WCL 2025: ಪಾಕಿಸ್ತಾನ್ ವಿರುದ್ಧದ ಪಂದ್ಯದಿಂದ ಹಿಂದೆ ಸರಿದ ಐವರು ಭಾರತೀಯರು
World Championship of Legends: ವರ್ಲ್ಡ್ ಚಾಂಪಿಯನ್‌ಶಿಪ್ ಆಫ್ ಲೆಜೆಂಡ್ಸ್ ಎಂಬುದು ಮಾಜಿ ಕ್ರಿಕೆಟಿಗರ ಟಿ20 ಟೂರ್ನಿ. ಈ ಟೂರ್ನಿಯಲ್ಲಿ ಇಂಡಿಯಾ ಚಾಂಪಿಯನ್ಸ್, ಪಾಕಿಸ್ತಾನ್ ಚಾಂಪಿಯನ್ಸ್, ಇಂಗ್ಲೆಂಡ್ ಚಾಂಪಿಯನ್ಸ್, ಆಸ್ಟ್ರೇಲಿಯಾ ಚಾಂಪಿಯನ್ಸ್, ವೆಸ್ಟ್ ಇಂಡೀಸ್ ಚಾಂಪಿಯನ್ಸ್ ಹಾಗೂ ಸೌತ್ ಆಫ್ರಿಕಾ ಚಾಂಪಿಯನ್ಸ್ ತಂಡಗಳು ಕಣಕ್ಕಿಳಿಯುತ್ತಿವೆ.
Updated on: Jul 20, 2025 | 7:35 AM

ವರ್ಲ್ಡ್ ಚಾಂಪಿಯನ್‌ಶಿಪ್ ಆಫ್ ಲೆಜೆಂಡ್ಸ್ ಟೂರ್ನಿಯ (World Championship of Legends) 4ನೇ ಪಂದ್ಯದಲ್ಲಿ ಇಂಡಿಯಾ ಚಾಂಪಿಯನ್ಸ್ ಹಾಗೂ ಪಾಕಿಸ್ತಾನ್ ಚಾಂಪಿಯನ್ಸ್ ತಂಡಗಳು ಮುಖಾಮುಖಿಯಾಗಲಿದೆ. ಬರ್ಮಿಂಗ್ಹ್ಯಾಮ್ನ ಎಡ್ಜ್ಬಾಸ್ಟನ್ ಸ್ಟೇಡಿಯಂನಲ್ಲಿ ಇಂದು ನಡೆಯಲಿರುವ ಈ ಪಂದ್ಯದಿಂದ ಭಾರತದ ಐವರು ಆಟಗಾರರು ಹಿಂದೆ ಸರಿದಿದ್ದಾರೆ.

ಜುಲೈ 20 ರಂದು ನಡೆಯಲಿರುವ ಪಾಕಿಸ್ತಾನ್ ಚಾಂಪಿಯನ್ಸ್ ವಿರುದ್ಧದ ಈ ಪಂದ್ಯದಿಂದ ಹಿಂದೆ ಸರಿಯುತ್ತಿರುವ ಇಂಡಿಯಾ ಚಾಂಪಿಯನ್ಸ್ ತಂಡದ ಆಟಗಾರರಾದ ಇರ್ಫಾನ್ ಪಠಾಣ್, ಶಿಖರ್ ಧವನ್, ಹರ್ಭಜನ್ ಸಿಂಗ್, ಯೂಸುಫ್ ಪಠಾಣ್ ಹಾಗೂ ಸುರೇಶ್ ರೈನಾ ತಿಳಿಸಿದ್ದಾರೆ. ಇತ್ತ ಪಂದ್ಯ ಆರಂಭಕ್ಕೆ ದಿನ ಮಾತ್ರ ಉಳಿದಿರುವಾಗ ಪ್ರಮುಖ ಆಟಗಾರರು ಹಿಂದೆ ಸರಿದಿರುವುದು ಇದೀಗ ಆಯೋಜಕರ ಚಿಂತೆಯನ್ನು ಹೆಚ್ಚಿಸಿದೆ.

ಈ ಐವರು ಆಟಗಾರರು ಇಂತಹದೊಂದು ನಿರ್ಧಾರ ತೆಗೆದುಕೊಳ್ಳಲು ಮುಖ್ಯ ಕಾರಣ ಪಹಲ್ಗಾಮ್ನಲ್ಲಿ ನಡೆದ ಪಾಕ್ ಪ್ರೇರಿತ ಉಗ್ರರ ದಾಳಿ. ಏಪ್ರಿಲ್ 22 ರಂದು ಜಮ್ಮು-ಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆದ ಪ್ರವಾಸಿಗರ ಮೇಲಿನ ಭಯೋತ್ಪಾದಕರ ದಾಳಿ ಹಿನ್ನಲೆಯಲ್ಲಿ ಅನೇಕರು ಪಾಕಿಸ್ತಾನ್ ವಿರುದ್ಧ ಯಾವುದೇ ಪಂದ್ಯವಾಡಬಾರದು ಸೋಷಿಯಲ್ ಮೀಡಿಯಾದಲ್ಲಿ ಆಗ್ರಹಿಸಿದ್ದರು. ಅದರಲ್ಲೂ ಪಾಕಿಸ್ತಾನ್ ಚಾಂಪಿಯನ್ಸ್ ವಿರುದ್ಧ ಕಣಕ್ಕಿಳಿಯಲು ಮುಂದಾಗಿರುವ ಇಂಡಿಯಾ ಚಾಂಪಿಯನ್ಸ್ ಆಟಗಾರರ ದೇಶಪ್ರೇಮವನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನಿಸಲಾಗಿತ್ತು.

ಇದೇ ಕಾರಣದಿಂದಾಗಿ ಇರ್ಫಾನ್ ಪಠಾಣ್, ಶಿಖರ್ ಧವನ್, ಹರ್ಭಜನ್ ಸಿಂಗ್, ಯೂಸುಫ್ ಪಠಾಣ್ ಹಾಗೂ ಸುರೇಶ್ ರೈನಾ ಪಾಕಿಸ್ತಾನ್ ಚಾಂಪಿಯನ್ಸ್ ವಿರುದ್ಧದ ಪಂದ್ಯದಿಂದ ಹಿಂದೆ ಸರಿದಿದ್ದಾರೆ. ಇತ್ತ ಐವರು ಆಟಗಾರರ ದೃಢ ನಿರ್ಧಾರದಿಂದಾಗಿ ಇನ್ನುಳಿದ ಆಟಗಾರರು ಕೂಡ ಈ ಪಂದ್ಯದಿಂದ ಹಿಂದೆ ಸರಿಯುವ ಸಾಧ್ಯತೆಯಿದೆ ಎಂದು ವರದಿಯಾಗಿದೆ. ಇದರಿಂದಾಗಿ ಇಂದಿನ ಮ್ಯಾಚ್ ರದ್ದಾದರೂ ಅಚ್ಚರಿಯಿಲ್ಲ.

ಇಂಡಿಯಾ ಚಾಂಪಿಯನ್ಸ್ ತಂಡ: ಯುವರಾಜ್ ಸಿಂಗ್ (ನಾಯಕ), ಶಿಖರ್ ಧವನ್, ಹರ್ಭಜನ್ ಸಿಂಗ್, ಸುರೇಶ್ ರೈನಾ, ಇರ್ಫಾನ್ ಪಠಾಣ್, ಯೂಸುಫ್ ಪಠಾಣ್, ರಾಬಿನ್ ಉತ್ತಪ್ಪ, ಅಂಬಾಟಿ ರಾಯುಡು, ಪಿಯೂಷ್ ಚಾವ್ಲಾ, ಸ್ಟುವರ್ಟ್ ಬಿನ್ನಿ, ವರುಣ್ ಆರೋನ್, ವಿನಯ್ ಕುಮಾರ್, ಅಭಿಮನ್ಯು ಮಿಥುನ್, ಸಿದ್ದಾರ್ಥ್ ಕೌಲ್, ಗುರುಕೀರತ್ ಮಾನ್.

ಪಾಕಿಸ್ತಾನ್ ಚಾಂಪಿಯನ್ಸ್ ತಂಡ: ಮೊಹಮ್ಮದ್ ಹಫೀಜ್, ಶೋಯೆಬ್ ಮಲಿಕ್, ಸರ್ಫ್ರಾಜ್ ಅಹ್ಮದ್, ಶರ್ಜೀಲ್ ಖಾನ್, ವಹಾಬ್ ರಿಯಾಜ್, ಆಸಿಫ್ ಅಲಿ, ಶಾಹಿದ್ ಅಫ್ರಿದಿ, ಕಮ್ರಾನ್ ಅಕ್ಮಲ್, ಅಮೀರ್ ಯಾಮಿನ್, ಸೊಹೈಲ್ ಖಾನ್, ಸೊಹೇಲ್ ತನ್ವೀರ್.
