ಇಂಗ್ಲೆಂಡ್ಗೆ ಬಿಗ್ ಶಾಕ್; ಗಾಯದಿಂದ ಐದನೇ ಟೆಸ್ಟ್ನಿಂದ ಹೊರ ಹೋದ ಖ್ಯಾತ ಬೌಲರ್
ಇಂಗ್ಲೆಂಡ್ ಮತ್ತು ಭಾರತ ನಡುವಿನ ಐದನೇ ಟೆಸ್ಟ್ ಪಂದ್ಯದಲ್ಲಿ ಕ್ರಿಸ್ ವೋಕ್ಸ್ ಗಂಭೀರ ಗಾಯಗೊಂಡಿದ್ದಾರೆ. ಬೌಂಡರಿ ತಡೆಯುವಾಗ ಗಾಯಗೊಂಡ ಅವರು ಪಂದ್ಯದಿಂದ ಹೊರಗುಳಿದಿದ್ದಾರೆ. ಇದರಿಂದ ಇಂಗ್ಲೆಂಡ್ ತಂಡಕ್ಕೆ ದೊಡ್ಡ ಹೊಡೆತ ಬಿದ್ದಿದೆ. ಬೆನ್ ಸ್ಟೋಕ್ಸ್ ಮತ್ತು ಜೋಫ್ರಾ ಆರ್ಚರ್ ಅವರ ಅನುಪಸ್ಥಿತಿಯಲ್ಲಿ ಇಂಗ್ಲೆಂಡ್ ತಂಡ ಈಗ ಸಂಕಷ್ಟದಲ್ಲಿದೆ.

ಇಂಗ್ಲೆಂಡ್ ಹಾಗೂ ಭಾರತದ ನಡುವಿನ ಐದನೇ ಟೆಸ್ಟ್ ಪಂದ್ಯದ ಒಂದು ದಿನ ಪೂರ್ಣಗೊಂಡಿದೆ. ಆಗಲೇ ಇಂಗ್ಲೆಂಡ್ಗೆ ಒಂದು ದೊಡ್ಡ ಶಾಕ್ ಎದುರಾಗಿದೆ. ಪರಿಣಾಮಕಾರಿ ಬೌಲರ್ ಎನಿಸಿಕೊಂಡಿದ್ದ ಕ್ರಿಸ್ ವೋಕ್ಸ್ (Chris Woakes) ಅವರು ಗಾಯದ ಕಾರಣದಿಂದ ಹೊರ ನಡೆದಿದ್ದಾರೆ ಎನ್ನಲಾಗಿದೆ. ಮೊದಲ ದಿನದ ಮ್ಯಾಚ್ನಲ್ಲಿ ಕೆಎಲ್ ರಾಹುಲ್ ಅವರ ವಿಕೆಟ್ ಕಿತ್ತು ತಂಡಕ್ಕೆ ಆಸರೆ ಆಗಿದ್ದರು.
ಗುರುವಾರ ನಡೆದ ಪಂದ್ಯದಲ್ಲಿ ಬೌಂಡರಿಗೆ ಹೋಗುತ್ತಿದ್ದ ಬಾಲ್ನ ತಡೆಯಲು ಕ್ರಿಸ್ ವೋಕ್ಸ್ ಹೋಗಿದ್ದಾರೆ. ಆದರೆ, ಈ ವೇಳೆ ಅವರ ಕೈಗೆ ಗಾಯ ಆಗಿದೆ. ಈ ಗಾಯ ತುಂಬಾನೇ ಗಂಭೀರ ಸ್ವರೂಪ ಪಡೆದಿದ್ದು, ಅವರು ಈ ಪಂದ್ಯದಿಂದಲೇ ಹೊರಗೆ ಇರಬೇಕಾದ ಪರಿಸ್ಥಿತಿ ಬಂದಿದೆ.
ಕ್ರಿಸ್ ವೋಕ್ಸ್ ಗಾಯಗೊಂಡ ಸಂದರ್ಭದಲ್ಲಿ ತಕ್ಷಣ ಅವರಿಗೆ ವೈದ್ಯಕೀಯ ಚಿಕಿತ್ಸೆ ನೀಡಲಾಯಿತು. ಆದರೆ, ನೋವು ಅತಿಯಾಗಿದ್ದರಿಂದ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ಈಗ ಇಂಗ್ಲೆಂಡ್ ತಂಡ ಅವರಿಂದ ಬೌಲ್ ಮಾಡಿಸಲು ಸಾಧ್ಯವಿಲ್ಲ ಎಂದು ನಿರ್ಧರಿಸಿದೆ ಎಂದು ವರದಿ ಆಗಿದೆ.
ಕ್ರಿಸ್ ವೋಕ್ಸ್ ಅವರು ಮೊದಲ ದಿನ 14 ಓವರ್ಗಳನ್ನು ಹಾಕಿದ್ದಾರೆ. ಅವರ ಓವರ್ ಪರಿಣಾಮಕಾರಿ ಆಗಿತ್ತು. ಒಂದು ಮೇಡನ್, ಒಂದು ವಿಕೆಟ್ ಪಡೆದಿದ್ದು ಅಲ್ಲದೆ, 3.3 ಎಕಾನಮಿಯಲ್ಲಿ ಅವರು ಬೌಲಿಂಗ್ ಮಾಡಿದ್ದರು. ಈಗ ಅವರು ಟೆಸ್ಟ್ನಿಂದ ಹೊರಗಿಳಿದರೆ ತಂಡಕ್ಕೆ ದೊಡ್ಡ ಸಮಸ್ಯೆ ಆಗಲಿದೆ.
ಸದ್ಯ ಟೀಂ ಇಂಡಿಯಾ 204ರನ್ಗೆ 6 ವಿಕೆಟ್ಗನ್ನು ಕಳೆದುಕೊಂಡಿದೆ. ಕನ್ನಡಿಗ ಕರುಣ್ ನಾಯರ್ ಅವರು (52 ರನ್) ಹಾಗೂ ವಾಷಿಂಗ್ಟನ್ (19) ಆಡುತ್ತಿದ್ದಾರೆ. ಟೀಂ ಇಂಡಿಯಾ ಸದ್ಯ ಸಂಕಷ್ಟದಲ್ಲಿ ಇದೆ. ಇಂದಿನ ಪಂದ್ಯದಲ್ಲಿ ಟೀಂ ಇಂಡಿಯಾ ಯಾವ ರೀತಿಯಲ್ಲಿ ಆಡುತ್ತದೆ ಎಂಬುದನ್ನು ಕಾದು ನೋಡಬೇಕಿದೆ.
ಇಂಗ್ಲೆಂಡ್ಗೆ ಸಂಕಷ್ಟ
ಈಗಾಗಲೇ ಕ್ಯಾಪ್ಟನ್ ಹಾಗೂ ಆಲ್ರೌಂಡರ್ ಬೆನ್ ಸ್ಟೋಕ್ಸ್ ಅವರು ಇಂಜೂರಿ ಕಾರಣದಿಂದ ಪಂದ್ಯದಿಂದ ಹೊರ ಉಳಿದಿದ್ದಾರೆ. ಅವರಿಗೆ ಭುಜದ ಇಂಜೂರಿ ಆಗಿದೆ. ಇನ್ನು, ಬೌಲರ್ ಜೋಫ್ರಾ ಆರ್ಚರ್ಗೆ ವಿಶ್ರಾಂತಿ ನೀಡಲಾಗಿದೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
