‘ಆತಿಥ್ಯವನ್ನು ಕಸಿದುಕೊಂಡರೆ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾಗವಹಿಸುವುದಿಲ್ಲ’; ಹೊಸ ಬಾಂಬ್ ಸಿಡಿಸಿದ ಪಾಕ್
Champions Trophy 2025: ಭಾರತ ತಂಡ ಚಾಂಪಿಯನ್ಸ್ ಟ್ರೋಫಿ ಆಡಲು ಪಾಕಿಸ್ತಾನಕ್ಕೆ ಪ್ರಯಾಣಿಸಲು ನಿರಾಕರಿಸಿದ್ದರಿಂದ ಪಾಕಿಸ್ತಾನ ಆತಂಕದಲ್ಲಿದೆ. ಇತ್ತ ಪಾಕಿಸ್ತಾನ ಕೂಡ ಹೈಬ್ರಿಡ್ ಮಾದರಿಯನ್ನು ತಿರಸ್ಕರಿಸಿದ್ದು, ಪಂದ್ಯಾವಳಿಯ ಆತಿಥ್ಯವನ್ನು ಬೇರೆಯವರಿಗೆ ನೀಡುವ ಯೋಜನೆ ಈಗ ಐಸಿಸಿಯ ಮುಂದಿದೆ.ಹೀಗಾಗಿ ಪಂದ್ಯಾವಳಿಯ ಆತಿಥ್ಯವನ್ನು ಕಸಿದುಕೊಂಡರೆ, ಪಂದ್ಯಾವಳಿಯಲ್ಲಿ ಆಡದಂತೆ ಪಾಕಿಸ್ತಾನ ಸರ್ಕಾರವು ಪಿಸಿಬಿಗೆ ಸೂಚಿಸಿದೆ ಎನ್ನಲಾಗಿದೆ.
ಚಾಂಪಿಯನ್ಸ್ ಟ್ರೋಫಿಗಾಗಿ ಭಾರತ ತಂಡವನ್ನು ಪಾಕಿಸ್ತಾನಕ್ಕೆ ಕಳುಹಿಸಲು ಬಿಸಿಸಿಐ ನಿರಾಕರಿಸಿದ ನಂತರ, ಆತಿಥೇಯ ಪಾಕಿಸ್ತಾನ ಕೂಡ ಪ್ರತಿದಿನ ಒಂದಿಲ್ಲೊಂದು ಹೇಳಿಕೆಗಳನ್ನು ನೀಡುವುದರೊಂದಿಗೆ ಭಾರತಕ್ಕೆ ಎಚ್ಚರಿಕೆ ನೀಡಲಾರಂಭಿಸಿದೆ. ಇದಕ್ಕೆ ಕಾರಣವೂ ಇದ್ದು, ಒಂದು ವೇಳೆ ಟೀಂ ಇಂಡಿಯಾ ಪಾಕಿಸ್ತಾನಕ್ಕೆ ಪ್ರಯಾನ ಬೆಳೆಸದಿದ್ದರೆ, ಚಾಂಪಿಯನ್ಸ್ ಟ್ರೋಫಿಯನ್ನು ಹೈಬ್ರಿಡ್ ಮಾದರಿಯಲ್ಲಿ ಆಯೋಜಿಸಬೇಕಾಗುತ್ತದೆ. ಇದರರ್ಥ ಭಾರತದ ಪಂದ್ಯಗಳನ್ನು ಪಾಕಿಸ್ತಾನದ ಹೊರಗೆ ನಡೆಸಬೇಕಾಗುತ್ತದೆ. ಆದರೆ ಪಾಕಿಸ್ತಾನ ಮಾತ್ರ ಈ ಹೈಬ್ರಿಡ್ ಮಾದರಿಗೆ ಒಪ್ಪುತ್ತಿಲ್ಲ. ಅಂತಿಮವಾಗಿ ಈ ಎರಡೂ ತಂಡಗಳು ಒಂದು ನಿರ್ಧಾರಕ್ಕೆ ಬರದಿದ್ದರೆ, ಆಗ ಐಸಿಸಿ, ಈ ಪಂದ್ಯಾವಳಿಯ ಆತಿಥ್ಯವನ್ನು ಪಾಕಿಸ್ತಾನದ ಬಳಿಯಿಂದ ಕಸಿದುಕೊಳ್ಳುವ ಸಾಧ್ಯತೆಗಳಿವೆ. ಹೀಗಾಗಿ ಈ ಭಯ ಪಾಕಿಸ್ತಾನಕ್ಕೆ ಕಾಡುತ್ತಿದ್ದು, ಪಂದ್ಯಾವಳಿಯನ್ನು ಆಯೋಜಿಸುವ ಹಕ್ಕನ್ನು ಪಾಕಿಸ್ತಾನದಿಂದ ಕಸಿದುಕೊಂಡರೆ ಮುಂದಿನ ವರ್ಷದ ಐಸಿಸಿ ಚಾಂಪಿಯನ್ಸ್ ಟ್ರೋಫಿಯಿಂದ ತನ್ನ ಹೆಸರನ್ನು ಹಿಂಪಡೆಯಬಹುದು ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿಯನ್ನು ಉಲ್ಲೇಖಿಸಿ ‘ದಿ ಡಾನ್’ ಪತ್ರಿಕೆ ವರದಿ ಮಾಡಿದೆ.
ಪಾಕ್ ಸರ್ಕಾರದೊಂದಿಗೆ ಮಾತುಕತೆ
ಭಾರತ ತಂಡವನ್ನು ಕಳುಹಿಸಲು ನಿರಾಕರಿಸಿದ ನಂತರ ಮುಂದಿನ ಕ್ರಮದ ಬಗ್ಗೆ ಚರ್ಚಿಸಲು ಪಿಸಿಬಿ ಅಧ್ಯಕ್ಷ ಮೊಹ್ಸಿನ್ ನಖ್ವಿ ಭಾನುವಾರ ಹಿರಿಯ ಸರ್ಕಾರಿ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದರು. ಮುಂದಿನ ವರ್ಷ ಫೆಬ್ರವರಿ-ಮಾರ್ಚ್‌ನಲ್ಲಿ ನಡೆಯಲಿರುವ ಐಸಿಸಿ ಚಾಂಪಿಯನ್ಸ್ ಟ್ರೋಫಿಗಾಗಿ ಪಾಕಿಸ್ತಾನಕ್ಕೆ ಪ್ರಯಾಣಿಸಲು ಇಷ್ಟವಿಲ್ಲದಿರುವ ಬಗ್ಗೆ ಭಾರತವು ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿಗೆ (ಐಸಿಸಿ) ತಿಳಿಸಿದೆ ಎಂದು ಪಿಸಿಬಿ ಭಾನುವಾರ ದೃಢಪಡಿಸಿದೆ. ಹೀಗಾಗಿ ಈ ಹಿಂದೆ ‘ಹೈಬ್ರಿಡ್ ಮಾದರಿ’ ಯೋಜನೆಯನ್ನು ಪಾಕ್ ಮಂಡಳಿ ಅಧ್ಯಕ್ಷ ನಖ್ವಿ ತಿರಸ್ಕರಿಸಿದ್ದರಿಂದ, ಮುಂದಿನ ದಿನಗಳಲ್ಲಿ ಯಾವ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂಬುದನ್ನು ಕಾದುನೋಡಬೇಕಿದೆ.
ಪಾಕ್ ಸರ್ಕಾರದ ಸೂಚನೆ ಏನು?
ಹೈಬ್ರಿಡ್ ಮಾದರಿಯ ಪ್ರಕಾರ, ಚಾಂಪಿಯನ್ಸ್ ಟ್ರೋಫಿಯ ಆತಿಥ್ಯ ಪಾಕ್ ಬಳಿಯೇ ಇದ್ದರೂ, ಭಾರತವು ಮಾತ್ರ ತನ್ನ ಪಂದ್ಯಗಳನ್ನು ತಟಸ್ಥ ಸ್ಥಳದಲ್ಲಿ ಆಡುತ್ತದೆ. ಉಳಿದ ಪಂದ್ಯಗಳು ಪಾಕಿಸ್ತಾನದಲ್ಲಿ ನಡೆಯಲ್ಲಿವೆ. 2023 ರ ಏಷ್ಯಾಕಪ್ ಅನ್ನು ಸಹ ಇದೇ ರೀತಿಯಲ್ಲಿ ಆಯೋಜಿಸಲಾಗಿತ್ತು. ಆದರೆ, ಈಗ ಭಾರತ ನಿರಾಕರಿಸಿದ ನಂತರ, ಐಸಿಸಿ ಈ ಸಂಪೂರ್ಣ ಪಂದ್ಯಾವಳಿಯನ್ನು ಬೇರೆ ದೇಶಕ್ಕೆ ಸ್ಥಳಾಂತರಿಸಲು ಯೋಚಿಸುತ್ತಿದೆ. ಇದೀಗ ಪಿಸಿಬಿ ಮೂಲವೊಂದು ಡಾನ್‌ಗೆ, ‘ ಪಾಕಿಸ್ತಾನ ಸರ್ಕಾರ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ್ದು, ಟೂರ್ನಿಯನ್ನು ಸ್ಥಳಾಂತರಿಸಿದರೆ, ಪಾಕಿಸ್ತಾನ ಸರ್ಕಾರವು ಪಿಸಿಬಿಯನ್ನು ಪಂದ್ಯಾವಳಿಯಲ್ಲಿ ಆಡಲು ನಿರಾಕರಿಸುವಂತೆ ಸೂಚಿಸಿದೆ ಎಂದು ವರದಿಯಾಗಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ