ಸುನಿಲ್ ನರೈನ್​ಗೆ ರೆಡ್ ಕಾರ್ಡ್​: ಮೈದಾನದಿಂದ ಹೊರಕ್ಕೆ..!

| Updated By: ಝಾಹಿರ್ ಯೂಸುಫ್

Updated on: Aug 28, 2023 | 4:25 PM

CPL 2023: ಸ್ಲೋ ಓವರ್ ರೇಟ್​ಗೆ ತಕ್ಷಣವೇ ಜಾರಿಗೆ ಬರುವಂತಹ ಶಿಕ್ಷೆಯಾಗಿ ಕೆರಿಬಿಯನ್ ಪ್ರೀಮಿಯರ್ ಲೀಗ್​ನಲ್ಲಿ ರೆಡ್ ಕಾರ್ಡ್ ನಿಯಮವನ್ನು ಜಾರಿಗೆ ತರಲಾಗಿದೆ. ಈ ನಿಯಮದ ಪ್ರಕಾರ ನಿಧಾನಗತಿಯಲ್ಲಿ ಓವರ್ ಪೂರೈಸಿದ ತಂಡ ಓರ್ವ ಫೀಲ್ಡರ್​ನನ್ನು ಕಳೆದುಕೊಳ್ಳಬಹುದು. ಹಾಗೆಯೇ ಬ್ಯಾಟಿಂಗ್ ತಂಡಕ್ಕೆ 5 ರನ್​ಗಳ ಪೆನಾಲ್ಟಿ ಕೂಡ ಬೀಳಬಹುದು. ಈ ನಿಯಮದ ಸಂಪೂರ್ಣ ಮಾಹಿತಿ ಈ ಕೆಳಗಿನಂತಿದೆ.

ಸುನಿಲ್ ನರೈನ್​ಗೆ ರೆಡ್ ಕಾರ್ಡ್​: ಮೈದಾನದಿಂದ ಹೊರಕ್ಕೆ..!
Sunil Narine
Follow us on

ವೆಸ್ಟ್ ಇಂಡೀಸ್​​ನಲ್ಲಿ ನಡೆಯುತ್ತಿರುವ ಕೆರಿಬಿಯನ್ ಪ್ರೀಮಿಯರ್ ಲೀಗ್​ನಲ್ಲಿ (CPL 2023) ರೆಡ್ ಕಾರ್ಡ್​ ನಿಯಮವನ್ನು ಜಾರಿಗೆ ತರಲಾಗಿದ್ದು, ಇದರ ಮೊದಲ ಬಲಿಪಶುವಾಗಿ ಸುನಿಲ್ ನರೈನ್ ಮೈದಾನ ತೊರೆದಿದ್ದಾರೆ. ಸೇಂಟ್ ಕಿಟ್ಸ್ ಅ್ಯಂಡ್ ನೆವಿಸ್ ಪೇಟ್ರಿಯಾಟ್ಸ್ ಹಾಗೂ ಟ್ರಿನ್‌ಬಾಗೊ ನೈಟ್ ರೈಡರ್ಸ್ ನಡುವಣ ಪಂದ್ಯದ ವೇಳೆ ಅಂಪೈರ್ ಮೊದಲ ಬಾರಿಗೆ ರೆಡ್ ಕಾರ್ಡ್ ತೋರಿಸಿದರು.

ಈ ಪಂದ್ಯದಲ್ಲಿ ನಿಗದಿತ ಸಮಯದೊಳಗೆ 19 ಓವರ್​ಗಳನ್ನು ಪೂರ್ಣಗೊಳಿಸದ ಕಾರಣ ಟ್ರಿನ್​ಬಾಗೊ ನೈಟ್ ರೈಡರ್ಸ್ ತಂಡಕ್ಕೆ ಅಂಪೈರ್​ ರೆಡ್ ಕಾರ್ಡ್ ತೋರಿಸಿದ್ದರು. ಅಲ್ಲದೆ ಈ ನಿಯಮದಂತೆ ಒಬ್ಬ ಆಟಗಾರನು ಮೈದಾನದಿಂದ ಹೊರಗುಳಿಯಬೇಕಿತ್ತು. ಇಲ್ಲಿ ನಾಯಕ ಕೀರನ್ ಪೊಲಾರ್ಡ್, ಸುನಿಲ್ ನರೈನ್ ಅವರಿಗೆ ರೆಡ್ ಕಾರ್ಡ್​ ತೋರಿಸುವಂತೆ ಅಂಪೈರ್​ಗೆ ತಿಳಿಸಿದರು. ಅದರಂತೆ 19ನೇ ಓವರ್​ ಮುಕ್ತಾಯದ ಬೆನ್ನಲ್ಲೇ ನರೈನ್ ಮೈದಾನ ತೊರೆದರು. ಇದರೊಂದಿಗೆ ಕೆರಿಬಿಯನ್ ಪ್ರೀಮಿಯರ್ ಲೀಗ್​ನಲ್ಲಿ ರೆಡ್ ಕಾರ್ಡ್​ ಪಡೆದ ಮೊದಲ ಆಟಗಾರ ಎನಿಸಿಕೊಂಡರು.

ಏನಿದು ರೆಡ್ ಕಾರ್ಡ್ ನಿಯಮ?

ಸ್ಲೋ ಓವರ್ ರೇಟ್​ಗೆ ತಕ್ಷಣವೇ ಜಾರಿಗೆ ಬರುವಂತಹ ಶಿಕ್ಷೆಯಾಗಿ ಕೆರಿಬಿಯನ್ ಪ್ರೀಮಿಯರ್ ಲೀಗ್​ನಲ್ಲಿ ರೆಡ್ ಕಾರ್ಡ್ ನಿಯಮವನ್ನು ಜಾರಿಗೆ ತರಲಾಗಿದೆ. ಈ ನಿಯಮದ ಪ್ರಕಾರ ನಿಧಾನಗತಿಯಲ್ಲಿ ಓವರ್ ಪೂರೈಸಿದ ತಂಡ ಓರ್ವ ಫೀಲ್ಡರ್​ನನ್ನು ಕಳೆದುಕೊಳ್ಳಬಹುದು. ಹಾಗೆಯೇ ಬ್ಯಾಟಿಂಗ್ ತಂಡಕ್ಕೆ 5 ರನ್​ಗಳ ಪೆನಾಲ್ಟಿ ಕೂಡ ಬೀಳಬಹುದು. ಈ ನಿಯಮದ ಸಂಪೂರ್ಣ ಮಾಹಿತಿ ಈ ಕೆಳಗಿನಂತಿದೆ.

  • ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ ನಿಯಮದಂತೆ ಸಿಪಿಎಲ್​ನಲ್ಲೂ ಒಂದು ಇನಿಂಗ್ಸ್​ಗೆ 85 ನಿಮಿಷಗಳನ್ನು ನಿಗದಿ ಮಾಡಲಾಗಿದೆ.
  • ಇಲ್ಲಿ ಬೌಲಿಂಗ್ ತಂಡವು 17ನೇ ಓವರ್ ಅನ್ನು 72 ನಿಮಿಷ ಮತ್ತು 15 ಸೆಕೆಂಡುಗಳಲ್ಲಿ ಮುಗಿಸಬೇಕು. ಈ ಸಮಯದೊಳಗೆ 17 ಓವರ್ ಪೂರ್ಣಗೊಳಿಸಲು ವಿಫಲವಾದರೆ ಬೌಂಡರಿ ಲೈನ್​ನಿಂದ ಓರ್ವ ಫೀಲ್ಡರ್ ಅನ್ನು 30 ಯಾರ್ಡ್ ಸರ್ಕಲ್​ನಲ್ಲಿ ನಿಲ್ಲಿಸಬೇಕಾಗುತ್ತದೆ.
  • ಇನ್ನು 18ನೇ ಓವರ್ ಅನ್ನು 76 ನಿಮಿಷಗಳು ಮತ್ತು 30 ಸೆಕೆಂಡುಗಳಲ್ಲಿ ಪೂರ್ಣಗೊಳಿಸಬೇಕು. ಈ ಸಮಯದೊಳಗೆ 18 ಓವರ್​ ಮುಗಿಸಲು ಸಾಧ್ಯವಾಗದಿದ್ದರೆ, ಬೌಂಡರಿ ಲೈನ್​ನಿಂದ ಇಬ್ಬರು ಫೀಲ್ಡರ್‌ಗಳನ್ನು ಕಡಿತಗೊಳಿಸಿ 30 ಯಾರ್ಡ್ ಸರ್ಕಲ್​ ಒಳಗೆ ನಿಲ್ಲಿಸಬೇಕಾಗುತ್ತದೆ.
  • 18ನೇ ಓವರ್‌ನ ಪ್ರಾರಂಭದಲ್ಲಿ ಅಗತ್ಯವಿರುವ ಓವರ್ ರೇಟ್​ಗಿಂತ ಹಿಂದೆ ಉಳಿದಿದ್ದರೆ, ಬೌಂಡರಿ ಲೈನ್​ನಿಂದ ಓರ್ವ ಆಟಗಾರ 30 ಯಾರ್ಡ್ ಸರ್ಕಲ್​ನಲ್ಲಿರಬೇಕಾಗುತ್ತದೆ. ಅಂದರೆ 30 ಯಾರ್ಡ್ ಸರ್ಕಲ್​ನಲ್ಲಿ ಒಟ್ಟು 5 ಫೀಲ್ಡರ್ ಇರಬೇಕಾಗುತ್ತದೆ.
  • 19ನೇ ಓವರ್‌ನ ಪ್ರಾರಂಭದಲ್ಲಿ ಓವರ್​ ರೇಟ್​ನಲ್ಲಿ ಹಿಂದೆ ಉಳಿದಿದ್ದರೆ, ಬೌಂಡರಿ ಲೈನ್​ನಿಂದ ಇಬ್ಬರು ಫೀಲ್ಡರ್​ಗಳು 30 ಯಾರ್ಡ್ ಸರ್ಕಲ್​ನಲ್ಲಿ ಫೀಲ್ಡಿಂಗ್ ಮಾಡಬೇಕಾಗುತ್ತದೆ. ಅಂದರೆ 30 ಯಾರ್ಡ್ ಸರ್ಕಲ್​ನಲ್ಲಿ ಒಟ್ಟು 6 ಫೀಲ್ಡರ್​ಗಳಿರಬೇಕಾಗುತ್ತದೆ.​
  • 20ನೇ ಓವರ್‌ನ ಆರಂಭದ ವೇಳೆ ಓವರ್​ ರೇಟ್​ನಲ್ಲಿ ಹಿಂದೆ ಉಳಿದಿದ್ದರೆ, ಓರ್ವ ಫೀಲ್ಡರ್ ಮೈದಾನ ತೊರೆಯಬೇಕಾಗುತ್ತದೆ. ಅಂದರೆ 10 ಮಂದಿಯೊಂದಿಗೆ ಫೀಲ್ಡಿಂಗ್ ಮಾಡಬೇಕಾಗುತ್ತದೆ. ಇಲ್ಲಿ ಯಾರು ಮೈದಾನದಿಂದ ಹೊರಬೇಕು ಎಂಬುದನ್ನು ನಾಯಕ ನಿರ್ಧರಿಸುತ್ತಾನೆ.
  • ಇನ್ನು ಬ್ಯಾಟಿಂಗ್​ ತಂಡವು ಪಂದ್ಯವನ್ನು ನಿಧಾನಗೊಳಿಸಿದರೆ ರನ್​ಗಳ ದಂಡ ವಿಧಿಸಲಾಗುತ್ತದೆ. ಅಂದರೆ ಬ್ಯಾಟಿಂಗ್​ಗೆ ನಿಲ್ಲಲು ಅಥವಾ ಗ್ಲೌಸ್ ಮತ್ತು ಬ್ಯಾಟ್​ಗಳನ್ನು ಬದಲಿಸುವ ಮೂಲಕ ಪಂದ್ಯದ ಸಮಯವನ್ನು ವ್ಯರ್ಥ ಮಾಡಿದರೆ 5 ರನ್​​ಗಳ ಪೆನಾಲ್ಟಿ ಬೀಳಲಿದೆ.

ಇದನ್ನೂ ಓದಿ: ಏಷ್ಯಾಕಪ್​ನಲ್ಲಿ ನಿರ್ಧಾರವಾಗಲಿದೆ ಯಾರು ನಂಬರ್ 1

ಫೀಲ್ಡ್​ ಅಂಪೈರ್​ ರೆಡ್ ಕಾರ್ಡ್ ತೋರಿಸಿ ಈ ನಿಯಮವನ್ನು ತಕ್ಷಣವೇ ಜಾರಿಗೊಳಿಸುತ್ತಾರೆ. ಅದರಂತೆ ಟ್ರಿನ್​ಬಾಗೊ ನೈಟ್​ ರೈಡರ್ಸ್​ 20ನೇ ಓವರ್‌ನ ಆರಂಭದ ವೇಳೆ ಓವರ್​ ರೇಟ್​ನಲ್ಲಿ ಹಿಂದೆ ಉಳಿದಿದ್ದ ಕಾರಣ ಸುನಿಲ್ ನರೈನ್ ಅವರನ್ನು ಹೊರಗೆ ಕಳುಹಿಸಿ, ಕೊನೆಯ ಓವರ್​ನಲ್ಲಿ 10 ಮಂದಿಯೊಂದಿಗೆ ಫೀಲ್ಡಿಂಗ್ ಮಾಡಿದೆ.