IPL 2025: ಆರ್​ಸಿಬಿ ಬಳಿಕ ಚೆನ್ನೈ ಭದ್ರಕೋಟೆಯನ್ನು ಭೇದಿಸಿದ ಡೆಲ್ಲಿ ಕ್ಯಾಪಿಟಲ್ಸ್

|

Updated on: Apr 05, 2025 | 8:29 PM

Chennai Super Kings' Defeat: ಐಪಿಎಲ್ 2025 ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವು ದೆಹಲಿ ಕ್ಯಾಪಿಟಲ್ಸ್ ವಿರುದ್ಧ 25 ರನ್‌ಗಳಿಂದ ಸೋಲೊಪ್ಪಿಕೊಂಡಿದೆ. ಚೆಪಾಕ್‌ನಲ್ಲಿ ನಡೆದ ಈ ಪಂದ್ಯದಲ್ಲಿ ದೆಹಲಿ 184 ರನ್ ಗಳಿಸಿತು. ಈ ಗುರಿ ಬೆನ್ನಟ್ಟಿದ ಸಿಎಸ್‌ಕೆ ತಂಡದ ಬ್ಯಾಟಿಂಗ್ ವೈಫಲ್ಯದಿಂದಾಗಿ ಕೇವಲ 158 ರನ್ ಮಾತ್ರ ಗಳಿಸಿತು. ಈ ಸೋಲಿನೊಂದಿಗೆ ಚೆನ್ನೈ ತಂಡಕ್ಕೆ ಸತತ ಮೂರನೇ ಸೋಲು ಎದುರಾದರೆ, ದೆಹಲಿ ತಂಡಕ್ಕೆ ಹ್ಯಾಟ್ರಿಕ್ ಗೆಲುವು ದೊರೆಯಿತು. 15 ವರ್ಷಗಳ ನಂತರ ಚೆಪಾಕ್‌ನಲ್ಲಿ ದೆಹಲಿ ತಂಡ ಚೆನ್ನೈ ತಂಡವನ್ನು ಮಣಿಸಿದ ದಾಖಲೆಯನ್ನು ಬರೆಯಿತು.

IPL 2025: ಆರ್​ಸಿಬಿ ಬಳಿಕ ಚೆನ್ನೈ ಭದ್ರಕೋಟೆಯನ್ನು ಭೇದಿಸಿದ ಡೆಲ್ಲಿ ಕ್ಯಾಪಿಟಲ್ಸ್
Csk Vs Dc
Follow us on

ಐಪಿಎಲ್ 2025 (IPL 2025) ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಿರಾಶಾದಾಯಕ ಪ್ರದರ್ಶನ ದೆಹಲಿ ಕ್ಯಾಪಿಟಲ್ಸ್ (CSK vs DC)  ವಿರುದ್ಧವೂ ಮುಂದುವರೆಯಿತು. ತನ್ನ ತವರಿನಲ್ಲಿ ಡೆಲ್ಲಿ ತಂಡವನ್ನು ಎದುರಿಸಿದ್ದ ಸಿಎಸ್‌ಕೆ 25 ರನ್‌ಗಳಿಂದ ಸೋಲನ್ನು ಎದುರಿಸಬೇಕಾಯಿತು. ಈ ಸೀಸನ್​ನಲ್ಲಿ ಚೆನ್ನೈ ತಂಡಕ್ಕೆ ಇದು ಸತತ ಮೂರನೇ ಸೋಲಾದರೆ, ಇತ್ತ ಡೆಲ್ಲಿ ತಂಡಕ್ಕೆ ಹ್ಯಾಟ್ರಿಕ್ ಜಯ ದೊರಕಿತು. ಡೆಲ್ಲಿ ನೀಡಿದ 184 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಚೆನ್ನೈಗೆ ಬ್ಯಾಟಿಂಗ್‌ ವಿಭಾಗ ಮತ್ತೊಮ್ಮೆ ಕೈಕೊಟ್ಟಿತು. ಕೊನೆಯಲ್ಲಿ ಎಂಎಸ್ ಧೋನಿ ಮತ್ತು ವಿಜಯ್ ಶಂಕರ್ ಕ್ರೀಸ್‌ನಲ್ಲಿದ್ದರೂ ತಂಡವನ್ನು ಗೆಲುವಿನ ದಡ ಮುಟ್ಟಿಸಲು ಸಾಧ್ಯವಾಗಲಿಲ್ಲ. ಈ ಗೆಲುವಿನೊಂದಿಗೆ 15 ವರ್ಷಗಳ ನಂತರ ಚೆಪಾಕ್‌ನಲ್ಲಿ ದೆಹಲಿ ತಂಡ, ಚೆನ್ನೈ ತಂಡವನ್ನು ಮೊದಲ ಬಾರಿಗೆ ಸೋಲಿಸಿದ ದಾಖಲೆಯನ್ನು ಬರೆಯಿತು.

ರಾಹುಲ್ ಭರ್ಜರಿ ಬ್ಯಾಟಿಂಗ್

ಚೆಪಾಕ್‌ನಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ 20 ಓವರ್‌ಗಳಲ್ಲಿ 183 ರನ್ ಗಳಿಸಿತು. ದೆಹಲಿ ತಂಡದಲ್ಲಿ, ಫಾಫ್ ಡು ಪ್ಲೆಸಿಸ್ ಗಾಯದ ಕಾರಣ ಹೊರಗುಳಿದ ಕಾರಣ, ಈ ಬಾರಿ ಕೆ.ಎಲ್. ರಾಹುಲ್ ಆರಂಭಿಕರಾಗಿ ಆಡಬೇಕಾಯಿತು. ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡ ರಾಹುಲ್ ಕಠಿಣ ಪರಿಸ್ಥಿತಿಯಲ್ಲಿ ಅದ್ಭುತ ಅರ್ಧಶತಕ ಗಳಿಸಿದರು. ಅವರು ಕೇವಲ 51 ಎಸೆತಗಳಲ್ಲಿ 77 ರನ್ ಗಳಿಸುವ ಮಹತ್ವದ ಇನ್ನಿಂಗ್ಸ್ ಆಡಿದರು. ಅವರಲ್ಲದೆ, ಅಭಿಷೇಕ್ ಪೊರೆಲ್ 33 ರನ್ ಗಳಿಸಿದರೆ, ಟ್ರಿಸ್ಟಾನ್ ಸ್ಟಬ್ಸ್, ನಾಯಕ ಅಕ್ಷರ್ ಪಟೇಲ್ ಮತ್ತು ಸಮೀರ್ ರಿಜ್ವಿ ಕೂಡ ಪ್ರಮುಖ ಕೊಡುಗೆಗಳನ್ನು ನೀಡಿದರು.

ಆರಂಭದಲ್ಲೇ ಪಂದ್ಯ ಸೋತ ಚೆನ್ನೈ

ಕಳೆದ 6 ವರ್ಷಗಳ ಚೆನ್ನೈನ ದಾಖಲೆಯನ್ನು ಗಮನಿಸಿದರೆ ಡೆಲ್ಲಿ ನೀಡಿದ 183 ರನ್ ಗುರಿಯನ್ನು ಬೆನ್ನಟ್ಟುವುದು ಸಿಎಸ್​ಕೆ ತಂಡಕ್ಕೆ ಕಷ್ಟಕರವೆನಿಸಿತು. ಏಕೆಂದರೆ 2019 ರಿಂದ, ಚೆನ್ನೈ ತಂಡ ಐಪಿಎಲ್‌ನಲ್ಲಿ 180 ರನ್‌ಗಳಿಗಿಂತ ಹೆಚ್ಚಿನ ಗುರಿಯನ್ನು ಬೆನ್ನಟ್ಟಿಲ್ಲ. ಈ ಪ್ರವೃತ್ತಿ ಈ ಬಾರಿಯೂ ಮುಂದುವರೆಯಿತು. ಈ ಬೃಹತ್ ಗುರಿ ಬೆನ್ನಟ್ಟಿದ ಚೆನ್ನೂ ತಂಡ ಪವರ್ ಪ್ಲೇನಲ್ಲಿ ಪ್ರಮುಖ 3 ವಿಕೆಟ್‌ಗಳನ್ನು ಕಳೆದುಕೊಂಡಿತು. 11 ನೇ ಓವರ್‌ ಮುಗಿಯುವ ವೇಳೆಗೆ 5 ವಿಕೆಟ್‌ಗಳು ಪತನಗೊಂಡರೆ, ಸ್ಕೋರ್ ಬೋರ್ಡ್​ನಲ್ಲಿ ಕೇವಲ 74 ರನ್‌ ದಾಖಲಾಗಿತ್ತು. ಚೆನ್ನೈ ತಂಡದ ಪ್ರತಿಯೊಬ್ಬ ಬ್ಯಾಟ್ಸ್‌ಮನ್ ರನ್‌ಗಾಗಿ ಹೆಣಗಾಡಿದರು. ಇದಕ್ಕೆ ದೊಡ್ಡ ಉದಾಹರಣೆ ಧೋನಿ ಮತ್ತು ವಿಜಯ್ ಶಂಕರ್ ನಡುವಿನ ಪಾಲುದಾರಿಕೆಯನ್ನೇ ನಾವು ಗಮನಿಸಬಹುದು.

ಧೋನಿ- ಶಂಕರ್ ಸೋಲಿನ ಜೊತೆಯಾಟ

ಮೂರನೇ ಓವರ್‌ನಲ್ಲಿ ಕ್ರೀಸ್‌ಗೆ ಬಂದ ವಿಜಯ್ ಶಂಕರ್ ಮೊದಲ ಎಸೆತದಿಂದಲೇ ರನ್‌ಗಳಿಗಾಗಿ ಕಷ್ಟಪಡುತ್ತಿದ್ದರು. ಅಲ್ಲದೆ ಅವರಿಗೆ ಈ ಪಂದ್ಯದಲ್ಲಿ 4 ಬಾರಿ ಲೈಫ್‌ಲೈನ್ ಕೂಡ ಸಿಕ್ಕಿತು. ಆ ನಂತರ 11ನೇ ಓವರ್​ನಲ್ಲೇ ಬ್ಯಾಟಿಂಗ್​ಗೆ ಬಂದ ಎಂಎಸ್ ಧೋನಿ ಕೂಡ ಮುಕ್ತವಾಗಿ ಬ್ಯಾಟ್ ಬೀಸಲು ಸಾಧ್ಯವಾಗಲಿಲ್ಲ. ಹೀಗಾಗಿ ಚೆನ್ನೈ ತಂಡವು ನಿಗದಿತ 20 ಓವರ್‌ಗಳಲ್ಲಿ ಕೇವಲ 5 ವಿಕೆಟ್ ಕಳೆದುಕೊಂಡು 158 ರನ್‌ಗಳನ್ನು ಮಾತ್ರ ಗಳಿಸಲು ಸಾಧ್ಯವಾಯಿತು. ಧೋನಿ ಮತ್ತು ಶಂಕರ್ 84 ರನ್‌ಗಳ ಜೊತೆಯಾಟ ನಡೆಸಿದರಾದರೂ ಇದಕ್ಕಾಗಿ 57 ಎಸೆತಗಳನ್ನು ತೆಗೆದುಕೊಂಡರು.

IPL 2025: ತಂಡ ಬದಲಿಸುತ್ತಿದ್ದಂತೆ ಆಟವನ್ನು ಬದಲಿಸಿದ ರಾಹುಲ್; ಸಿಎಸ್​ಕೆ ವಿರುದ್ಧ ಸ್ಫೋಟಕ ಅರ್ಧಶತಕ

2010 ರ ಬಳಿಕ ಡೆಲ್ಲಿ ತಂಡಕ್ಕೆ ಜಯ

ಇತ್ತ ಚೆನ್ನೈ ತಂಡವನ್ನು 25 ರನ್​ಗಳಿಂದ ಮಣಿಸಿದ ಡೆಲ್ಲಿ ಚೆಪಾಕ್ ಕ್ರೀಡಾಂಗಣದಲ್ಲಿ 15 ವರ್ಷಗಳ ನಂತರ ಗೆಲುವಿನ ಸಿಹಿ ಸವಿದಿದೆ. 2010 ರಲ್ಲಿ ಚೆನ್ನೈನಲ್ಲಿ ನಡೆದ ಪಂದ್ಯದಲ್ಲಿ ಡೆಲ್ಲಿ ತಂಡವು ಸಿಎಸ್‌ಕೆ ವಿರುದ್ಧ ಕೊನೆಯ ಬಾರಿಗೆ ಜಯಗಳಿಸಿತ್ತು. ಆ ಪಂದ್ಯದಲ್ಲಿ ತಂಡವು ಆರು ವಿಕೆಟ್‌ಗಳಿಂದ ಜಯಗಳಿಸಿತ್ತು. ಅಂದರೆ ತಂಡವು 14 ವರ್ಷ 11 ತಿಂಗಳು 20 ದಿನಗಳ ನಂತರ ಚೆಪಾಕ್‌ನಲ್ಲಿ ಚೆನ್ನೈ ತಂಡವನ್ನು ಸೋಲಿಸಿದೆ. ಚೆನ್ನೈನಲ್ಲಿ ಸಿಎಸ್‌ಕೆ ಮತ್ತು ದೆಹಲಿ ನಡುವೆ 10 ಪಂದ್ಯಗಳು ನಡೆದಿದ್ದು, ಅದರಲ್ಲಿ ಸಿಎಸ್‌ಕೆ ಏಳು ಪಂದ್ಯಗಳನ್ನು ಗೆದ್ದಿದ್ದರೆ, ದೆಹಲಿ ಮೂರು ಪಂದ್ಯಗಳನ್ನು ಗೆದ್ದಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:24 pm, Sat, 5 April 25