ಟೀಮ್ ಇಂಡಿಯಾದ ಮಾಜಿ ಮುಖ್ಯ ಕೋಚ್ ರವಿಶಾಸ್ತ್ರಿ ಅವರ ಅವಧಿಯಲ್ಲಿ ಟೀಮ್ ಇಂಡಿಯಾ ಸಾಕಷ್ಟು ಯಶಸ್ಸನ್ನು ಸಾಧಿಸಿದೆ. ಅವರು ತಂಡದ ವರ್ತನೆ ಮತ್ತು ಶೈಲಿ ಎರಡನ್ನೂ ಸಹ ಬದಲಾಯಿಸಿದರು. ಈಗ ತಂಡದ ಕೋಚಿಂಗ್ ರಾಹುಲ್ ದ್ರಾವಿಡ್ ಕೈಯಲ್ಲಿದೆ. ಆದರೆ ಈ ಮಧ್ಯೆ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ದಿನೇಶ್ ಕಾರ್ತಿಕ್ ಅವರು ದ್ರಾವಿಡ್ ಕೋಚಿಂಗ್ನಲ್ಲಿ ನಾನು ಹೆಚ್ಚು ನಿರಾಳವಾಗಿದ್ದೇನೆ ಎಂದು ಹೇಳಿಕೊಂಡಿದಲ್ಲದೆ, ಮಾಜಿ ಕೋಚ್ ರವಿಶಾಸ್ತ್ರಿ ಬಗ್ಗೆ ಸ್ಫೋಟಕ ವಿಚಾರವನ್ನು ಹೊರ ಹಾಕಿದ್ದಾರೆ.
ಮುಖ್ಯ ಕೋಚ್ ರವಿಶಾಸ್ತ್ರಿ ಅವರು ವಿಶೇಷ ಸ್ಥಾನಮಾನ ಸಾಧಿಸಲು ಆಟಗಾರರನ್ನು ಪ್ರೇರೇಪಿಸುತ್ತಿದ್ದರು. ಆದರೆ ಅವರಿಗೆ ವೈಫಲ್ಯವನ್ನು ಸಹಿಸಲಾಗುತ್ತಿರಲಿಲ್ಲ ಎಂದು ದಿನೇಶ್ ಕಾರ್ತಿಕ್ ಹೇಳಿದ್ದಾರೆ. ಶಾಸ್ತ್ರಿ ಮತ್ತು ಕೊಹ್ಲಿ ಭಾರತೀಯ ಕ್ರಿಕೆಟನ್ನು ಬೇರೆ ಹಂತಕ್ಕೆ ಕೊಂಡೊಯ್ದರು. ಆದರೆ ಈ ಇಬ್ಬರು ಕಳಪೆ ಫಾರ್ಮ್ನಿಂದ ಬಳಲುತ್ತಿದ ಆಟಗಾರರ ಪರವಾಗಿ ನಿಲ್ಲಲಿಲ್ಲ ಎಂದು ಕಾರ್ತಿಕ್ ಟೀಕಿಸಿದ್ದಾರೆ.
ಒಂದೇ ಲಯದಲ್ಲಿ ಬ್ಯಾಟಿಂಗ್ ಮಾಡಲು ಸಾಧ್ಯವಾಗದ ಆಟಗಾರರನ್ನು ಶಾಸ್ತ್ರಿ ಇಷ್ಟಪಡುವುದಿಲ್ಲ ಎಂದು ಕಾರ್ತಿಕ್ ಕ್ರಿಕ್‌ಬಜ್ ಕಾರ್ಯಕ್ರಮದಲ್ಲಿ ಹೇಳಿಕೊಂಡಿದ್ದಾರೆ. ನೆಟ್ಸ್‌ನಲ್ಲಿ ಬೇರೇನೋ, ಮ್ಯಾಚ್‌ನಲ್ಲಿ ಇನ್ನೇನೋ ಮಾಡುವ ಕ್ರಿಕೆಟಿಗರನ್ನು ಶಾಸ್ತ್ರಿ ಇಷ್ಟಪಡುತ್ತಿರಲಿಲ್ಲ ಎಂದು ಕಾರ್ತಿಕ್ ದೂರಿದ್ದಾರೆ.
ದಿನೇಶ್ ಕಾರ್ತಿಕ್, ಶಾಸ್ತ್ರಿ ಅವರಿಗೆ ತಂಡಕ್ಕೆ ಏನು ಬೇಕು ಮತ್ತು ತಂಡವನ್ನು ಹೇಗೆ ಆಡಿಸಬೇಕೆಂದು ತಿಳಿದಿತ್ತು. ಆದರೆ ಅವರಿಗೆ ವೈಫಲ್ಯವನ್ನು ಸಹಿಸಲಾಗುತ್ತಿರಲಿಲ್ಲ. ಅವರು ಯಾವಾಗಲೂ ಚೆನ್ನಾಗಿ ಆಡುವಂತೆ ಎಲ್ಲರಿಗೂ ಸ್ಫೂರ್ತಿ ನೀಡುತ್ತಿದ್ದರು. ಪ್ರಸ್ತುತ ನಾಯಕ ರೋಹಿತ್ ಶರ್ಮಾ ಮತ್ತು ಮುಖ್ಯ ಕೋಚ್ ದ್ರಾವಿಡ್ ಅವರ ಅಡಿಯಲ್ಲಿ ನಾನು ಹೆಚ್ಚು ನಿರಾಳವಾಗಿದ್ದೇನೆ ಎಂದು ದಿನೇಶ್ ಕಾರ್ತಿಕ್ ಹೇಳಿದ್ದಾರೆ.
ಪ್ರಸ್ತುತ ತಂಡದಲ್ಲಿರುವ ದಿನೇಶ್ ಕಾರ್ತಿಕ್ ಏಷ್ಯಾಕಪ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಮೂರನೇ ಆಟಗಾರರಾಗಿದ್ದಾರೆ. ಕಾರ್ತಿಕ್ ಏಷ್ಯಾಕಪ್‌ನಲ್ಲಿ ಆಡಿದ 12 ಪಂದ್ಯಗಳಲ್ಲಿ 43 ಕ್ಕಿಂತ ಹೆಚ್ಚು ಸರಾಸರಿಯಲ್ಲಿ 302 ರನ್ ಗಳಿಸಿದ್ದಾರೆ. ಇದರಲ್ಲಿ ಅರ್ಧಶತಕವೂ ಸೇರಿದೆ.
Published On - 9:11 pm, Wed, 17 August 22