ರಿಷಭ್ ಪಂತ್ನ ಔಟ್ ಮಾಡಿದ ಬಳಿಕ ಅಶ್ಲೀಲವಾಗಿ ಸಂಭ್ರಮಿಸಿದ್ರಾ ಟ್ರಾವಿಸ್ ಹೆಡ್
India vs Australia: ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ 4ನೇ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವು 184 ರನ್ಗಳ ಅಮೋಘ ಗೆಲುವು ದಾಖಲಿಸಿದೆ. ಇದಕ್ಕೂ ಮುನ್ನ ಈ ಸರಣಿಯ ಮೊದಲ ಮ್ಯಾಚ್ನಲ್ಲಿ ಟೀಮ್ ಇಂಡಿಯಾ 295 ರನ್ಗಳ ಜಯ ಸಾಧಿಸಿತ್ತು. ಇದಾದ ಬಳಿಕ ದ್ವಿತೀಯ ಪಂದ್ಯದಲ್ಲಿ ಆಸ್ಟ್ರೇಲಿಯಾ 10 ವಿಕೆಟ್ಗಳ ವಿಜಯ ದಾಖಲಿಸಿತು. ಇನ್ನು ಮೂರನೇ ಪಂದ್ಯ ಡ್ರಾನಲ್ಲಿ ಕೊನೆಗೊಂಡರೆ, ಇದೀಗ ನಾಲ್ಕನೇ ಪಂದ್ಯದಲ್ಲಿ ಆಸ್ಟ್ರೇಲಿಯಾ ಜಯ ಸಾಧಿಸಿದೆ.
ಮೆಲ್ಬೋರ್ನ್ ಮೈದಾನದಲ್ಲಿ ನಡೆದ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ 4ನೇ ಪಂದ್ಯದಲ್ಲಿ ಟೀಮ್ ಇಂಡಿಯಾ ವಿರುದ್ಧ ಆಸ್ಟ್ರೇಲಿಯಾ ತಂಡ ಭರ್ಜರಿ ಜಯ ಸಾಧಿಸಿದೆ. ಈ ಪಂದ್ಯದ ದ್ವಿತೀಯ ಇನಿಂಗ್ಸ್ನಲ್ಲಿ ರಿಷಭ್ ಪಂತ್ ಅವರ ವಿಕೆಟ್ ಕಬಳಿಸಿ ಟ್ರಾವಿಸ್ ಹೆಡ್ ವಿಚಿತ್ರವಾಗಿ ಸಂಭ್ರಮಿಸಿದರು.
ಟ್ರಾವಿಸ್ ಹೆಡ್ ಎಸೆದ 59ನೇ ಓವರ್ನ 4ನೇ ಎಸೆತದಲ್ಲಿ ರಿಷಭ್ ಪಂತ್ ಭರ್ಜರಿ ಹೊಡೆತಕ್ಕೆ ಮುಂದಾದರು. ಆದರೆ ಬೌಂಡರಿ ಲೈನ್ನಲ್ಲಿದ್ದ ಪ್ಯಾಟ್ ಕಮಿನ್ಸ್ ಅದ್ಭುತವಾಗಿ ಕ್ಯಾಚ್ ಹಿಡಿದರು. ಇತ್ತ ಪಂತ್ ಔಟ್ ಆಗುತ್ತಿದ್ದಂತೆ ಟ್ರಾವಿಸ್ ಹೆಡ್ ಬೆರಳಿನೊಂದಿಗೆ ವಿಚಿತ್ರವಾಗಿ ಸಂಭ್ರಮಿಸಿದರು.
ಕೆಲವರು ಇದನ್ನು ಅಶ್ಲೀಲ ಸಂಭ್ರಮವೆಂದರೆ, ಮತ್ತೆ ಕೆಲವರು ಇದು ಐಸ್ ಫಿಂಗರ್ ಸಂಭ್ರಮಾಚರಣೆ ಎಂದು ಬಣ್ಣಿಸಿದ್ದಾರೆ. ಅತ್ತ ಟ್ರಾವಿಸ್ ಹೆಡ್ ಅವರ ಫಿಂಗರ್ ಸೆಲೆಬ್ರೇಷನ್ ವೇಳೆ ಆಸ್ಟ್ರೇಲಿಯಾ ತಂಡದ ನಾಯಕ ಪ್ಯಾಟ್ ಕಮಿನ್ಸ್ ಕೂಡ ನಗುತ್ತಿರುವುದು ಕಾಣಬಹುದು.
ಹೀಗಾಗಿಯೇ ಇದೀಗ ಟ್ರಾವಿಸ್ ಹೆಡ್ ಹದ್ದುಮೀರಿ ಅಶ್ಲೀಲವಾಗಿ ಸಂಭ್ರಮಿಸಿದರಾ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ. ಇದರ ಬೆನ್ನಲ್ಲೇ ಆಸ್ಟ್ರೇಲಿಯಾ ಮೀಡಿಯಾಗಳು ಇದು ಹಾಟ್ ಫಿಂಗರ್ ಇನ್ ಐಸ್ ಸೆಲೆಬ್ರೇಷನ್ ಎಂದು ಸಮಜಾಯಿಷಿ ನೀಡಲಾರಂಭಿಸಿದೆ.
ಏಕೆಂದರೆ ಇದು ಅಶ್ಲೀಲ ಸಂಭ್ರಮವಾದರೆ ಟ್ರಾವಿಸ್ ಹೆಡ್ ವಿರುದ್ಧ ಐಸಿಸಿ ಕ್ರಮ ಕೈಗೊಳ್ಳುವುದು ಖಚಿತ. ಅಲ್ಲದೆ ಬ್ರಿಸ್ಬೇನ್ ಟೆಸ್ಟ್ ಪಂದ್ಯದಲ್ಲಿ ಡೆಮೆರಿಟ್ ಪಾಯಿಂಟ್ ಪಡೆದಿರುವ ಕಾರಣ ಹೆಡ್ ಅವರು ಒಂದು ಪಂದ್ಯದ ನಿಷೇಧಕ್ಕೂ ಒಳಗಾಗುವ ಸಾಧ್ಯತೆಯಿದೆ. ಒಟ್ಟಿನಲ್ಲಿ ವಿಚಿತ್ರ ಸಂಭ್ರಮಾಚರಣೆಯು ಇದೀಗ ನಾನಾ ವಿಶ್ಲೇಷಣೆಗೆ ಕಾರಣವಾಗಿದ್ದು, ಇದನ್ನು ಐಸಿಸಿ ಗಂಭೀರವಾಗಿ ಪರಿಗಣಿಸಲಿದೆಯಾ ಕಾದು ನೋಡಬೇಕಿದೆ.