IPL 2026: ಐಪಿಎಲ್ ಟ್ರೇಡ್ ವಿಂಡೋ ಓಪನ್: ಆಟಗಾರರ ವರ್ಗಾವಣೆಯ ನಿಯಮಗಳೇನು?
IPL 2026 Trade Window Rules: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್ 2026) ಸೀಸನ್-19 ರ ಹರಾಜಿಗೂ ಮುನ್ನವೇ ಕೆಲ ಫ್ರಾಂಚೈಸಿಗಳು ಆಟಗಾರರನ್ನು ಟ್ರೇಡ್ ಮಾಡಿಕೊಳ್ಳಲು ಮುಂದಾಗುತ್ತಿದೆ. ಈ ಮೂಲಕ ಮಿನಿ ಹರಾಜಿಗೂ ಮುನ್ನ ತಮ್ಮ ತಂಡಗಳನ್ನು ಬಲಿಷ್ಠಗೊಳಿಸಲು ಪ್ಲ್ಯಾನ್ ರೂಪಿಸುತ್ತಿದೆ.
Updated on:Aug 16, 2025 | 8:08 AM

ಟ್ರೇಡ್ ವಿಂಡೋ ಎಂದರೆ ತಮ್ಮ ತಂಡಗಳಲ್ಲಿರುವ ಆಟಗಾರರನ್ನು ಮಾರಾಟ ಮಾಡಲು ಅಥವಾ ವಿನಿಮಯ ಮಾಡಿಕೊಳ್ಳಲು ಫ್ರಾಂಚೈಸಿಗಳಿಗೆ ಇರುವ ಆಯ್ಕೆ. ಈ ಆಯ್ಕೆಯ ಮೂಲಕ ಫ್ರಾಂಚೈಸಿಗಳು ಹರಾಜಿಗೂ ಮುನ್ನ ಆಟಗಾರರನ್ನು ಪರಸ್ಪರ ವರ್ಗಾಯಿಸಿಕೊಳ್ಳಲು ಅಥವಾ ಮಾರಾಟ ಮಾಡಬಹುದು. ಆದರೆ ಹೀಗೆ ಆಟಗಾರರನ್ನು ಮಾರಾಟ ಮಾಡಲು ಅಥವಾ ವರ್ಗಾಯಿಸಿಕೊಳ್ಳಲು ಕೆಲ ನಿಯಮಗಳಿವೆ. ಆ ನಿಯಮಗಳೆಂದರೆ...

ಆಟಗಾರನ ಒಪ್ಪಿಗೆ: ಯಾವುದೇ ಫ್ರಾಂಚೈಸಿ ತನ್ನ ತಂಡದಲ್ಲಿರುವ ಆಟಗಾರನನ್ನು ಬೇರೊಂದು ತಂಡಕ್ಕೆ ವರ್ಗಾಯಿಸಲು ಅಥವಾ ಮಾರಾಟ ಮಾಡಲು ಬಯಸಿದರೆ, ಆ ಆಟಗಾರನ ಸಮ್ಮತಿಯನ್ನು ಪಡೆದುಕೊಳ್ಳಬೇಕು. ಹೀಗೆ ಆಟಗಾರ ಒಪ್ಪಿಗೆ ಸೂಚಿಸಿದರೆ ಮಾತ್ರ ಬೇರೊಂದು ಫ್ರಾಂಚೈಸಿಗೆ ಮಾರಾಟ ಅಥವಾ ವಿನಿಮಯ ಮಾಡಿಕೊಳ್ಳಬಹುದು. ಆದರೆ ಇಲ್ಲಿ ಆಟಗಾರನು ನಿರಾಕರಿಸುವ ಸಾಧ್ಯತೆ ತುಂಬಾ ಕಡಿಮೆ. ಏಕೆಂದರೆ ಆಟಗಾರನು ಅಸಮ್ಮತಿ ಸೂಚಿಸಿದರೆ, ಆತನನ್ನು ಹರಾಜಿಗೂ ಮುನ್ನ ತಂಡದಿಂದ ಕೈ ಬಿಡುವ ಸಾಧ್ಯತೆ ಇರುತ್ತದೆ. ಹೀಗಾಗಿ ಹೆಚ್ಚಿನ ಆಟಗಾರರು ವರ್ಗಾವಣೆ ಅಥವಾ ಮಾರಾಟಕ್ಕೆ ಸಮ್ಮತಿ ಸೂಚಿಸುತ್ತಾರೆ.

ಕ್ಯಾಶ್ ಡೀಲ್: ಟ್ರೇಡ್ ವಿಂಡೋ ಆಯ್ಕೆಯ ಮೂಲಕ ಆಟಗಾರರನ್ನು ಮಾರಾಟ ಮಾಡಲು ಅವಕಾಶವಿದೆ. ಉದಾಹರಣೆಗೆ 2022 ರಲ್ಲಿ ಹಾರ್ದಿಕ್ ಪಾಂಡ್ಯ ಗುಜರಾತ್ ಟೈಟಾನ್ಸ್ ತಂಡದಲ್ಲಿದ್ದರು. 2023ರ ಐಪಿಎಲ್ ಹರಾಜಿಗೂ ಮುನ್ನ ಮುಂಬೈ ಇಂಡಿಯನ್ಸ್ ಹಾರ್ದಿಕ್ ಪಾಂಡ್ಯರನ್ನು 15 ಕೋಟಿ ರೂ. ನೀಡಿ ಖರೀದಿಸಿತ್ತು. ಇಲ್ಲಿ ಹಾರ್ದಿಕ್ ಪಾಂಡ್ಯಗೆ ನೀಡಲಾದ ಮೊತ್ತ ಬಹಿರಂಗವಾದರೂ, ಇದಕ್ಕಾಗಿ ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯು ಗುಜರಾತ್ ಟೈಟಾನ್ಸ್ ನೀಡಿದ ಹೆಚ್ಚುವರಿ ಮೊತ್ತವನ್ನು ಬಹಿರಂಗಪಡಿಸಲಾಗಿಲ್ಲ. ಹೀಗೆ ಎರಡು ಫ್ರಾಂಚೈಸಿಗಳ ನಡುವೆ ನಡೆದ ಟ್ರಾನ್ಸ್ಫರ್ ಡೀಲ್ ಮೊತ್ತವನ್ನು ಬಹಿರಂಗಪಡಿಸಬೇಕಾದ ಅಗತ್ಯ ಕೂಡ ಇಲ್ಲ. ಹೀಗಾಗಿ ಕೆಲ ಫ್ರಾಂಚೈಸಿಗಳು ಹೆಚ್ಚುವರಿ ಮೊತ್ತಕ್ಕೆ ತನ್ನಲ್ಲಿರುವ ಆಟಗಾರರನ್ನು ಮಾರಾಟ ಮಾಡಬಹುದು.

ಆಟಗಾರರ ವಿನಿಮಯ: ಟ್ರೇಡ್ ವಿಂಡೋ ಆಯ್ಕೆಯಲ್ಲಿ ಆಟಗಾರರನ್ನು ಪರಸ್ಪರ ಬದಲಿಸಿಕೊಳ್ಳಲು ಕೂಡ ಅವಕಾಶವಿದೆ. ಅಂದರೆ ಹಾರ್ದಿಕ್ ಪಾಂಡ್ಯ ವಿಷಯದಲ್ಲಿ ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ಗುಜರಾತ್ ಟೈಟಾನ್ಸ್ ಫ್ರಾಂಚೈಸಿಗೆ ಹೆಚ್ಚುವರಿ ಮೊತ್ತ ನೀಡಿ ಖರೀದಿಸಿದ್ದರು. ಇದರ ಹೊರತಾಗಿ ಎರಡು ಫ್ರಾಂಚೈಸಿಗಳು ಪರಸ್ಪರ ಒಪ್ಪಿಗೆಯ ಮೇಲೆ ಆಟಗಾರರನ್ನು ಬದಲಿಸಿಕೊಳ್ಳಬಹುದು. ಉದಾಹರಣೆಗೆ 2009 ರಲ್ಲಿ ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ರಾಬಿನ್ ಉತ್ತಪ್ಪರನ್ನು ನೀಡಿ ಆರ್ಸಿಬಿ ತಂಡದಲ್ಲಿದ್ದ ಝಹೀರ್ ಖಾನ್ ಅವರನ್ನು ಖರೀದಿಸಿದ್ದರು. ಅಂದರೆ ಇಲ್ಲಿ ಆಟಗಾರರನ್ನು ಪರಸ್ಪರ ವಿನಿಯಮ ಮಾಡಿಕೊಂಡು ಡೀಲ್ ಕುದುರಿಸಲಾಗಿತ್ತು.

ಹರಾಜಿಗೂ ಮುನ್ನ ವಿಂಡೋ ಕ್ಲೋಸ್: ಟ್ರೇಡ್ ವಿಂಡೋ ಆಯ್ಕೆಯು ಐಪಿಎಲ್ ಹರಾಜು ನಡೆಯುವ ಒಂದು ವಾರಕ್ಕೂ ಮುಂಚಿತವಾಗಿ ಕ್ಲೋಸ್ ಆಗಲಿದೆ. ಆ ಬಳಿಕ ಟ್ರೇಡ್ ವಿಂಡೋ ಮತ್ತೆ ಓಪನ್ ಆಗುವುದು ಐಪಿಎಲ್ ಹರಾಜಿನ ಬಳಿಕ. ಅಂದರೆ ಹರಾಜಿನ ಬಳಿಕ ಕೂಡ ಕೆಲ ದಿನಗಳವರೆಗೆ ಆಟಗಾರರನ್ನು ಪರಸ್ಪರ ವರ್ಗಾಯಿಸಿಕೊಳ್ಳಲು ಅಥವಾ ಮಾರಾಟ ಮಾಡಲು ಅವಕಾಶವಿದೆ. ಆದರೆ ಐಪಿಎಲ್ ಹರಾಜಿನ ಬಳಿಕ ಯಾವುದೇ ಫ್ರಾಂಚೈಸಿ ಈವರೆಗೆ ಟ್ರೇಡ್ ವಿಂಡೋ ಆಯ್ಕೆಯನ್ನು ಬಳಸಿಕೊಂಡಿಲ್ಲ. ಆದರೆ ಈ ಬಾರಿ ಮಿನಿ ಹರಾಜು ನಡೆಯುವುದರಿಂದ ಆಕ್ಷನ್ ಬಳಿಕ ಕೆಲ ಫ್ರಾಂಚೈಸಿಗಳು ತಮ್ಮ ತಂಡಗಳನ್ನು ಸರಿದೂಗಿಸಲು ಟ್ರೇಡ್ ವಿಂಡೋ ಆಯ್ಕೆಯತ್ತ ಮುಖ ಮಾಡುವ ಸಾಧ್ಯತೆಯಿದೆ.
Published On - 12:56 pm, Sun, 20 July 25
