W,W,W,W,W,W..! ಆರು ಎಸೆತಗಳಲ್ಲಿ 6 ವಿಕೆಟ್ ಪತನ; ವಿಡಿಯೋ ನೋಡಿ

ಮಹಾರಾಷ್ಟ್ರದ ಪನ್ವೇಲ್‌ನಲ್ಲಿ ನಡೆಯುತ್ತಿರುವ ಪಂದ್ಯಾವಳಿಯಲ್ಲಿ ಬೌಲರ್‌ಯೊಬ್ಬರು ಓವರ್‌ನ ಆರು ಎಸೆತಗಳಲ್ಲಿ ಆರು ವಿಕೆಟ್ ಪಡೆದಿದ್ದಾರೆ. ಅದರಲ್ಲೂ ಎದುರಾಳಿ ಇನ್ನಿಂಗ್ಸ್​ನ ಮೊದಲ ಓವರ್​ನಲ್ಲಿಯೇ ಈ ಅದ್ಭುತ ಸೃಷ್ಟಿಯಾಗಿದೆ.

W,W,W,W,W,W..! ಆರು ಎಸೆತಗಳಲ್ಲಿ 6 ವಿಕೆಟ್ ಪತನ; ವಿಡಿಯೋ ನೋಡಿ
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: ಪೃಥ್ವಿಶಂಕರ

Updated on:Dec 02, 2022 | 5:46 PM

ಕ್ರಿಕೆಟ್ (Cricket) ಎಂಬುದು ಅನಿಶ್ಚಿತತೆಯ ಆಟ. ಈ ಆಟದಲ್ಲಿ ಯಾವಾಗ ಏನು ಬೇಕಾದರೂ ಆಗಬಹುದು ಎಂಬುದಕ್ಕೆ ಈಗಾಗಲೇ ಸಾಕಷ್ಟು ನಿದರ್ಶನಗಳನ್ನು ನೋಡಿದ್ದೇವೆ. ಈಗಿನ ಕ್ರಿಕೆಟ್​ನಲ್ಲಿ ನಾವು ಬ್ಯಾಟ್ಸ್​ಮನ್​ಗಳ ಅಬ್ಬರವನ್ನು ಹೆಚ್ಚಾಗಿ ನೋಡುತ್ತಿರುತ್ತೇವೆ. ಉದಾಹರಣೆಗೆ ಪಾಕಿಸ್ತಾನ ಮತ್ತು ಇಂಗ್ಲೆಂಡ್ (Pakistan and England) ನಡುವೆ ನಡೆಯುತ್ತಿರುವ ಟೆಸ್ಟ್ ಪಂದ್ಯವನ್ನೇ ನಾವು ತೆಗೆದುಕೊಂಡರೆ, ಈ ಪಂದ್ಯದಲ್ಲಿ ಉಭಯ ತಂಡದ ಬ್ಯಾಟ್ಸ್​ಮನ್​ಗಳು ರನ್ ಶಿಖರವನ್ನೇ ನಿರ್ಮಿಸುತ್ತಿದ್ದಾರೆ. ಅದರಲ್ಲೂ ಇಂಗ್ಲೆಂಡ್ ತಂಡದ ದಾಂಡಿಗರು ಒಂದೇ ದಿನದಲ್ಲಿ ದಾಖಲೆಯ 500 ರನ್ ಬಾರಿಸಿ ಬಿಸಾಡಿದ್ದಾರೆ. ಕೆಲ ದಿನಗಳ ಹಿಂದೆ ವಿಜಯ್ ಹಜಾರೆ ಟ್ರೋಫಿಯಲ್ಲಿ (Vijay Hazare Trophy) ಭಾರತದ ರುತುರಾಜ್ ಗಾಯಕ್ವಾಡ್ (Ruturaj Gaikwad) ಒಂದು ಓವರ್‌ನಲ್ಲಿ ಏಳು ಸಿಕ್ಸರ್‌ಗಳನ್ನು ಸಿಡಿಸಿ ದಾಖಲೆ ಬರೆದಿದ್ದರು. ಆದರೆ ಇಲ್ಲೊಬ್ಬ ಬೌಲರ್ ತನ್ನ ಬೌಲಿಂಗ್ ಕರಾಮತ್ತಿನಿಂದ 6 ಎಸೆತಗಳಲ್ಲಿ 6 ವಿಕೆಟ್ ಉರುಳಿಸಿ ದಾಖಲೆ ಬರೆದಿದ್ದಾನೆ.

ಆದರೆ ಈ ದಾಖಲೆ ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ದಾಖಲಾಗಿಲ್ಲ. ಬದಲಿಗೆ, ಮಹಾರಾಷ್ಟ್ರದಲ್ಲಿ ನಡೆದ ಟೆನಿಸ್ ಬಾಲ್ ಟೂರ್ನಿಯಲ್ಲಿ ಈ ದಾಖಲೆ ಸೃಷ್ಟಿಯಾಗಿದೆ. ಮಹಾರಾಷ್ಟ್ರದ ಪನ್ವೇಲ್‌ನಲ್ಲಿ ನಡೆಯುತ್ತಿರುವ ಪಂದ್ಯಾವಳಿಯಲ್ಲಿ ಬೌಲರೊಬ್ಬರು ಓವರ್‌ನ ಆರು ಎಸೆತಗಳಲ್ಲಿ ಆರು ವಿಕೆಟ್ ಪಡೆದಿದ್ದಾರೆ. ಅದರಲ್ಲೂ ಎದುರಾಳಿ ಇನ್ನಿಂಗ್ಸ್​ನ ಮೊದಲ ಓವರ್​ನಲ್ಲಿಯೇ ಈ ಅದ್ಭುತ ಸೃಷ್ಟಿಯಾಗಿದೆ.

ಮೊದಲ ಓವರ್‌ನಲ್ಲೇ ಅದ್ಭುತ ಸೃಷ್ಟಿ

ಪನ್ವೇಲ್‌ನ ಉಸ್ಲಾರಿ ಖುರ್ದ್‌ನಲ್ಲಿ ನಡೆಯುತ್ತಿರುವ ಗಾಂದೇವಿ ಉಸಾರೈ ಚಾಸ್ಕ್ 2022 ಪಂದ್ಯಾವಳಿಯಲ್ಲಿ, ದೊಂಡ್ರಚಪದ ಮತ್ತು ಗಾವದೇವಿ ಪೇಠ ನಡುವೆ ನಡೆದ ಈ ಪಂದ್ಯದಲ್ಲಿ ಲಕ್ಷ್ಮಣ್ ಎಂಬ ಬೌಲರ್ ಒಂದೇ ಓವರ್‌ನ ಆರು ಎಸೆತಗಳಲ್ಲಿ ಆರು ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಗಾವದೇವಿ ಪೇಠ ತಂಡ ದೊಂಡರಚಪದವು ಗೆಲುವಿಗೆ 43 ರನ್‌ಗಳ ಟಾರ್ಗೆಟ್ ನೀಡಿತ್ತು. ಈ ಗುರಿ ಬೆನ್ನಟ್ಟಿದ ದೊಂಡರಚಪದವು ತಂಡದ ಆರು ಬ್ಯಾಟ್ಸ್‌ಮನ್‌ಗಳು ಮೊದಲ ಓವರ್‌ನಲ್ಲಿಯೇ ಪೆವಿಲಿಯನ್‌ ಸೇರಿಕೊಂಡರು. ಈ ಓವರ್‌ನಲ್ಲಿ 6 ಎಸೆತಗಳಲ್ಲಿ 6 ವಿಕೆಟ್ ಪಡೆದ ಲಕ್ಷ್ಮಣ್ ಎದುರಾಳಿ ತಂಡಕ್ಕೆ ಒಂದೇ ಒಂದು ರನ್ ಬಿಟ್ಟುಕೊಡಲಿಲ್ಲ.

ಈ ಹಿಂದೆಯೂ 6 ವಿಕೆಟ್​ಗಳು ಉರುಳಿವೆ

ಒಬ್ಬ ಬೌಲರ್ ಆರು ಎಸೆತಗಳಲ್ಲಿ ಆರು ವಿಕೆಟ್ ಪಡೆದದ್ದು ಇದೇ ಮೊದಲಲ್ಲ. ಈ ಹಿಂದೆ ಆಸ್ಟ್ರೇಲಿಯಾದಲ್ಲಿ ನಡೆದ ಸ್ಥಳೀಯ ಪಂದ್ಯವೊಂದರಲ್ಲಿ ಈ ಸಾಧನೆ ಮಾಡಲಾಗಿತ್ತು. ಜನವರಿ 26, 2017 ರಂದು ಇಂಡಿಯನ್ ಎಕ್ಸ್‌ಪ್ರೆಸ್ ವೆಬ್‌ಸೈಟ್‌ನಲ್ಲಿ ಪ್ರಕಟವಾದ ವರದಿಯ ಪ್ರಕಾರ, ಅಲೆಡ್ ಕ್ಯಾರಿ ಎಂಬ ಬೌಲರ್ ಈ ಸಾಧನೆ ಮಾಡಿದ್ದ.

ಟೆಸ್ಟ್ ಕ್ರಿಕೆಟ್‌ನಲ್ಲೂ ಈ ದಾಖಲೆ ಸೃಷ್ಟಿಯಾಗಿಲ್ಲ

ಅಂತರಾಷ್ಟ್ರೀಯ ಕ್ರಿಕೆಟ್‌ಗೆ ಸಂಬಂಧಿಸಿದಂತೆ, ಯಾರೂ ಕೂಡ ಈ ದಾಖಲೆ ಮಾಡಿಲ್ಲ. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಒಂದು ಓವರ್‌ನಲ್ಲಿ ಗರಿಷ್ಠ ನಾಲ್ಕು ವಿಕೆಟ್‌ ಬಿದ್ದಿರುವುದು ಇಲ್ಲಿಯವರೆಗಿನ ದಾಖಲೆಯಾಗಿದೆ.

Published On - 5:44 pm, Fri, 2 December 22