ಅಫ್ಘಾನಿಸ್ತಾನ್ ವಿರುದ್ಧದ ಚಾಂಪಿಯನ್ಸ್ ಟ್ರೋಫಿ ಪಂದ್ಯವನ್ನು ಇಂಗ್ಲೆಂಡ್ ಬಹಿಷ್ಕರಿಸಬೇಕೆಂಬ ಒತ್ತಾಯ ಕೇಳಿ ಬಂದಿವೆ. ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಸರ್ಕಾರವು ಮಹಿಳಾ ಹಕ್ಕುಗಳನ್ನು ಕಸಿದುಕೊಳ್ಳುತ್ತಿದ್ದು, ಹೀಗಾಗಿ ಅಫ್ಘಾನ್ ವಿರುದ್ಧ ಪಂದ್ಯವಾಡಬಾರದು ಎಂದು ಇಂಗ್ಲೆಂಡ್ನ 160 ಕ್ಕೂ ಅಧಿಕ ರಾಜಕಾರಣಿಗಳು ಇಸಿಬಿಗೆ ಪತ್ರ ಬರೆದಿದ್ದಾರೆ.
ಮಹಿಳಾ ಹಕ್ಕುಗಳ ಮೇಲಿನ ತಾಲಿಬಾನ್ ಆಡಳಿತದ ದಾಳಿಯ ವಿರುದ್ಧ ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿಯು ಸ್ಪಷ್ಟ ನಿಲುವು ತೆಗೆದುಕೊಳ್ಳಬೇಕು. ಫೆ.26 ರಂದು ಪಾಕಿಸ್ತಾನದ ಲಾಹೋರ್‌ನಲ್ಲಿ ಅಫ್ಘಾನಿಸ್ತಾನ್ ವಿರುದ್ಧ ಇಂಗ್ಲೆಂಡ್ ಕಣಕ್ಕಿಳಿಯಬಾರದು. ಈ ಮೂಲಕ ಮಹಿಳಾ ಹಕ್ಕುಗಳನ್ನು ಎತ್ತಿ ಹಿಡಿಯಬೇಕು ಎಂದು ಇಂಗ್ಲೆಂಡ್ ರಾಜಕಾರಣಿಗಳು ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಇದಕ್ಕೂ ಮುನ್ನ 2021 ರಲ್ಲಿ ಆಸ್ಟ್ರೇಲಿಯಾ ಕ್ರಿಕೆಟ್ ಬೋರ್ಡ್, ಅಫ್ಘಾನಿಸ್ತಾನ್ ವಿರುದ್ಧ ಸರಣಿ ಆಡಲು ನಿರಾಕರಿಸಿತ್ತು. ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಸರ್ಕಾರ ಮಹಿಳಾ ಕ್ರಿಕೆಟ್ ಅನ್ನು ನಿಷೇಧಿಸಿರುವುದನ್ನು ಖಂಡಿಸಿ, ಅಫ್ಘಾನ್ ವಿರುದ್ಧ ಯಾವುದೇ ಸರಣಿ ಆಡುವುದಿಲ್ಲ ಎಂದು ಕ್ರಿಕೆಟ್ ಆಸ್ಟ್ರೇಲಿಯಾ ತಿಳಿಸಿತ್ತು.
ಇದೀಗ ಇಂಗ್ಲೆಂಡ್ನಲ್ಲೂ ಅಫ್ಘಾನಿಸ್ತಾನ್ ವಿರುದ್ಧ ಪಂದ್ಯವಾಡುವ ಬಗ್ಗೆ ಅಪಸ್ವರಗಳು ಕೇಳಿ ಬಂದಿವೆ. ಈ ಬಗ್ಗೆ ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ದೃಢ ನಿರ್ಧಾರ ತೆಗೆದುಕೊಳ್ಳಬೇಕೆಂದು ಯುಕೆಯ ರಾಜಕಾರಣಿಗಳು ಪತ್ರದ ಮೂಲಕ ಮನವಿ ಮಾಡಿದ್ದಾರೆ.
2021 ರಲ್ಲಿ ತಾಲಿಬಾನ್ ಅಧಿಕಾರಕ್ಕೆ ಮರಳಿದ ನಂತರ ಕ್ರೀಡೆಯಲ್ಲಿ ಮಹಿಳೆಯರ ಭಾಗವಹಿಸುವಿಕೆಯನ್ನು ಕಾನೂನುಬಾಹಿರಗೊಳಿಸಿದೆ. ಇದು ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿಯ ನಿಯಮಗಳಿಗೆ ವಿರುದ್ಧವಾಗಿದೆ. ಇದಾಗ್ಯೂ ಅಫ್ಘಾನಿಸ್ತಾನ್ ಕ್ರಿಕೆಟ್ ಮಂಡಳಿಯನ್ನು ಐಸಿಸಿ ನಿಷೇಧಿಸಿಲ್ಲ.
ಅಷ್ಟೇ ಅಲ್ಲದೆ ಇತ್ತೀಚೆಗೆ ಅಫ್ಘಾನಿಸ್ತಾನದಲ್ಲಿ ಮಹಿಳೆಯರು ಶುಶ್ರೂಷಕಿ ಹಾಗೂ ನರ್ಸಿಂಗ್ ಶಿಕ್ಷಣವನ್ನು ಪಡೆಯುವಂತಿಲ್ಲ ಎಂಬ ಆದೇಶವನ್ನು ತಾಲಿಬಾನ್ ಸರ್ಕಾರ ಹೊರಡಿಸಿದೆ.
ಇವೆಲ್ಲದರ ವಿರುದ್ಧ ಇತರೆ ದೇಶಗಳು ತಮ್ಮ ಖಂಡನೆಯನ್ನು ವ್ಯಕ್ತಪಡಿಸುವುದು ಅನಿವಾರ್ಯ ಎಂದು ಇಂಗ್ಲೆಂಡ್ನ ರಾಜಕಾರಣಿಗಳು ಅಭಿಪ್ರಾಯಪಟ್ಟಿದ್ದಾರೆ. ಅದರ ಮೊದಲ ಹೆಜ್ಜೆಯಾಗಿ ಇದೀಗ ಅಫ್ಘಾನಿಸ್ತಾನ್ ವಿರುದ್ಧ ಚಾಂಪಿಯನ್ಸ್ ಟ್ರೋಫಿಯಲ್ಲಿ ಪಂದ್ಯವಾಡಬಾರದು ಎಂದು ಒತ್ತಾಯಿಸಿದೆ. ಈ ಬಗ್ಗೆ ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ಯಾವ ನಿರ್ಧಾರ ತೆಗೆದುಕೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಿದೆ.
ಇದನ್ನೂ ಓದಿ: Yashasvi Jaiswal: ಯಶಸ್ವಿ ಜೈಸ್ವಾಲ್ ಆಯ್ಕೆ ಬಹುತೇಕ ಖಚಿತ..!
2025ರ ಚಾಂಪಿಯನ್ಸ್ ಟ್ರೋಫಿ ಟೂರ್ನಿಯು ಫೆಬ್ರವರಿ 19 ರಿಂದ ಶುರುವಾಗಲಿದೆ. ಹಾಗೆಯೇ ಫೈನಲ್ ಪಂದ್ಯ ಮಾರ್ಚ್ 9 ರಂದು ನಡೆಯಲಿದೆ. ಹೈಬ್ರಿಡ್ ಮಾದರಿಯಲ್ಲಿ ಜರುಗಲಿರುವ ಈ ಟೂರ್ನಿಯ ಬಹುತೇಕ ಮ್ಯಾಚ್ಗಳು ಪಾಕಿಸ್ತಾನದಲ್ಲಿ ನಡೆಯಲಿದ್ದು, ಟೀಮ್ ಇಂಡಿಯಾದ ಪಂದ್ಯಗಳಿಗೆ ದುಬೈ ಆತಿಥ್ಯವಹಿಸಲಿದೆ.