IPL 2022: Boycott Chennai Super Kings: CSK ವಿರುದ್ದ ತಿರುಗಿಬಿದ್ದ ಅಭಿಮಾನಿಗಳು

| Updated By: ಝಾಹಿರ್ ಯೂಸುಫ್

Updated on: Feb 15, 2022 | 8:30 PM

Chennai Super Kings: ಸಿಎಸ್​ಕೆ ತಂಡದಲ್ಲಿ ಶ್ರೀಲಂಕಾದ ಆಟಗಾರರು ಕಾಣಿಸಿಕೊಳ್ಳುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ ಶ್ರೀಲಂಕಾ ಆಟಗಾರರ ವಿಷಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರೋಧ ಎದುರಿಸಿತ್ತು.

IPL 2022: Boycott Chennai Super Kings: CSK ವಿರುದ್ದ ತಿರುಗಿಬಿದ್ದ ಅಭಿಮಾನಿಗಳು
CSK
Follow us on

IPL 2022 ಮೆಗಾ ಹರಾಜಿನ ಬೆನ್ನಲ್ಲೇ ಇದೀಗ ಚೆನ್ನೈ ಸೂಪರ್ ಕಿಂಗ್ಸ್ ತಂಡದ ವಿರುದ್ದ ಭಾರೀ ಆಕ್ರೋಶಗಳು ಕೇಳಿ ಬರುತ್ತಿದೆ. ಇದಕ್ಕೆ ಕಾರಣ ಸಿಎಸ್​ಕೆ ತಂಡವು ಶ್ರೀಲಂಕಾ ಆಟಗಾರನನ್ನು ಖರೀದಿಸಿರುವುದು. ಹೌದು, ಶ್ರೀಲಂಕಾದ ಯುವ ಸ್ಪಿನ್ನರ್ ಮಹೇಶ್ ತೀಕ್ಷಣ ಅವರ ಖರೀದಿಯನ್ನು ಅನೇಕ ಸಿಎಸ್​ಕೆ ಅಭಿಮಾನಿಗಳು ವಿರೋಧಿಸಲಾರಂಭಿಸಿದ್ದಾರೆ. ಈ ಬಗ್ಗೆ ಟ್ವಿಟ್ಟರ್ ನಲ್ಲಿ ಈ ತಂಡದ ವಿರುದ್ಧ ಅಭಿಯಾನ ಕೂಡ ನಡೆದಿದ್ದು, ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ #Boycott_ChennaiSuperKings ಎಂದು ಹ್ಯಾಶ್​ಟ್ಯಾಗ್ ರಚಿಸಲಾಗಿದೆ. ಫೆಬ್ರವರಿ 14 ರಂದು ದಿನವಿಡೀ ಈ ಹ್ಯಾಶ್‌ಟ್ಯಾಗ್‌ನೊಂದಿಗೆ ಟ್ವೀಟ್‌ಗಳನ್ನು ಮಾಡುವ ಮೂಲಕ ಅನೇಕ ಅಭಿಮಾನಿಗಳು ತೀಕ್ಷಣ ಖರೀದಿ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇನ್ನು ಸಿಎಸ್​ಕೆ ತಂಡದ ಕೆಲ ಅಭಿಮಾನಿಗಳು ಶ್ರೀಲಂಕಾ ಸ್ಪಿನ್ನರ್ ಮಹೇಶ್ ತೀಕ್ಷಣ ಅವರ ಖರೀದಿಯನ್ನು ವಿರೋಧಿಸಲು ಕಾರಣ ಅವರು ಸಿಂಹಳೀಯ ಮೂಲದವರು ಎಂಬುದು. ಶ್ರೀಲಂಕಾ ಸಿಂಹಳೀಯರು ಮತ್ತು ತಮಿಳರ ನಡುವಿನ ಉದ್ವಿಗ್ನತೆಯ ಇತಿಹಾಸವನ್ನು ಹೊಂದಿದೆ. 2009 ರಲ್ಲಿ, ಶ್ರೀಲಂಕಾ ಎಲ್‌ಟಿಟಿಇ (ಲಿಬರೇಶನ್ ಟೈಗರ್ಸ್ ಆಫ್ ತಮಿಳ್ ಈಳಂ) ವಿರುದ್ಧ ಮಿಲಿಟರಿ ಕ್ರಮ ಕೈಗೊಂಡಾಗ, ಸಿಂಹಳೀಯ ಮೂಲದ ಸೈನಿಕರು ಶ್ರೀಲಂಕಾ ತಮಿಳರ ಮೇಲೆ ದೌರ್ಜನ್ಯ ಎಸೆಗಿದ್ದರು. ಅಲ್ಲದೆ ತಮಿಳರನ್ನು ಬೇಕಂತಲೇ ದಾಳಿ ಗುರಿಮಾಡಿದ್ದರು. ಮುಗ್ದ ತಮಿಳರನ್ನು ಯುದ್ಧದ ನೆಪವೊಡ್ಡಿ ಹತ್ಯೆಗೈಯ್ಯಲಾಗಿತ್ತು ಎಂಬ ಆರೋಪಗಳು ಕೇಳಿ ಬಂದಿತ್ತು. ಶ್ರೀಲಂಕಾ ಸರ್ಕಾರದ ಈ ನಡೆಯ ಬಗ್ಗೆ ತಮಿಳುನಾಡಿನಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿತ್ತು.

ಇದೇ ಕಾರಣದಿಂದಾಗಿ ಲಂಕಾ ಸ್ಪಿನ್ನರ್ ಮುತ್ತಯ್ಯ ಮುರಳೀಧರನ್ ಅವರ ಜೀವನಾಧಾರಿತ ಚಿತ್ರದಲ್ಲಿ ನಟ ವಿಜಯ್ ಸೇತುಪತಿ ನಟಿಸಬಾರದೆಂಬ ಅಭಿಯಾನ ಕೂಡ ತಮಿಳುನಾಡಿನಲ್ಲಿ ನಡೆದಿತ್ತು. ಮುರಳೀಧರನ್ ಶ್ರೀಲಂಕಾ ತಮಿಳು ಸಮುದಾಯಕ್ಕೆ ಸೇರಿದವರಾಗಿದ್ದರೂ, ಲಂಕಾ ತಮಿಳರ ಮಾರಣಹೋಮ ನಡೆದಾಗ ಮೌನವಹಿಸಿದ್ದ ಕಾರಣ ಅವರ ಜೀವನಾಧಾರಿತ ಚಿತ್ರದ ಬಗ್ಗೆ ಆಕ್ರೋಶಗಳು ಕೇಳಿ ಬಂದಿತ್ತು. ಹೀಗಾಗಿ ಚಿತ್ರ ಆರಂಭಕ್ಕೂ ಮುನ್ನವೇ ನಟ ವಿಜಯ್ ಸೇತುಪತಿ ಹಿಂದೆ ಸರಿದಿದ್ದರು.

ಇದೀಗ ತಮಿಳುನಾಡನ್ನು ಪ್ರತಿನಿಧಿಸುವ ಸಿಎಸ್​ಕೆ ತಂಡದಲ್ಲಿ ಶ್ರೀಲಂಕಾದ ಆಟಗಾರನಿಗೆ ಅವಕಾಶ ನೀಡಿರುವ ಬಗ್ಗೆ ಕೆಲ ಅಭಿಮಾನಿಗಳು ಸಿಟ್ಟುಗೊಂಡಿದ್ದಾರೆ. #Boycott_ChennaiSuperKings ಎಂಬ ಹ್ಯಾಶ್​ಟ್ಯಾಗ್ ಮೂಲಕ ಸಿಎಸ್​ಕೆ ಫ್ರಾಂಚೈಸಿಯ ನಡೆಯ ಬಗ್ಗೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಈ ಹಿಂದೆಯೂ ವಿರೋಧ:
ಸಿಎಸ್​ಕೆ ತಂಡದಲ್ಲಿ ಶ್ರೀಲಂಕಾದ ಆಟಗಾರರು ಕಾಣಿಸಿಕೊಳ್ಳುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ ಶ್ರೀಲಂಕಾ ಆಟಗಾರರ ವಿಷಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರೋಧ ಎದುರಿಸಿತ್ತು. ಅಷ್ಟೇ ಕೆಲವು ಸೀಸನ್​ಗಳಲ್ಲಿ ತಂಡವು ಚೆನ್ನೈನಲ್ಲಿನ ತಮ್ಮ ಪಂದ್ಯಗಳಲ್ಲಿ ಶ್ರೀಲಂಕಾದ ಆಟಗಾರರನ್ನು ತಂಡದಿಂದ ಹೊರಗಿಟ್ಟಿದ್ದರು. ಇದಾದ ಬಳಿಕ CSK ಶ್ರೀಲಂಕಾ ಆಟಗಾರರನ್ನು ಖರೀದಿಸುವುದನ್ನು ನಿಲ್ಲಿಸಿತು. ಈ ಹಿಂದೆ ಸಿಎಸ್​ಕೆ ಪರ ಆಡಿದ್ದ ಮುತ್ತಯ್ಯ ಮುರಳೀಧರನ್, ನುವಾನ್ ಕುಲಶೇಖರ, ತಿಸಾರ ಪೆರೇರಾ, ಸೂರಜ್ ರಾಂದಿವ್ ಅವರನ್ನು ಆ ಬಳಿಕ ಚೆನ್ನೈ ಸೂಪರ್ ಕಿಂಗ್ಸ್​ ತಂಡದಿಂದ ಕೈಬಿಟ್ಟಿದ್ದರು. ಇದಾದ ಹಲವು ವರ್ಷಗಳ ಬಳಿಕ ಇದೀಗ ಮತ್ತೆ ಸಿಎಸ್​ಕೆ ತಂಡದಲ್ಲಿ ಶ್ರೀಲಂಕಾ ಸ್ಪಿನ್ನರ್ ಮಹೇಶ್ ತೀಕ್ಷಣ ಕಾಣಿಸಿಕೊಂಡಿರುವುದಕ್ಕೆ ತಮಿಳುನಾಡಿನ ಕೆಲ ಸಿಎಸ್​ಕೆ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: IPL 2022 ನಲ್ಲಿ ಕೋಟಿ ಸಿಗುತ್ತಿದ್ದಂತೆ ಪಾಕಿಸ್ತಾನ ಸೂಪರ್ ಲೀಗ್ ತೊರೆದ ಸ್ಟಾರ್ ಆಟಗಾರ

ಇದನ್ನೂ ಓದಿ: IPL 2022: RCB ತಂಡ ಕಟ್ಟಿದೆ…ಆದರೆ ಆರಂಭಿಕ ಯಾರು ಎಂಬುದೇ ಈಗ ಪ್ರಶ್ನೆ..?

ಇದನ್ನೂ ಓದಿ: IPL 2022: RCB ತಂಡದಲ್ಲಿ ಇಬ್ಬರು ಕನ್ನಡಿಗರು..! 

(Boycott Chennai Super Kings campaign after maheesh theekshana in team IPL 2022 auction)

Published On - 4:47 pm, Tue, 15 February 22