Champions League T20: 12 ವರ್ಷಗಳ ನಂತರ ಮತ್ತೆ ಆರಂಭವಾಗಲಿದೆ ಚಾಂಪಿಯನ್ಸ್ ಲೀಗ್ ಟಿ20
Champions League T20: 2014ರಲ್ಲಿ ನಿಂತುಹೋಗಿದ್ದ ಚಾಂಪಿಯನ್ಸ್ ಲೀಗ್ ಟಿ20 2026ರ ಸೆಪ್ಟೆಂಬರ್‌ನಲ್ಲಿ ಮತ್ತೆ ನಡೆಯಲಿದೆ ಎಂದು ವರದಿಯಾಗಿದೆ. ಐಸಿಸಿ ಸಭೆಯಲ್ಲಿ ಈ ಬಗ್ಗೆ ಚರ್ಚಿಸಲಾಗಿದೆ. ವಿಶ್ವದ ಪ್ರಮುಖ ಟಿ20 ತಂಡಗಳು ಭಾಗವಹಿಸುವ ಈ ಲೀಗ್‌ನ ಪುನರಾರಂಭ ಆಟಗಾರರಿಗೆ ದೊಡ್ಡ ಸವಾಲನ್ನು ಒಡ್ಡಲಿದೆ. ಹಲವು ಲೀಗ್‌ಗಳಲ್ಲಿ ಆಡುವ ಆಟಗಾರರು ಈ ಲೀಗ್‌ಗಾಗಿ ಯಾವ ತಂಡವನ್ನು ಆಯ್ಕೆ ಮಾಡಬೇಕು ಎಂಬುದು ಪ್ರಮುಖ ಪ್ರಶ್ನೆಯಾಗಿದೆ.

ಚಾಂಪಿಯನ್ಸ್ ಲೀಗ್ ಟಿ20 (Champions League T20) ಮತ್ತೆ ಆರಂಭವಾಗಲಿದೆ ಎಂದು ಕೆಲವೇ ದಿನಗಳ ಹಿಂದೆ ವರದಿಯಾಗಿತ್ತು. ಇದೀಗ ಈ ಟಿ20 ಲೀಗ್ ಯಾವಾಗ ನಡೆಯಲಿದೆ ಎಂಬ ಮಾಹಿತಿಯೂ ಹೊರಬಿದ್ದಿದೆ. ಸಿಂಗಾಪುರದಲ್ಲಿ ನಡೆಯುತ್ತಿರುವ ಐಸಿಸಿ (ICC) ಸಭೆಯಲ್ಲಿ ಚಾಂಪಿಯನ್ಸ್ ಲೀಗ್ ಟಿ20 ಅನ್ನು ಮತ್ತೆ ಪ್ರಾರಂಭಿಸಲು ತೀರ್ಮಾನಿಸಲಾಗಿದೆ ಎಂದು ವರದಿಯಾಗಿದೆ. ವಾಸ್ತವವಾಗಿ 2008 ರಿಂದ ಆರಂಭವಾಗಿದ್ದ ಈ ಲೀಗ್ 2014 ರಲ್ಲಿ ನಾನಾ ಕಾರಣಗಳಿಂದ ರದ್ದಾಗಿತ್ತು. ಆದರೀಗ ಹಲವು ದೇಶಗಳಲ್ಲಿ ಟಿ20 ಲೀಗ್ ನಡೆಯುತ್ತಿದ್ದು, ಇದರ ಜನಪ್ರಿಯತೆಯನ್ನು ಮನಗಂಡಿರುವ ಆಯೋಜಕರು ಮತ್ತೆ ಚಾಂಪಿಯನ್ಸ್ ಲೀಗ್ ಟಿ20ಯನ್ನು ಆರಂಭಿಸಲು ಮುಂದಾಗಿದ್ದಾರೆ. ಅದರಂತೆ ಪ್ರಸ್ತುತ ಕೇಳಿಬಂದಿರುವ ಮಾಹಿತಿಯ ಪ್ರಕಾರ ಈ ಲೀಗ್ 2026 ರ ಸೆಪ್ಟೆಂಬರ್ ತಿಂಗಳಲ್ಲಿ ನಡೆಯಬಹುದು ಎಂದು ವರದಿಯಾಗಿದೆ.
12 ವರ್ಷಗಳ ನಂತರ ಮತ್ತೆ ಆರಂಭ
ಕಳೆದ ಎರಡು ದಶಕಗಳಲ್ಲಿ ಟಿ20 ಕ್ರಿಕೆಟ್ ಕ್ರಿಕೆಟ್ ಜಗತ್ತನ್ನು ಸಂಪೂರ್ಣವಾಗಿ ಬದಲಾಯಿಸಿದೆ. ಹೀಗಾಗಿ ಟಿ20 ಚಾಂಪಿಯನ್ಸ್ ಲೀಗ್ ಮತ್ತೆ ಆರಂಭವಾಗುತ್ತಿದೆ. ಈ ಲೀಗ್‌ನಲ್ಲಿ ಈ ಹಿಂದಿನಂತೆ ಪ್ರಪಂಚದಾದ್ಯಂತದ ಅಗ್ರ ಟಿ20 ಫ್ರಾಂಚೈಸಿ ತಂಡಗಳು ಪರಸ್ಪರ ಆಡಲಿವೆ. ಮಾಧ್ಯಮ ವರದಿಗಳ ಪ್ರಕಾರ, ಮುಂದಿನ ವರ್ಷ ಸೆಪ್ಟೆಂಬರ್‌ನಲ್ಲಿ ಟಿ20 ಚಾಂಪಿಯನ್ಸ್ ಲೀಗ್ ಅನ್ನು ಮತ್ತೆ ಪ್ರಾರಂಭಿಸಲಾಗುವುದು.
🚨 CLT20 CONFIRMED & LOCKED IN. 🚨
– The Champions League T20 will be relaunched in 2026 September. (SMH). pic.twitter.com/HkZA9OhdnE
— Mufaddal Vohra (@mufaddal_vohra) July 20, 2025
ಮೇಲೆ ಹೇಳಿದಂತೆ ಟಿ20 ಚಾಂಪಿಯನ್ಸ್ ಲೀಗ್‌ನ ಮೊದಲ ಸೀಸನ್ 2008 ರಲ್ಲಿ ಪ್ರಾರಂಭವಾಯಿತು ಮತ್ತು ಕೊನೆಯ ಸೀಸನ್ 2014 ರಲ್ಲಿ ನಡೆಯಿತು. ಕಳೆದ ಸೀಸನ್ ಅನ್ನು ಎಂಎಸ್ ಧೋನಿ ನಾಯಕತ್ವದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಗೆದ್ದುಕೊಂಡಿತು. ದಿ ಸಿಡ್ನಿ ಮಾರ್ನಿಂಗ್ ಹೆರಾಲ್ಡ್‌ನ ವರದಿಯ ಪ್ರಕಾರ, ಚಾಂಪಿಯನ್ಸ್ ಲೀಗ್ ಟಿ20 ಪುನರಾರಂಭದ ಬಗ್ಗೆ ಐಸಿಸಿ ಸಭೆಯಲ್ಲಿ ಸದಸ್ಯರಲ್ಲಿ ಚರ್ಚಿಸಲಾಗಿದೆ. ಈ ಟಿ20 ಪಂದ್ಯಾವಳಿಯನ್ನು ಪುನರಾರಂಭಿಸುವ ಬಗ್ಗೆ ಐಸಿಸಿ ಸದಸ್ಯರು ಸರ್ವಾನುಮತದಿಂದ ನಿರ್ಧಾರಕ್ಕೆ ಬಂದಿದ್ದು ಮುಂದಿನ ವರ್ಷ ಸೆಪ್ಟೆಂಬರ್‌ನಲ್ಲಿ ಈ ಲೀಗ್ ಅನ್ನು ಮರಳಿ ತರುವ ಯೋಜನೆ ಇದೆ ಎಂದು ವರದಿ ಹೇಳುತ್ತದೆ.
ಆಟಗಾರರ ಮುಂದೆ ದೊಡ್ಡ ಸವಾಲು
ಚಾಂಪಿಯನ್ಸ್ ಲೀಗ್‌ನ ಮರಳುವಿಕೆ ಆಟಗಾರರಿಗೆ ದೊಡ್ಡ ಸವಾಲನ್ನು ಒಡ್ಡಲಿದೆ. ವಿಶ್ವದ ಕೆಲವು ಅಗ್ರ ಟಿ20 ಆಟಗಾರರು ಪ್ರತಿ ವರ್ಷ ನಾಲ್ಕು ಅಥವಾ ಐದು ವಿಭಿನ್ನ ಫ್ರಾಂಚೈಸ್ ಲೀಗ್‌ಗಳಲ್ಲಿ ಭಾಗವಹಿಸುತ್ತಾರೆ. ಅಂತಹ ಪರಿಸ್ಥಿತಿಯಲ್ಲಿ, ಅವರು ಟಿ20 ಚಾಂಪಿಯನ್ಸ್ ಲೀಗ್‌ನಲ್ಲಿ ಯಾವ ಫ್ರಾಂಚೈಸಿಗಾಗಿ ಆಡಬೇಕೆಂದು ನಿರ್ಧರಿಸಬೇಕಾಗುತ್ತದೆ. ಇದು ಆಟಗಾರರ ಮೇಲೆ ಹೆಚ್ಚು ಒತ್ತಡವನ್ನುಂಟು ಮಾಡುವ ಸಾಧ್ಯತೆಗಳಿವೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:34 pm, Sun, 20 July 25
