ಟಿ20 ವಿಶ್ವಕಪ್ನಲ್ಲಿ 32 ತಂಡಗಳನ್ನು ಕಣಕ್ಕಿಳಿಸಲು ಭರ್ಜರಿ ಪ್ಲ್ಯಾನ್
T20 World Cup: ಸಿಂಗಾಪುರದಲ್ಲಿ ನಡೆಯುತ್ತಿರುವ ವಾರ್ಷಿಕ ಸಾಮಾನ್ಯ ಸಭೆಯಲ್ಲಿ (ಎಜಿಎಂ) ಟಿ20 ವಿಶ್ವಕಪ್ ಅನ್ನು 32 ರಾಷ್ಟ್ರಗಳಿಗೆ ವಿಸ್ತರಿಸುವ ಬಗ್ಗೆ ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಚರ್ಚಿಸಿದೆ. ಈ ಪ್ರಸ್ತಾವನೆಯನ್ನು ಪರಿಶೀಲಿಸಲು ಐಸಿಸಿ ನ್ಯೂಝಿಲೆಂಡ್‌ನ ರೋಜರ್ ಟ್ವೋಸ್ ನೇತೃತ್ವದಲ್ಲಿ ಭಾರತ ಸೇರಿದಂತೆ ಪ್ರಮುಖ ಕ್ರಿಕೆಟ್ ಮಂಡಳಿಗಳ ಉನ್ನತ ಅಧಿಕಾರಿಗಳನ್ನು ಒಳಗೊಂಡ ಆರು ಸದಸ್ಯರ ಕಾರ್ಯಕಾರಿ ಸಮಿತಿಯನ್ನು ರಚಿಸಿದೆ.
Updated on:Jul 20, 2025 | 10:08 AM

ಭಾರತ ಮತ್ತು ಶ್ರೀಲಂಕಾ ಜಂಟಿಯಾಗಿ ಆಯೋಜಿಸಲಿರುವ ಟಿ20 ವಿಶ್ವಕಪ್ 2026 ರಲ್ಲಿ 20 ತಂಡಗಳು ಕಣಕ್ಕಿಳಿಯುವುದು ಖಚಿತವಾಗಿದೆ. ಈಗಾಗಲೇ ಟೂರ್ನಿಗೆ 15 ತಂಡಗಳು ಅರ್ಹತೆ ಪಡೆದುಕೊಂಡಿದ್ದು, ಇನ್ನುಳಿದ 5 ತಂಡಗಳು ಅರ್ಹತಾ ಸುತ್ತಿನ ಮೂಲಕ ವಿಶ್ವಕಪ್ಗೆ ಎಂಟ್ರಿ ಕೊಡಲಿದೆ. ಭಾರತ-ಶ್ರೀಲಂಕಾದಲ್ಲಿ ನಡೆಯಲಿರುವ ಈ ವಿಶ್ವಕಪ್ ಬೆನ್ನಲ್ಲೇ 2028ರ ಟಿ20 ವಿಶ್ವಕಪ್ಗಾಗಿ ಐಸಿಸಿ ಪೂರ್ವ ತಯಾರಿಗಳನ್ನು ಆರಂಭಿಸಲು ನಿರ್ಧರಿಸಿದೆ.

ಅದರ ಮೊದಲ ಭಾಗವಾಗಿ ಇದೀಗ 2028 ರಲ್ಲಿ ಬರೋಬ್ಬರಿ 32 ತಂಡಗಳನ್ನು ಕಣಕ್ಕಿಳಿಸಲು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ಚಿಂತಿಸಿದೆ. ಅಂದರೆ 2028 ರಲ್ಲಿ ಆಸ್ಟ್ರೇಲಿಯಾ-ನ್ಯೂಝಿಲೆಂಡ್ನಲ್ಲಿ ನಡೆಯಲಿರುವ ಟಿ20 ವಿಶ್ವಕಪ್ನಲ್ಲಿ ಒಟ್ಟು 32 ತಂಡಗಳಿಗೆ ಅವಕಾಶ ನೀಡಲು ಐಸಿಸಿ ಬಯಸಿದೆ. ಅಲ್ಲದೆ ಈ ಪ್ರಸ್ತಾವನೆಯನ್ನು ಪರಿಶೀಲಿಸಲು ಐಸಿಸಿ ನ್ಯೂಝಿಲೆಂಡ್‌ನ ರೋಜರ್ ಟ್ವೋಸ್ ನೇತೃತ್ವದಲ್ಲಿ ಉನ್ನತ ಅಧಿಕಾರಿಗಳನ್ನು ಒಳಗೊಂಡ ಆರು ಸದಸ್ಯರ ಕಾರ್ಯಕಾರಿ ಸಮಿತಿಯನ್ನು ರಚಿಸಿದೆ.

ಈಗಾಗಲೇ ಯುಎಸ್ಎ, ಕೆನಡಾ, ಇಟಲಿ ಸೇರಿದಂತೆ ಪ್ರಮುಖ ದೇಶಗಳಲ್ಲಿ ಕ್ರಿಕೆಟ್ ಕ್ರೇಝ್ ಶುರುವಾಗಿದ್ದು, ಇದನ್ನು ಪರಿಗಣಿಸಿ ಅಸೋಸಿಯೇಟ್ ನೇಷನ್ಸ್ ತಂಡಗಳಿಗೆ ಮೆಗಾ ಈವೆಂಟ್‌ನಲ್ಲಿ ಭಾಗವಹಿಸಲು ಅವಕಾಶ ನೀಡುವ ಬಗ್ಗೆ ಚರ್ಚಿಸಲಾಗಿದೆ. ಈ ಮೂಲಕ 2028 ರಲ್ಲಿ ನಡೆಯಲಿರುವ ಟಿ20 ವಿಶ್ವಕಪ್ನಲ್ಲಿ ತಂಡಗಳ ಸಂಖ್ಯೆಯನ್ನು 32 ಕ್ಕೆ ಹೆಚ್ಚಿಸಲು ಐಸಿಸಿ ಆಸಕ್ತಿ ತೋರಿದೆ. ಹೀಗಾಗಿ 2026ರ ಟಿ20 ವಿಶ್ವಕಪ್ ಮುಕ್ತಾಯದ ಬೆನ್ನಲ್ಲೇ 2028ರ ಟಿ20 ವಿಶ್ವಕಪ್ನಲ್ಲಿ ಎಷ್ಟು ತಂಡಗಳು ಕಣಕ್ಕಿಳಿಯಲಿವೆ ಎಂಬುದರ ಸ್ಪಷ್ಟ ಚಿತ್ರಣ ದೊರೆಯಲಿದೆ.

2026 ರ ಟಿ20 ವಿಶ್ವಕಪ್ನಲ್ಲಿ ಒಟ್ಟು 20 ತಂಡಗಳು ಕಣಕ್ಕಿಳಿಯಲಿವೆ. ಇತ್ತ ತಂಡಗಳ ಹೆಚ್ಚುವರಿಯೊಂದಿಗೆ ಮುಂಬರುವ ಟಿ20 ವಿಶ್ವಕಪ್ನಲ್ಲಿ ಒಟ್ಟು 55 ಪಂದ್ಯಗಳನ್ನು ಆಡಲಾಗುತ್ತದೆ. ಇಲ್ಲಿ 20 ತಂಡಗಳನ್ನು ನಾಲ್ಕು ಗುಂಪುಗಳಾಗಿ ವಿಂಗಡಿ ಮೊದಲ ಸುತ್ತಿನ ಮ್ಯಾಚ್ಗಳನ್ನು ಆಯೋಜಿಸಲಾಗುತ್ತದೆ. ಆ ಬಳಿಕ ಸೂಪರ್-8, ಸೆಮಿಫೈನಲ್ ಮತ್ತು ಫೈನಲ್ ಪಂದ್ಯಗಳನ್ನು ಆಯೋಜಿಸಲು ನಿರ್ಧರಿಸಲಾಗಿದೆ.

2026ರ ಟಿ20 ವಿಶ್ವಕಪ್ಗೆ ಅರ್ಹತೆ ಪಡೆದ ತಂಡಗಳು: ಭಾರತ, ಶ್ರೀಲಂಕಾ, ಪಾಕಿಸ್ತಾನ್, ಬಾಂಗ್ಲಾದೇಶ್, ಆಸ್ಟ್ರೇಲಿಯಾ, ಇಂಗ್ಲೆಂಡ್, ವೆಸ್ಟ್ ಇಂಡೀಸ್, ಐರ್ಲೆಂಡ್, ನ್ಯೂಝಿಲೆಂಡ್, ಅಫ್ಘಾನಿಸ್ತಾನ್, ಸೌತ್ ಆಫ್ರಿಕಾ, ಯುಎಸ್ಎ, ಕೆನಡಾ, ನೆದರ್ಲೆಂಡ್ಸ್, ಇಟಲಿ. ಇನ್ನೂ 5 ತಂಡಗಳಿಗೆ ಅವಕಾಶವಿದ್ದು, ಇದಕ್ಕಾಗಿ ಆಫ್ರಿಕಾ ಪ್ರಾದೇಶಿಕ, ಏಷ್ಯಾ/ಪೂರ್ವ ಏಷ್ಯಾ-ಪೆಸಿಫಿಕ್ ಪ್ರಾದೇಶಿ ತಂಡಗಳ ನಡುವೆ ಅರ್ಹತಾ ಸುತ್ತಿನ ಪಂದ್ಯಗಳು ನಡೆಯಲಿದೆ.
Published On - 10:03 am, Sun, 20 July 25
