ಮೆಲ್ಬೋರ್ನ್ನ ಎಂಸಿಜಿ ಮೈದಾನದಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ವಿರುದ್ಧದ 4ನೇ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಇನ್ನೂ 222 ರನ್ಗಳನ್ನು ಕಲೆಹಾಕಬೇಕಿದೆ. ದ್ವಿತೀಯ ಇನಿಂಗ್ಸ್ನಲ್ಲಿ 340 ರನ್ಗಳ ಗುರಿ ಪಡೆದಿರುವ ಟೀಮ್ ಇಂಡಿಯಾ ಟೀ ವಿರಾಮದ ವೇಳೆಗೆ 3 ವಿಕೆಟ್ ಕಳೆದುಕೊಂಡು 112 ರನ್ ಕಲೆಹಾಕಿದೆ.
ಇನ್ನು ಕೊನೆಯ ದಿನದಾಟದಲ್ಲಿ 38 ಓವರ್ಗಳು ಬಾಕಿಯಿದ್ದು, ಅದರೊಳಗೆ ಟೀಮ್ ಇಂಡಿಯಾ 228 ರನ್ಗಳನ್ನು ಕಲೆಹಾಕಿದರೆ 4ನೇ ಟೆಸ್ಟ್ ಪಂದ್ಯವನ್ನು ಗೆಲ್ಲಬಹುದು. ಅಂದರೆ ಈ ಪಂದ್ಯವನ್ನು ಗೆಲ್ಲಬೇಕಿದ್ದರೆ ಟೀಮ್ ಇಂಡಿಯಾ ಬ್ಯಾಟರ್ಗಳು ಇನ್ನು ಪ್ರತಿ ಓವರ್ಗೆ 6 ರ ಸರಾಸರಿಯಲ್ಲಿ ರನ್ಗಳಿಸಬೇಕು.
ಸದ್ಯ ಕ್ರೀಸ್ನಲ್ಲಿ ಅರ್ಧಶತಕ ಬಾರಿಸಿರುವ ಯಶಸ್ವಿ ಜೈಸ್ವಾಲ್ (63) ಹಾಗೂ ರಿಷಭ್ ಪಂತ್ (28) ಬ್ಯಾಟಿಂಗ್ ಮಾಡುತ್ತಿದ್ದು, ಈ ಇಬ್ಬರು ಚಹಾ ವಿರಾಮದ ಬಳಿಕ ಸ್ಪೋಟಕ ಬ್ಯಾಟಿಂಗ್ ಮುಂದುವರೆಸಿದರೆ ಪಂದ್ಯವನ್ನು ಗೆಲ್ಲುವ ಅವಕಾಶ ಟೀಮ್ ಇಂಡಿಯಾ ಮುಂದಿದೆ. ಇನ್ನು ಗೆಲ್ಲಲು ಸಾಧ್ಯವಾಗದಿದ್ದರೆ ಭಾರತ ತಂಡವು ಪಂದ್ಯವನ್ನು ಡ್ರಾ ಮಾಡಿಕೊಡಿಕೊಳ್ಳಲು ಪ್ರಯತ್ನಿಸಲಿದೆ.
ಇದಕ್ಕೂ ಮುನ್ನ ಈ ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ತಂಡದ ನಾಯಕ ಪ್ಯಾಟ್ ಕಮಿನ್ಸ್ ಬ್ಯಾಟಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ತಂಡವು ಸ್ಟೀವ್ ಸ್ಮಿತ್ (140) ಅವರ ಭರ್ಜರಿ ಶತಕದ ನೆರವಿನಿಂದ ಮೊದಲ ಇನಿಂಗ್ಸ್ನಲ್ಲಿ 474 ರನ್ ಕಲೆಹಾಕಿತು.
ಇದಕ್ಕುತ್ತರವಾಗಿ ಪ್ರಥಮ ಇನಿಂಗ್ಸ್ ಆರಂಭಿಸಿದ ಟೀಮ್ ಇಂಡಿಯಾ ಪರ ವಾಷಿಂಗ್ಟನ್ ಸುಂದರ್ (50) ಅರ್ಧಶತಕ ಬಾರಿಸಿದರೆ, ಯುವ ದಾಂಡಿಗ ನಿತೀಶ್ ಕುಮಾರ್ ರೆಡ್ಡಿ (114) ಭರ್ಜರಿ ಶತಕ ಸಿಡಿಸಿದರು. ಈ ಮೂಲಕ ಟೀಮ್ ಇಂಡಿಯಾ ಮೊದಲ ಇನಿಂಗ್ಸ್ನಲ್ಲಿ 369 ರನ್ ಕಲೆಹಾಕಿತು.
ಮೊದಲ ಇನಿಂಗ್ಸ್ನಲ್ಲಿನ 105 ರನ್ಗಳ ಮುನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್ ಆರಂಭಿಸಿದ ಆಸ್ಟ್ರೇಲಿಯಾ ತಂಡವು 234 ರನ್ಗಳಿಗೆ ಆಲೌಟ್ ಆಗಿದೆ. ಇದೀಗ ಮೊದಲ ಇನಿಂಗ್ಸ್ ಹಿನ್ನಡೆಯೊಂದಿಗೆ ಟೀಮ್ ಇಂಡಿಯಾ ಕೊನೆಯ ದಿನದಾಟದಲ್ಲಿ 340 ರನ್ಗಳ ಗುರಿ ಪಡೆದಿದ್ದು, ಈ ಗುರಿ ಬೆನ್ನತ್ತಿದರೆ ಹೊಸ ಇತಿಹಾಸ ನಿರ್ಮಾಣವಾಗಲಿದೆ.
Published On - 9:46 am, Mon, 30 December 24