ಯಶಸ್ವಿ ಜೈಸ್ವಾಲ್ ಔಟಾ ಅಥವಾ ನಾಟೌಟಾ? ವಿವಾದಕ್ಕೆ ಕಾರಣವಾದ ಅಂಪೈರ್ ತೀರ್ಪು..!
India vs Australia: ಮೆಲ್ಬೋರ್ನ್ನ ಎಂಸಿಜಿ ಮೈದಾನದಲ್ಲಿ ನಡೆದ ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ 4ನೇ ಪಂದ್ಯವು ಹಲವು ಕಾರಣಗಳಿಂದ ಗಮನ ಸೆಳೆದಿದೆ. ಅದರಲ್ಲೂ ಈ ಪಂದ್ಯದ ಕೊನೆಯ ದಿನದಾಟದಲ್ಲಿ ಮೂರನೇ ಅಂಪೈರ್ ನೀಡಿರುವ ತೀರ್ಪು ಇದೀಗ ವಿವಾದಕ್ಕೀಡಾಗಿದ್ದು, ಇದರ ಬಗ್ಗೆ ಪರ-ವಿರೋಧ ಚರ್ಚೆಗಳು ಶುರುವಾಗಿದೆ.
ಮೆಲ್ಬೋರ್ನ್ನಲ್ಲಿ ನಡೆದ ಆಸ್ಟ್ರೇಲಿಯಾ-ಭಾರತ ನಡುವಣ 4ನೇ ಟೆಸ್ಟ್ ಪಂದ್ಯದಲ್ಲಿ ಮೂರನೇ ಅಂಪೈರ್ ನೀಡಿದ ತೀರ್ಪುವೊಂದು ವಿವಾದಕ್ಕೀಡಾಗಿದೆ. ಈ ಪಂದ್ಯದ ದ್ವಿತೀಯ ಇನಿಂಗ್ಸ್ನಲ್ಲಿ 71ನೇ ಓವರ್ನಲ್ಲಿ ಯಶಸ್ವಿ ಜೈಸ್ವಾಲ್ ಅವರ ಔಟ್ಗಾಗಿ ಆಸ್ಟ್ರೇಲಿಯಾ ಫೀಲ್ಡರ್ಗಳು ಮನವಿ ಮಾಡಿದ್ದರು.
ಪ್ಯಾಟ್ ಕಮಿನ್ಸ್ ಎಸೆದ ಈ ಓವರ್ನ 5ನೇ ಎಸೆತದಲ್ಲಿ ಜೈಸ್ವಾಲ್ ಭರ್ಜರಿ ಹೊಡೆತಕ್ಕೆ ಮುಂದಾಗಿದ್ದರು. ಆದರೆ ಚೆಂಡು ಬ್ಯಾಟ್ ಬಳಿಯಿಂದ ಸಾಗಿ ವಿಕೆಟ್ ಕೀಪರ್ ಕೈ ಸೇರಿದೆ. ಇದರ ಬೆನ್ನಲ್ಲೇ ವಿಕೆಟ್ ಕೀಪರ್ ಅಲೆಕ್ಸ್ ಕ್ಯಾರಿ ಸೇರಿದಂತೆ ಎಲ್ಲರೂ ಕ್ಯಾಚ್ಗಾಗಿ ಮನವಿ ಮಾಡಿದ್ದಾರೆ.
ಆದರೆ ಫೀಲ್ಡ್ ಅಂಪೈರ್ ನಾಟೌಟ್ ಎಂದಿದ್ದಾರೆ. ಇದರ ಬೆನ್ನಲ್ಲೇ ಆಸ್ಟ್ರೇಲಿಯಾ ನಾಯಕ ಪ್ಯಾಟ್ ಕಮಿನ್ಸ್ ಡಿಆರ್ಎಸ್ ಮೊರೆ ಹೋದರು. ಮೂರನೇ ಅಂಪೈರ್ ಪರಿಶೀಲನೆ ವೇಳೆ ಚೆಂಡು ಬ್ಯಾಟ್ ಬಳಿಯಿಂದ ಸಾಗುತ್ತಿರುವುದು ಕಂಡು ಬಂದರೂ, ಸ್ನೀಕೊ ಮೀಟರ್ನಲ್ಲಿ ಯಾವುದೇ ಸ್ಪೈಕ್ ಕಾಣಿಸಿರಲಿಲ್ಲ.
ಆದರೆ ಚೆಂಡಿನ ಚಲನೆಯನ್ನು ಹಲವು ಬಾರಿ ಪರಿಶೀಲಿಸಿದ ಬಳಿಕ ಮೂರನೇ ಅಂಪೈರ್ ಔಟ್ ನೀಡಿದ್ದಾರೆ. ಚೆಂಡು ಬ್ಯಾಟ್ ಅನ್ನು ಸವರಿ ತನ್ನ ಚಲನೆ ಬದಲಿಸಿರುವ ಸಾಧ್ಯತೆಯನ್ನು ಪರಿಗಣಿಸಿ ಮೂರನೇ ಅಂಪೈರ್ ಔಟ್ ಎಂದು ತೀರ್ಪು ನೀಡಿದರು.
ಆದರೆ ಸ್ನೀಕೊ ಮೀಟರ್ನಲ್ಲಿ ಯಾವುದೇ ಏರಿಳಿತ ಕಂಡು ಬರದ ಕಾರಣ ಅಂಪೈರ್ ತೀರ್ಪಿಗೆ ಯಶಸ್ವಿ ಜೈಸ್ವಾಲ್ ಅಸಮಾಧಾನ ಹೊರಹಾಕಿದರು. ಇದಾಗ್ಯೂ ಅವರನ್ನು ಪೆವಿಲಿಯನ್ ಕಡೆ ಹೋಗುವಂತೆ ಫೀಲ್ಡ್ ಅಂಪೈರ್ ಮನವೊಲಿಸಲು ಯಶಸ್ವಿಯಾದರು.
ಇದೀಗ ಮೂರನೇ ಅಂಪೈರ್ ನೀಡಿದ ತೀರ್ಪಿನ ಬಗ್ಗೆ ಪರ-ವಿರೋಧ ಚರ್ಚೆಗಳು ಶುರುವಾಗಿದ್ದು, ಈ ಮೇಲಿನ ವಿಡಿಯೋ ನೋಡಿ ಯಶಸ್ವಿ ಜೈಸ್ವಾಲ್ ಔಟಾ ಅಥವಾ ನಾಟೌಟಾ ಎಂಬುದನ್ನು ನೀವೇ ನಿರ್ಧರಿಸಿ.