AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

1,434 ದಿನಗಳ ಬಳಿಕ ವಿಕೆಟ್ ಬೇಟೆ! ಆದ್ರೆ ತುಂಬಾ ದುಬಾರಿಯಾದ ಭುವನೇಶ್ವರ್

ಭುವನೇಶ್ವರ್ ಕುಮಾರ್, 4 ವರ್ಷಗಳ (1434 ದಿನಗಳು) ನಂತರ ನ್ಯೂಜಿಲೆಂಡ್ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ ಅಂತರರಾಷ್ಟ್ರೀಯ ವಿಕೆಟ್ ಪಡೆದು ಗಮನ ಸೆಳೆದರು. ಡ್ಯಾರಿಲ್ ಮಿಚೆಲ್ ವಿಕೆಟ್ ಪಡೆದರೂ, ಭುವಿ 4 ಓವರ್‌ಗಳಲ್ಲಿ 50 ರನ್ ನೀಡಿ ದುಬಾರಿಯಾದರು. ಅಭಿಮಾನಿಗಳಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಅರ್ಷದೀಪ್ ಸಿಂಗ್ 2 ವಿಕೆಟ್ ಪಡೆದು ಮಿಂಚಿದರು.

1,434 ದಿನಗಳ ಬಳಿಕ ವಿಕೆಟ್ ಬೇಟೆ! ಆದ್ರೆ ತುಂಬಾ ದುಬಾರಿಯಾದ ಭುವನೇಶ್ವರ್
ಭುವನೇಶ್ವರ್ ಕುಮಾರ್Image Credit source: BCCI X
ಪೃಥ್ವಿಶಂಕರ
|

Updated on: Oct 24, 2026 | 3:31 PM

Share

ಕ್ರೈಸ್ಟ್‌ಚರ್ಚ್‌ನ ಹೆಗ್ಲಿ ಓವಲ್‌ನಲ್ಲಿ ಭಾರತ ಹಾಗೂ ನ್ಯೂಜಿಲೆಂಡ್ ನಡುವೆ ಎರಡನೇ ಟಿ20 ಪಂದ್ಯ ನಡೆಯಿತು. ಮೊದಲ ಟಿ20 ಪಂದ್ಯದಲ್ಲಿ ಆಡುವ ಅವಕಾಶ ಪಡೆದು 4 ವರ್ಷಗಳ ಬಳಿಕ ರಾಷ್ಟ್ರೀಯ ತಂಡದಲ್ಲಿ ಕಾಣಿಸಿಕೊಂಡಿದ್ದ ಅನುಭವಿ ವೇಗದ ಬೌಲರ್ ಭುವನೇಶ್ವರ್ ಕುಮಾರ್​ಗೆ ಒಂದೇ ಒಂದು ವಿಕೆಟ್ ಸಿಕ್ಕಿರಲಿಲ್ಲ. ಆದರೆ ಎರಡನೇ ಟಿ20 ಪಂದ್ಯದಲ್ಲಿ ವಿಕೆಟ್​ಗಳ ಖಾತೆ ತೆರೆಯುವಲ್ಲಿ ಯಶಸ್ವಿಯಾದ ಭುವನೇಶ್ವರ್ ಕುಮಾರ್ ರನ್​ಗಳಿಗೆ ಕಡಿವಾಣ ಹಾಕುವಲ್ಲಿ ವಿಫಲರಾದರು. ಆದಾಗ್ಯೂ ಬರೋಬ್ಬರಿ ನಾಲ್ಕು ವರ್ಷ ಅಂದ್ರೆ 1,434 ದಿನಗಳ ಸುದೀರ್ಘ ಅಂತರದ ಬಳಿಕ ಭುವಿ ತಮ್ಮ ಮೊದಲ ಅಂತರರಾಷ್ಟ್ರೀಯ ವಿಕೆಟ್ ಪಡೆದು ಎಲ್ಲರ ಗಮನ ಸೆಳೆದಿದ್ದಾರೆ.

ವಿಕೆಟ್​ಗಳ ಬರ ನೀಗಿಸಿಕೊಂಡ ಭುವಿ

ನ್ಯೂಜಿಲೆಂಡ್ ಬ್ಯಾಟರ್ ಡ್ಯಾರಿಲ್ ಮಿಚೆಲ್ ಅವರನ್ನು ಕೇವಲ 6 ರನ್‌ಗಳಿಗೆ ಔಟ್ ಮಾಡುವ ಮೂಲಕ ಭುವನೇಶ್ವರ್ ತಮ್ಮ ವಿಕೆಟ್​ಗಳ ಬರ ನೀಗಿಸಿಕೊಂಡರು. ಭುವಿ ಎಸೆದ ಲೆಂಗ್ತ್‌ನ ಚೆಂಡನ್ನು ಎದುರಿಸುವಲ್ಲಿ ಮಿಚೆಲ್ ಎಡವಿದರು. ದೊಡ ಹೊಡೆತ ಬಾರಿಸಲು ಮುಂದಾದಾಗ ಚೆಂಡು ಬ್ಯಾಟ್‌ನ ಅಂಚಿಗೆ ತಾಗಿ ಕವರ್-ಪಾಯಿಂಟ್ ಕಡೆಗೆ ಹಾರಿತು. ಅಲ್ಲಿ ಯುವ ಬ್ಯಾಟರ್ ತಿಲಕ್ ವರ್ಮಾ ಸುಲಭವಾಗಿ ಕ್ಯಾಚ್ ಹಿಡಿದು ಮಿಚೆಲ್ ಅವರನ್ನು ಪೆವಿಲಿಯನ್‌ಗೆ ಕಳುಹಿಸಿದರು.

ಈ ವಿಕೆಟ್‌ನೊಂದಿಗೆ ಭುವನೇಶ್ವರ್ ಕುಮಾರ್ ಅವರ ಸುದೀರ್ಘ ಕಾಯುವಿಕೆ ಅಂತ್ಯಗೊಂಡಿತು. ಅವರು ಕೊನೆಯ ಬಾರಿಗೆ ಅಂತರರಾಷ್ಟ್ರೀಯ ವಿಕೆಟ್ ಪಡೆದಿದ್ದು, 2022ರ ನವೆಂಬರ್ 20ರಂದು ಮೌಂಟ್ ಮೌಂಗನುಯಿಯಲ್ಲಿ ನ್ಯೂಜಿಲೆಂಡ್ ವಿರುದ್ಧವೇ ಆಗಿತ್ತು. ಇದೀಗ ಭುವಿ ನ್ಯೂಜಿಲೆಂಡ್ ವಿರುದ್ಧದ ಸರಣಿಯಲ್ಲಿ ವಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

50 ರನ್ ಬಿಟ್ಟುಕೊಟ್ಟು ದುಬಾರಿ

ಆದಾಗ್ಯೂ ಬಹಳ ದಿನಗಳ ಬಳಿಕ ತಂಡಕ್ಕೆ ಮರಳಿದ ಭುವಿ ಅವರಿಂದ ಅಭಿಮಾನಿಗಳು ಉತ್ತಮ ಪ್ರದರ್ಶನದ ನಿರೀಕ್ಷೆಯಲ್ಲಿದ್ದರು. ಆದರೆ ಬೌಲಿಂಗ್‌ನಲ್ಲಿ ಭುವಿ ದುಬಾರಿಯಾಗಿದ್ದಾರೆ. ನ್ಯೂಜಿಲೆಂಡ್ ಬ್ಯಾಟರ್‌ಗಳು ಅವರ ಬೌಲಿಂಗ್‌ನಲ್ಲಿ ಮನಬಂದಂತೆ ರನ್ ಗಳಿಸಿದ್ದು, ತಮ್ಮ ನಾಲ್ಕು ಓವರ್‌ಗಳಲ್ಲಿ ಬರೋಬ್ಬರಿ 50 ರನ್ ಬಿಟ್ಟುಕೊಟ್ಟರು. ಭುವಿ ಅವರ ಈ ಪ್ರದರ್ಶನದ ಬಳಿಕ ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿಗಳು ನಾನಾ ರೀತಿಯ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ.

ಭಾರತಕ್ಕೆ ಗಾಯದ ಆಘಾತ; 3ನೇ ಟಿ20 ಪಂದ್ಯಕ್ಕೂ ಇಶಾನ್ ಕಿಶನ್ ಅಲಭ್ಯ..!

ಭಾರತಕ್ಕೆ 180 ರನ್‌ಗಳ ಗುರಿ

ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ ತಂಡ 20 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 180 ರನ್‌ಗಳ ಉತ್ತಮ ಮೊತ್ತ ದಾಖಲಿಸಿತು. ಕಿವೀಸ್ ಪರ ಗ್ಲೆನ್ ಫಿಲಿಪ್ಸ್ ಭರ್ಜರಿ 70 ರನ್ ಗಳಿಸಿದರೆ, ಬೆವನ್ ಜಾಕೋಬ್ ಕೂಡ 58 ರನ್‌ಗಳ ಮಹತ್ವದ ಕೊಡುಗೆ ನೀಡಿದರು. ಭಾರತದ ಪರ ಭುವನೇಶ್ವರ್ ಕುಮಾರ್ ನಾಲ್ಕು ಓವರ್‌ಗಳಲ್ಲಿ 50 ರನ್ ನೀಡಿ ಒಂದು ವಿಕೆಟ್ ಪಡೆದರು. ದುಬಾರಿ ಬೌಲಿಂಗ್ ಮಾಡಿದರೂ, ದೀರ್ಘ ವಿರಾಮದ ಬಳಿಕ ಅಂತರರಾಷ್ಟ್ರೀಯ ವಿಕೆಟ್ ಪಡೆದಿರುವುದು ಅಭಿಮಾನಿಗಳ ಗಮನ ಸೆಳೆದಿದೆ. ಇನ್ನು ಭಾರತದ ಪರ ಅರ್ಷದೀಪ್ ಸಿಂಗ್ ಅತ್ಯಧಿಕ ಎರಡು ವಿಕೆಟ್ ಪಡೆದು ಮಿಂಚಿದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಪೃಥ್ವಿಶಂಕರ
ಪೃಥ್ವಿಶಂಕರ

ಪೃಥ್ವಿಶಂಕರ ಅವರ ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ. ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ಕೆಲಸ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ಇವರು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ಇವರ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.

Read More