ದಿ ಹಂಡ್ರೆಡ್​ನಲ್ಲಿ ಸಹೋದರರ ಸವಾಲ್: ಕೊನೆಗೂ ಗೆದ್ದಿದ್ದು ಯಾರು ಗೊತ್ತಾ?

Trent Rockets vs London Spirit: ಇಂಗ್ಲೆಂಡ್​ನಲ್ಲಿ ನಡೆಯುತ್ತಿರುವ ದಿ ಹಂಡ್ರೆಡ್ ಲೀಗ್​ನ 8ನೇ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಲಂಡನ್ ಸ್ಪಿರಿಟ್ ತಂಡವು 100 ಎಸೆತಗಳಲ್ಲಿ 9 ವಿಕೆಟ್ ಕಳೆದುಕೊಂಡು 159 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ಟ್ರೆಂಟ್ ರಾಕೆಟ್ಸ್ ತಂಡವು 98 ಎಸೆತಗಳಲ್ಲಿ 160 ರನ್​ಗಳಿಸಿ 4 ವಿಕೆಟ್​ಗಳ ಜಯ ಸಾಧಿಸಿದೆ.

ದಿ ಹಂಡ್ರೆಡ್​ನಲ್ಲಿ ಸಹೋದರರ ಸವಾಲ್: ಕೊನೆಗೂ ಗೆದ್ದಿದ್ದು ಯಾರು ಗೊತ್ತಾ?
Overton Brothers
Image Credit source: Skysports

Updated on: Jul 27, 2026 | 1:15 PM

ಕ್ರಿಕೆಟ್ ಇತಿಹಾಸದಲ್ಲೇ ಅತ್ಯಂತ ಅಪರೂಪದ ಮತ್ತು ರೋಮಾಂಚಕ ಸಹೋದರರ ಪೈಪೋಟಿಗೆ ‘ದಿ ಹಂಡ್ರೆಡ್’ ಟೂರ್ನಿ ಸಾಕ್ಷಿಯಾಗಿದೆ. ಪಂದ್ಯದ ಕೊನೆಯ ಹಂತದಲ್ಲಿ ಗೆಲ್ಲಲು 10 ರನ್‌ಗಳ ಅಗತ್ಯವಿದ್ದಾಗ, ತನ್ನದೇ ಅವಳಿ ಸೋದರ ಜೇಮಿ ಓವರ್ಟನ್ ಬೌಲಿಂಗ್‌ನಲ್ಲಿ ಅಬ್ಬರಿಸುವ ಮೂಲಕ ಕ್ರೇಗ್ ಓವರ್ಟನ್, ಟ್ರೆಂಟ್ ರಾಕೆಟ್ಸ್ ತಂಡಕ್ಕೆ ಐತಿಹಾಸಿಕ ಜಯ ತಂದುಕೊಟ್ಟಿದ್ದಾರೆ.

ಸಹೋದರರ ಸವಾಲ್:

ನಾಟಿಂಗ್​ಹ್ಯಾಮ್​ನ ಟ್ರೆಂಟ್ ಬಿಡ್ಜ್​ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಲಂಡನ್ ಸ್ಪಿರಿಟ್ ಹಾಗೂ ಟ್ರೆಂಟ್ ರಾಕೆಟ್ಸ್​ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಲಂಡನ್ ಸ್ಪಿರಿಟ್ ತಂಡವು 100 ಎಸೆತಗಳಲ್ಲಿ 9 ವಿಕೆಟ್ ಕಳೆದುಕೊಂಡು 159 ರನ್​ ಕಲೆಹಾಕಿತು.

160 ರನ್‌ಗಳ ಗುರಿ ಬೆನ್ನಟ್ಟಿದ ಟ್ರೆಂಟ್ ರಾಕೆಟ್ಸ್ ತಂಡಕ್ಕೆ ಕೊನೆಯ 5 ಎಸೆತಗಳಲ್ಲಿ 10 ರನ್‌ಗಳು ಬೇಕಾಗಿದ್ದವು. ಕ್ರೀಸ್‌ನಲ್ಲಿದ್ದದ್ದು ಟ್ರೆಂಟ್ ರಾಕೆಟ್ಸ್‌ನ ಕ್ರೇಗ್ ಓವರ್ಟನ್. ಲಂಡನ್ ಸ್ಪಿರಿಟ್ ಪರ ಕೊನೆಯ ಓವರ್ ಎಸೆಯಲು ಬಂದದ್ದು ಅವರದ್ದೇ ಸಹೋದರ ಜೇಮಿ ಓವರ್ಟನ್. ಇಡೀ ಕ್ರೀಡಾಂಗಣದಲ್ಲಿ ಉಸಿರು ಬಿಗಿಹಿಡಿದು ನೋಡುವಂತಹ ವಾತಾವರಣ ನಿರ್ಮಾಣವಾಗಿತ್ತು.

      • ಮೊದಲ ಎಸೆತ (ಸಿಕ್ಸರ್): ಜೇಮಿ ಎಸೆದ ಶಾರ್ಟ್ ಪಿಚ್ ಚೆಂಡನ್ನು ಕ್ರೇಗ್ ಮನಮೋಹಕವಾಗಿ ಫೈನ್ ಲೆಗ್ ಮೇಲೆ ಸಿಕ್ಸರ್‌ಗೆ ಅಟ್ಟಿದರು. ಈ ಒಂದೇ ಹೊಡೆತ ಪಂದ್ಯವನ್ನು ಟ್ರೆಂಟ್ ರಾಕೆಟ್ಸ್ ಕಡೆಗೆ ತಿರುಗಿಸಿತು.
      • ಎರಡನೇ ಎಸೆತ (2 ರನ್): ಜೇಮಿ ಎಸೆದ ಎರಡನೇ ಎಸೆತದಲ್ಲಿ 2 ರನ್​ ಕಲೆಹಾಕುವಲ್ಲಿ ಕ್ರೇಗ್ ಯಶಸ್ವಿಯಾದರು.
      • ಮೂರನೇ ಎಸೆತ (2 ರನ್ – ಗೆಲುವು): ಮತ್ತೊಮ್ಮೆ ಇನ್‌ಫೀಲ್ಡ್ ದಾಟಿಸಿ ಬೌಂಡರಿ ಗೆರೆಯತ್ತ ಚೆಂಡು ತಳ್ಳಿ, ಇನ್ನೆರಡು ರನ್ ಕದಿಯುವ ಮೂಲಕ ಇನ್ನು 2 ಎಸೆತಗಳು ಬಾಕಿ ಇರುವಂತೆಯೇ ಕ್ರೇಗ್ ರಾಕೆಟ್ಸ್ ತಂಡಕ್ಕೆ ಗೆಲುವು ತಂದಿತ್ತರು.

ಟ್ರೆಂಟ್ ರಾಕೆಟ್ಸ್ ಪ್ಲೇಯಿಂಗ್ 11: ಬೆನ್ ಡಕೆಟ್ , ಫಿನ್ ಅಲೆನ್ , ಟಾಮ್ ಬ್ಯಾಂಟನ್ , ಟಿಮ್ ಡೇವಿಡ್ , ಸ್ಯಾಮ್ ಬಿಲ್ಲಿಂಗ್ಸ್ (ನಾಯಕ),  ಮಿಚೆಲ್ ಸ್ಯಾಂಟ್ನರ್ , ಲೂಯಿಸ್ ಗ್ರೆಗೊರಿ , ಕ್ರೇಗ್ ಓವರ್ಟನ್ , ಕ್ಯಾಲ್ವಿನ್ ಹ್ಯಾರಿಸನ್ , ಮ್ಯಾಟ್ ಹೆನ್ರಿ , ಮೊಹಮ್ಮದ್ ಅಮೀರ್.

ಇದನ್ನೂ ಓದಿ: ಅವಕಾಶ​ ಕೈ ತಪ್ಪಿದಾಗ ಬೇಸರವಾಗುತ್ತೆ… ಕಂಬ್ಯಾಕ್​ಗೆ ಅಭಿಷೇಕ್ ಶರ್ಮಾ ಪಣ!

ಲಂಡನ್ ಸ್ಪಿರಿಟ್ ಪ್ಲೇಯಿಂಗ್ 11:  ಲುವಾನ್-ಡ್ರೆ ಪ್ರಿಟೋರಿಯಸ್ , ಲಿಯಾಮ್ ಲಿವಿಂಗ್‌ಸ್ಟೋನ್ (ನಾಯಕ) , ಜಾನಿ ಬೈರ್‌ಸ್ಟೋವ್ (ವಿಕೆಟ್ ಕೀಪರ್), ಡೆವಾಲ್ಡ್ ಬ್ರೆವಿಸ್ , ಜೇಮ್ಸ್ ಕೋಲ್ಸ್ , ಜೇಮ್ಸ್ ರೆವ್ , ಜೇಮೀ ಓವರ್ಟನ್ , ಡೇವಿಡ್ ವಿಲ್ಲಿ , ಆಂಡ್ರ್ಯೂ ಟೈ , ಆ್ಯಡಂ ಮಿಲ್ನ್​, ಆ್ಯಡಂ ಝಂಪಾ.

ಕಳೆದ ವರ್ಷದ ರಿವೆಂಜ್ ತೀರಿಸಿಕೊಂಡೆ!

ಪಂದ್ಯ ಮುಗಿದ ಬಳಿಕ ಬಿಸಿಸಿ ಸ್ಪೋರ್ಟ್ಸ್ ಜೊತೆ ಮಾತನಾಡಿದ ಕ್ರೇಗ್ ಓವರ್ಟನ್, “ಕಳೆದ ವರ್ಷದ ಪಂದ್ಯದಲ್ಲಿ ಜೇಮಿ ನನ್ನನ್ನು ಔಟ್ ಮಾಡಿದ್ದ. ಹಾಗಾಗಿ ಈ ಬಾರಿ ಅದಕ್ಕೆ ಸರಿಯಾಗಿ ಸೇಡು ತೀರಿಸಿಕೊಳ್ಳಬೇಕಿತ್ತು, ಆ ಕೆಲಸ ಮಾಡಿದ್ದೇನೆ!” ಎಂದು ನಗುತ್ತಾ ಹೇಳಿದರು.

 

 

Follow Us