ಸರ್ವಂ ಕೊಹ್ಲಿ ಮಯಂ: 70 ಸಾವಿರ ‘ವಿರಾಟ್’ ಮಾಸ್ಕ್ ವಿತರಣೆ..!
Virat Kohli: ಸೌತ್ ಆಫ್ರಿಕಾ ವಿರುದ್ಧದ ಪಂದ್ಯದೊಂದಿಗೆ 35ನೇ ವಸಂತಕ್ಕೆ ಕಾಲಿಡಲಿರುವ ವಿರಾಟ್ ಕೊಹ್ಲಿಯ ಹುಟ್ಟುಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲು ಸಿಎಬಿ ಭರ್ಜರಿ ಪ್ಲ್ಯಾನ್ ರೂಪಿಸಿದೆ. ಅದರಂತೆ ನವೆಂಬರ್ 5 ರಂದು ಈಡನ್ ಗಾರ್ಡನ್ಸ್ ಸ್ಟೇಡಿಯಂ ಸರ್ವಂ ಕೊಹ್ಲಿ ಮಯಂ ಆಗುವುದರಲ್ಲಿ ಸಂದೇಹವೇ ಇಲ್ಲ.
ನವೆಂಬರ್ 5 ರಂದು ನಡೆಯಲಿರುವ ಭಾರತ-ಸೌತ್ ಆಫ್ರಿಕಾ ನಡುವಣ ಪಂದ್ಯಕ್ಕಾಗಿ ಕ್ರಿಕೆಟ್ ಅಸೋಸಿಯೇಷನ್ ಆಫ್ ಬೆಂಗಾಲ್ (ಸಿಎಬಿ) ಭರ್ಜರಿ ಸಿದ್ಧತೆಗಳನ್ನು ಆರಂಭಿಸಿದೆ. ಹೀಗೆ ಸಿದ್ಧತೆಗಳನ್ನು ಶುರು ಮಾಡಲು ಮುಖ್ಯ ಕಾರಣ ಅದೇ ದಿನ ವಿರಾಟ್ ಕೊಹ್ಲಿಯ ಹುಟ್ಟುಹಬ್ಬ ಇರುವುದು. ಹೀಗಾಗಿ ಈಡನ್ ಗಾರ್ಡನ್ಸ್ ಸ್ಟೇಡಿಯಂ ಅನ್ನು ಸರ್ವಂ ಕೊಹ್ಲಿ ಮಯವಾಗಿಸಲು ಸಿಎಬಿ ಆಡಳಿತ ಮಂಡಳಿ ನಿರ್ಧರಿಸಿದೆ.
ಇದಕ್ಕಾಗಿ ಭಾರತ-ಸೌತ್ ಆಫ್ರಿಕಾ ನಡುವಣ ಪಂದ್ಯಕ್ಕಾಗಿ ಸ್ಟೇಡಿಯಂಗೆ ಬರುವ ಪ್ರತಿಯೊಬ್ಬರಿಗೂ ವಿರಾಟ್ ಕೊಹ್ಲಿಯ ಮಾಸ್ಕ್ ನೀಡಲು ಪ್ಲ್ಯಾನ್ ರೂಪಿಸಿದೆ. ಅದರಂತೆ ಬರೋಬ್ಬರಿ 70 ಸಾವಿರ ಕೊಹ್ಲಿಯ ಮುಖವಾಡಗಳನ್ನು ವಿತರಿಸಲು ಕ್ರಿಕೆಟ್ ಅಸೋಸಿಯೇಷನ್ ಆಫ್ ಬೆಂಗಾಲ್ ಮುಂದಾಗಿದೆ. ಇದರಿಂದ ಬಹುತೇಕ ಸ್ಟೇಡಿಯಂ ಸರ್ವಂ ಕೊಹ್ಲಿ ಮಯವಾಗಿರಲಿದೆ.
ಕ್ರೀಡಾಂಗಣದಲ್ಲಿರುವ ಪ್ರತಿಯೊಬ್ಬ ಅಭಿಮಾನಿ ಕೊಹ್ಲಿ ಅವರ ಮುಖವಾಡಗಳನ್ನು ಧರಿಸಬೇಕೆಂದು ನಾವು ಬಯಸುತ್ತೇವೆ. ಅಂದು ಸುಮಾರು 70,000 ಮಾಸ್ಕ್‌ಗಳನ್ನು ವಿತರಿಸಲು ನಾವು ಯೋಜಿಸಿದ್ದೇವೆ” ಎಂದು ಸಿಎಬಿ ಅಧ್ಯಕ್ಷರಾಗಿರುವ ಸೌರವ್ ಗಂಗೂಲಿ ಅವರ ಸಹೋದರ ಸ್ನೇಹಶಿಶ್ ಗಂಗೂಲಿ ತಿಳಿಸಿದ್ದಾರೆ.
ಇನ್ನು ಈ ಪಂದ್ಯದ ಆರಂಭಕ್ಕೂ ಮುನ್ನ ಬರ್ತ್ಡೇ ಕೇಕ್ ಕಟ್ಟಿಂಗ್ ಕಾರ್ಯಕ್ರಮ ಕೂಡ ಇರಲಿದ್ದು, ಹಾಗೆಯೇ ವಿರಾಟ್ ಕೊಹ್ಲಿಗೆ ನೆನಪಿನ ಕಾಣಿಕೆಯನ್ನು ನೀಡಲು ಕ್ರಿಕೆಟ್ ಅಸೋಸಿಯೇಷನ್ ಆಫ್ ಬೆಂಗಾಲ್ ಯೋಜಿಸುತ್ತಿದೆ.
ಇದಲ್ಲದೆ, ವಿರಾಟ್ ಕೊಹ್ಲಿ ಮತ್ತು ಪ್ರೇಕ್ಷಕರಿಗಾಗಿ ಇನಿಂಗ್ಸ್ ಮಧ್ಯಂತರದಲ್ಲಿ ಪಟಾಕಿ ಪ್ರದರ್ಶನವನ್ನು ಆಯೋಜಿಸಲು ಯೋಜಿಸಿದ್ದೇವೆ. ಈ ಮೂಲಕ ಕಿಂಗ್ ಕೊಹ್ಲಿ ಹುಟ್ಟುಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಿದ್ದೇವೆ ಎಂದು ಸ್ನೇಹಶಿಶ್ ತಿಳಿಸಿದ್ದಾರೆ.
ಒಟ್ಟಿನಲ್ಲಿ ಸೌತ್ ಆಫ್ರಿಕಾ ವಿರುದ್ಧದ ಪಂದ್ಯದೊಂದಿಗೆ 35ನೇ ವಸಂತಕ್ಕೆ ಕಾಲಿಡಲಿರುವ ವಿರಾಟ್ ಕೊಹ್ಲಿಯ ಹುಟ್ಟುಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲು ಸಿಎಬಿ ಭರ್ಜರಿ ಪ್ಲ್ಯಾನ್ ರೂಪಿಸಿದೆ. ಅದರಂತೆ ನವೆಂಬರ್ 5 ರಂದು ಈಡನ್ ಗಾರ್ಡನ್ಸ್ ಸ್ಟೇಡಿಯಂ ಸರ್ವಂ ಕೊಹ್ಲಿ ಮಯಂ ಆಗುವುದರಲ್ಲಿ ಸಂದೇಹವೇ ಇಲ್ಲ.
ಟೀಮ್ ಇಂಡಿಯಾ ಮುಂದಿನ ಪಂದ್ಯಗಳ ವೇಳಾಪಟ್ಟಿ:
- ನವೆಂಬರ್ 2: ಭಾರತ vs ಶ್ರೀಲಂಕಾ (ಮುಂಬೈ)
- ನವೆಂಬರ್ 5: ಭಾರತ vs ಸೌತ್ ಆಫ್ರಿಕಾ (ಕೊಲ್ಕತ್ತಾ)
- ನವೆಂಬರ್ 12: ಭಾರತ vs ನೆದರ್ಲೆಂಡ್ಸ್ (ಬೆಂಗಳೂರು)
ಇದನ್ನೂ ಓದಿ: Virat Kohli: ಒಂದೇ ಒಂದು ರನ್ ಗಳಿಸದೇ ದಾಖಲೆ ಬರೆದ ವಿರಾಟ್ ಕೊಹ್ಲಿ..!