಪಂದ್ಯಗಳ ಸರಣಿಯಲ್ಲಿ ಅಮೋಘ ಪ್ರದರ್ಶನ ನೀಡಿದ ಗಿಲ್ 93 ಸ್ಥಾನಗಳ ಏರಿಕೆ ಕಂಡು 38ನೇ ಸ್ಥಾನಕ್ಕೆ ತಲುಪಿದ್ದಾರೆ. ಬೌಲರ್‌ಗಳ ಬಗ್ಗೆ ಮಾತನಾಡುವುದಾದರೆ ಕಿವೀಸ್ ಬೌಲರ್ ಬೋಲ್ಟ್ ನಂ.1 ಸ್ಥಾನದಲ್ಲಿದ್ದರೆ, ಭಾರತದ ಸ್ಟಾರ್ ಬೌಲರ್ ಜಸ್ಪ್ರೀತ್ ಬುಮ್ರಾ (Jasprit Bumrah) ಎರಡು ಸ್ಥಾನ ಕುಸಿತ ಕಂಡಿದ್ದಾರೆ.
ಪಾಕಿಸ್ತಾನದ ನಾಯಕ ಬಾಬರ್ ಅಜಮ್ 890 ಅಂಕಗಳೊಂದಿಗೆ ಏಕದಿನ ಬ್ಯಾಟಿಂಗ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ಮುಂದುವರಿದಿದ್ದಾರೆ. ಭಾರತದ ವಿರಾಟ್ ಕೊಹ್ಲಿ ಮತ್ತು ಆಲ್ ಫಾರ್ಮ್ಯಾಟ್ ನಾಯಕ ರೋಹಿತ್ ಶರ್ಮಾ ಕ್ರಮವಾಗಿ ಐದು ಮತ್ತು ಆರನೇ ಸ್ಥಾನಗಳನ್ನು ಆಕ್ರಮಿಸಿಕೊಂಡಿದ್ದಾರೆ.
ಗಿಲ್ ಸ್ಪೋಟ
ಭಾರತದ ಯುವ ಸ್ಟಾರ್ ಶುಭ್‌ಮನ್ ಗಿಲ್ ರ‍್ಯಾಂಕಿಂಗ್‌ನಲ್ಲಿ ಅಬ್ಬರಿಸಿದ್ದು, ಗಿಲ್ 38ನೇ ಸ್ಥಾನಕ್ಕೆ ತಲುಪಿದ್ದಾರೆ. ಇದು ಅವರ ವೃತ್ತಿಜೀವನದ ಅತ್ಯುತ್ತಮ ಶ್ರೇಯಾಂಕವಾಗಿದೆ. ಇತ್ತೀಚೆಗಷ್ಟೇ ಮುಕ್ತಾಯಗೊಂಡ ಜಿಂಬಾಬ್ವೆ ವಿರುದ್ಧದ ಏಕದಿನ ಸರಣಿಯಲ್ಲಿ 130 ರನ್‌ಗಳ ಇನಿಂಗ್ಸ್ ಆಡಿದ್ದು, ಶ್ರೇಯಾಂಕದಲ್ಲಿ ಬಹುಮಾನ ಪಡೆದಿದ್ದಾರೆ. ಪಾಕಿಸ್ತಾನದ ನಾಯಕ ಬಾಬರ್ ಅಜಮ್ ಮೊದಲ ಸ್ಥಾನದಲ್ಲಿರಬಹುದು ಆದರೆ ಅಂಕಗಳ ವಿಷಯದಲ್ಲಿ ಹಿನ್ನಡೆ ಆರಂಭಿಸಿದ್ದಾರೆ. ಬಾಬರ್ ಎರಡು ರೇಟಿಂಗ್ ಅಂಕಗಳನ್ನು ಕಳೆದುಕೊಂಡಿದ್ದು, ಅವರ ನಂತರ ಎರಡನೇ ಸ್ಥಾನದಲ್ಲಿದ್ದ ಇಮಾಮ್ ಉಲ್ ಹಕ್ ನಾಲ್ಕನೇ ಸ್ಥಾನಕ್ಕೆ ಕುಸಿದಿದ್ದಾರೆ.
ಟಾಪ್ 5 ಬ್ಯಾಟರ್ಗಳ ಪಟ್ಟಿ
1) ಬಾಬರ್ ಅಜಮ್ (ಪಾಕಿಸ್ತಾನ) 2) ರಾಸಿ ವ್ಯಾನ್ ಡೆರ್ ದುಸೇನ್ (ದಕ್ಷಿಣ ಆಫ್ರಿಕಾ) 3) ಕ್ವಿಂಟನ್ ಡಿ ಕಾಕ್ (ದಕ್ಷಿಣ ಆಫ್ರಿಕಾ) 4) ಇಮಾಮ್-ಉಲ್-ಹಕ್ (ಪಾಕಿಸ್ತಾನ) 5) ವಿರಾಟ್ ಕೊಹ್ಲಿ (ಭಾರತ)
ಅಗ್ರ ಐದು ಬೌಲರ್‌ಗಳು ನ್ಯೂಜಿಲೆಂಡ್‌ನ ಟ್ರೆಂಟ್ ಬೌಲ್ಟ್ ಮೊದಲ ಸ್ಥಾನದಲ್ಲಿದ್ದು, ಎರಡನೇ ಸ್ಥಾನದಲ್ಲಿದ್ದ ಜಸ್ಪ್ರೀತ್ ಬುಮ್ರಾ ನಾಲ್ಕನೇ ಸ್ಥಾನಕ್ಕೆ ಕುಸಿದಿದ್ದಾರೆ. ಎರಡನೇ ಸ್ಥಾನಕ್ಕೆ ಈಗ ಆಸ್ಟ್ರೇಲಿಯಾದ ಜೋಶ್ ಹ್ಯಾಜಲ್‌ವುಡ್ ಎಂಟ್ರಿಕೊಟ್ಟಿದ್ದಾರೆ. ಮೂರನೇ ಸ್ಥಾನದಲ್ಲಿ ಅಫ್ಘಾನಿಸ್ತಾನದ ಮುಜೀಬ್ ಉರ್ ರೆಹಮಾನ್ ಇದ್ದಾರೆ.
1) ಟ್ರೆಂಟ್ ಬೌಲ್ಟ್ (ನ್ಯೂಜಿಲೆಂಡ್) 2) ಜೋಶ್ ಹ್ಯಾಜಲ್‌ವುಡ್ (ಆಸ್ಟ್ರೇಲಿಯಾ) 3) ಮುಜೀಬ್ ಉರ್ ರೆಹಮಾನ್ 4) ಜಸ್ಪ್ರೀತ್ ಬುಮ್ರಾ (ಭಾರತ) 5) ಶಾಹೀನ್ ಅಫ್ರಿದಿ (ಪಾಕಿಸ್ತಾನ)
Published On - 3:59 pm, Wed, 24 August 22