ಮಿಚೆಲ್ ಸ್ಟಾರ್ಕ್ – ಯಶಸ್ವಿ ಜೈಸ್ವಾಲ್ ನಡುವೆ ಬೇಲ್ಸ್ ಬದಲಾಟ
Australia vs India, 4th Test: ಆಸ್ಟ್ರೇಲಿಯಾ ವಿರುದ್ಧದ 4ನೇ ಟೆಸ್ಟ್ ಪಂದ್ಯವನ್ನು ಗೆಲ್ಲಲು ಟೀಮ್ ಇಂಡಿಯಾ ಕೊನೆಯ ದಿನದಾಟದಲ್ಲಿ 340 ರನ್ ಕಲೆಹಾಕಬೇಕಿದೆ. 5ನೇ ದಿನದಾಟದ ಟೀ ವಿರಾಮದ ವೇಳೆಗೆ ಟೀಮ್ ಇಂಡಿಯಾ 3 ವಿಕೆಟ್ ಕಳೆದುಕೊಂಡು 112 ರನ್ ಕಲೆಹಾಕಿದ್ದು, ಈ ಪಂದ್ಯವನ್ನು ಗೆಲ್ಲಲು ಭಾರತ ತಂಡ ಇನ್ನು 38 ಓವರ್ಗಳಲ್ಲಿ 228 ರನ್ ಗಳಿಸಬೇಕಿದೆ.
ಮೆಲ್ಬೋರ್ನ್ನಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ-ಭಾರತ ನಡುವಣ 4ನೇ ಟೆಸ್ಟ್ ಪಂದ್ಯದಲ್ಲೂ ಬೇಲ್ಸ್ ಬದಲಾಟ ಮುಂದುವರೆದಿದೆ. ಈ ಪಂದ್ಯದ ದ್ವಿತೀಯ ಇನಿಂಗ್ಸ್ನಲ್ಲಿ 340 ರನ್ಗಳ ಗುರಿ ಪಡೆದ ಟೀಮ್ ಇಂಡಿಯಾ 33 ರನ್ಗಳಿಗೆ 3 ವಿಕೆಟ್ ಕಳೆದುಕೊಂಡಿತು. ಈ ಹಂತದಲ್ಲಿ ಜೊತೆಯಾದ ಯಶಸ್ವಿ ಜೈಸ್ವಾಲ್ ಹಾಗೂ ರಿಷಭ್ ಪಂತ್ ಅರ್ಧಶತಕದ ಜೊತೆಯಾಟವಾಡಿದರು. ಇತ್ತ ಟೀಮ್ ಇಂಡಿಯಾ ಬ್ಯಾಟರ್ಗಳು ಉತ್ತಮ ಜೊತೆಯಾಟ ಮುಂದುವರೆಸುತ್ತಿದ್ದಂತೆ ಆಸ್ಟ್ರೇಲಿಯಾ ವೇಗಿ ಮಿಚೆಲ್ ಸ್ಟಾರ್ಕ್ ಬೇಲ್ಸ್ ಟ್ರಿಕ್ ಮೊರೆ ಹೋದರು.
ಇನಿಂಗ್ಸ್ನ 33ನೇ ಓವರ್ನ 3ನೇ ಎಸೆತಕ್ಕೂ ಮುನ್ನ ಮಿಚೆಲ್ ಸ್ಟಾರ್ಕ್ ಬೇಲ್ಸ್ ಅನ್ನು ಅದಲು ಬದಲು ಮಾಡಿಟ್ಟರು. ಇದನ್ನು ಗಮನಿಸಿದ ನಾನ್ ಸ್ಟ್ರೈಕ್ನಲ್ಲಿದ್ದ ಯಶಸ್ವಿ ಜೈಸ್ವಾಲ್ ತಕ್ಷಣವೇ ಬೇಲ್ಸ್ ಅನ್ನು ಮೊದಲಿನಂತೆ ಇಟ್ಟರು. ಈ ಮೂಲಕ ಬೇಲ್ಸ್ ಟ್ರಿಕ್ಗೆ ಬ್ರೇಕ್ ಹಾಕಿದರು.
ಬೇಲ್ಸ್ ಬದಲಿಸುವುದು ಏಕೆ?
ಟೆಸ್ಟ್ ಕ್ರಿಕೆಟ್ನಲ್ಲಿ ಬೇಲ್ಸ್ ಟ್ರಿಕ್ ಪರಿಚಯಿಸಿದ್ದು ಇಂಗ್ಲೆಂಡ್ ತಂಡದ ಮಾಜಿ ವೇಗಿ ಸ್ಟುವರ್ಟ್ ಬ್ರಾಡ್. ಎದುರಾಳಿ ತಂಡದ ವಿಕೆಟ್ ಬೀಳದಿದ್ದಾಗ ಬ್ರಾಡ್ ಬೇಲ್ಸ್ ಅನ್ನು ಅದಲು ಬದಲು ಮಾಡಿ ಬೌಲಿಂಗ್ ಮಾಡುತ್ತಿದ್ದರು.
ವಿಶೇಷ ಎಂದರೆ ಇಂತಹದೊಂದು ಟ್ರಿಕ್ ಬಳಸಿದ ಬಳಿಕ ಬ್ರಾಡ್ ಹಲವು ಬಾರಿ ವಿಕೆಟ್ ಪಡೆದಿದ್ದರು. ಇದನ್ನೇ ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಮೊಹಮ್ಮದ್ ಸಿರಾಜ್ ಪ್ರಯೋಗಿಸಿದ್ದರು. ಇದೇ ವೇಳೆ ಮಾರ್ನಸ್ ಲಾಬುಶೇನ್ ಔಟಾಗಿದ್ದರು.
ಇದೀಗ ಟೀಮ್ ಇಂಡಿಯಾ ಬ್ಯಾಟರ್ಗಳ ವಿಕೆಟ್ ಪಡೆಯಲು ಮಿಚೆಲ್ ಸ್ಟಾರ್ಕ್ ಬೇಲ್ಸ್ ಟ್ರಿಕ್ ಮೊರೆ ಹೋಗಿದ್ದು, ತಕ್ಷಣವೇ ಯಶಸ್ವಿ ಜೈಸ್ವಾಲ್ ಬೇಲ್ಸ್ ಅನ್ನು ಮೊದಲಿನಂತೆ ಇಟ್ಟಿದ್ದಾರೆ. ಈ ಬೇಲ್ಸ್ ಬದಲಾಟದ ವಿಡಿಯೋ ಇದೀಗ ವೈರಲ್ ಆಗಿದೆ.