ಭಾರತದ ವೆಸ್ಟ್ ಇಂಡೀಸ್ ಪ್ರವಾಸದಲ್ಲಿ (India vs West Indies) ಮೊದಲ ಬಾರಿಗೆ ಟೀಂ ಇಂಡಿಯಾದಲ್ಲಿ ಕಾಣಿಸಿಕೊಂಡಿದ್ದ ಇಬ್ಬರು ಯುವ ಆಟಗಾರರಾದ ಯಶಸ್ವಿ ಜೈಸ್ವಾಲ್ ಹಾಗೂ ತಿಲಕ್ ವರ್ಮಾ (Yashasvi Jaiswal, Tilak Varma) ಟೆಸ್ಟ್ ಮತ್ತು ಟಿ20ಯಲ್ಲಿ ತಮ್ಮದೇ ಆದ ಛಾಪು ಮೂಡಿಸಿದರು. ಹೀಗಾಗಿ ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗರು ಈ ಇಬ್ಬರ ಆಟವನ್ನು ಮನಸಾರೆ ಹಾಡಿ ಹೊಗಳಿದ್ದರು. ಇದೀಗ ಈ ಯುವ ಪ್ರತಿಭೆಗಳ ಬಗ್ಗೆ ತಮ್ಮ ಅಭಿಪ್ರಾಯ ಹೊರಹಾಕಿರುವ ಟೀಂ ಇಂಡಿಯಾದ ಮಾಜಿ ಮುಖ್ಯ ಕೋಚ್ ರವಿಶಾಸ್ತ್ರಿ (Bring Ravi Shastri), ಈ ಇಬ್ಬರಿಗೆ ವಿಶ್ವಕಪ್ ತಂಡದಲ್ಲಿ ಅವಕಾಶ ನೀಡಬೇಕು ಎಂದಿದ್ದಾರೆ.
ವೆಸ್ಟ್ ಇಂಡೀಸ್ ವಿರುದ್ಧದ ಎರಡು ಟೆಸ್ಟ್ ಪಂದ್ಯಗಳಲ್ಲಿ ಜೈಸ್ವಾಲ್ ಶತಕ ಸಿಡಿಸಿ ಮಿಂಚಿದರೆ, ಐದು ಪಂದ್ಯಗಳ ಟಿ20 ಸರಣಿಯಲ್ಲಿ ತಿಲಕ್ ವರ್ಮಾ ಕ್ರಮವಾಗಿ 39, 51, 49, 7 ಮತ್ತು 27 ರನ್ ಸಿಡಿಸಿದ್ದರು. ಚೊಚ್ಚಲ ಸರಣಿಯಲ್ಲಿಯೇ ಈ ರೀತಿಯ ಪ್ರದರ್ಶನ ನೀಡಿದ್ದು, ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗರ ಗಮನ ಸೆಳೆದಿತ್ತು. ಹೀಗಾಗಿ ಏಕದಿನ ವಿಶ್ವಕಪ್‌ಗೆ ಆಯ್ಕೆಯಾಗುವ ತಂಡದಲ್ಲಿ ಈ ಇಬ್ಬರನ್ನು ಸೇರಿಸಿಕೊಳ್ಳಬೇಕೆಂಬ ಸಲಹೆಯನ್ನು ರವಿಶಾಸ್ತ್ರಿ ನೀಡಿದ್ದಾರೆ.
Asia Cup 2023: ಏಷ್ಯಾಕಪ್ನಲ್ಲಿ ಕೆಎಲ್ ರಾಹುಲ್ರನ್ನು ಆಡಿಸಬಾರದು ಎಂದ ರವಿಶಾಸ್ತ್ರಿ..!
ಈ ಬಗ್ಗೆ ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ಮಾತನಾಡಿರುವ ರವಿಶಾಸ್ತ್ರಿ, ‘ಭಾರತೀಯ ಆಯ್ಕೆದಾರರಿಗೆ ಯಾರು ಫಾರ್ಮ್‌ನಲ್ಲಿದ್ದಾರೆ ಎಂಬುದು ತಿಳಿದಿದೆ. ಆದ್ದರಿಂದ ಅವರನ್ನು ವಿಶ್ವಕಪ್‌ಗೆ ಆಯ್ಕೆ ಮಾಡಿ. ತಿಲಕ್ ವರ್ಮಾ ಫಾರ್ಮ್‌ನಲ್ಲಿದ್ದರೆ ಅವರನ್ನು ಆಯ್ಕೆ ಮಾಡಿ. ಯಶಸ್ವಿ ಜೈಸ್ವಾಲ್ ಫಾರ್ಮ್‌ನಲ್ಲಿದ್ದರೆ, ಅವರನ್ನೂ ಆಯ್ಕೆ ಮಾಡಿ ಎಂದು ರವಿಶಾಸ್ತ್ರಿ ಹೇಳಿದ್ದಾರೆ.
ತಿಲಕ್ ವರ್ಮಾ ಆಕ್ರಮಣಕಾರಿ ಬ್ಯಾಟಿಂಗ್ ಜೊತೆಗೆ ಅಗ್ರ ಕ್ರಮಾಂಕದಲ್ಲಿ ಎಡಗೈ ಬ್ಯಾಟ್ಸ್‌ಮನ್ ಆಯ್ಕೆಯನ್ನು ಒದಗಿಸುತ್ತಾರೆ. ಅವರು ಆಯ್ಕೆಯಾದರೆ ಸ್ಪಿನ್ ಬೌಲಿಂಗ್ ಆಯ್ಕೆಯೂ ಸಿಗಲಿದೆ. ಹೀಗಾಗಿ ಅವರು ತಂಡಕ್ಕೆ ಎಕ್ಸ್ ಫ್ಯಾಕ್ಟರ್ ಆಗಲಿದ್ದಾರೆ. ಇವರಲ್ಲದೆ, ಟೆಸ್ಟ್ ಮತ್ತು ಟಿ20ಯಲ್ಲಿ ಯಶಸ್ವಿ ಜೈಸ್ವಾಲ್ ಉತ್ತಮ ಆರಂಭ ಪಡೆದುಕೊಂಡಿದ್ದಾರೆ. ಹೀಗಾಗಿ ಏಕದಿನ ವಿಶ್ವಕಪ್ ತಂಡಕ್ಕೆ ಈ ಇಬ್ಬರು ಆಯ್ಕೆಯಾಗಬೇಕು ಎಂದು ರವಿಶಾಸ್ತ್ರಿ ಅಭಿಪ್ರಾಯಪಟ್ಟಿದ್ದಾರೆ.
ಸೆಪ್ಟೆಂಬರ್ 5 ರಂದು ಏಕದಿನ ವಿಶ್ವಕಪ್‌ಗೆ ಟೀಂ ಇಂಡಿಯಾ ಆಯ್ಕೆಯಾಗಲಿದೆ. ಆರಂಭದಲ್ಲಿ 18 ಸದಸ್ಯರ ತಂಡವನ್ನು ಆಯ್ಕೆ ಮಾಡಲಾಗುತ್ತದೆ. ನಂತರ ಅಂತಿಮ 15 ಆಟಗಾರರನ್ನು ಆಯ್ಕೆ ಮಾಡಲಾಗುತ್ತದೆ. ವೆಸ್ಟ್ ಇಂಡೀಸ್ ಸರಣಿಯಲ್ಲಿ ತಿಲಕ್ ವರ್ಮಾ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ. ಇದು ಆಯ್ಕೆಗಾರರ ತಲೆನೋವನ್ನು ಹೆಚ್ಚಿಸಿದೆ. ವರ್ಮಾ ಮಾತ್ರವಲ್ಲದೆ, ಏಕದಿನ ವಿಶ್ವಕಪ್ ತಂಡದಲ್ಲಿ ಯಶಸ್ವಿ ಜೈಸ್ವಾಲ್ ಮತ್ತು ಇಶಾನ್ ಕಿಶನ್ ಅವರನ್ನೂ ಸೇರಿಸಿಕೊಳ್ಳಬೇಕು ಎಂದು ರವಿಶಾಸ್ತ್ರಿ ಅಭಿಪ್ರಾಯಪಟ್ಟಿದ್ದಾರೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:12 pm, Thu, 17 August 23