
2025 ರ ರಣಜಿ ಟ್ರೋಫಿ ಇಂದಿನಿಂದ ಆರಂಭವಾಗಿದ್ದು, ಈ ಟೂರ್ನಿಯಲ್ಲಿ ಎಲ್ಲರ ಕಣ್ಣುಗಳು 14 ವರ್ಷದ ವೈಭವ್ ಸೂರ್ಯವಂಶಿ ಮೇಲೆ ಇದ್ದವು. ಏಕೆಂದರೆ ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ಪ್ರವಾಸದಲ್ಲಿ ರನ್ಗಳ ಮಳೆ ಹರಿಸಿದ್ದ ವೈಭವ್ಗೆ ಬಿಹಾರ ತಂಡದ ಉಪನಾಯಕತ್ವ ನೀಡುವುದರ ಜೊತೆಗೆ ರಣಜಿ ತಂಡದಲ್ಲೂ ಸ್ಥಾನ ನೀಡಲಾಗಿತ್ತು. ಹೀಗಾಗಿ ಉಪನಾಯಕನಾಗಿ ವೈಭವ್ ಆಟವನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾಯುತ್ತಿದ್ದರು. ಆದರೆ ಅರುಣಾಚಲ ಪ್ರದೇಶ ವಿರುದ್ಧದ ಮೊದಲ ಪಂದ್ಯದಲ್ಲಿ ವೈಭವ್ ಮುಗ್ಗರಿಸಿದ್ದಾರೆ. ಎಂದಿನಂತೆ ಆರಂಭಿಕನಾಗಿ ಕಣಕ್ಕಿಳಿದಿದ್ದ ವೈಭವ್ ಕೇವಲ 5 ಎಸೆತಗಳನ್ನು ಎದುರಿಸಿ ಪೆವಿಲಿಯನ್ ಸೇರಿಕೊಂಡರು.
ಈ ಪಂದ್ಯದಲ್ಲಿ ಬಿಹಾರ ತಂಡದ ಪರ ಆರಂಭಿಕನಾಗಿ ಕಣಕ್ಕಿಳಿದ ವೈಭವ್ ಸೂರ್ಯವಂಶಿ ಅದ್ಭುತವಾಗಿ ಪ್ರಾರಂಭಿಸಿದರು. ಮೊದಲ ನಾಲ್ಕು ಎಸೆತಗಳಲ್ಲಿ 2 ಬೌಂಡರಿ ಹಾಗೂ 1 ಸಿಕ್ಸರ್ ಸಹಿತ ವೈಭವ್ 14 ರನ್ ಕಲೆಹಾಕಿದರು. ಆದರೆ ತಾಳ್ಮೆಯನ್ನೇ ಕೇಳುವ ರಣಜಿ ಪಂದ್ಯಾವಳಿಯಲ್ಲಿ ಟಿ20 ಕ್ರಿಕೆಟ್ ಆಡಲು ಯತ್ನಿಸಿದ ವೈಭವ್ 5ನೇ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆದರು.
ಬಿಹಾರ ಮತ್ತು ಅರುಣಾಚಲ ಪ್ರದೇಶ ನಡುವಿನ ಪಂದ್ಯವು ಪಾಟ್ನಾದ ಮೊಯಿನುಲ್ ಹಕ್ ಕ್ರೀಡಾಂಗಣದಲ್ಲಿ ನಡೆಯುತ್ತಿದೆ. ಈ ಮೈದಾನದಲ್ಲಿ ಕೊನೆಯ 4 ಇನ್ನಿಂಗ್ಸ್‌ಗಳಲ್ಲಿ ವೈಭವ್ ಅವರ ಪ್ರದರ್ಶನ ನಿರಾಶಾದಾಯಕವಾಗಿದೆ. ಇದಕ್ಕೂ ಮೊದಲು, ಪಾಟ್ನಾ ಕ್ರೀಡಾಂಗಣದಲ್ಲಿ ಆಡಿದ ನಾಲ್ಕು ಪ್ರಥಮ ದರ್ಜೆ ಇನ್ನಿಂಗ್ಸ್‌ಗಳಲ್ಲಿ ವೈಭವ್ ಸೂರ್ಯವಂಶಿ ಕೇವಲ 31 ರನ್ ಗಳಿಸಿದ್ದರು. ಆ ಎರಡು ಇನ್ನಿಂಗ್ಸ್‌ಗಳಲ್ಲಿ ಅವರು ಖಾತೆ ಕೂಡ ತೆರೆಯಲಿಲ್ಲ. ಇದರರ್ಥ ಅವರು ಮೊಯಿನುಲ್ ಹಕ್ ಕ್ರೀಡಾಂಗಣದಲ್ಲಿ ಆಡಿದ ಐದು ಇನ್ನಿಂಗ್ಸ್‌ಗಳಲ್ಲಿ ಕೇವಲ 45 ರನ್ ಮಾತ್ರ ಗಳಿಸಿದ್ದಾರೆ.
ಮೊಯಿನುಲ್ ಹಕ್ ಕ್ರೀಡಾಂಗಣದಲ್ಲಿ ಅರುಣಾಚಲ ಪ್ರದೇಶ ವಿರುದ್ಧದ ಮೊದಲ ಇನ್ನಿಂಗ್ಸ್‌ನಲ್ಲಿ ವೈಭವ್ ಸೂರ್ಯವಂಶಿ ಅದ್ಭುತ ಆರಂಭವನ್ನು ಪಡೆದರು. ಅವರು 280 ಸ್ಟ್ರೈಕ್ ರೇಟ್‌ನಲ್ಲಿ 14 ರನ್ ಗಳಿಸಿದರು. ಇದರಲ್ಲಿ ಒಂದು ಸಿಕ್ಸ್ ಮತ್ತು ಎರಡು ಬೌಂಡರಿಗಳು ಸೇರಿದ್ದವು. ಆದಾಗ್ಯೂ, ಆ ಆರಂಭವನ್ನು ದೊಡ್ಡದಾಗಿ ಪರಿವರ್ತಿಸುವಲ್ಲಿ ಅವರು ವಿಫಲರಾದರು.
ಪಂದ್ಯದ ಬಗ್ಗೆ ಹೇಳುವುದಾದರೆ, ಬಿಹಾರ ತಂಡವು ಮೊದಲ ಇನ್ನಿಂಗ್ಸ್‌ನಲ್ಲಿ ಅರುಣಾಚಲ ಪ್ರದೇಶವನ್ನು ಕೇವಲ 105 ರನ್‌ಗಳಿಗೆ ಆಲೌಟ್ ಮಾಡಿತು. ಆ ಬಳಿಕ ಬ್ಯಾಟಿಂಗ್ ಆರಂಭಿಸಿರುವ ಬಿಹಾರ ಆರಂಭಿಕ ಆಘಾತದಿಂದ ಹೊರಬಂದಿದ್ದು ಸುದ್ದಿ ಬರೆಯುವ ಹೊತ್ತಿಗೆ 2 ವಿಕೆಟ್ ಕಳೆದುಕೊಂಡು 177 ರನ್ ಕಲೆಹಾಕಿದೆ. ತಂಡದ ಪರ ಆಯುಷ್ ಆನಂದ್ ಲೋಹರುಕ ಅಜೇಯ ಶತಕ ಸಿಡಿಸಿದ್ದಾರೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ