ಒಂದು ಪಂದ್ಯವಾಡಿದ್ರೆ ವೈಭವ್ ಸೂರ್ಯವಂಶಿಗೆ ಸಿಗುತ್ತೆ 1.60 ಲಕ್ಷ ರೂ.
Vaibhav suryavanshi: ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿ ಹೊಸ ಸೆನ್ಸೇಷನ್ ಸೃಷ್ಟಿಸಿದ್ದ ವೈಭವ್ ಸೂರ್ಯವಂಶಿ ಇದೀಗ ದೇಶೀಯ ಅಂಗಳದಲ್ಲಿ ಕಣಕ್ಕಿಳಿದಿದ್ದಾರೆ. ಪ್ರಸ್ತುತ ನಡೆಯುತ್ತಿರುವ ರಣಜಿ ಟೂರ್ನಿಯಲ್ಲಿ ಬಿಹಾರ ಪರ ಆಡುತ್ತಿರುವ ವೈಭವ್ ಸಿಗುವ ಸಂಭಾವನೆ ಇದೀಗ ಚರ್ಚಾ ವಿಷಯವಾಗಿದೆ.

ದೇಶೀಯ ಟೂರ್ನಿಯಲ್ಲಿ ಕಣಕ್ಕಿಳಿದರೆ ವೈಭವ್ ಸೂರ್ಯವಂಶಿಗೆ ಸಿಗುವ ವೇತನ ಎಷ್ಡು? ಈ ಪ್ರಶ್ನೆಗೆ ಉತ್ತರ ದಿನವೊಂದಕ್ಕೆ 40 ಸಾವಿರ ರೂ. ಅಚ್ಚರಿ ಎನಿಸಿದರೂ ಇದುವೇ ಸತ್ಯ. ಅಂದರೆ ರಣಜಿ ಟೂರ್ನಿಯಲ್ಲಿ ಕಣಕ್ಕಿಳಿದರೆ ವೈಭವ್ ಸೂರ್ಯವಂಶಿಗೆ ಪಂದ್ಯವೊಂದಕ್ಕೆ 1 ಲಕ್ಷ 60 ಸಾವಿರ ರೂ. ಸಿಗಲಿದೆ.
ಬಿಸಿಸಿಐ ನಿಯಮದ ಪ್ರಕಾರ, ರಣಜಿ ಟೂರ್ನಿಯಲ್ಲಿ ಕಣಕ್ಕಿಳಿಯುವ ಆಟಗಾರನಿಗೆ ಪ್ರತಿ ದಿನಕ್ಕೆ ಕನಿಷ್ಠ 40 ಸಾವಿರ ರೂ. ನೀಡಲಾಗುತ್ತದೆ. ಅಂದರೆ ಪಾದಾರ್ಪಣೆ ಪಂದ್ಯದಿಂದ 20 ಪಂದ್ಯಗಳವರೆಗೆ ದಿನಕ್ಕೆ 40 ಸಾವಿರ ರೂ. ನಿಗದಿ ಪಡಿಸಲಾಗಿದ್ದು, ಅದರಂತೆ ಒಂದು ಮ್ಯಾಚ್ಗೆ 1.60 ಲಕ್ಷ ರೂ. ನೀಡಲಾಗುತ್ತದೆ.
ವೈಭವ್ ಸೂರ್ಯವಂಶಿ ರಣಜಿ ಟೂರ್ನಿಯಲ್ಲಿ ಈವರೆಗೆ ಆಡಿರುವುದು ಕೇವಲ 6 ಪಂದ್ಯಗಳನ್ನು ಮಾತ್ರ. ಹೀಗಾಗಿ ಅವರು ಮೊದಲ ಗ್ರೇಡ್ನಲ್ಲಿದ್ದಾರೆ. ಅಂದರೆ 20 ಪಂದ್ಯಗಳ ಪಟ್ಟಿಯ ಪ್ರಕಾರ ವೈಭವ್ಗೆ ವೇತನ ನೀಡಲಾಗುತ್ತದೆ. ಅದರಂತೆ ಈ ಬಾರಿಯ ಟೂರ್ನಿಯಲ್ಲಿ ಬಿಹಾರ ಪರ ವೈಭವ್ ಸೂರ್ಯವಂಶಿ ಕಣಕ್ಕಿಳಿದರೆ ಪ್ರತಿ ಮ್ಯಾಚ್ಗೆ 1 ಲಕ್ಷ 60 ಸಾವಿರ ರೂ. ವೇತನ ಪಡೆಯಲಿದ್ದಾರೆ.
ಇನ್ನು 21 ರಿಂದ 40 ಪಂದ್ಯಗಳನ್ನಾಡಿರುವ ಅನುಭವಿ ಆಟಗಾರರಿಗೆ ಪ್ರತಿ ದಿನಕ್ಕೆ 50 ಸಾವಿರ ರೂ. ನೀಡಲಾಗುತ್ತದೆ. ಅದರಂತೆ ಒಂದು ರಣಜಿ ಪಂದ್ಯಕ್ಕೆ 2 ಲಕ್ಷ ರೂ, ಸಿಗಲಿದೆ. ಹಾಗೆಯೇ 40 ಕ್ಕಿಂತ ಹೆಚ್ಚಿನ ಪಂದ್ಯಗಳಲ್ಲಿ ಕಣಕ್ಕಿಳಿದಿರುವ ಆಟಗಾರರು ಪ್ರತಿ ದಿನಕ್ಕೆ 60 ಸಾವಿ ರೂ. ನಂತೆ ಒಂದು ಮ್ಯಾಚ್ಗೆ 2.40 ಲಕ್ಷ ರೂ. ಪಡೆಯಲಿದ್ದಾರೆ.
ಸದ್ಯ ಬಿಹಾರ ತಂಡದ ಉಪನಾಯಕನಾಗಿ ರಣಜಿ ಟೂರ್ನಿಯಲ್ಲಿ ಹೊಸ ಇನಿಂಗ್ಸ್ ಆರಂಭಿಸಲಿರುವ ವೈಭವ್ ಸೂರ್ಯವಂಶಿ ಮೊದಲ ಸುತ್ತಿನ ಐದು ಮ್ಯಾಚ್ಗಳಲ್ಲೂ ಕಣಕ್ಕಿಳಿದರೆ ಒಟ್ಟು 650,000 ರೂ. ಪಡೆಯಲಿದ್ದಾರೆ.
ಐಪಿಎಲ್ನಲ್ಲಿ ಕೋಟಿ ಗಳಿಕೆ:
14 ವರ್ಷದ ವೈಭವ್ ಸೂರ್ಯವಂಶಿ ಐಪಿಎಲ್ ಮೂಲಕ ಪಡೆದಿರುವ ಸಂಭಾವನೆ 1.1 ಕೋಟಿ ರೂ. ಕಳೆದ ಬಾರಿಯ ಮೆಗಾ ಹರಾಜಿನಲ್ಲಿ ಕಾಣಿಸಿಕೊಂಡಿದ್ದ ವೈಭವ್ ಅವರನ್ನು ರಾಜಸ್ಥಾನ್ ರಾಯಲ್ಸ್ ಫ್ರಾಂಚೈಸಿ 1.1 ಕೋಟಿ ರೂ.ಗೆ ಖರೀದಿಸಿತ್ತು.
ಇದೀಗ ಆರ್ಆರ್ ತಂಡದ ಭಾಗವಾಗಿರುವ ವೈಭವ್ ಸೂರ್ಯವಂಶಿ ಈ ಬಾರಿಯ ಐಪಿಎಲ್ನ ಮಿನಿ ಹರಾಜಿನಲ್ಲಿ ಕಾಣಿಸಿಕೊಂಡರೆ ಅವರ ಖರೀದಿಗೆ ಬಹುತೇಕ ಫ್ರಾಂಚೈಸಿಗಳು ಮುಂದಾಗುವುದು ಖಚಿತ.
ಇದನ್ನೂ ಓದಿ: ಅಭಿಷೇಕ್ ಅಬ್ಬರಕ್ಕೆ ವಿರಾಟ್ ಕೊಹ್ಲಿಯ ಸಾರ್ವಕಾಲಿಕ ರ‍್ಯಾಂಕಿಂಗ್ ಷೇಕ್ ಷೇಕ್
ಹೀಗಾಗಿ ರಾಜಸ್ಥಾನ್ ರಾಯಲ್ಸ್ ತಂಡದಿಂದ ಹೊರಬಂದು ವೈಭವ್ ಸೂರ್ಯವಂಶಿ ಹರಾಜಿನಲ್ಲಿ ತನ್ನ ಅದೃಷ್ಟ ಪರೀಕ್ಷಿಸಲಿದ್ದಾರಾ ಕಾದು ನೋಡಬೇಕಿದೆ.
