ಮೆಲ್ಬೋರ್ನ್ನ ಎಂಸಿಜಿ ಮೈದಾನದಲ್ಲಿ ನಡೆದ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ 4ನೇ ಪಂದ್ಯದಲ್ಲಿ ಭಾರತದ ವಿರುದ್ಧ ಆಸ್ಟ್ರೇಲಿಯಾ ತಂಡ ಭರ್ಜರಿ ಗೆಲುವು ದಾಖಲಿಸಿದೆ. ಈ ಜಯದೊಂದಿಗೆ 5 ಪಂದ್ಯಗಳ ಸರಣಿಯಲ್ಲಿ ಆಸ್ಟ್ರೇಲಿಯಾ 2-1 ಅಂತರದಿಂದ ಮುನ್ನಡೆ ಸಾಧಿಸಿದೆ. ಇದಕ್ಕೂ ಮುನ್ನ ಈ ಮ್ಯಾಚ್ನಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ತಂಡದ ನಾಯಕ ಪ್ಯಾಟ್ ಕಮಿನ್ಸ್ ಬ್ಯಾಟಿಂಗ್ ಆಯ್ದುಕೊಂಡಿದ್ದರು.
ಅದರಂತೆ ಇನಿಂಗ್ಸ್ ಆರಂಭಿಸಿದ ಆಸ್ಟ್ರೇಲಿಯಾ ಪರ ಸ್ಯಾಮ್ ಕೊನ್ಸ್ಟಾಸ್ (60), ಉಸ್ಮಾನ್ ಖ್ವಾಜಾ (57), ಮಾರ್ನಸ್ ಲಾಬುಶೇನ್ (72) ಅರ್ಧಶತಕ ಬಾರಿಸಿದರು. ಇನ್ನು 4ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಸ್ಟೀವ್ ಸ್ಮಿತ್ (140) ಭರ್ಜರಿ ಶತಕ ಸಿಡಿಸಿದರು. ಈ ಶತಕದ ನೆರವಿನಿಂದ ಆಸ್ಟ್ರೇಲಿಯಾ ತಂಡವು ಮೊದಲ ಇನಿಂಗ್ಸ್ನಲ್ಲಿ 474 ರನ್ ಕಲೆಹಾಕಿತು. ಟೀಮ್ ಇಂಡಿಯಾ ಪರ ಬುಮ್ರಾ 4 ವಿಕೆಟ್ ಪಡೆದರೆ, ಜಡೇಜಾ 3 ವಿಕೆಟ್ ಕಬಳಿಸಿದರು.
ಇದರ ಬೆನ್ನಲ್ಲೇ ಮೊದಲ ಇನಿಂಗ್ಸ್ ಶುರು ಮಾಡಿದ ಟೀಮ್ ಇಂಡಿಯಾ ಉತ್ತಮ ಆರಂಭ ಪಡೆದಿರಲಿಲ್ಲ. ಇದಾಗ್ಯೂ 8ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ನಿತೀಶ್ ಕುಮಾರ್ ರೆಡ್ಡಿ ಹಾಗೂ ವಾಷಿಂಗ್ಟನ್ ಸುಂದರ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದರು. ಈ ಮೂಲಕ ಶತಕದ ಜೊತೆಯಾಟದೊಂದಿಗೆ ತಂಡದ ಮೊತ್ತವನ್ನು 300ರ ಗಡಿದಾಟಿಸಿದರು. ಅಂತಿಮವಾಗಿ 114 ರನ್ ಬಾರಿಸಿ ಮಿಂಚಿದ ನಿತೀಶ್ ಕುಮಾರ್ ರೆಡ್ಡಿ ಔಟಾಗುವುದರೊಂದಿಗೆ 369 ರನ್ಗಳಿಗೆ ಟೀಮ್ ಇಂಡಿಯಾ ಪ್ರಥಮ ಇನಿಂಗ್ಸ್ ಅಂತ್ಯಗೊಳಿಸಿತು. ಆಸ್ಟ್ರೇಲಿಯಾ ಪರ ಕಮಿನ್ಸ್, ಬೋಲ್ಯಾಂಡ್ ಹಾಗೂ ನಾಥನ್ ಲಿಯಾನ್ ತಲಾ 3 ವಿಕೆಟ್ ಪಡೆದರು.
ಪ್ರಥಮ ಇನಿಂಗ್ಸ್ನಲ್ಲಿ 105 ರನ್ಗಳ ಮುನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್ ಆರಂಭಿಸಿದ ಆಸ್ಟ್ರೇಲಿಯಾ ತಂಡದ ಪರ ಮಾರ್ನಸ್ ಲಾಬುಶೇನ್ (70) ಅರ್ಧಶತಕ ಬಾರಿಸಿದರು. ಮತ್ತೊಂದೆಡೆ ಕರಾರುವಾಕ್ ದಾಳಿ ಸಂಘಟಿಸಿದ ಜಸ್ಪ್ರೀತ್ ಬುಮ್ರಾ 5 ವಿಕೆಟ್ ಕಬಳಿಸಿದರು. ಬುಮ್ರಾಗೆ ಉತ್ತಮ ಸಾಥ್ ನೀಡಿದ ಮೊಹಮ್ಮದ್ ಸಿರಾಜ್ 3 ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು. ಪರಿಣಾಮ ಆಸ್ಟ್ರೇಲಿಯಾ ತಂಡವು ದ್ವಿತೀಯ ಇನಿಂಗ್ಸ್ನಲ್ಲಿ 234 ರನ್ಗಳಿಗೆ ಆಲೌಟ್ ಆಯಿತು.
ಮೊದಲ ಇನಿಂಗ್ಸ್ನಲ್ಲಿನ 105 ರನ್ಗಳ ಹಿನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್ ಆರಂಭಿಸಿದ ಟೀಮ್ ಇಂಡಿಯಾ ಪರ ಯಶಸ್ವಿ ಜೈಸ್ವಾಲ್ 84 ರನ್ಗಳಿಸಿದ್ದು ಬಿಟ್ಟರೆ, ಉಳಿದ ಬ್ಯಾಟರ್ಗಳಿಂದ ನಿರೀಕ್ಷಿತ ಪ್ರದರ್ಶನ ಮೂಡಿಬಂದಿರಲಿಲ್ಲ. ಪರಿಣಾಮ ಭಾರತ ತಂಡವು ದ್ವಿತೀಯ ಇನೀಂಗ್ಸ್ನಲ್ಲಿ ಕೇವಲ 155 ರನ್ಗಳಿಗೆ ಆಲೌಟ್ ಆಗಿದೆ. ಈ ಮೂಲಕ ಆಸ್ಟ್ರೇಲಿಯಾ ತಂಡ 184 ರನ್ಗಳ ಅಮೋಘ ಗೆಲುವು ಸಾಧಿಸಿ ಸರಣಿಯಲ್ಲಿ 2-1 ಅಂತರದಿಂದ ಮುನ್ನಡೆ ಸಾಧಿಸಿದೆ.
ಆಸ್ಟ್ರೇಲಿಯಾ ಪ್ಲೇಯಿಂಗ್ 11: ಉಸ್ಮಾನ್ ಖ್ವಾಜಾ , ಸ್ಯಾಮ್ ಕೊನ್ಸ್ಟಾಸ್ , ಮಾರ್ನಸ್ ಲಾಬುಶೇನ್, ಸ್ಟೀವ್ ಸ್ಮಿತ್ , ಟ್ರಾವಿಸ್ ಹೆಡ್ , ಮಿಚೆಲ್ ಮಾರ್ಷ್ , ಅಲೆಕ್ಸ್ ಕ್ಯಾರಿ (ವಿಕೆಟ್ ಕೀಪರ್) , ಪ್ಯಾಟ್ ಕಮ್ಮಿನ್ಸ್ (ನಾಯಕ) , ಮಿಚೆಲ್ ಸ್ಟಾರ್ಕ್ , ನಾಥನ್ ಲಿಯಾನ್ , ಸ್ಕಾಟ್ ಬೋಲ್ಯಾಂಡ್.
ಇದನ್ನೂ ಓದಿ: ಛೇ ಇದೆಂತಾ ನೀಚತನ… ವಿರಾಟ್ ಕೊಹ್ಲಿ ತಂದೆ ವಿಷಯದಲ್ಲಿ ಕ್ಷುದ್ರತೆ ಮೆರೆದ ಆಸ್ಟ್ರೇಲಿಯಾ ಪತ್ರಿಕೆ..!
ಭಾರತ ಪ್ಲೇಯಿಂಗ್ 11: ಯಶಸ್ವಿ ಜೈಸ್ವಾಲ್ , ಕೆಎಲ್ ರಾಹುಲ್ , ರೋಹಿತ್ ಶರ್ಮಾ (ನಾಯಕ) , ವಿರಾಟ್ ಕೊಹ್ಲಿ , ರಿಷಬ್ ಪಂತ್ (ವಿಕೆಟ್ ಕೀಪರ್) , ರವೀಂದ್ರ ಜಡೇಜಾ , ನಿತೀಶ್ ಕುಮಾರ್ ರೆಡ್ಡಿ , ವಾಷಿಂಗ್ಟನ್ ಸುಂದರ್ , ಜಸ್ಪ್ರೀತ್ ಬುಮ್ರಾ , ಮೊಹಮ್ಮದ್ ಸಿರಾಜ್ , ಆಕಾಶ್ ದೀಪ್.
Published On - 11:54 am, Mon, 30 December 24