Champions Trophy 2025: ಭಾರತ- ಪಾಕ್ ಪಂದ್ಯಕ್ಕೆ ಅಂಪೈರ್ಸ್ ನೇಮಕ..! ನಿಟ್ಟುಸಿರು ಬಿಟ್ಟ ಫ್ಯಾನ್ಸ್
Champions Trophy 2025: ಚಾಂಪಿಯನ್ಸ್ ಟ್ರೋಫಿಯಲ್ಲಿ ನಡೆಯಲ್ಲಿರುವ ಭಾರತ ಹಾಗೂ ಪಾಕಿಸ್ತಾನ ನಡುವಿನ ಹೈ-ವೋಲ್ಟೇಜ್ ಪಂದ್ಯಕ್ಕೆ ಅಂಪೈರ್‌ಗಳು ಯಾರ್ಯಾರು ಎಂಬುದನ್ನು ಐಸಿಸಿ ಘೋಷಿಸಿದೆ. ಪಾಲ್ ರೀಫೆಲ್ ಮತ್ತು ರಿಚರ್ಡ್ ಇಲ್ಲಿಂಗ್‌ವರ್ತ್ ಆನ್-ಫೀಲ್ಡ್ ಅಂಪೈರ್‌ಗಳಾಗಿದ್ದರೆ, ಮೈಕೆಲ್ ಗೌಫ್ ಟಿವಿ ಅಂಪೈರ್ ಆಗಿದ್ದಾರೆ. ಭಾರತದ ಇತರ ಪಂದ್ಯಗಳಿಗೂ ಪಂದ್ಯದ ಅಧಿಕಾರಿಗಳ ಪಟ್ಟಿಯನ್ನು ಐಸಿಸಿ ಬಿಡುಗಡೆ ಮಾಡಿದೆ.

2025 ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಇದೇ ಫೆಬ್ರವರಿ 19 ರಿಂದ ಪಾಕಿಸ್ತಾನ ಹಾಗೂ ಯುಎಇ ಆತಿಥ್ಯದಲ್ಲಿ ನಡೆಯಲ್ಲಿದೆ. ಅಂದರೆ ಭಾರತದ ಪಂದ್ಯಗಳು ದುಬೈನಲ್ಲಿ ನಡೆದರೆ, ಉಳಿದ ತಂಡಗಳ ಪಾಕಿಸ್ತಾನದಲ್ಲಿ ನಡೆಯಲ್ಲಿವೆ. ಈ ಟೂರ್ನಿಯ ಉದ್ಘಾಟನಾ ಪಂದ್ಯ ಫೆಬ್ರವರಿ 19 ರಂದು ಕರಾಚಿಯಲ್ಲಿ ನಡೆಯಲ್ಲಿದ್ದು, ಫೈನಲ್ ಪಂದ್ಯ ಮಾರ್ಚ್ 9 ರಂದು ನಡೆಯಲಿದೆ. ಚಾಂಪಿಯನ್ಸ್ ಟ್ರೋಫಿ 19 ರಂದು ಆರಂಭವಾದರೂ ಕೋಟ್ಯಾಂತರ ಅಭಿಮಾನಿಗಳು ಕಾದು ಕುಳಿತಿರುವ ಪಂದ್ಯ ಫೆಬ್ರವರಿ 23 ರಂದು ನಡೆಯಲ್ಲಿದೆ. ಅಂದರೆ ಟೂರ್ನಿಯ ಹೈವೋಲ್ಟೇಜ್ ಕದನ ಭಾರತ ಹಾಗೂ ಪಾಕಿಸ್ತಾನದ ನಡುವೆ ದುಬೈ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಲಿದೆ. ಇದೀಗ ಐಸಿಸಿ, ಈ ಪಂದ್ಯಕ್ಕೆ ಅಂಪೈರ್‌ಗಳು ಯಾರ್ಯಾರು ಎಂಬುದನ್ನು ಬಹಿರಂಗಪಡಿಸಿದೆ.
ಭಾರತ-ಪಾಕ್ ಪಂದ್ಯಕ್ಕೆ ಅಂಪೈರ್ ಯಾರು?
ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯಕ್ಕೆ ಪಾಲ್ ರೀಫೆಲ್ ಮತ್ತು ರಿಚರ್ಡ್ ಇಲ್ಲಿಂಗ್‌ವರ್ತ್ ಅವರನ್ನು ಆನ್-ಫೀಲ್ಡ್ ಅಂಪೈರ್‌ಗಳಾಗಿ ಐಸಿಸಿ ನೇಮಿಸಿದೆ. ಮೈಕೆಲ್ ಗೌಫ್ ಟಿವಿ ಅಂಪೈರ್ ಆಗಿರಲಿದ್ದು, ಆಡ್ರಿಯನ್ ಹೋಲ್ಡ್‌ಸ್ಟಾಕ್ ನಾಲ್ಕನೇ ಅಂಪೈರ್ ಆಗಿ ಮತ್ತು ಡೇವಿಡ್ ಬೂನ್ ಮ್ಯಾಚ್ ರೆಫರಿಯ ಪಾತ್ರವನ್ನು ನಿರ್ವಹಿಸಲಿದ್ದಾರೆ. ಈ ಎಲ್ಲಾ ಅಂಪೈರ್‌ಗಳು ಸಾಕಷ್ಟು ಅನುಭವ ಹೊಂದಿರುವ ಕಾರಣ ಐಸಿಸಿ, ಈ ಹೈವೋಲ್ಟೇಜ್ ಕದನವನ್ನು ಯಾವುದೇ ವಿವಾದಗಳಿದಂತೆ ನಡೆಸುವ ಜವಬ್ದಾರಿಯನ್ನು ನೀಡಿದೆ. ಇಲ್ಲಿ ಟೀಂ ಇಂಡಿಯಾ ಅಭಿಮಾನಿಗಳಿಗೆ ಸಂತಸದ ಸುದ್ದಿಯೆಂದರೆ, ಟೀಂ ಇಂಡಿಯಾ ಪಾಲಿಗೆ ಐರನ್ ಲೆಗ್ ಅಂಪೈರ್ ಎಂದೇ ಕುಖ್ಯಾತರಾಗಿರುವ ರಿಚರ್ಡ್ ಕೆಟಲ್‌ಬರೋ ಭಾರತದ ಯಾವ ಪಂದ್ಯಕ್ಕೂ ಅಂಪೈರ್ ಆಗಿ ಕೆಲಸ ಮಾಡುವುದಿಲ್ಲ.
ಉಳಿದ ಪಂದ್ಯಗಳಿಗೆ ಯಾರ್ಯಾರು ಅಂಪೈರ್ಸ್?
ಮತ್ತೊಂದೆಡೆ, ಫೆಬ್ರವರಿ 20 ರಂದು ದುಬೈನಲ್ಲಿ ನಡೆಯಲಿರುವ ಭಾರತ-ಬಾಂಗ್ಲಾದೇಶ ಪಂದ್ಯಕ್ಕೆ ಪಾಲ್ ರೀಫೆಲ್ ಮತ್ತು ಆಡ್ರಿಯನ್ ಹೋಲ್ಡ್‌ಸ್ಟಾಕ್ ಆನ್-ಫೀಲ್ಡ್ ಅಂಪೈರ್‌ಗಳಾಗಿದ್ದರೆ, ರಿಚರ್ಡ್ ಇಲ್ಲಿಂಗ್‌ವರ್ತ್ ಟಿವಿ ಅಂಪೈರ್ ಆಗಿರುತ್ತಾರೆ. ಹಾಗೆಯೇ ಮೈಕೆಲ್ ಗೌಫ್ ನಾಲ್ಕನೇ ಅಂಪೈರ್ ಆಗಿರಲಿದ್ದು, ಬೂನ್ ಮ್ಯಾಚ್ ರೆಫರಿಯಾಗಿರುತ್ತಾರೆ. ಹಾಗೆಯೇ ಮಾರ್ಚ್ 2 ರಂದು ದುಬೈನಲ್ಲಿ ನಡೆಯಲಿರುವ ಭಾರತ-ನ್ಯೂಜಿಲೆಂಡ್ ಪಂದ್ಯಕ್ಕೆ ಮೈಕೆಲ್ ಗೌಫ್ ಮತ್ತು ರಿಚರ್ಡ್ ಇಲ್ಲಿಂಗ್‌ವರ್ತ್ ಅವರಿಗೆ ಫೀಲ್ಡ್ ಅಂಪೈರ್‌ಗಳ ಜವಾಬ್ದಾರಿಯನ್ನು ನೀಡಲಾಗಿದ್ದು, ಹೋಲ್ಡ್‌ಸ್ಟಾಕ್ ಟಿವಿ ಅಂಪೈರ್ ಆಗಿರುತ್ತಾರೆ. ರೀಫೆಲ್ ನಾಲ್ಕನೇ ಅಂಪೈರ್ ಆಗಿದ್ದರೆ, ಡೇವಿಡ್ ಬೂನ್ ಮ್ಯಾಚ್ ರೆಫರಿಯಾಗಿರುತ್ತಾರೆ.
ಆರನೇ ಬಾರಿಗೆ ಮುಖಾಮುಖಿ
ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಇದುವರೆಗೆ ಐದು ಬಾರಿ ಮುಖಾಮುಖಿಯಾಗಿವೆ. ಈ ಅವಧಿಯಲ್ಲಿ ಪಾಕಿಸ್ತಾನ 3 ಪಂದ್ಯಗಳನ್ನು ಗೆದ್ದಿದ್ದರೆ, ಟೀಂ ಇಂಡಿಯಾ 2 ಪಂದ್ಯಗಳನ್ನು ಗೆದ್ದಿದೆ. ಕೊನೆಯ ಬಾರಿಗೆ 2017 ರಲ್ಲಿ, ಈ ಪಂದ್ಯಾವಳಿಯ ಫೈನಲ್ ಪಂದ್ಯವನ್ನು ಈ ಎರಡೂ ತಂಡಗಳ ನಡುವೆ ಆಡಲಾಗಿತ್ತು. ಆ ಪಂದ್ಯದಲ್ಲಿ ಪಾಕಿಸ್ತಾನ ತಂಡವು ಭಾರತ ತಂಡವನ್ನು ಸೋಲಿಸಿ ಪ್ರಶಸ್ತಿಯನ್ನು ಗೆದ್ದುಕೊಂಡಿತ್ತು. ಹೀಗಾಗಿ ಆ ಹಳೆಯ ಸೋಲಿಗೆ ಸೇಡು ತೀರಿಸಿಕೊಳ್ಳುವ ಇರಾದೆಯೊಂದಿಗೆ ಟೀಂ ಇಂಡಿಯಾ ಕಣಕ್ಕಿಳಿಯಲಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
