- Kannada News Photo gallery Cricket photos If Pakistan Kickout from the Champions Trophy, which team would get a chance?
ಚಾಂಪಿಯನ್ಸ್ ಟ್ರೋಫಿಯಿಂದ ಪಾಕಿಸ್ತಾನ್ ಹೊರಬಿದ್ದರೆ, ಯಾವ ತಂಡಕ್ಕೆ ಚಾನ್ಸ್?
Champions Trophy 2025: ಚಾಂಪಿಯನ್ಸ್ ಟ್ರೋಫಿ ಟೂರ್ನಿಯನ್ನು ಹೈಬ್ರಿಡ್ ಮಾದರಿಯಲ್ಲಿ ಆಯೋಜಿಸಲು ಪಿಸಿಬಿ ಒಪ್ಪದಿದ್ದರೆ, ಇಡೀ ಟೂರ್ನಿ ಸ್ಥಳಾಂತರವಾಗಲಿದೆ. ಈಗಾಗಲೇ ಸೌತ್ ಆಫ್ರಿಕಾ ಕ್ರಿಕೆಟ್ ಮಂಡಳಿ ಮತ್ತು ಬಿಸಿಸಿಐ ಚಾಂಪಿಯನ್ಸ್ ಆಯೋಜಿಸಲು ತುದಿಗಾಲಲ್ಲಿ ನಿಂತಿದೆ. ಒಂದು ವೇಳೆ ಟೂರ್ನಿ ಸ್ಥಳಾಂತರಗೊಂಡರೆ ಪಾಕಿಸ್ತಾನ್ ತಂಡ ಚಾಂಪಿಯನ್ಸ್ ಟ್ರೋಫಿಯಲ್ಲಿ ಪಾಲ್ಗೊಳ್ಳುವುದಿಲ್ಲ.
Updated on: Nov 30, 2024 | 10:53 AM

ಚಾಂಪಿಯನ್ಸ್ ಟ್ರೋಫಿ 2025ರ ಆಯೋಜನೆಯ ಹಕ್ಕಿನಿಂದ ಪಾಕಿಸ್ತಾನ್ ಕ್ರಿಕೆಟ್ ಮಂಡಳಿ ಸಂಕಷ್ಟಕ್ಕೆ ಸಿಲುಕಿದೆ. ಏಕೆಂದರೆ ಪಾಕ್ನಲ್ಲಿ ಚಾಂಪಿಯನ್ಸ್ ಟ್ರೋಫಿ ಪಂದ್ಯಗಳನ್ನು ಆಡಲು ಭಾರತ ನಿರಾಕರಿಸಿದೆ. ಅಲ್ಲದೆ ಹೈಬ್ರಿಡ್ ಮಾದರಿಯಲ್ಲಿ ಟೂರ್ನಿ ಆಯೋಜಿಸಬೇಕೆಂದು ಬೇಡಿಕೆ ಮುಂದಿಟ್ಟಿದೆ. ಬಿಸಿಸಿಐನ ಈ ಬೇಡಿಕೆಯನ್ನು ಐಸಿಸಿ ಈಡೇರಿಸುವುದು ಬಹುತೇಕ ಖಚಿತ. ಇದರಿಂದ ಇಕ್ಕಟ್ಟಿಗೆ ಸಿಲುಕಿರುವುದು ಪಾಕಿಸ್ತಾನ್.

ಏಕೆಂದರೆ ಈ ಹಿಂದಿನಿಂದಲೂ ಪಾಕಿಸ್ತಾನ್ ಕ್ರಿಕೆಟ್ ಮಂಡಳಿ ಹೈಬ್ರಿಡ್ ಮಾದರಿಯಲ್ಲಿ ಟೂರ್ನಿ ಆಯೋಜಿಸುವುದಿಲ್ಲ ಎಂದು ತನ್ನ ಗರ್ವ ಪ್ರದರ್ಶಿಸಿತ್ತು.ಆದರೀಗ ಇತರೆ ಕ್ರಿಕೆಟ್ ಮಂಡಳಿ ಹಾಗೂ ಐಸಿಸಿ ಭಾರತದ ಪರ ನಿಂತಿದೆ. ಹೀಗಾಗಿ ಹೈಬ್ರಿಡ್ ಮಾದರಿಯಲ್ಲಿ ಟೂರ್ನಿ ಆಯೋಜಿಸಬೇಕಾದ ಅನಿವಾರ್ಯತೆ ಪಿಸಿಬಿ ಮುಂದಿದೆ.

ಒಂದು ವೇಳೆ ಹೈಬ್ರಿಡ್ ಮಾದರಿಯಲ್ಲಿ ಚಾಂಪಿಯನ್ಸ್ ಟ್ರೋಫಿ ಆಯೋಜಿಸಲು ಸಿದ್ಧವಿಲ್ಲದಿದ್ದರೆ, ಪಾಕಿಸ್ತಾನ್ ತಂಡವನ್ನು ಟೂರ್ನಿಯಿಂದಲೇ ಕೈ ಬಿಡಲು ಐಸಿಸಿ ಚಿಂತಿಸಿದೆ. ಅಲ್ಲದೆ ಮತ್ತೊಂದು ಕ್ರಿಕೆಟ್ ಮಂಡಳಿ ಚಾಂಪಿಯನ್ಸ್ ಟ್ರೋಫಿ ಆಯೋಜನೆಯ ಹಕ್ಕು ನೀಡುವ ಬಗ್ಗೆ ಚರ್ಚಿಸಲಾಗಿದೆ.

ಇದೀಗ ಪಾಕಿಸ್ತಾನ್ ತಂಡದ ಚಾಂಪಿಯನ್ಸ್ ಟ್ರೋಫಿಯ ಭವಿಷ್ಯ ಪಿಸಿಬಿ ಕೈಯಲ್ಲಿದೆ. ಪಾಕ್ ಕ್ರಿಕೆಟ್ ಮಂಡಳಿ ಹೈಬ್ರಿಡ್ ಮಾದರಿಯಲ್ಲಿ ಟೂರ್ನಿ ಆಯೋಜಿಸದಿದ್ದರೆ, ಟೂರ್ನಿ ಕೈ ತಪ್ಪುವುದಲ್ಲದೇ ಚಾಂಪಿಯನ್ಸ್ ಟ್ರೋಫಿಯಿಂದಲೂ ಹೊರಬೀಳುವ ಸಾಧ್ಯತೆ ಹೆಚ್ಚಿದೆ. ಪಾಕ್ ತಂಡವನ್ನು ಚಾಂಪಿಯನ್ಸ್ ಟ್ರೋಫಿ ಟರ್ನಿಯಿಂದ ಕೈ ಬಿಟ್ಟರೆ, ಯಾವ ತಂಡಕ್ಕೆ ಚಾನ್ಸ್ ಸಿಗಲಿದೆ ಎಂಬ ಪ್ರಶ್ನೆ ಮೂಡುವುದು ಸಹಜ.

ಈ ಪ್ರಶ್ನೆಗೆ ಉತ್ತರ ಶ್ರೀಲಂಕಾ. ಏಕೆಂದರೆ ಈ ಬಾರಿಯ ಚಾಂಪಿಯನ್ಸ್ ಟ್ರೋಫಿಯಲ್ಲಿ ಒಟ್ಟು 8 ತಂಡಗಳು ಕಣಕ್ಕಿಳಿಯಲಿವೆ. ಏಕದಿನ ವಿಶ್ವಕಪ್ 2023 ರ ಅಂಕ ಪಟ್ಟಿಯಲ್ಲಿ ಟಾಪ್-8 ನಲ್ಲಿ ಕಾಣಿಸಿಕೊಂಡ ತಂಡಗಳು ಚಾಂಪಿಯನ್ಸ್ ಟ್ರೋಫಿಗೆ ಅರ್ಹತೆ ಪಡೆದುಕೊಂಡಿದೆ. ಆದರೆ ಈ 8 ತಂಡಗಳಲ್ಲಿ ಶ್ರೀಲಂಕಾ ಇಲ್ಲ.

ಒಂದು ವೇಳೆ ಪಾಕಿಸ್ತಾನ್ ತಂಡವನ್ನು ಟೂರ್ನಿಯಿಂದ ಕೈ ಬಿಟ್ಟರೆ ಶ್ರೀಲಂಕಾ ತಂಡಕ್ಕೆ ಅವಕಾಶ ಸಿಗಲಿದೆ. ಏಕೆಂದರೆ ಏಕದಿನ ವಿಶ್ವಕಪ್ 2023ರ ಅಂಕ ಪಟ್ಟಿಯಲ್ಲಿ ಶ್ರೀಲಂಕಾ ತಂಡವು 9ನೇ ಸ್ಥಾನದಲ್ಲಿದೆ. ಹೀಗಾಗಿ ಒಂದು ತಂಡ ಟೂರ್ನಿಯಿಂದ ಹಿಂದೆ ಸರಿದರೆ, ಅಂಕ ಪಟ್ಟಿಯಲ್ಲಿ ನಂತರದ ಸ್ಥಾನದಲ್ಲಿರುವ ತಂಡಕ್ಕೆ ಅವಕಾಶ ನೀಡಲಾಗುತ್ತದೆ. ಅದರಂತೆ ಪಾಕಿಸ್ತಾನ್ ತಂಡ ಚಾಂಪಿಯನ್ಸ್ ಟ್ರೋಫಿಯಿಂದ ಹೊರಬಿದ್ದರೆ ಶ್ರೀಲಂಕಾ ತಂಡವು ಟೂರ್ನಿಗೆ ಅರ್ಹತೆ ಪಡೆಯಲಿದೆ.
























