ಭಾರತ ಮತ್ತು ಪಾಕಿಸ್ತಾನ್ ನಡುವಣ ಚಾಂಪಿಯನ್ಸ್ ಟ್ರೋಫಿ ರಂಪ ಮುಂದುವರೆದಿದೆ. ಪಾಕ್ನಲ್ಲಿ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಭಾರತ ಭಾಗವಹಿಸಲ್ಲ ಎಂಬ ಹೇಳಿಕೆಯೊಂದಿಗೆ ಶುರುವಾಗಿರುವ ಈ ಚರ್ಚೆ ಇದೀಗ ಅಂತಿಮ ಘಟ್ಟದತ್ತ ತಲುಪಿದೆ. ಏಕೆಂದರೆ ಐಸಿಸಿ ನಡೆಸಿದ ವರ್ಚುವಲ್ ಸಭೆಯಲ್ಲಿ ಹೈಬ್ರಿಡ್ ಮಾದರಿಯಲ್ಲಿ ಟೂರ್ನಿ ಆಯೋಜಿಸಬೇಕೆಂಬ ಭಾರತದ ಬೇಡಿಕೆಗೆ ಎಲ್ಲಾ ಕ್ರಿಕೆಟ್ ಮಂಡಳಿಗಳು ಬೆಂಬಲ ವ್ಯಕ್ತಪಡಿಸಿದೆ.
ಇದಾಗ್ಯೂ ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್ ತನ್ನ ನಿಲುವು ಬದಲಿಸಿಲ್ಲ. ಇದೀಗ ಪಿಸಿಬಿಯ ಈ ನಿರ್ಧಾರಕ್ಕೆ ಪಾಕಿಸ್ತಾನ್ ತಂಡದ ಮಾಜಿ ನಾಯಕ ಶಾಹಿದ್ ಅಫ್ರಿದಿ ಕೂಡ ಬೆಂಬಲ ವ್ಯಕ್ತಪಡಿಸಿದ್ದಾರೆ. ಈ ಬೆಂಬಲದೊಂದಿಗೆ ಭಾರತೀಯ ಕ್ರಿಕೆಟ್ ಮಂಡಳಿಯ ನಡೆಯ ಬಗ್ಗೆ ಅಫ್ರಿದಿ ಕಿಡಿಕಾರಿದ್ದಾರೆ.
ಕ್ರೀಡೆಯೊಂದಿಗೆ ರಾಜಕೀಯವನ್ನು ಹೆಣೆದುಕೊಂಡಿರುವ ಬಿಸಿಸಿಐ ಅಂತರಾಷ್ಟ್ರೀಯ ಕ್ರಿಕೆಟ್ ಅನ್ನು ಅತಂತ್ರ ಸ್ಥಿತಿಯಲ್ಲಿರಿಸಿದೆ ಎಂದು ಪಾಕ್ ಆಟಗಾರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹೈಬ್ರಿಡ್ ಮಾದರಿಯ ವಿರುದ್ಧ ಪಾಕಿಸ್ತಾನ್ ಕ್ರಿಕೆಟ್ ಮಂಡಳಿಯ ನಿಲುವನ್ನು ನಾನು ಸಂಪೂರ್ಣವಾಗಿ ಬೆಂಬಲಿಸತ್ತೇನೆ. ಏಕೆದರೆ 26/11ರ ಘಟನೆಯ ನಂತರ ಭದ್ರತಾ ಕಾಳಜಿಗಳ ಹೊರತಾಗಿಯೂ ಪಾಕಿಸ್ತಾನ್ ತಂಡವು ದ್ವಿಪಕ್ಷೀಯ ವೈಟ್-ಬಾಲ್ ಸರಣಿ ಸೇರಿದಂತೆ ಐದು ಬಾರಿ ಭಾರತ ಪ್ರವಾಸ ಮಾಡಿದೆ. ಹೀಗಾಗಿ ಈ ಬಾರಿ ಭಾರತ ಪಾಕಿಸ್ತಾನದಲ್ಲಿ ಬಂದು ಆಡಬೇಕೆಂದು ಶಾಹಿದ್ ಅಫ್ರಿದಿ ಆಗ್ರಹಿಸಿದ್ದಾರೆ.
ಅಷ್ಟೇ ಅಲ್ಲದೆ ಚಾಂಪಿಯನ್ಸ್ ಟ್ರೋಫಿ ವಿಷಯದಲ್ಲಿ ಐಸಿಸಿ ಮತ್ತು ಅದರ ನಿರ್ದೇಶಕರ ಮಂಡಳಿಯು ನ್ಯಾಯಸಮ್ಮತತೆಯನ್ನು ಎತ್ತಿಹಿಡಿಯಲು ಇದು ಸಕಾಲ. ಈ ಮೂಲಕ ತಮ್ಮ ಅಧಿಕಾರವನ್ನು ಚಲಾಯಿಸಬೇಕೆಂದು ಅಫ್ರಿದಿ ಸೋಷಿಯಲ್ ಮೀಡಿಯಾದಲ್ಲಿ ಹೇಳಿದ್ದಾರೆ.
ಭಾರತ ತಂಡ ಪಾಕಿಸ್ತಾನದಲ್ಲಿ ಚಾಂಪಿಯನ್ಸ್ ಟ್ರೋಫಿ ಆಡಲು ಐಸಿಸಿ ಒತ್ತಾಯಿಸಬೇಕು. ಈ ಮೂಲಕ ಎಲ್ಲರಿಗೂ ಒಂದೇ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಬೇಕೆಂದು ಶಾಹಿದ್ ಅಫ್ರಿದಿ ಆಗ್ರಹಿಸಿದ್ದಾರೆ.
ಆದರೆ ಭಾರತೀಯ ಕ್ರಿಕೆಟ್ ಮಂಡಳಿ ತನ್ನ ಆಟಗಾರರ ಸುರಕ್ಷತೆಯ ದೃಷ್ಟಿಯಿಂದ ಪಾಕ್ನಲ್ಲಿ ಚಾಂಪಿಯನ್ಸ್ ಟ್ರೋಫಿ ಆಡಲು ನಿರಾಕರಿಸಿದೆ. ಅಷ್ಟೇ ಅಲ್ಲದೆ ಹೈಬ್ರಿಡ್ ಮಾದರಿಯಲ್ಲಿ ಟೂರ್ನಿ ಆಯೋಜಿಸಿದರೆ ಮಾತ್ರ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳುವುದಾಗಿ ತಿಳಿಸಿದೆ.
ಬಿಸಿಸಿಐನ ಈ ಬೇಡಿಕೆಗೆ ಐಸಿಸಿ ಅಸ್ತು ಎನ್ನುವುದು ಬಹುತೇಕ ಖಚಿತವಾಗಿದೆ. ಅಲ್ಲದೆ ಹೈಬ್ರಿಡ್ ಮಾದರಿಯಲ್ಲಿ ಟೂರ್ನಿ ಆಯೋಜಿಸಲು ಪಾಕಿಸ್ತಾನ್ ಕ್ರಿಕೆಟ್ ಮಂಡಳಿ ಮುಂದಾಗದಿದ್ದರೆ, ಚಾಂಪಿಯನ್ಸ್ ಟ್ರೋಫಿ ಆತಿಥ್ಯವು ಬೇರೊಂದು ದೇಶದ ಪಾಲಾಗಲಿದೆ.
ಇದನ್ನೂ ಓದಿ: ಚಾಂಪಿಯನ್ಸ್ ಟ್ರೋಫಿಯಿಂದ ಪಾಕಿಸ್ತಾನ್ ಹೊರಬಿದ್ದರೆ, ಯಾವ ತಂಡಕ್ಕೆ ಚಾನ್ಸ್?
ಹೀಗಾಗಿಯೇ ಪಾಕ್ ಕ್ರಿಕೆಟ್ ಬೋರ್ಡ್ಗೆ ಹೈಬ್ರಿಡ್ ಮಾದರಿಯಲ್ಲಿ ಟೂರ್ನಿ ಆಯೋಜಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಈ ಬಗ್ಗೆ ಅಂತಿಮ ಸುತ್ತಿನ ಮಾತುಕತೆಗಳು ನಡೆಯುತ್ತಿದ್ದು, ಇನ್ನು ಕೆಲವೇ ದಿನಗಳಲ್ಲಿ ಚಾಂಪಿಯನ್ಸ್ ಟ್ರೋಫಿ ಆಯೋಜನೆಯ ಬಗ್ಗೆ ಸ್ಪಷ್ಟ ಚಿತ್ರಣ ದೊರೆಯಲಿದೆ.