CPL 2024: ಫಾಫ್ ಡುಪ್ಲೆಸಿಸ್ ಸ್ಪೋಟಕ ಬ್ಯಾಟಿಂಗ್: ಆದರೂ ಸೋತರು..!

|

Updated on: Sep 29, 2024 | 3:05 PM

Faf du Plessis: ಆರ್​ಸಿಬಿ ತಂಡದ ನಾಯಕ ಫಾಫ್ ಡುಪ್ಲೆಸಿಸ್ ಕೆರಿಬಿಯನ್ ಪ್ರೀಮಿಯರ್ ಲೀಗ್​ನಲ್ಲಿ ಭರ್ಜರಿ ಫಾರ್ಮ್ ಮುಂದುವರೆಸಿದ್ದಾರೆ. ಗಯಾನಾ ಅಮೆಝಾನ್ ವಾರಿಯರ್ಸ್ ವಿರುದ್ಧದ ಪಂದ್ಯದಲ್ಲಿ ಸ್ಪೋಟಕ ಇನಿಂಗ್ಸ್ ಆಡಿದ ಫಾಫ್ ಕೇವಲ 8 ರನ್​ಗಳಿಂದ ಶತಕ ವಂಚಿತರಾದರು.

ಗಯಾನಾದ ಪ್ರಾವಿಡೆನ್ಸ್ ಸ್ಟೇಡಿಯಂನಲ್ಲಿ ನಡೆದ ಕೆರಿಬಿಯನ್ ಪ್ರೀಮಿಯರ್ ಲೀಗ್​ನ 29ನೇ ಪಂದ್ಯದಲ್ಲಿ ಫಾಫ್ ಡುಪ್ಲೆಸಿಸ್ ಸ್ಪೋಟಕ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಗಯಾನಾ ಅಮೆಝಾನ್ ವಾರಿಯರ್ಸ್ ತಂಡದ ನಾಯಕ ಇಮ್ರಾನ್ ತಾಹಿರ್ ಬ್ಯಾಟಿಂಗ್ ಆಯ್ದುಕೊಂಡಿದ್ದರು.
ನಾಯಕನ ನಿರ್ಧಾರವನ್ನು ಸಮರ್ಥಿಸುವಂತೆ ಬ್ಯಾಟಿಂಗ್ ಪ್ರದರ್ಶಿಸಿದ ಶಾಯ್ ಹೋಪ್ (56) ಹಾಗೂ ಶಿಮ್ರಾನ್ ಹೆಟ್ಮೆಯರ್ (58) ಸ್ಪೋಟಕ ಅರ್ಧಶತಕ ಸಿಡಿಸಿದರು. ಇನ್ನು ಗುರ್ಬಾಝ್ ಹಾಗೂ ಆಝಂ ಖಾನ್ ತಲಾ 26 ರನ್​ಗಳ ಕೊಡುಗೆ ನೀಡಿದರು. ಈ ಮೂಲಕ ಗಯಾನಾ ಅಮೆಝಾನ್ ವಾರಿಯರ್ಸ್ ತಂಡವು 20 ಓವರ್​ಗಳಲ್ಲಿ 7 ವಿಕೆಟ್ ಕಳೆದುಕೊಂಡು 207 ರನ್ ಕಲೆಹಾಕಿತು.

208 ರನ್​ಗಳ ಗುರಿಯನ್ನು ಬೆನ್ನತ್ತಿದ ಸೇಂಟ್ ಲೂಸಿಯಾ ಕಿಂಗ್ಸ್ ಪರ ನಾಯಕ ಫಾಫ್ ಡುಪ್ಲೆಸಿಸ್ ಹಾಗೂ ಜಾನ್ಸನ್ ಚಾರ್ಲ್ಸ್ ಇನಿಂಗ್ಸ್ ಆರಂಭಿಸಿದ್ದರು. ಒಂದೆಡೆ ಫಾಫ್ ಸ್ಪೋಟಕ ಆರಂಭ ಒದಗಿಸಿದರೆ, ಮತ್ತೊಂದೆಡೆ ಲೂಸಿಯಾ ಕಿಂಗ್ಸ್ ಬ್ಯಾಟರ್​ಗಳು ಪೆವಿಲಿಯನ್ ಪರೇಡ್ ನಡೆಸಿದರು.

ಪರಿಣಾಮ 75 ರನ್​ಗಳಿಸುವಷ್ಟರಲ್ಲಿ 5 ವಿಕೆಟ್ ಕಳೆದುಕೊಂಡಿತು. ಇದಾಗ್ಯೂ ಏಕಾಂಗಿ ಹೋರಾಟ ಮುಂದುವರೆಸಿದ ಫಾಫ್ ಡುಪ್ಲೆಸಿಸ್ 59 ಎಸೆತಗಳಲ್ಲಿ 4 ಭರ್ಜರಿ ಸಿಕ್ಸ್ ಹಾಗೂ 7 ಫೋರ್​ಗಳೊಂದಿಗೆ ಅಜೇಯ 92 ರನ್​ ಚಚ್ಚಿದರು. ಆದರೆ ಇತರೆ ಬ್ಯಾಟರ್​ಗಳ ಕಳಪೆ ಪ್ರದರ್ಶನದ ಪರಿಣಾಮ ಸೇಂಟ್ ಲೂಸಿಯಾ ಕಿಂಗ್ಸ್ ತಂಡವು 20 ಓವರ್​ಗಳಲ್ಲಿ 7 ವಿಕೆಟ್​ ಕಳೆದುಕೊಂಡು 172 ರನ್​ಗಳಿಸಿ 35 ರನ್​ಗಳಿಂದ ಸೋಲೊಪ್ಪಿಕೊಳ್ಳಬೇಕಾಯಿತು.

ಈ ಗೆಲುವಿನೊಂದಿಗೆ ಗಯಾನಾ ಅಮೆಝಾನ್ ವಾರಿಯರ್ಸ್ ತಂಡವು ಅಂಕ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ಅತ್ತ ಅಗ್ರಸ್ಥಾನದಲ್ಲಿದ್ದ ಸೇಂಟ್ ಲೂಸಿಯಾ ಕಿಂಗ್ಸ್ ತಂಡ ದ್ವಿತೀಯ ಸ್ಥಾನಕ್ಕೆ ಕುಸಿದಿದೆ. ಇದಾಗ್ಯೂ ಉಭಯ ತಂಡಗಳು ಈಗಾಗಲೇ ಪ್ಲೇಆಫ್ ಹಂತಕ್ಕೆ ಅರ್ಹತೆ ಪಡೆದುಕೊಂಡಿದೆ. ಹೀಗಾಗಿ ಈ ಪಂದ್ಯದ ಫಲಿತಾಂಶ ಪರಿಣಾಮ ಬೀರುವುದಿಲ್ಲ.

 

Published On - 2:24 pm, Sun, 29 September 24

Follow us on