ಪ್ರಸ್ತುತ ವೆಸ್ಟ್ ಇಂಡೀಸ್ ವಿರುದ್ಧ ಟಿ20 ಸರಣಿ ಆಡುತ್ತಿರುವ ಟೀಂ ಇಂಡಿಯಾ (India vs West Indies) ಆ ಬಳಿಕ ಆಗಸ್ಟ್ 30 ರಿಂದ ನಡೆಯಲ್ಲಿರುವ ಏಷ್ಯಾಕಪ್ಗೆ (Asia Cup 2023) ತಯಾರಿ ಆರಂಭಿಸಲಿದೆ. ಈ ಬಾರಿಯ ಏಷ್ಯಾಕಪ್ ಏಕದಿನ ಮಾದರಿಯಲ್ಲಿ ನಡೆಯುತ್ತಿರುವುದರಿಂದ ಪಂದ್ಯಾವಳಿಯ ರೋಚಕತೆ ಮತ್ತಷ್ಟು ಹೆಚ್ಚಿದೆ. ಆದರೆ ಪಂದ್ಯಾವಳಿ ಹತ್ತಿರವಾಗುತ್ತಿದ್ದಂತೆ ಟೀಂ ಇಂಡಿಯಾ (Team India) ಆಟಗಾರರ ಕಳಪೆ ಫಾರ್ಮ್ ಆಯ್ಕೆ ಮಂಡಳಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಅದರಲ್ಲೂ ಸತತ ಅವಕಾಶಗಳ ನಡುವೆಯೂ ಏಕದಿನ ಮಾದರಿಯಲ್ಲಿ ಫ್ಲಾಪ್ ಶೋ ಮುಂದುವರೆಸಿರುವ ಸೂರ್ಯಕುಮಾರ್ ಯಾದವ್ಗೆ (Suryakumar Yadav) ಪದೇಪದೇ ಅವಕಾಶ ನೀಡುತ್ತಿರುವ ಬಗ್ಗೆ ಈಗಾಗಲೇ ಚರ್ಚೆ ಶುರುವಾಗಿದೆ. ಇದೀಗ ಏಷ್ಯಾಕಪ್ ಆರಂಭಕ್ಕೂ ಮುನ್ನ ಸೂರ್ಯಕುಮಾರ್ಗೆ ಹೆಚ್ಚು ಅವಕಾಶ ನೀಡುತ್ತಿರುವ ಬಗ್ಗೆ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ (Rohit sharma) ಮೌನ ಮುರಿದಿದ್ದಾರೆ.
ಸೂರ್ಯಕುಮಾರ್ ಯಾದವ್ ಎಂತಹ ಪ್ರತಿಭಾವಂತ ಆಟಗಾರ ಎಂಬುದು ಈಗಾಗಲೇ ಸಾಕಷ್ಟು ಭಾರಿ ಸಾಭೀತಾಗಿದೆ. ಇದಕ್ಕೆ ಪೂರಕವಾಗಿ ಚುಟುಕು ಮಾದರಿಯಲ್ಲಿ ಸುನಾಮಿ ಎಬ್ಬಿಸಿರುವ ಸೂರ್ಯ ಸುಮಾರು ತಿಂಗಳುಗಳಿಂದ ಈ ಮಾದರಿಯ ಶ್ರೇಯಾಂಕದಲ್ಲಿ ನಂ.1 ಸ್ಥಾನವನ್ನು ಅಲಂಕರಿಸಿದ್ದಾರೆ. ಆದರೆ ಏಕದಿನ ಸ್ವರೂಪಕ್ಕೆ ಬಂದರೆ ಈ ಮಾದರಿಯಲ್ಲಿ ಸೂರ್ಯಕುಮಾರ್ ಪ್ರದರ್ಶನ ಸಪ್ಪೆಸಪ್ಪೆಯಾಗಿದೆ. ವೆಸ್ಟ್ ಇಂಡೀಸ್ ವಿರುದ್ಧ ನಡೆದ ಏಕದಿನ ಸರಣಿಗೂ ಮುನ್ನ ನಡೆದ ಆಸ್ಟ್ರೇಲಿಯಾ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಮೊದಲ ಎಸೆತದಲ್ಲೇ ಔಟಾಗಿ ಶೂನ್ಯ ಸಂಪಾಧನೆ ಮಾಡಿದ್ದ ಸೂರ್ಯ, ಆ ಬಳಿಕ ಆಡಿದ ವಿಂಡೀಸ್ ವಿರುದ್ಧದ ಏಕದಿನ ಸರಣಿಯಲ್ಲೂ ಕಳಪೆ ಪ್ರದರ್ಶನ ನೀಡಿದ್ದರು. ಹೀಗಾಗಿ ಸತತ ವೈಫಲ್ಯಗಳ ಹೊರತಾಗಿಯೂ ಸೂರ್ಯನಿಗೆ ಏಕದಿನದಲ್ಲಿ ಪದೇ ಪದೇ ಅವಕಾಶ ನೀಡುತ್ತಿರುವುದಕ್ಕೆ ಆಯ್ಕೆ ಮಂಡಳಿಯ ಮೇಲೆ ಸಾಕಷ್ಟು ಪ್ರಶ್ನೆಗಳು ಎದ್ದಿದ್ದವು.
ಕೊನೆಯ 10 ಟಿ20 ಪಂದ್ಯಗಳಲ್ಲಿ ಸೂರ್ಯಕುಮಾರ್ ಪ್ರದರ್ಶನ ಹೇಗಿದೆ ಗೊತ್ತಾ?
ಇದೀಗ ಮುಂಬೈನಲ್ಲಿ ಕಾರ್ಯಕ್ರಮವೊಂದರಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರೋಹಿತ್, ಸೂರ್ಯಕುಮಾರ್ಗೆ ಪದೇ ಪದೇ ಅವಕಾಶ ನೀಡುತ್ತಿರುವುದ್ಯಾಕೆ ಎಂಬ ಪ್ರಶ್ನೆಗೆ ಉತ್ತರಿಸಿದ್ದಾರೆ. ‘ಸೂರ್ಯಕುಮಾರ್ ಯಾದವ್ ಒಬ್ಬ ಶ್ರೇಷ್ಠ ಬ್ಯಾಟ್ಸ್‌ಮನ್ ಆಗಿದ್ದು, ಅವರಂತಹ ಬ್ಯಾಟ್ಸ್‌ಮನ್‌ಗೆ ಹೆಚ್ಚು ಹೆಚ್ಚು ಪಂದ್ಯಗಳಲ್ಲಿ ಅವಕಾಶ ನೀಡಬೇಕಾಗಿದೆ. ಇದರಿಂದ ಅವರು ಆತ್ಮವಿಶ್ವಾಸ ಹೆಚ್ಚಾಗಲಿದ್ದು, ಪಂದ್ಯದಿಂದ ಪಂದ್ಯಕ್ಕೆ ಲಯ ಕಂಡುಕೊಳ್ಳಲಿದ್ದಾರೆ. ವಾಸ್ತವವಾಗಿ ಸೂರ್ಯಕುಮಾರ್ ಅವರು ಈ ವರ್ಷ ಐಪಿಎಲ್ನಲ್ಲಿ ಉತ್ತಮ ಆರಂಭ ಪಡೆದುಕೊಳ್ಳಲಿಲ್ಲ. ಆದರೆ ಆ ನಂತರ ಲಯಕ್ಕೆ ಮರಳಿದ ಅವರು ಮಾಡಿದ್ದನ್ನು ಎಲ್ಲರೂ ನೋಡಿದ್ದಾರೆ ಎಂದು ರೋಹಿತ್ ಹೇಳಿದ್ದಾರೆ.
ಈ ವರ್ಷ ಅಕ್ಟೋಬರ್ 5 ರಿಂದ ನವೆಂಬರ್ 19 ರವರೆಗೆ ಏಕದಿನ ವಿಶ್ವಕಪ್ ನಡೆಯಲಿದೆ. ತಂಡದ ಇಬ್ಬರು ಪ್ರಮುಖ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳಾದ ಶ್ರೇಯಸ್ ಅಯ್ಯರ್ ಮತ್ತು ಕೆಎಲ್ ರಾಹುಲ್ ಪ್ರಸ್ತುತ ಗಾಯಗೊಂಡಿದ್ದಾರೆ. ಇಬ್ಬರೂ ಗಾಯದಿಂದ ಹೊರಬರಲು ಪ್ರಯತ್ನಿಸುತ್ತಿದ್ದು, ವಿಶ್ವಕಪ್ ಆಡುವ ಬಗ್ಗೆ ಯಾವುದೇ ಖಚಿತತೆ ಸಿಕ್ಕಿಲ್ಲ. ಈ ಕಾರಣಕ್ಕಾಗಿ ಸೂರ್ಯಕುಮಾರ್ ಅವರನ್ನು ಏಕದಿನ ತಂಡಕ್ಕೆ ಕರೆತರಲಾಗಿದ್ದರೂ, ಅವರು ಸತತವಾಗಿ ವಿಫಲರಾಗಿದ್ದಾರೆ. ಆದಾಗ್ಯೂ, ತಂಡದ ಮ್ಯಾನೇಜ್‌ಮೆಂಟ್ ಅವರ ಮೇಲೆ ನಂಬಿಕೆ ಇರಿಸಿದ್ದು, ಅವರಿಗೆ ಅವಕಾಶಗಳನ್ನು ನೀಡುತ್ತಲೇ ಇದೆ. ಹೀಗಾಗಿ ಸೂರ್ಯಕುಮಾರ್ ಯಾದವ್ ಹೆಸರೂ ಸಹ ಏಕದಿನ ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯುವ ರೇಸ್‌ನಲ್ಲಿದೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ